ಕಟ್ಟಿದ ಕನಸೆಲ್ಲಾ ಕಟ್ಟೆಯೊಡೆದ ನೀರಂಗೆ ಹರಿದ್ದೋದೊ ಇಂಗ್ಲೋದೋ ಭೂಮ್ಯಾಗೆ | ಹೇ ಶಿವನೇ  ಬೆಟ್ಟದ ಮ್ಯಾಗಿನ ಮರ ಹತ್ತಿ ಕೈ ಬಿಟ್ಟಂಗೆ   ಅತ್ತಿಯ ಹಣ್ಣಂಗೆ ಮೆತ್ತನೆ ಮನಸಗಳು  ಹುಡುಕಿದರೆ ಒಳಗೊಂದು ಹುಳವಿಲ್ಲ | ಆ ಹೆಣ್ಣು  ಎತ್ತ ಹೋದಳೋ ಅವಳ ಸುಳುವಿಲ್ಲ   ರೆಂಬೆ - ಕೊಂಬ್ಯಾಗೆ ತುಂಬಿದ ಹೂವಂಗೆ  ಹಸಿ ಹೊಂಬಾಳೆ ಹೊಡೆದು ನಗುವಂಗೆ | ಆ ಹೆಣ್ಣು  ಹುಸಿ ಮುನಿಸಿಲ್ಲ ಅವಳ ಮೊಗದಾಗೆ   ನೆಲವಿನೊಳಗೆ ಕುಳಿತು ತೂಗುತ್ತಿರುವ  ಮಡಿಕೆಯೊಳಗಿನ ಬೆಣ್ಣೆಯ ಮಿದುವಂಗೆ । ಆ ಹೆಣ್ಣು ಮದುಮನೆಯ ಮರೆತು ಎತ್ತ ನಡೆದಾಳೋ   ಉಣ್ಣಲು ಹಸಿವಿಲ್ಲ ಕಣ್ಣಿಗೆ ನಿದಿರಿಲ್ಲ  ತಣ್ಣನೆ ಗಾಳಿ ಬಿಸಿಯಾಯ್ತು|  ಓ ಹೆಣ್ಣೇ  ಹೊಂಗೆಯ ನೆರಳಾಗಿ ಬಾರಪ್ಪ   ನೆತ್ತಿಯ ಸದರಿ ಹೊತ್ತೊತ್ತಿಗೂ ತುತ್ತಿಕ್ಕಿ  ಬಡವನ ಹೊಟ್ಟೆಯ ತುಂಬೋಳೇ । ಓ ಹೆಣ್ಣೇ  ಹೊತ್ತಾಯ್ತು ಬಾರೆ ನನ್ನ ಹಟ್ಟಿಗೆ   - ರೂಪಾ ಹೊಸದುರ್ಗ ಚಿತ್ರ ಕೃಪೆ: ಇಂಟರ್ನೆಟ್ ತಾಣ