ತೇಲುವ ತೆಪ್ಪ
ಬರಹಗಾರರ ಬಳಗ
ಅಕ್ಟೋಬರ್ ೨೮, ೨೦೨೫
೪ ವೀಕ್ಷಣೆಗಳು
ಪ್ರಕೃತಿ ಬೇಲಿಯ ನಡುವೆ ವಿಶಾಲ ಕೊಳ
ಹಸಿರುಸಿರ ತಂಗಾಳಿ ದೋಣಿಯ ಬಲ
ಪ್ರತಿಬಿಂಬದ ಮಾಧುರ್ಯ ತಿಳಿಯಾದ ಬಗೆ
ನೀರ ಸಲುಗೆಯ ಸಾರ, ಇನ್ನೆಲ್ಲಿ ಬೇಗೆ!?
ತೇಲುವ ತೆಪ್ಪದ ಸೊಬಗಿನಲಿ ಮೌನ ರಾಗ
ಭಾರದ ದೇಹದ ಗುರುತಿಲ್ಲ. ಬೆರಗು ಈಗ
ನೆಲದ ಆಸರೆಗೆ ಗಿಡಗಳು ಬಾಗಿವೆ ಮೆಲ್ಲ
ನೀರೊಳಗಿನ ಕಲರವಕೆ ಕಾದಂತಿವೆ ಎಲ್ಲ!!
ಬಿಗುಮಾನದ ಭಾವದಲಿ ಒಲವಿಗೂ ಪಾಲು
ಮಗು ಮನದ ಎದುರು ಆಟಿಕೆಗೂ ಸೋಲು
ಸೋಜಿಗದ ಚಿತ್ರಣಕೆ ಸಾಕ್ಷಿಯಾಗಿದೆ ಬೇರು
ಕಂಬನಿಯ ಕುರುಹಿಲ್ಲಿಲ್ಲ, ಆನಂದದ ಅಶ್ರು!
ತೆಪ್ಪದಲಿ ಹೊಂಬೆಳಕು ಬದುಕೆಂಬ ಮಳೆಬಿಲ್ಲು
ಸೆಳೆತದ ಸಾನಿಧ್ಯಕೆ ಹಸಿರೊಡಲಲಿ ಸೊಲ್ಲು
ಕನಸು ನನಸಾಗಲು ಬೇಕು ಸಾರ್ಥಕ್ಯದ ಪಾತ್ರ
ಜೀವ ಜಗತ್ತಿಗೆ ಚೈತನ್ಯ, ನೆಮ್ಮದಿಯ ಸೂತ್ರ!!
ಮೌನ ಮಾತಿನ ಲೆಕ್ಕ ತೂಗಳತೆಗೂ ದೂರ
ಜೀವನ ಯಾನದ ರಥವಿದು, ಸೇರಲಿ ಆ ತೀರ!!
-ಹಿತೇಶ್ ಕುಮಾರ್ ಎ. ಕಾಸರಗೋಡು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಅಕ್ಟೋಬರ್ ೨೮, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬