ದೇಶದ ರಸ್ತೆ ಸಂಚಾರದ ಇತಿಹಾಸದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಅತ್ಯಂತ ಮಹತ್ವದ್ದಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಸಂಚಾರ ಪಥ (ಕ್ಯಾರೇಜ್ ವೇ) ಮತ್ತು ಪಕ್ಕದ ಪಾದಚಾರಿ ಮಾರ್ಗಗಳಲ್ಲಿ ಭಾರೀ ವಾಹನಗಳು ಮತ್ತು ವಾಣಿಜ್ಯ ವಾಹನಗಳ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಿರುವ ನ್ಯಾಯಾಲಯದ ಕ್ರಮವು ಹೆದ್ದಾರಿ ಸುರಕ್ಷೆಯ ನಿಟ್ಟಿನಲ್ಲಿ ಹೊಸ ಭರವಸೆ ಮೂಡಿಸಿದೆ. ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಅತುಲ್ ಚಂದೂರ್ಕರ್ ಅವರ ಪೀಠವು ಈ ತೀರ್ಪಿನಲ್ಲಿ ಒಂದು ಮಹತ್ವದ ಅಂಶವನ್ನು ಒತ್ತಿ ಹೇಳಿದೆ, 'ಸುರಕ್ಷಿತವಾಗಿ ಪ್ರಯಾಣಿಸುವುದು ಸಂವಿಧಾನದ ೨೧ನೇ ವಿಧಿಯಡಿ ಪ್ರತಿಯೊಬ್ಬ ಪ್ರಜೆಯ ಬದುಕುವ ಹಕ್ಕಿನ ಅವಿಭಾಜ್ಯ ಅಂಗವಾಗಿದೆ'. ಸರಕಾರಕ್ಕೆ ಕೇವಲ ರಸ್ತೆ ನಿರ್ಮಿಸುವ ಜವಾಬ್ದಾರಿ ಮಾತ್ರವಲ್ಲ. ಆ ರಸ್ತೆಯಲ್ಲಿ ಸಾರ್ವಜನಿಕರ ಜೀವ ರಕ್ಷಿಸುವ ಹೊಣೆಗಾರಿಕೆಯೂ ಇದೆ ಎಂದು ನ್ಯಾಯಾಲಯವು ನೆನಪಿಸಿಕೊಟ್ಟಿದೆ. ನ್ಯಾಯಾಲಯವು ತನ್ನ ಮಧ್ಯಾಂತರ ನಿರ್ದೇಶನಗಳ ಮೂಲಕ ಯಾವುದೇ ಘನ ಅಥವಾ ವಾಣಿಜ್ಯ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿಯ ಕ್ಯಾರೇಜ್ ವೇ ಅಥವಾ ರಸ್ತೆಯ ಅಂಚಿನಲ್ಲಿ ನಿಲ್ಲಿಸುವಂತಿಲ್ಲ ಎಂದಿದೆ. ವಾಹನ ನಿಲ್ಲಿಸಲೇ ಬೇಕು ಎಂದಾಗಿದ್ದರೆ, ನಿಗದಿಪಡಿಸಿದ ಬೇ, ಲೇ ಬೈ ಅಥವಾ ರಸ್ತೆ ಬದಿಯ ನಿಗದಿತ ಪಾರ್ಕಿಂಗ್ ಸೌಕರ್ಯವುಳ್ಳ ಪ್ರದೇಶಗಳಲ್ಲಿಯೇ ನಿಲ್ಲಿಸಬೇಕು ಎಂದು ತಿಳಿಸಿದೆ. ದೇಶದ ಒಟ್ಟು ರಸ್ತೆ ಜಾಲದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಪಾಲು ಕೇವಲ ಶೇ. ೨ ಮಾತ್ರ. ಆದರೆ ದೇಶದಲ್ಲಿ ಸಂಭವಿಸುವ ಒಟ್ಟು ರಸ್ತೆ ಅಪಘಾತಗಳ ಸಾವುಗಳಲ್ಲಿ ಶೇ. ೩೦ರಷ್ಟು ಈ ಹೆದ್ದಾರಿಗಳಲ್ಲೇ ನಡೆಯುತ್ತಿರುವುದು ಆಘಾತಕಾರಿ ವಿಷಯ. ರಾಜಸ್ಥಾನದ ಫಲೋಡಿ ಮತ್ತು ತೆಲಂಗಾಣದಲ್ಲಿ ಸಂಭವಿಸಿದ ಭೀಕರ ಅಪಘಾತಗಳಲ್ಲಿ ೩೪ ಮಂದಿ ಜೀವ ಕಳೆದುಕೊಂಡಿದ್ದರು. ಈ ಪ್ರಕರಣಗಳನ್ನು ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡ ನ್ಯಾಯಾಲಯವು, ಹೆದ್ದಾರಿಗಳನ್ನು 'ಅಪಾಯದ ಕಾರಿಡಾರ್‌ಗಳು' ಎಂದು ಕರೆದಿದೆ. ಕೇವಲ ಆದೇಶ ನೀಡಿದರೆ ಸಾಲದು, ಅದರ ಜಾರಿಗೆ ತಂತ್ರಜ್ಞಾನದ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಅಡ್ವಾನ್‌ ಸ್ಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅಡಿಯಲ್ಲಿ ನೈಜ ಸಮಯದ ಎಚ್ಚರಿಕೆಗಳು ಜಿಪಿಎಸ್ ಆಧಾರಿತ ಫೋಟೋ ಸಾಕ್ಷ್ಯಗಳ ಮೂಲಕ ಅಕ್ರಮ ನಿಲುಗಡೆ ಪತ್ತೆ ಹಚ್ಚುವುದು ಇದರಲ್ಲಿ ಸೇರಿದೆ. ಇನ್ನೊಂದು ಇ-ಚಲನ್ ವ್ಯವಸ್ಥೆ ಇದರಲ್ಲಿ ನಿಯಮ ಉಲ್ಲಂಘಿಸುವವರಿಗೆ ಕೂಡಲೇ ದಂಡ ವಿಧಿಸುವುದು. ಜತೆಗೆ ಅಕ್ರಮ ಡಾಬಾಗಳನ್ನು ತೆರವು ಮಾಡಬೇಕೆಂದು ಹೇಳಿದೆ. ಹೆದ್ದಾರಿ ಬದಿಯ ಅನಧಿಕೃತ ಡಾಬಾಗಳು ಮತ್ತು ವಾಣಿಜ್ಯ ಮಳಿಗೆಗಳನ್ನು ೬೦ ದಿನಗಳೊಳಗೆ ತೆರವುಗೊಳಿಸಲು ಆದೇಶಿಸಲಾಗಿದೆ. ಲಾರಿ ಚಾಲಕರಿಗೆ ವಿಶ್ರಾಂತಿ ಪಡೆಯಲು ಪ್ರತೀ ೭೫ ಕಿ.ಮೀ.ಗಳಿಗೆ ಒಮ್ಮೆ 'ಟ್ರಕ್ ಲೇ-ಬೈ' ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಕೋರ್ಟ್ ಸೂಚಿಸಿದೆ. ಇದು ಕೇವಲ ಹೆದ್ದಾರಿ ಬದಿ ವಾಹನ ನಿಲುಗಡೆಗೆ ನಿಷೇಧದ ತೀರ್ಪಲ್ಲ ಬದಲಾಗಿ ವ್ಯವಸ್ಥಿತ ಬದಲಾವಣೆಯ ಮುನ್ನುಡಿ. ರಸ್ತೆ ಬದಿಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವ ಘನ ವಾಹನಗಳು, ಲಾರಿಗಳಿಗೆ ಢಿಕ್ಕಿ ಹೊಡೆದು ಅಮಾಯಕ ಜೀವಗಳು ಸಾವನ್ನಪ್ಪುವುದು ತಡೆಯ ಬಹುದಾದ ವಿಷಯ. ಆಡಳಿತಾತ್ಮಕ ಉದಾಸೀನ ಅಥವಾ ಹಣಕಾಸಿನ ಕೊರತೆಯನ್ನು ನೆಪವಾಗಿಟ್ಟುಕೊಂಡು ಜನರ ಜೀವದ ಜತೆ ಚೆಲ್ಲಾಟವಾಡಬಾರದು ಎಂಬ ನ್ಯಾಯಾಲಯದ ಎಚ್ಚರಿಕೆ ಸರಕಾರಗಳಿಗೆ ಪಾಠ ವಾಗಬೇಕಿದೆ. ಈ ಆದೇಶವು ಕಟ್ಟುನಿಟ್ಟಾಗಿ ಜಾರಿಯಾದಲ್ಲಿ ಮಾತ್ರ ನಮ್ಮ ಹೆದ್ದಾರಿಗಳು ನಿಜವಾದ ಅರ್ಥದಲ್ಲಿ ಪ್ರಗತಿಯ ಹಾದಿಯಾಗಬಲ್ಲವು. ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೧-೦೪-೨೦೨೬ ಚಿತ್ರ ಕೃಪೆ: ಅಂತರ್ಜಾಲ ತಾಣ