ಶಾರದಕ್ಕ ತುಂಬಾ ಜೋರು ಸ್ವರದಲ್ಲಿ ತನ್ನ ಮಗನ ಜೊತೆ ಮಾತನಾಡುತ್ತಿದ್ದರು. ಮಗ ಅಮೆರಿಕದಲ್ಲಿ ಕೆಲಸ ಮಾಡ್ತಾ ಇದ್ದ. ಹಾಗಾಗಿ ಫೋನಿನ ಸಂಭಾಷಣೆ ಅಕ್ಕ ಪಕ್ಕದ ಮನೆಯವರಿಗೂ ಕೇಳ್ತಾ ಇತ್ತು, ಅವರಿಗೆ ಇನ್ನೂ ಕೂಡ ಬುದ್ದಿ ಬಂದಿಲ್ವಾ ಇಷ್ಟು ಅಭಿವೃದ್ಧಿ ಹೊಂದಿದ್ರು ಕೂಡ ಕರಿಯ ಬಿಳಿಯ ಈ ರೀತಿಯ ಭೇದಭಾವ ಯಾಕೆ? ಎಲ್ಲರೂ ಒಂದೇ ತಾಯಿಯ ಮಕ್ಕಳು ತಾನೇ ಇವರಿಗೆ ಯಾವಾಗ ಬುದ್ದಿ ಬರುತ್ತೋ ಏನೋ? ಪ್ರತಿಯೊಬ್ಬ ಮನುಷ್ಯನಿಗೂ ಗೌರವ ಅನ್ನೋದು ಸಿಗಲೇಬೇಕು. ಅಂತಹ ದೇಶದಲ್ಲಿ ನಿನಗೆ ನಿನ್ನ ಗೌರವಕ್ಕೆ ಯಾವತ್ತು ತೊಂದರೆ ಇಲ್ಲ ತಾನೇ? ಇಲ್ಲಮ್ಮ ಹಾಗೇನು ತೊಂದರೆ ಇಲ್ಲ. ಹಾಗೆಂದು ಕರೆ ಕಟ್ ಮಾಡಿದವರು ತನ್ನ ಮನೆಯ ಕೆಲಸದವಳಿಗಿಂದೇ ಮೀಸಲಿರಿಸಿದ ತಟ್ಟೆಯಲ್ಲಿ ತಿಂಡಿಯನ್ನು ತಂದಿಟ್ಟು ಅವಳು ತಿಂದ ನಂತರ ಅವಳು ತೊಳೆದುಕೊಟ್ಟ ಬಳಿಕ ಮತ್ತೆ ಒಳಗೆ ಹೋಗಿ ಮತ್ತದನ್ನ ತೊಳೆದು ಮನೆಯ ಸಿಂಕಿನ ಕೆಳಭಾಗದಲ್ಲಿ ಇಟ್ಟುಬಿಟ್ಟರು. ಯಾಕೆಂದರೆ ಕೆಲಸದವಳು ಪ್ರತಿದಿನ ಅದೇ ತಟ್ಟೆಯಲ್ಲಿ ಊಟ ಮಾಡಬೇಕು ತಾನೇ? - ಧೀರಜ್ ಬೆಳ್ಳಾರೆ                                   ಚಿತ್ರ ಕೃಪೆ: ಇಂಟರ್ನೆಟ್ ತಾಣ