ಕನ್ನಡ ಎಂದರೆ ಹೊನ್ನಿನ ನುಡಿಯು ಮಣ್ಣಿನ ಕಣಕಣವು/ ಅನ್ನದ ಋಣವನು ತೀರಿಸು ಮಗುವೆ ಚಿನ್ನದ ಗುಣವದುವು//   ಕನ್ನಡ ನೆಲಜಲ ಮರೆಯದಿರು ಮುನ್ನುಡಿ ಬರೆಯುತಲಿ/ ಕನ್ನಡ ಗಾಳಿಯ ಉಸಿರಾಡುತಲಿ ನಿನ್ನೆಯ ನೆನಪಿರಲಿ//   ಅಆಇಈ ಅಕ್ಷರ ಮಾಲೆ ಹೊಳೆಯುವ ಮುತ್ತುಮಣಿ/ ಏರಿಸಿ ಹಾರಿಸಿ ಕನ್ನಡ ಧ್ವಜವನು ಗೌರವ ಸಲಿಸುತಲಿ//   ನಾಡಗೀತೆಯ ಹಾಡುತ ಮುದದಿ ತಾಯಿಗೆ ವಂದನೆ ಮಾಡುತಲಿ/ ಭೇದಭಾವ ನಮ್ಮಲಿ ಬೇಡ ಮನುಜರೆಲ್ಲ ಒಂದೇ//   ಕನ್ನಡ ಭಾಷೆ ತಾಯಿ ಭಾಷೆ ಕೂಗಿ ಹೇಳುತಲಿ/ ಅನ್ಯ ಭಾಷೆ ದ್ವೇಷಿಸ ಬೇಡ ವ್ಯವಹಾರಕೆ ಇರಲಿ//   ಕರ್ನಾಟಕ ನಾಮಕರಣದ ದಿನವು ಭಾಷಾ ವೈಭವವು/ ಸಂಭ್ರಮ ಸಡಗರ  ಸಂಸ್ಕೃತಿ ಮೆರುಗಲಿ  ಬೆರೆಯುತ ನಲಿಯುತಲಿ//   ಹಿರಿಯ ಹೋರಾಟಗಾರರ ನೆನಪಿಸುತಲಿ ಬಾಳಿಗೆ  ನಾಂದಿಯ ಹಾಡುತಲಿ/ ಗಂಧದ ಚಂದದ ಬೀಡೆನುತಲಿ ಕನ್ನಡಮ್ಮನ ಸೇವೆಯ ಮಾಡುತಲಿ//   ಅಮ್ಮನ ಮಮತೆಯ ಮಡಿಲಿನ ಕುಡಿಗಳು ಅರಳುವ ಪುಷ್ಪಗಳು/ ಹೇಳುತ ಜೈ ಭುವನೇಶ್ವರಿ ಮಾತೆ ಜೇನಿನ ಸವಿಯ ಬೆರೆಸುತಲಿ//   -ರತ್ನಾ ಕೆ ಭಟ್ ತಲಂಜೇರಿ, ಪುತ್ತೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ