ಓ ತಾಯೆ ನೀನದ್ಭುತ ವಿಶ್ವದ ಮಾಯೆ ಈ ಜಗದ ಅತ್ಯುನ್ನತ ಬೆಳಕಿನ ಛಾಯೆ॥   ಕತ್ತಲಲೇ ನಾ ಭ್ರೂಣ ಶಿಶುವಾಗಿ ಬೆಳೆದೆ ನಿನ್ನ ಜ್ಞಾನದರಿವಿನಲ್ಲಿಯೇ ರೂಪವ ತಳೆದೆ ಒಂದೊಂದು ಹಾವ ಭಾವಕೂ ಶಿಕ್ಷಕಿ ನೀನು ಜ್ಞಾನದ ಹಣತೆಯ ಹಚ್ಚಿ ಬೆಳಗಿದ ಜ್ಯೋತಿ॥   ಎದೆಯ ಹಾಲನುಣಿಸಿ ಎನ್ನ ತಣಿಸಿದೆ ನೀನು ನನ್ನದೊಂದೊಂದು ನಗುವಿಗೆ ಮುತ್ತಿನ ಸುರಿಮಳೆ ನಾನೆಂಬ ಈ ದೇಹದ ವಾಸ್ತುಶಿಲ್ಪಿಯೆ ನೀನು ಲೋಕದ ಲೌಕಿಕ ಜ್ಞಾನದ ಗುರುವೆಂಬ ಬಾನು॥   ಒಂದೊಂದು ತುತ್ತಿನಲು ಪ್ರೀತಿ ಭಾವದ ಹೊನಲು ಪರಿಪರಿಯ ಪರಿಹಾರದ ಅಲೆಗಳ ಕಡಲು ನಿಸ್ವಾರ್ಥವೆಂಬ ಪದದ ಅನ್ವರ್ಥಕವೇ ನೀನು ನನ್ನೆಲ್ಲ ಅನರ್ಥಗಳ ತೊಡೆದು ಹಾಕಿದೆಯೇನು?॥   ನೀನಿಲ್ಲದೀಗ ನಾ ಸತತ ಕೊರಗುತಲಿರುವೆ ಮತ್ತೆ ನೀನೆಂದು ಬರುವೆ ನೀ ಹೇಳು ತಾಯೇ ನಿನ್ನಾಗಮನಕೆ ಹಂಬಲಿಸಿ ಕಾಯುತಿರುವೆ ನಾನು ನಿನಗೊಮ್ಮೆರೆಗಿ ನನ್ನೆಲ್ಲ ಪಾಪವ ಕಳೆದು ಬಿಡುವೆ॥ -ಕೆ ನಟರಾಜ್, ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ