ಡಾ. ರಾಜಪ್ಪ ದಳವಾಯಿ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ಅನುವನಹಳ್ಳಿಯವರು. ೧೯೬೨ರಲ್ಲಿ ಜನನ. ಕನ್ನಡ ಪ್ರಾಧ್ಯಾಪಕರು. ಇವರು ಎಂಎ ಪದವಿ ಪಡೆದದ್ದು ಮೈಸೂರು ವಿಶ್ವವಿದ್ಯಾಲಯದಿಂದ. ಕನ್ನಡದಲ್ಲಿ ಸಂಸ್ಕೃತಿ ನಿರ್ವಚನ ಎಂಬ ವಿಷಯ ಕುರಿತ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ. ಗಿರೀಶ್ ಕಾರ್ನಾಡರ ನಾಟಕಗಳಲ್ಲಿ ಪುರಾಣ ಚಾರಿತ್ರಿಕ ವಾಸ್ತವ ಎಂಬ ವಿಷಯದ ಮೇಲಿನ ಅಧ್ಯಯನಕ್ಕೆ ದ್ರಾವಿಡ ವಿಶ್ವವಿದ್ಯಾಲಯದಿಂದ ಎಂಫಿಲ್ ಪದವಿ. ಕವಿರಾಜಮಾರ್ಗ-ಬಹುಶಿಸ್ತೀಯ ಅಧ್ಯಯನ ಕುರಿತ ಸಂಶೋಧನೆಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪದವಿ. ಕಾವ್ಯ, ಕಥೆ, ನಾಟಕ, ವಿಮರ್ಶೆ ಪ್ರಕಾರಗಳಲ್ಲಿ ಹಲವಾರು ಕೃತಿಗಳನ್ನು ಬರೆದಿದ್ದಾರೆ. ಹಲವಾರು ಕೃತಿಗಳು ಇವರ ಸಂಪಾದಕತ್ವದಲ್ಲಿ ಪ್ರಕಟವಾಗಿವೆ. ಕನ್ನಡ ಸಾಹಿತ್ಯ ಕೋಶ, ಕದಿರು, ತೊಗಲು ಬೊಂಬೆಯಾಟ, ನೆನಪುಗಳು ಸಾಯುವುದಿಲ್ಲ ಇವು ಇವರ ಪ್ರಮುಖ ಸಮಪಾದಿತ ಕೃತಿಗಳು. ಸಗಟು ಕವಿಯ ಚಿಲ್ಲರೆ ಪದ್ಯಗಳು, ರಕ್ತದ ಬಣ್ನ ಕಪ್ಪು, ಜಲರೂಪಿ ನಗು (ಕಾವ್ಯ). ಕಪ್ಪು ದಾರಿಯ ಕೆಂಪು ಚಿತ್ರ, ಚಲನ (ಕತೆ), ಡೋಲಿ ಮತ್ತಿತರ ನಾಟಕಗಳು, ದಳವಾಯಿ ಡಜನ್ ನಾಟಕಗಳು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ನಾಟಕ ಅಕಾಡೆಮಿ ಸುವರ್ಣ ಪ್ರಶಸ್ತಿ, ಸಾಹಿತ್ಯಶ್ರಿ ಪ್ರಶಸ್ತಿ ಮೊದಲಾದ ಗೌರವಗಳಿಗೆ ಪಾತ್ರರಾಗಿದ್ದಾರೆ. ಚಲನಚಿತ್ರಗಳಲ್ಲೂ ನಟನೆ, ಕಲಾ ನಿರ್ದೇಶನ, ಸಂಭಾಷಣೆ, ಚಿತ್ರಕಥೆ ಮೊದಲಾದ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ.   *** ಸದ್ಭಳಕೆ ಮಾಡೋ ಮನುಜ ಸದ್ಭಳಕೆ ಮಾಡೊ ಮನುಜ ನೀರನ್ನ । ಸದ್ಭಳಕೆ ಮಾಡೊ ರೈತಣ್ಣ ಜಲವನ್ನ । ಜೀವ ಜಲವನ್ನು ತಾಯಿ ಗಂಗಮ್ಮನ್ನ ಸದ್ಭಳಕೆ ಮಾಡೊ ಮನುಜ   ಆಕಾಶದಿಂದ ಭೂತಾಯಿ ಮಡಿಲಿಗೆ ಹನಿಹನಿ ದೊರೆತ ನೀರ ಕಣ ಜೀವ ಜಲವಾದಂತ ಘನಕೆ ಮಡಿ ಮಡಿ ಎನ್ನುತ್ತೀಯಲ್ಲೊ ಮನುಜ   ನೀರೇನು ನಿನ್ನದೇ ನೀರೇನು ನಿನ್ನಪ್ಪನದೇ । ನಿನ್ನಪ್ಪ ನನ್ನಪ್ಪ ಎಲ್ಲರದ್ದೂ । ಈ ಭೂಲೋಕ ಜೀವಿಗಳ ಎಲ್ಲರ ಹಕ್ಕು   ಜಗದ ಜೀವಕ್ಕೆ ಜಲವೊಂದೆ ಒಂದು ನಮದೇನು ನಮ್ಮೊಳಗೆ ತಾರತಮ್ಯ ಹೀನತೆಯನೇಕೆ ನೀರಿಗೆ ನೀವು ಹೇರಿರುವೆಯಯ್ಯಾ   ನಿನ್ನ ಶುದ್ಧಿಸುವ ಜಲದ ಮ್ಯಾಲೆ ಮೈಲಿಗೆಯ ಮಾತು ಸರಿಯೇನಣ್ಣ ನೀರಿನಿಂದ ನೀನು ಮೈತೊಳೆದರೇನು? ಮನದ ಕೊಳೆ ತೊಳೆಯದಿರೆ ಭಾಗ್ಯವೇನು   ಏನರ್ಥವುಂಟು ನಿನ್ನ ಬದುಕಿಗೆ ಅಣ್ಣ ತರತಮವಿರದಿರೆ ಬದುಕೆಷ್ಟು ಚೆನ್ನ ಅಧಿಕ ನೀರನ್ನು ಬಳಸುತ್ತಾ ನೀರ ಅಸುರನಾಗದಿರು ನೀನು   ದುಂಧುತರವಲ್ಲ ದುಂಧುವೆಚ್ಚ ತರವಲ್ಲ ನೀರಾಟವಾಡದಿರು ಮೋಜಿಗೆ ಹನಿಹನಿ ಜಲವು ಜೀವ ಉಳಿಸುವುದು ಜೀವ ಜಲವನ್ನು ತಾಯಿ ಗಂಗಮ್ಮನ್ನ (‘ಗಾನ ವಿಜ್ಞಾನ ಚೇತನ’ ಕೃತಿಯಿಂದ ಆಯ್ದ ಕವನ)