ಕಾರ್ಮುಗಿಲು ಕಪ್ಪಿಟ್ಟು ಕರಗುತಿರೆ ಮಳೆಯಾಗಿ  ನೆಲದೊಡಲು ಒಪ್ಪಾಗಿ ಹಸಿಮಣ್ಣು ಹದವಾಗಿ  ಧೋಯೆಂದು ಬಳಬಳನೆ ಸುರಿಯುತಿದೆ ಮಳೆಧಾರೆ  ನಾಟಿಯಿದೆ ಗದ್ದೆಯಲಿ ಬನ್ನಿರೇ ನಾರಿಯರೆ ॥   ಉತ್ಸಾಹ ಮೈಯಡರಿ ಉಲ್ಲಾಸ ಗರಿಗೆದರಿ  ಬೀಸುನಡೆ ಹೊಲದೆಡೆಗೆ ಗೊರಬೊಂದು ಬೆನ್ನೇರಿ  ಭೂತಾಯ ಮಡಿಲೊಳಗೆ ಬೆವರಾಗಿ ದುಡಿಯೋಣ  ಕಾಯಕವೆ ಕೈಲಾಸ ನುಡಿಮಾತ ನೆನೆಯೋಣ ॥   ಬೇಸಾಯ ಕೈಬೀಸಿ ಕರೆಯುತಿದೆ ರೈತರನು  ತಾ ದುಡಿದು ನೀಡುತಿಹ ಹಸಿದವಗೆ ಅನ್ನವನು  ಎಳೆದಷ್ಟು ಸಾಗದಿದು ಬದುಕಿನಾ ಸುಖತೇರು  ಬೆಳೆದಷ್ಟು ಉಳಿಯುವುದು ಹಸಿರೊಳಗಿನಾ ಬೇರು ॥   ನೀಲವ್ವ ಗಂಗವ್ವ ನಡೆಯಿರೇ ಹೊಲದೆಡೆಗೆ  ಮಾತಲ್ಲಿ ಮಲ್ಲವ್ವ ಹಾಡನುಡಿ ಜತಜತೆಗೆ  ಸರಸಕ್ಕ ಬಿಡುವಿರಸ ಮಾತಾಡು ಮಲ್ಲಿಗೆ  ಮೂರ್ನಾಲ್ಕು ದಿನಬಾಳು ಅಪರಿಚಿತರು ಇಲ್ಲಿಗೆ | -ವಿಜಯಲಕ್ಷ್ಮೀ ಕಟೀಲು ಚಿತ್ರ ಕೃಪೆ: ಇಂಟರ್ನೆಟ್ ತಾಣ