ಧರ್ಮಕ್ಷೇತ್ರ - ಕುರುಕ್ಷೇತ್ರ
ಬರಹಗಾರರ ಬಳಗ
ಏಪ್ರಿಲ್ ೨೨, ೨೦೨೬
೯ ವೀಕ್ಷಣೆಗಳು
ಶ್ರೀಮದ್ಭಗವದ್ಗೀತೆಯ ಮೊದಲ ಶ್ಲೋಕ “ಧರ್ಮ ಕ್ಷೇತ್ರೇ ಕುರುಕ್ಷೇತ್ರೇ“ ಎಂದಾರಂಭವಾಗುತ್ತದೆ. ಕೌರವ ಪಾಂಡವರ ಸೈನ್ಯದ ನಡುವೆ ಧರ್ಮಯುದ್ಧ ನಡೆಯುತ್ತಿರುವುದರಿಂದ ಯುದ್ಧ ಭೂಮಿಯಾಗಿದ್ದ ಕುರುಕ್ಷೇತ್ರವು ಧರ್ಮಕ್ಷೇತ್ರವಾಗಿದೆ. ಮಾನವನ ದೇಹವನ್ನು ಧರ್ಮಕ್ಷೇತ್ರ ಎಂದು ಭಾವಿಸುವುದು ಅಸಮಂಜಸವಲ್ಲ. ಈ ದೇಹವು ದೇವಾಲಯದಂತೆ ಪುಣ್ಯಕ್ಷೇತ್ರ. “ದೇಹೋ ದೇವಾಲಯಃ ಪ್ರೋಕ್ತೋ ದೇವೋ ಜೀವಃ ಸನಾತನಃ” ಈ ದೇಹದೊಳಗೆ ಆತ್ಮ ಅಥವಾ ಜೀವ ಸ್ವರೂಪಿಯಾದ ಭಗವಂತ ನೆಲೆಸಿದ್ದಾನೆ ಎಂಬುದು ಭಾರತೀಯರ ನಂಬುಗೆ. ನಂಬುಗೆಯೂ ಮೂಢವಲ್ಲ. ಅಪಾರವಾದ ಶಕ್ತಿಯು ಈ ದೇಹಕ್ಕಿದೆ. ಈ ದೇಹ ಸೃಷ್ಟಿ ಸ್ಥಿತಿ ಲಯಕರ್ತನ ಕೆಲಸವನ್ನು ನಿರ್ವಹಿಸುತ್ತದೆ. ಭಗವತ್ ಪ್ರೇರಿತವಾಗಿರುವ ಶಕ್ತಿಯದು. ದೇಹವೆಂಬ ಈ ಧರ್ಮಕ್ಷೇತ್ರದಲ್ಲಿ ಕುರುಕ್ಷೇತ್ರದಂತೆ ಯುದ್ಧವೂ ನಡೆಯುತ್ತಿದೆಯೇ? ಹೌದು. ದೇಹವೆಂಬ ಧರ್ಮಕ್ಷೇತ್ರ ಸದಾ ಯುದ್ಧದ ಸನ್ನಿವೇಶಗಳಿಂದ ತುಂಬಿರುತ್ತದೆ.
ಹೃದಯದೊಳಗಿನ ಕುರುಕ್ಷೇತ್ರಕ್ಕೆ ಕಾರಣಗಳೇನು? ಕಾರಣರು ಯಾರು? ಎಂಬ ಪ್ರಶ್ನೆ ಸಹಜ. ಹುಟ್ಟುವ ಗಿಡ ಎಷ್ಟು ಸುಂದರವಾಗಿರುತ್ತದೆ ಅಲ್ಲವೇ? ಯಾವುದೇ ಕಲೆ ಮತ್ತು ಕಳೆಯಿರದ ಗಿಡಕ್ಕೆ ಪರಿಸರದ ಕ್ರಿಮಿ ಕೀಟಗಳ ಹಾವಳಿಯಿಂದ ಅದು ನಾಶಹೊಂದುವುದು. ಅದೇ ರೀತಿ ಹುಟ್ಟಿನಿಂದ ಪರಿಶುದ್ಧವಾಗಿರುವ ಮನಸ್ಸಿನ ಕಲೆ, ಕೊಳೆ, ಮಾಲಿನ್ಯಗಳಿಗೆ ಪರಿಸರವೇ ಕಾರಣ. ಪರಿಸರವೆಂದರೆ ಗಿಡ ಮರ ಬಳ್ಳಿಗಳು ಮಾತ್ರವೇ? ಖಂಡಿತಾ ಅಲ್ಲ, ಪರಿಸರದಲ್ಲಿ ಕಾಣುವ ಸ್ವಾರ್ಥ ಮತ್ತು ಸಂಕುಚಿತ ಸ್ವಭಾವಗಳೂ ಮನಸ್ಸಿನೊಳಗೆ ಕಶ್ಮಲ ತುಂಬಲು ಕಾರಣ. ಸ್ಭಭಾವಗಳು ಧನಾತ್ಮಕವಾಗಿದ್ದಾಗ ಆತ ಯಾ ಆಕೆ ಮನೋ ಶುದ್ಧರು. ಋಣಾತ್ಮಕ ಸೂಚನೆಗಳು, ಸಲಹೆಗಳು, ದೃಶ್ಯಗಳು. ಆಹಾರ ವಿಹಾರ ಪಾನೀಯಗಳು ಮನುಷ್ಯನ ಮನಸನ್ನು ಕೆಡಿಸುತ್ತವೆ.
ಮನೆಗೆ ದೇಣಿಗೆ ಕೇಳಲು ಬಂದಾಗ ತಂದೆಯಾದವನು ಮನೆಯೊಳಗೆ ಅಡಗಿದ್ದು ಮಕ್ಕಳ ಮೂಲಕ ತಂದೆಯಿಲ್ಲ ಎಂದು ಹೇಳಿಸಿದರೆ ಆ ಮಕ್ಕಳ ಮನದೊಳಗೆ ಸಂಶಯದ ಬುಗ್ಗೆ ಏಳುತ್ತದೆ. ಧೂಮಪಾನ ಆರೋಗ್ಯಕ್ಕೆ ಹಾಳೆಂದು ಭಾಷಣ ಮಾಡುವ ಅಧ್ಯಾಪಕ ಮನೆಯಲ್ಲಿ ಸಿಗರೇಟು ಸೇದುವುದನ್ನು ಗಮನಿಸಿದ ವಿದ್ಯಾರ್ಥಿಗಳ ಮನದೊಳಗೆ ಸಂಶಯ ಚಿಗುರುತ್ತದೆ. ಆಗ ತಾನೇ ಕರೆದು ತಂದ ಹಾಲಿಗೆ ತಾಯಿ ನೀರು ಬೆರೆಸಿ ನೆರೆ ಮನೆಗೆ ಮಾರಿದುದನ್ನು ನೋಡಿದ ಮಗ ಅಥವಾ ಮಗಳ ಮನದೊಳಗೆ ತಾಯಿಯ ಬಗ್ಗೆ ಅವಳ ಕಾರ್ಯದ ಬಗ್ಗೆ ಎಂತಹ ಭಾವನೆ ಉದಯಿಸಬಹುದು? ಇಂತಹ ಹಲವಾರು ಸಂದರ್ಭಗಳು ಹೃದಯದೊಳಗೆ ಸಂಶಯಗಳನ್ನು ಸೃಷ್ಟಿಸಿ ಕುರುಕ್ಷೇತ್ರ ಕದನ ನಡೆಯುತ್ತದೆ. ಈ ಕದನ ʼಸಂಶಯಾತ್ಮಾ ವಿನಶ್ಯತಿʼ ಎಂಬ ಮಾತಿನಂತೆ ಆತ್ಮ ನಾಶಕ್ಕೆ ಕಾರಣವಾಗುತ್ತದೆ. ನಾಶವಾದ ಆತ್ಮದ ಸ್ಥಾನದಲ್ಲಿ ದುರಾತ್ಮ ಬಂದು ನೆಲೆಸುತ್ತದೆ. ದುರಾತ್ಮದಿಂದಾಗಿ ಮಾನವನು ದುರುಳನೋ ದುಷ್ಟನೋ ಆಗುವುದು ಸಹಜ.
ಒಂದು ಮನೆಯಲ್ಲಿ ಗಂಡನು ಹೆಂಡತಿಗೆ ಕೇಳಿದ, “ನಾಳೆ ಬೆಳಗ್ಗೆ ಮಸಾಲೆ ದೋಸೆ ಮಾಡ್ತಿಯಾ? ತಿನ್ನಲು ಬಹಳ ಆಸೆಯಿದೆ.“ ಆಗ ಹೆಂಡತಿ ಹೀಗೆ ಹೇಳಿದರೆ… “ಶುರುವಾಯಿತು ಇವರದ್ದೊಂದು! ಏನೂ ತಿಂಡಿ ಮಾಡಿ ಕೊಡದವರ ಹಾಗೆ, ಏನೂ ತಿನ್ನದವರ ಹಾಗೆ ಮಾತನಾಡುತ್ತಾರೆ, ಸಿಕ್ಕಿಸಿಕ್ಕಿದ್ದು ತಿನ್ನುವ ಬಾಯಿ ಚಪಲ, ಅದೂ ಒಂದು ಕೇಡು…” ಹೀಗೆ ರಾಗ ಎಳೆಯುವುದನ್ನು ಆಲಿಸುವ ಮಕ್ಕಳ ಮನದೊಳಗೆ ಹುಟ್ಟುವ ಭಾವನೆ ಸಕಾರಾತ್ಮಕವೋ ನಕಾರಾತ್ಮಕವೋ?
ಮಕ್ಕಳ ಮನದೊಳಗೆ ಬಿತ್ತುವ ಎಲ್ಲಾ ಸಂಶಯದ ಅಥವಾ ನಕಾರಾತ್ಮಕ ಬೀಜಗಳು ಅಲ್ಲಿ ಮೊಳಕೆಯೊಡೆದು ಬಲಿತು ಹೆಮ್ಮರವಾಗಿ ಆತನನ್ನು ದುರಾತ್ಮನನ್ನಾಗಿ ಮಾಡಬಹುದು. ಮಗುವು ದುರಂತಗಳ ಬಲಿಪಶುವಾಗಿ ಅತ್ಯಂತ ಕೆಳ ಹಂತಕ್ಕೆ ಕುಸಿಯಬಹುದು. ಆದುದರಿಂದ ಮಕ್ಕಳ ಮನಸ್ಸು ಕುರುಕ್ಷೇತ್ರವಾಗದೇ ಧರ್ಮಕ್ಷೇತ್ರವೇ ಆಗಿ ಬೆಳಗುತ್ತಿರಲು ಎಲ್ಲ ಮನಸ್ಸುಗಳೂ ಯೋಚಿಸಬೇಕು.
-ರಮೇಶ ಎಂ. ಬಾಯಾರು, ಬಂಟ್ವಾಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಏಪ್ರಿಲ್ ೨೨, ೨೦೨೬
|
ನವೀಕರಿಸಿದ: ಏಪ್ರಿಲ್ ೨೩, ೨೦೨೬