ಮಾವಿನ ಎಳೆ ಚಿಗುರು ನಗೆ ಹೂವ ಚೆಲ್ಲುತ್ತಾ  ಫಲಗಳನ್ನು ತೂಗುವ ಕನಸಲ್ಲಿದೆ  ಹಳೆ ಬೇರಿನ ನಂಟು ಬೆಸೆದ ಭಾಂದವ್ಯಕ್ಕೆ  ಹೊಸ ಕೊಡುಗೆ ಕೊಡುವ ಮನಸಲ್ಲಿದೆ   ದುಂಬಿಗಳು ಹಾರುತ್ತಾ ಬಳಿಬಂದು ಪಿಸುಗುಟ್ಟಿ  ಬರುತಲಿದೆ ಯುಗಾದಿ ಎಂದು ಸಾರಿದೆ  'ಮಾಮರಕೆ ನವದಿರಿಸು ಉಡಿಸಿ ಸಿಂಗರಿಸು'  ಒಡಲಾಳದ ಕೋರಿಕೆಯ ಎದುರಿಟ್ಟಿದೆ   ಹಳೆಯದೆಲ್ಲವ ಕಳೆದು ಹೂಮಿಂಚು ಹೊಳೆದು  ಮಾಮರವು ಹೀಗಿಲ್ಲಿ ಕಳೆಗಟ್ಟಿದೆ ಒಂದಷ್ಟು ಭಾವಕ್ಕೆ ಒಂದಷ್ಟು ಜೀವಕ್ಕೆ  ಸವಿಯನ್ನು ಉಣಿಸುವ ಪಣ ತೊಟ್ಟಿದೆ   ಪ್ರಕೃತಿ ಎಂದರೆ ಹೀಗೆ, ಕಾಲಕ್ಕೆ ತಕ್ಕ ನಡಿಗೆ  ಪಂಚಾಂಗ ಮೊದಲೇ ಬರೆದಿಟ್ಟಿದೆ  ಅಚ್ಚರಿಯ ಉಣಿಸುತ್ತಾ ಕೌತುಕದಿ ಸೆಳೆಯುತ್ತಾ  ಜೀವ ಜೀವಗಳ ಮನಮುಟ್ಟಿದೆ! -ವಿಶ್ವನಾಥ ಕುಲಾಲ್ಮಿತ್ತೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ