ಮಧುಶಾಲೆ ದಾರಿಯಲಿ ದ್ರಾಕ್ಷಿತೋಟ  ಗೊಂಚಲು ಗೊಂಚಲು ಹಸಿ ಹಸುರು ಕಾಯಿ  'ನಿನ್ನಲಿರುವುದೇ ತಾನೆ ಮಧುಬಟ್ಟಲಲ್ಲೂ?'  ಮಾಗದೆ ಮಧುವೆ? ನಕ್ಕಿತು ಕಾಯಿ.   ಮೆಲ್ಲನಡಿಯಿಡು ದ್ರಾಕ್ಷಿತೋಟದಲ್ಲಿ  ಓಡಾಡಿ ಮೌನದಲಿ ರಚಿಸು  ಹಣ್ಣುಗೊಂಚಲ ಚಿತ್ರ ಮನಸಿನಲ್ಲಿ  ಮತ್ತೆ ಕಾಣದು ಮಧುವಾದ ಮೇಲೆ   ದ್ರಾಕ್ಷಿತೋಟದ ಮಧ್ಯದಲ್ಲಿ ಕುಳಿತು  ಬೇಡುತಿರುವಳು ಸಾಕಿ, 'ನಿರ್ಮಲನೇ  ವಿಮಲ ಮನದಲಿ ನಗುತಿರಲಿ ಜಗ  ನಿನ್ನ ಕರುಣೋದಯದ ಬೆಳಕಿನಲ್ಲಿ   ದ್ರಾಕ್ಷಿತೋಟದ ಹಾದಿ ತೋರುವುದು ಗಿಳಿ  ಹಣ್ಣು ಹಣ್ಣಲೂ ಕಾಣುವುದು ಶಾಯರಿ  ಮನದನ್ನೆ ನೆನಪು ಬರುವುದು ಮೈಖಾನೆಯಲ್ಲಿ  ಬಣ್ಣಿಸಿ ಮೆಚ್ಚಿಸಬೇಕವಳ ಗಜ್ಜಲುಗಳಲ್ಲಿ.   ಹುಣ್ಣಿಮೆಯ ರಾತ್ರಿ ದ್ರಾಕ್ಷಿ ಚಪ್ಪರದ ಅಡಿ  ಏನನೋ ಧ್ಯಾನಿಸುತ ಅಲೆವ ಸಾಕಿ,  ಬೆಳದಿಂಗಳಿಳಿಯೆ ಬಳ್ಳಿ ಸರಿಸುವ ನನಗೆ  ಹೇಳಿದಳು: ಅದನೇಕೆ ಹಿಂಸಿಸುವೆ?   ದ್ರಾಕ್ಷಿಯಲ್ಲಿನ ರಸ ಮಧುವಾಗಿ ಕಂಡರೆ  ತಡವೇಕೆ ನಡೆ ಮಧುಶಾಲೆಗೆ  ದ್ರಾಕ್ಷಿ ಮಧುವನರಿಯಲು ಮೂಲ  ಮಾಸದಿರಲಿ ಅದು ಹೃದಯದೊಳಗೆ -ರಘುನಾಥ ಎಸ್. ಚಿತ್ರ ಕೃಪೆ: ಇಂಟರ್ನೆಟ್ ತಾಣ