ಸಾಗರಿ (ಭಾಗ 1)
ಬರಹಗಾರರ ಬಳಗ
ಸೆಪ್ಟೆಂಬರ್ ೧೬, ೨೦೨೫
೮ ವೀಕ್ಷಣೆಗಳು
ಇನ್ನೂ ಅಲಾರಮ್ ಹೊಡೆದುಕೊಂಡಿರಲಿಲ್ಲ. ಬೆಳಗಾಗಿಬಿಟ್ಟಿದೆ ಎಂದು ಅಲಾರಮ್ ಶಬ್ದ ಹೊಡೆದುಕೊಳ್ಳುವ ಹದಿನೈದು ನಿಮಿಷಕ್ಕೆ ಮುಂಚೆಯೇ ಅವಳಿಗೆ ಎಚ್ಚರವಾಯಿತು. ರಾತ್ರಿ ಬಹಳ ಆಯಾಸವಾಗಿದ್ದರಿಂದ ಹೇಗೆ ಕಣ್ಮುಚ್ಚಿದ್ದಳೋ ಗೊತ್ತಿಲ್ಲ. ಕನಸಲ್ಲೂ ನಾಳಿನ ಕೆಲಸಗಳ ಲೆಕ್ಕಾಚಾರಗಳನ್ನಾಕುತ್ತಾ ಸಾಗರಿ ಬೇಗನೆ ಎಚ್ಚರಗೊಂಡಳು. ಸಮಯಕ್ಕೆ ಮುಂಚೆಯೇ ಎದ್ದಿದ್ದು ಅವಳಿಗೆ ಸಂತೋಷವೇನೋ ಆಯಿತು. ಆದರೆ ನಿದ್ರೆಯ ಮತ್ತು ಮಾತ್ರ ಹಾಸಿಗೆ ಬಿಟ್ಟೇಳಲು ಬಿಡುತ್ತಿರಲಿಲ್ಲ. ನಾನಾ ? ನೀನಾ? ನೋಡೇ ಬಿಡೋಣ ಎಂದು ಹೊದಿಕೆಯನ್ನು ಎಸೆದು ಅಲೆಕ್ಸಾ, ಪ್ಲೇ ದ ಸಾಂಗ್ ಮುಂದೆ ಬನ್ನಿ ಇನ್ನು ಮುಂದೆ ಬನ್ನಿ' ಎಂದಳು. ಹಾಡು ಶುರುವಾಗಿದ್ದೇ ತಡ ಹಾಸಿಗೆಗಂಟಿದ್ದ ದೇಹದ ಜಡತ್ವ ಕ್ಷಣಮಾತ್ರಕ್ಕೆ ಮಾಯವಾಗಿ ರೂಮಿನಿಂದ ಹೊರಟು ಗೀಸರ್ ನ ಸ್ವಿಚ್ ಒತ್ತಿದಳು. ನೀರು ಕಾಯುವಷ್ಟರಲ್ಲಿ ಬ್ರಷ್ ಮಾಡಿ ಮುಗಿಸಿ, ಕೊಳಾಯಿ ತಿರುವಿದಾಗ ಅರೆಬರೆ ಕಾದಿದ್ದ ನೀರು ಬಕೆಟ್ ತುಂಬಿತು. ಗೀಸರ್ ಕೆಟ್ಟು ತಿಂಗಳುಗಳೇ ಕಳೆದಿದ್ದರೂ ಸರಿಪಡಿಸಿಕೊಳ್ಳುವ ಗೋಜಿಗೆ ಹೋಗಿರಲಿಲ್ಲ. ಅರ್ಧಂಬರ್ಧ ಕಾದಿದ್ದ ನೀರಿನಲ್ಲಿ ಸ್ನಾನ ಮುಗಿಸಿ ಹೊರ ಬರುವಷ್ಟರಲ್ಲಿ ಎಲ್ಲಿಗೆ ಪಯಣ..? ಯಾವುದೋ ದಾರಿ...? ಏಕಾಂಗಿ ಸಂಚಾರಿ..! ಹಾಡು ಪ್ಲೇ ಆಗುತ್ತಿತ್ತು. ಈಗ ತಾನೆ ದಿನ ಶುರುವಾಗಿದೆ. ಈ ಹಾಡು ನನ್ನ ಮೂಡನ್ನೆಲ್ಲಾ ಹಾಳು ಮಾಡಿತು ಎಂದು ಥಟ್ ಅಂತ ಹಾಡನ್ನು ನಿಲ್ಲಿಸಿ ಅವಸರದಲ್ಲಿಯೇ ಅಣಿಯಾದಳು.
ಹಿಂದಿನ ರಾತ್ರಿ ಕಲಸಿಟ್ಟಿದ್ದ ಚಪಾತಿ ಹಿಟ್ಟನ್ನು ಪ್ರಿಡ್ಜ್ ನಿಂದ ಹೊರತೆಗೆದು ಲಟಾಪಟಿ ಎಂದು ಲಟ್ಟಿಸಿ ನಾಲ್ಕು ಚಪಾತಿಯಲ್ಲಿ ಎರಡು ತಿಂಡಿಗೆ ಎರಡು ಊಟಕ್ಕೆಂದು ಡಬ್ಬಿಗೆ ಹಾಕಿಕೊಂಡು ಜೊತೆಗೆ ಚಟ್ಟಿ ಪುಡಿಗೆ ಸ್ವಲ್ಪ ನೀರು ಸೇರಿಸಿ ಕಲಸಿ ಡಬ್ಬಿ ಕಟ್ಟಿಕೊಂಡು ಗಡಿಯಾರದ ಕಡೆ ನೋಡಿದಾಗ ಗಂಟೆ 2 ಆಗಿತ್ತು ಅಯ್ಯೋ ಈ ಗಡಿಯಾರಕ್ಕೆ ಶಲ್ ತರೋದೆ ಮರೆತೆ ಎಂದು ತಲೆ ಮೊಟಕಿಕೊಂಡು ಮೊಬೈಲ್ ನೋಡಿದಾಗ ಸಮಯ 7. ಒಂದು ನಿಮಿಷ ತಡವಾಗಿಬಿಟ್ಟರೆ ಶಾಲೆಯ ಗೇಟ್ ಮುಚ್ಚಿಬಿಡುತ್ತದೆ. ಮಕ್ಕಳ ಪ್ರಾರ್ಥನೆ ಮುಗಿಯುವವರೆಗೂ ಗೇಟ್‌ನ ಮುಂದೆ ಅರ್ಧಗಂಟೆ ನಿಲ್ಲಬೇಕೆಂದು ಹೆದರಿ ಬಸ್ ನಿಲ್ದಾಣದ ಕಡೆ ದೌಡಾಯಿಸಿದಳು. ಬೆಂಗಳೂರಿನಲ್ಲಿ ಬೆಳಗಿನ ಸಮಯದಲ್ಲಿ ಕೆಲಸಕ್ಕೆ ಹೋಗುವವರ ಸಂಖ್ಯೆ ಸಾಮಾನ್ಯವಾಗಿ ಹೆಚ್ಚಾಗಿರುವುದರಿಂದ ಬರುವ ಎಲ್ಲಾ ಬಸ್ಸುಗಳು ಪೂರ್ತಿ ಭರ್ತಿಯಾಗಿ ಬರುತ್ತವೆ. ರಶ್ ಇದ್ದರೂ ಪರವಾಗಿಲ್ಲ ಬಸ್ಸಿಗೊಳಗೆ ಹತ್ತಿಕೊಂಡರೆ ಸಾಕು ಎಂದುಕೊಳ್ಳುತ್ತಿದ್ದಂತೆ ಬಸ್ ಅವಳೆದುರು ಹಾಜರ್. ಬಿರಬಿರನೆ ಹತ್ತಿದವಳೇ ಕಂಬಿ ಹಿಡಿದುಕೊಂಡು ನಿಂತಳು. ಆಧಾರ್ ಕಾರ್ಡ್ ತೆಗಿರಿ, ಆಧಾರ್ ಕಾರ್ಡ್ ತೆಗೆದು ಕೈನಲ್ಲಿ ಇಟ್ಟುಕೊಳ್ಳಿ ಎಂದು ಕಿರುಚುತ್ತಿದ್ದ ಕಂಡಕ್ಟರ್ ಸಾಗರಿಯ ಬಳಿ ಬಂದು "ಏನಮ್ಮ ಬಸ್ಸಿಗೆ ಹತ್ತಿರ ಕೂಡಲೇ ಆಧಾರ್ ಕಾರ್ಡ್ ಕೈನಲ್ಲಿ ಹಿಡಿದುಕೊಳ್ಳಬೇಕಲ್ವಾ? ನಿಮಗೆಲ್ಲಾ ಫ್ರೀ ಟಿಕೆಟ್ ಮಾಡಿದವರಿಗೆ ಬುದ್ಧಿಯಿಲ್ಲ." ಎಂದು ರೇಗತೊಡಗಿದ. ಮಹಿಳೆಯರಿಗೆ ಸರ್ಕಾರ ಫ್ರೀ ಟಿಕೆಟ್ ಸೌಲಭ್ಯವನ್ನು ಒದಗಿಸಿದ ನಂತರ ಈ ಕಂಡಕ್ಟರ್ಗಳಿಗೆ ಮಹಿಳೆಯರ ಮೇಲಿನ ಗೌರವ ಭಾವನೆ ಕಡಿಮೆಯಾಗಿಬಿಟ್ಟಿದೆ ಉಚಿತವಾಗಿ ಏನೇ ಸಿಕ್ಕರು ಅದಕ್ಕೆ ಬೆಲೆಯಿಲ್ಲ. ಅದನ್ನು ಪಡೆಯುವವರಿಗೂ ಬೆಲೆಯಿಲ್ಲ ಎನ್ನುವಂತೆ ಕೆಲ ಕಂಡಕ್ಟರ್ ಗಳ ವರ್ತನೆಯೂ ಹಾಗಿದೆ.
ಕಂಡಕ್ಟರ್ ನ ಮಾತುಗಳಿಗೆ ಸ್ವಲ್ಪ ಬೇಸರವಾಗಿ ಬ್ಯಾಗಿನಿಂದ ದುಡ್ಡು ತೆಗೆದು ಅವನ ಕೈಗಿಟ್ಟು ಇಂದಿರಾನಗರಕ್ಕೆ ಒಂದು ಟಿಕೆಟ್ ಕೊಡಿ ಎಂದಳು. ಕಂಡಕ್ಟರ್ ಮುಖ ಮುಖ ನೋಡುತ್ತಾ ಟಿಕೆಟ್ ಹರಿದುಕೊಟ್ಟ. ಸ್ವಾಭಿಮಾನವನ್ನು ಕೆಣಕಿದರೆ ಸಾಗರಿ ಸಹಿಸಲಾರಳು. ಉಚಿತ ಪಯಾಣ ನನ್ನ ಸ್ವಾಭಿಮಾನಕ್ಕೆ ಚ್ಯುತಿ ತರುತ್ತದೆಂದರೆ ಅಂತಹ ಸೌಲಭ್ಯವೇ ನನಗೆ ಬೇಡವೆಂದು ಹಣ ಕೊಟ್ಟು ಪ್ರಯಾಣ ಮಾಡಿದಳು.
ಬಸ್ಸಿನಿಂದ ಇಳಿಯುವಷ್ಟರಲ್ಲಿ ಆಗಲೇ ಸಮಯ 7:45. ಇನ್ನು 15 ನಿಮಿಷದಲ್ಲಿ ಶಾಲೆಯ ಒಳಗೆ ಸೇರಿಕೊಳ್ಳದಿದ್ದರೆ ಅರ್ಧಗಂಟೆ ಹೊರಗೆ ನಿಲ್ಲಬೇಕು. ಅಷ್ಟೇ ಅಲ್ಲದೇ ತಡವಾಗಿ ಬಂದೆ ಎಂದು ತಪ್ಪಿಗೆ ತಪ್ಪೊಪ್ಪಿಗೆ ಪತ್ರ ಬೇರೆ ಬರೆದುಕೊಡಬೇಕು. ಆನಂತರವೇ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಬಹುದು, ಇಲ್ಲವೆಂದರೆ ಒಂದು ದಿನದ ಸಂಬಳ ಕೈತಪ್ಪಿ ಹೋಗುತ್ತದೆ. ಈ ಎಲ್ಲಾ ಲೆಕ್ಕಾಚಾರಗಳನ್ನಾಕುತ್ತಾ ಬಸ್ ನಿಲ್ದಾಣದಿಂದ ಸರಸರನೆ ಹೆಜ್ಜೆಗಳನ್ನಿಡುತ್ತಾ ಶಾಲೆ ಕಡೆ ಹೊರಟಳು. ಬಿರುಸಾದ ಅವಳ ಹೆಜ್ಜೆಗಳು ಹೆದರಿದ್ದವು. ಹೃದಯ ಕೆಂಪನ ಹೆಚ್ಚಾಗಿ ಬೆವರತೊಡಗಿದಳು. ಅವಳ ನಡಿಗೆಯ ವೇಗ ಸಮಯಕ್ಕೆ ಸರಿಯಾಗಿ ಶಾಲೆ ಪ್ರವೇಶಿಸುವಂತೆ ಮಾಡಿತ್ತು. 8 ಗಂಟೆಗೆ ಇನ್ನು 5 ನಿಮಿಷ ಇರುವಾಗಲೆ ಶಾಲೆಯೊಳಗೆ ಸೇರಿಕೊಂಡಳು.
ಅದು ಪ್ರಾರ್ಥನಾ ಸಮಯ. ಮಕ್ಕಳೆಲ್ಲಾ ಸಾಲಾಗಿ ನಿಂತಿದ್ದರು. ಸಾಗರಿ ಆ ಸಾಲುಗಳ ಮಧ್ಯೆ ನಡೆದು ಹೋಗುವಾಗ ಹತ್ತನೇ ತರಗತಿ ಗಂಡು ಮಕ್ಕಳ ಸಾಲಿನಿಂದ ' ಸೀರೆಲಿ ಟೀಚರ್‌ನ ನೋಡಲೇಬಾರದು ನಿಲ್ಲಲ್ಲ ಟೆಂಪೇಚರು' ಹಾಡು ಕೇಳಿಸಿತು. ಸಿಟ್ಟು ನೆತ್ತಿಗೇರಿ ಒಮ್ಮೆ ಅವರತ್ತ ಕಣ್ಬಿಟ್ಟು ಏನೂ ಮಾತನಾಡದೆ ದಡದಡನೆ ಮೆಟ್ಟಿಲೇರಿ ಆಫೀಸಿನೊಳಗೆ ಹೋಗಿ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ಸ್ಟಾಫ್ ರೂಂ ಕಡೆ ನಡೆದಳು. ಬಸ್ ಸ್ಟಾಪಿನಿಂದ ಶಾಲೆವರೆಗೂ ಹದಿನೈದು ನಿಮಿಷ ಅವಸರದಲ್ಲಿ ನಡೆದುದ್ದರ ಪರಿಣಾಮವಾಗಿ ಗಂಟಲು ಒಣಗಿತ್ತು ಗಟಗಟ ನೀರು ಕುಡಿದವಳೆ ಸಾವರಿಸಿಕೊಳ್ಳಲು ಸಮಯವಿಲ್ಲದೆ ಶಿಕ್ಷಕರ ಸಾಲಿನಲ್ಲಿ ಬಂದು ನಿಂತಳು. ಪಿ.ಟಿ ಟೀಚರ್ ಕಾಷನ್ ಕೊಡಲು ಶುರು ಮಾಡಿದರು. ಎಲ್ಲರೂ ಕೈ ಮುಗಿದು ಓಂಕಾರ ಹೇಳುತ್ತಾ 'ಅಸತೋಮ ಸದ್ಗಮಯ ತಮಸೋಮ ಜ್ಯೋತಿರ್ಗಮಯ, ಮೃತ್ಯೋರ್ಮ ಅಮೃತಂಗಮಯ' ಎಂದು ಹಾಡುತ್ತಿದ್ದರೆ ಸಾಗರಿಯ ತುಟಿಗಳು ಮಾತ್ರ. ಪ್ರಾರ್ಥನೆಯನ್ನು ಹಾಡುತ್ತಿದ್ದವು. ಆದರೆ ಅವಳ ತಲೆಯಲ್ಲಿ ಈ ದಿನದ ಟೈಂ ಟೇಬಲ್ ಏನು? ಎಷ್ಟು ತರಗತಿಗಳಿವೆಯೋ? ಲೆಸನ್ ಪ್ಲಾನ್ ರೆಡಿ ಆಗಿಲ್ಲ. ಪ್ರಶ್ನೆ ಪತ್ರಿಕೆ ಯಾವಾಗ ರೆಡಿ ಮಾಡುವುದು? ಆನ್ಸರ್ ಕೀ ರೆಡಿ ಮಾಡಲು ಇನ್ನು ಎಷ್ಟು ದಿನ ಕಾಲಾವಕಾಶವಿದೆ? ಎಂಬ ಹಲವಾರು ಯೋಜನೆಗಳು ಓಡುತ್ತಿದ್ದವು. ಬೆಳಿಗ್ಗೆ ಬೆಳಿಗ್ಗೆ ಒತ್ತಡ ಅವಳನ್ನು ಆವರಿಸಿತ್ತು. ನ್ಯಾಷನಲ್ ಅಂತಮ್ ಬಿಗಿನ್ ಎಂಬ ಶಬ್ದ ಕಿವಿಯ ಮೇಲೆ ಬಿದ್ದಕೂಡಲೆ ತಟ್ಟನೆ ಎಚ್ಚರಗೊಂಡು ದೇಶಭಕ್ತಿಯ ಭಾವನೆ ಅವಳ ಮುಖದ ಮೇಲೆ ತೆಳೆಯಿತು. ವೈಯಕ್ತಿಕವಾಗಿ ನೂರಾರು ನೋವಗಳು 'ನಮ್ಮನ್ನು ಕಾಡುತ್ತಿದ್ದರೂ ದೇಶ, ಭಾಷೆ ಎಂದ ಕೂಡಲೇ ಅದ್ಯಾವ ಶಕ್ತಿ ನಮ್ಮನ್ನಾವರಿಸಿಬಿಡುತ್ತದೆಯೋ ಗೊತ್ತಿಲ್ಲ. ನರನಾಡಿಗಳಲ್ಲಿ ಮಿಂಚು ಹರಿದಂತೆ ಅನುಭವವಾಗುತ್ತದೆ. ಮಾನಸಿಕ ಶಕ್ತಿ ದುಪಟ್ಟಾಗುತ್ತದೆ. ಈಗ ಸಾಗರಿ ತಾನೊಬ್ಬಳು ಜವಾಬ್ದಾರಿಯುತ ಶಿಕ್ಷಕಿಯಾಗಿ ಗೋಚರಗೊಳ್ಳುತ್ತಾಳೆ. ದಿನದ ತನ್ನ ಚಟುವಟಿಕೆಗಳಲ್ಲಿ ಕಾರ್ಯೋನ್ಮುಖಳಾಗುತ್ತಾಳೆ.
ಅದು ಹತ್ತನೇ ತರಗತಿ. ಸಾಗರಿ ಪುಸ್ತಕ ಹಿಡಿದು ತರಗತಿಯ ಒಳಗೆ ನಡೆದಳು. ಸುಮಾರು 30 ಮಕ್ಕಳಿರುವ ತರಗತಿ. ಶಿಕ್ಷಕರು ತರಗತಿ ಒಳ ಪ್ರವೇಶಿಸಿದ ನಂತರ ಎದ್ದುನಿಂತು ನಮಸ್ಕಾರಗಳನ್ನು ಹೇಳಿ ಗೌರವ ಸೂಚಿಸುವುದು ಸಂಸ್ಕಾರ. ಹಿಂದಿನಿಂದಲೂ ಇದೇ ಪದ್ಧತಿ ರೂಢಿಯಲ್ಲಿದೆ. ಸಾಗರಿ ತರಗತಿಯೊಳಗೆ ಕಾಲಿಡುತ್ತಿದ್ದಂತೆ ಆ ಮೂವತ್ತು ಜನ ವಿದ್ಯಾರ್ಥಿಗಳಲ್ಲಿ ಅರ್ಧದಷ್ಟು ಕೂಡ ಎದ್ದು ನಿಂತುಕೊಳ್ಳಲಿಲ್ಲ. ತರಗತಿಯ ಒಳಗೆ ಬಂದು ಐದು ನಿಮಿಷಗಳಾದರೂ ಯಾರೂ ಇವಳತ್ತ ನೋಡುತ್ತಿಲ್ಲ. ಅವರದ್ದೇ ಪ್ರಪಂಚದಲ್ಲಿ ತಲ್ಲೀನರಾಗಿದ್ದಾರೆ. ಶಿಕ್ಷಕರ ಬಗೆಗಿನ ಅವರ ನಿರ್ಲಕ್ಷ್ಯ ಎದ್ದು ಕಾಣುತ್ತಿತ್ತು. ಸಾಗರಿ ಏನೂ ಮಾತನಾಡದೆ ಸುಮ್ಮನೆ ನೋಡುತ್ತಾ ನಿಂತುಬಿಟ್ಟಳು. "ಗೌರವ ಎನ್ನುವುದು ಕೇಳಿ ಪಡೆಯುವುದಲ್ಲ, ಗುರುಗಳನ್ನು ಗೌರವಿಸಬೇಕೆಂಬ ಭಾವನೆ ನಮ್ಮಲ್ಲಿರಬೇಕು" ಎಂಬ ವಾಕ್ಯವನ್ನು ಬೋರ್ಡಿನ ಮೇಲೆ ಬರೆದಳು. ಬರೆಯುತ್ತಿದ್ದ ಹಾಗೆ ಎಲ್ಲಾ ವಿದ್ಯಾರ್ಥಿಗಳು ಎದ್ದು ನಿಂತು 'ಶುಭೋದಯ ಗುರುಗಳೇ" ಎಂದು ಉದ್ಗಾರ ಎಳೆದರು. ಅವರ ಮುಖಗಳಲ್ಲಿ ಗೌರವದ ಭಾವನೆ ಇರದಿದ್ದ ಕಾರಣ ಸಾಗರಿಯ ಮನಸ್ಸಿಗೆ ಸಮಾಧಾನವಾಗಲಿಲ್ಲ. ನೀವು ನನಗೆ ಗೌರವ ಕೊಡಲೇಬೇಕೆಂಬುದು ನನ್ನ ನಿರೀಕ್ಷೆಯಲ್ಲ. ಅದು ತಾನಾಗಿಯೇ ಸಿಗುವಂತಹದು. ನನ್ನನ್ನು ನೋಡಿದಾಗ ಗೌರವಿಸಬೇಕೆಂಬ ಭಾವನೆ ನಿಮ್ಮಲ್ಲಿ ಮೂಡಲಿಲ್ಲವೆಂದರೆ ನಾನು ಅದನ್ನು ಸಂಪಾದನೆ ಮಾಡಲಿಲ್ಲವೆಂದೇ ಅರ್ಥ. ಇದರಲ್ಲಿ ನಿಮ್ಮ ತಪ್ಪೇನಿಲ್ಲ. ನಿಮಗೆ ಕಲಿಸುವುದಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ನಿಮ್ಮ ಪೋಷಕರು ನಿಮ್ಮ ಮೇಲೆ ಹೂಡಿಕೆ ಮಾಡಿರುವ ಹಣಕ್ಕೆ ವಿದ್ಯೆ ಕಲಿಸುವುದರ ಮೂಲಕ ಅದಕ್ಕೆ ಪ್ರತಿಫಲ ಕೊಡಲು ಇಲ್ಲಿ ನಿಂತಿದ್ದೇನೆ. ನಾಮ ತರಗತಿಗೆ ಬಂದ ತಕ್ಷಣ ನೀವೆಲ್ಲರೂ ನಿಂತುಕೊಂಡು ಗೌರವ ಸೂಚಿಸಿಲ್ಲವೆಂದರೂ ಪರವಾಗಿಲ್ಲ ಆದರೆ ನಮ್ಮ ಟೇಚರ್ ಈ ದಿನ ಯಾವ ಪಾಠವನ್ನು ಹೇಳಿಕೊಡಬಹುದು ಎಂಬ ಕುತೂಹಲದಿಂದ ನನ್ನ ಕಡೆ ಗಮನ ಕೊಟ್ಟರಷ್ಟೇ ಸಾಕು. ಅದಕ್ಕಿಂತ ಹೆಚ್ಚಿನ ಗೌರವ ಬೇರೊಂದಿಲ್ಲ ಎಂದು ಹೇಳುತ್ತಿದ್ದಂತೆಯೇ 'ಸಾರಿ ಮ್ಯಾಮ್'ಎಂದರು.
ಇನ್ನೇನು ಪುಸ್ತಕ ತೆಗೆದು ಪಾಠಶುರು ಮಾಡಬೇಕು ಎನ್ನುವಷ್ಟರಲ್ಲಿ ಒಬ್ಬ ಹುಡುಗ 'ಮ್ಯಾಮ್ ತುಂಬಾ ಶೆಕೆ ಆಗ್ತಿದೆ ಫ್ಯಾನ್ ಆನ್ ಮಾಡಿ' ಎಂದ. ಸಿಟ್ಟು ನೆತ್ತಿಗೇರಿ ತನಗೆ ತಾನೇ ಸಮಾಧಾನ ಮಾಡಿಕೊಂಡು ಫ್ಯಾನ್ ಆನ್ ಮಾಡಿದಳು. ಅಷ್ಟರಲ್ಲಿ ಮತ್ತೊಬ್ಬಳು "ಮ್ಯಾಮ್ ಚಳಿ ಆಗ್ತಿದೆ ಫ್ಯಾನ್ ಆಫ್ ಮಾಡಿ" ಅಂದಳು. ಇನ್ನೂ ಸಮಾಧಾನ ಮಾಡಿಕೊಂಡು ಏನೂ ರಿಯಾಕ್ಟ್ ಮಾಡದೆ ಪಾಠ ಪ್ರಾರಂಭಿಸಿದಳು. ಮತ್ತೊಬ್ಬ 'ಬೆಳಿಗ್ಗೆ ಬೆಳಿಗ್ಗೆನೆ ಕನ್ನಡ ಕ್ಲಾಸ್ ಬೋರ್ ಹೊಡೆಯುತ್ತೆ ಕಣೋ.. ಯಾರು ಈ ಕಥೆಗಳನ್ನೆಲ್ಲ ಕೇಳ್ತಾರೆ? ಎಂದು ಹೇಳುತ್ತಾ ಇನ್ನೇನು ತೂಕಡಿಸುವವನಿದ್ದ. ಇವೆಲ್ಲವುಗಳಿಗೂ ಸಾಗರಿಯ ಸಹನೆಯೇ ಉತ್ತರವಾಗಿತ್ತು.
ಅದು ಎಚ್.ಎಸ್ ವೆಂಕಟೇಶ ಮೂರ್ತಿಯವರು ಬರೆದಿರುವ "ಹೂವಿ" ನಾಟಕ. ಅದ್ಭುತವಾದ ಕಲ್ಪನೆಯುಳ್ಳ ಭಾವನಾತ್ಮಕ ನಾಟಕ. ಸಾಗರಿ ಬಹಳ ಉತ್ಸುಕತೆಯಿಂದ ನಾಟಕಕ್ಕೆ ಪೀಠಿಕೆಯನ್ನಾಕುತ್ತಿದ್ದಾಳೆ. 'ಈಯಮ್ಮನ ಭಾಷಣ ಶುರುವಾಯ್ತು ಮಗಾ... ಇನ್ನು ಅರ್ಧಗಂಟೆ ನಿಲ್ಲಿಸಲ್ಲ" ಎಂಬ ಪಿಸುಮಾತು ಸಾಗರಿ ಕಿವಿಗೆ ಚೆನ್ನಾಗಿಯೇ ಕೇಳಿಸಿತು. ಅವರ ಕಡೆಗೆ ಒಂದು ನೋಟ ಬೀರಿ ಸಮಯ ವ್ಯರ್ಥ ಮಾಡುವುದು ಬೇಡವೆಂದು ನಾಟಕ ವಿವರಿಸತೊಡಗಿದಳು.
(ಇನ್ನೂ ಇದೆ)
- ರೂಪಾ ಹೊಸದುರ್ಗ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಸೆಪ್ಟೆಂಬರ್ ೧೬, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬