ಶುಕ್ಲಪಕ್ಷದ ವೈಶಾಖ ಚತುರ್ದಶಿ ನಿನ್ನ ಆರಾಧನೆ ಜಯಂತಿ ನಮಗೆ ಖುಷಿ/ ಕೃಪೆ ದೋರು ಮಹಾಮಹಿಮ ನಾರಸಿಂಹ ಜಗದ ಜೀವರ ಉಸಿರ ರಕ್ಷಿಸು ಘನಮಹಿಮ//   ಭಗವಾನ್ ವಿಷ್ಣುವಿನ ನಾಲ್ಕನೆಯ ಅವತಾರದಲಿ ಕಂಬದಲುದಿಸಿದೆ ದುಷ್ಟ ಸಂಹಾರವೇ ಮೂಲ ಮಂತ್ರವೆಂದೆನಿಸಿದೆ/ ಹಿರಣ್ಯಕಶ್ಯಪುವಿಗೆ ಮೋಕ್ಷದಾರಿ ತೋರಿದೆ ಮುದ್ದು ಬಾಲಕ ಪ್ರಹ್ಲಾದನ ರಕ್ಷಿಸಿದೆ//   ಅಹಂಕಾರ ಮದಗಳ ಕುಟ್ಟಿ ಪುಡಿ ಗೈದೆ ನಾನೇ ಎಂಬ ಅಹಮನ್ನು ನಾಶ ಮಾಡಿದೆ/ ತಾಯಿ ಕಯಾದು ದೇವಿಗೆ ಅಭಯ ನೀಡಿದೆ ಲೋಕೋತ್ತರ ಪುಣ್ಯ ಪಾಪಗಳ ಎಣಿಸಿ ಪೊರೆದೆ//   ಮಹಾಬಲ ದಿವ್ಯರೂಪ ಕ್ರೋಧದಿ ರೌದ್ರತಾಳಿದೆ ವಜ್ರನಖಗಳ ಪುರುಷೋತ್ತಮ ಸ್ವಾಮಿ ಸುರೇಶ್ವರ ಎನಿಸಿದೆ/ ಸಜ್ಜನ ಬಂಧು ಮಿತ್ರ ದುರಿತ ನಿವಾರಣ ಉಗ್ರನರಸಿಂಹ ಅರಿಷಡ್ವರ್ಗ ನಾಶ ಪೊರೆ ಕರುಣ//   ಸಿಹಿ ಹಣ್ಣು ಕೇಸರಿ ಹಾಲ ನೈವೇದ್ಯ ನಿನಗೆ ಕೈಮುಗಿದು ಬೇಡುವುದ ಮನುಜಕುಲ ಒಂದಾಗಿ/ ಮಾತೆ ಲಕ್ಷ್ಮಿಯ ಅಭಯವಿರಲೆಮಗೆ ಕೃಪೆದೋರು ಕರುಣಾಳು ಭಕ್ತಬಂಧು ನಮಗೆ//   (ನರಸಿಂಹ ಜಯಂತಿಯ (21-05-2024) ದಿನ ವಿಶೇಷ) -ರತ್ನಾ ಕೆ.ಭಟ್,ತಲಂಜೇರಿ ಚಿತ್ರ ಕೃಪೆ: ಇಂಟರ್ನೆಟ್ ತಾಣ