ಉಳ್ಳವರು ಶಿವಾಲಯವ ಕಟ್ಟುವರು... ಇದು ಇಂದಲ್ಲ, ಅಂದು ಅಂದಿದ್ದರು ಬಸವಣ್ಣ ಇಂದಾದರೂ ನಾ ಕಟ್ಟ ಬಲ್ಲೇನೆ..? ಶಿವಾಲಯವನ್ನಲ್ಲ ... ಮೇಲು ಕೀಳು, ಬಡವ ಬಲ್ಲಿದ, ಹೆಣ್ಣು ಗಂಡು ಹೀಗೆ, ಎರಡು ತೀರಗಳ ನಡುವೆ ಗಟ್ಟಿ ಅಲುಗಾಡದ ಸೇತುವೆಯ... ಹೆಗಲಿಗೆ ಹೆಗಲು ಕೊಟ್ಟು ಕೈಯ ಚಾಚಿ ಹಿಡಿದು ಸಾಗಿ  ಲೋಕದೆದುರು ಕಿರುನಗೆ ಬೀರಲು... ಅದೋ... ಅಲ್ಲೊಂದು ಹೆಣ್ಣು ಕಾಣೆಯಂತೆ... ಹಾ... ಇಲ್ಲ ಹೆಣ ಸಿಕ್ಕಿದೆ... ಹುಡುಕಾಡಿದವರು ಮನೆ ಸೇರಿದರು ಇಲ್ಲೊಂದು ಹುಡುಗಿ...ಅಲ್ಲಲ್ಲ  ಮಗು... ಹರೆಯ ನೋಡದ ಬಾಲೆ  ಕಿಟಾರನೆ ಕಿರುಚಿ ಕನ್ಯಾಪೊರೆ ಕಳಚಿ  ನಿಶ್ಚಲವಾಯಿತು ಜೀವ ಉಸಿರು ಚೆಲ್ಲಿತು... ಆದಾರೋ ಬೊಬ್ಬಿರಿದರಂತೆ ಅನ್ಯಾಯಕ್ಕೆ ಧಿಕ್ಕಾರವೆಂದು ಕೂಗಿದರಂತೆ ಅದೊಂದು ಅಸಹನೀಯ ಕೀರಲು ಧ್ವನಿ ಯಾರೋ ಗಂಟಲು ಅದುಮಿದಾಗ...  ದ್ವನಿ ಕ್ಷೀಣವಾಯಿತು  ಈಗ ನಿರಾಳ... ಪ್ರವಾಹಕ್ಕೆದುರು ಈಜಿದ ಮೀನು  ಬಲೆಯಲ್ಲಿ ಕೆಡವಿ ಬಿದ್ದು ಒದ್ದಾಡಿದರೆ, ನಿಶ್ಯಬ್ಧದಿ ತೇಲಿ ಹೋದ ನಿರ್ಜೀವ ಮೀನು  ಉಸಿರಾಡಿದೆ... ನಾನು ಉಸಿರಾಡುತ್ತಿರುವೆ ಮೌನವನ್ನೇ ಕುಡಿದು -ಜನಾರ್ದನ ದುರ್ಗ, ಪುತ್ತೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ