ಹಿಂದಿನ ಲೇಖನದಲ್ಲಿ ಕೈವಲ್ಯ ಉಪನಿಷತ್ತಿನಲ್ಲಿ ಶ್ರದ್ದೆಯ ಬಗ್ಗೆ ತಿಳಿದುಕೊಂಡಿದ್ದೇವೆ. ಯಾವುದೇ ಸಾಧನೆ ಮಾಡಲು ಶ್ರದ್ದೆಗೆ ಮೊದಲ ಆದ್ಯತೆ. ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಶ್ರದ್ಧೆಗೆ ಇನ್ನಷ್ಟು ಉದಾಹರಣೆ ನೀಡುತ್ತಾರೆ. ಶ್ರದ್ದೆ ಅಂದರೆ ಆತ್ಮವಿಶ್ವಾಸ. ಶ್ರದ್ಧೆಗೆ ಎರಡು ಅರ್ಥಗಳು. 1. ಸತ್ಯವನ್ನು ಗ್ರಹಿಸಬೇಕೆನ್ನುವ ಭಾವ ಶ್ರದ್ಧೆ. ಇದು ಸತ್ಯ ಅನ್ನುವ ಭಾವನೆ. ಸತ್ಯ ಗ್ರಹಣ ಸಾಮರ್ಥ್ಯ.  2. ತನ್ನಲ್ಲಿ ವಿಶ್ವಾಸ. ಬಲ್ಲವರ ಮಾತುಗಳಲ್ಲಿ ವಿಶ್ವಾಸ. ಸಾಧ್ಯ ಅನ್ನುವ ಭಾವವೇ ಶ್ರದ್ಧೆ. ವಿಶ್ವಾಸ ಹೋದ ಬಳಿಕ ಬದುಕು ಕೆಡುತ್ತದೆ. ದುಃಖದ ತೆರೆ ಶುರುವಾಗುತ್ತದೆ. ಮನಸ್ಸು ಅಶಾಂತ ಗೊಳ್ಳುತ್ತದೆ. ಜೀವನದ ದಾರಿ ಸಮಸ್ಯೆಗಳಿಂದ ತುಂಬಿ ಹೋಗುತ್ತದೆ. ವಿಶ್ವಾಸ ಕೆಟ್ಟ ಬಳಿಕ ಯಾವುದು ರುಚಿಯಾಗುವುದಿಲ್ಲ. ಆದ್ದರಿಂದ ಶ್ರದ್ಧೆಗೆ ಅಷ್ಟು ಮಹತ್ವ. ಮನಸ್ಸಿನ ಸಾಮರ್ಥ್ಯದ ಬಗ್ಗೆ ವಿಶ್ವಾಸ ಇರಲಿ. ಗುರುಗಳ ಮಾತಿನಲ್ಲಿ ವಿಶ್ವಾಸವಿರಲಿ. ಆತ್ಮವಿಶ್ವಾಸ ಇಲ್ಲದೆ ಇದ್ದರೆ ಏನನ್ನು ಸಂಪಾದಿಸಲು ಆಗುವುದಿಲ್ಲ. ಏನನ್ನು ಸಂಪಾದಿಸುವುದು ಇದೆ, ಮನಸ್ಸಿನಲ್ಲಿ ಶ್ರದ್ಧೆ ತುಂಬಿರಬೇಕು.  ಒಬ್ಬಳು ತಾಯಿ ನದಿ ದಡದಲ್ಲಿ ಕುಳಿತಿದ್ದಳು. ಆಕೆಗೆ ಚಿಕ್ಕ ಮಗು. ಅಲ್ಲೇ ಆಟ ಆಡುತ್ತಿತ್ತು. ಆತನಿಗೆ ನದಿಯ ಆಚೆ ಕಡೆ ಹೋಗಬೇಕೆಂಬ ಇಚ್ಛೆ. ಆಗ ಆತ ತಾಯಿಗೆ ಹೇಳಿದ. ನಾನು ಆ ಕಡೆ ಹೋಗಬೇಕು ಅಂದನು. ಅದು ದೊಡ್ಡ ವಿಶಾಲವಾದ ನದಿ. ಹರಿಯುತ್ತಾ ಇದೆ. ಸಣ್ಣ ಹುಡುಗ. ಆಗ ತಾಯಿ ಹೇಳಿದಳು, "ಹೋಗಬಹುದು, ಮನಸ್ಸು ಮಾಡಿದರೆ ಹೋಗಬಹುದು. ಅಸಾಧ್ಯ ಅಲ್ಲ ನಿನಗೆ. ನೀನು ಪ್ರಯತ್ನ ಮಾಡಬೇಕು ಅಷ್ಟೇ ತಿಳಿದುಕೋ. ನಿನಗೆ ಸಾಧ್ಯ ಇದೆ. ನಾನು ಮುಟ್ಟೆ ಮುಟ್ಟುತಿನಿ ಅನ್ನುವ ಭಾವ ಮುಖ್ಯ. ಪ್ರಯತ್ನ ಪಡು" ಅಂದಳು. ಹಾಗೆ ಮಗನಿಗೆ ಹುರುಪು ತುಂಬಿದಳು. ಇದೇ ಹುಡುಗ ಮುಂದೆ ದೊಡ್ಡ ದೊಡ್ಡ ಸಾಗರಗಳನ್ನೇ ಈಜಿದ. ಈತನೆ ಭಾರತದ ಹುಡುಗ ಮಿಹಿರಸೇನ್ (ಚಿತ್ರ ನೋಡಿ). ಈತ ಜಗತ್ಪ್ರಸಿದ್ಧ. ತಾಯಿ ಹೇಳಿದ್ದು ನಿನಗೆ ಸಾಧ್ಯ ಅಂತ. ಆಕೆ ಏನಾದರೂ ನೀನು ಬಹಳ ಚಿಕ್ಕವ, ಹರಿದುಕೊಂಡು ಹೋದರೆ ಏನು ಮಾಡುವುದು?. ಅಂತ ಹೇಳಿದ್ದರೆ, ಮಿಹಿರ ಸೇನ್ ತಯಾರಾಗುತ್ತಿರಲಿಲ್ಲ. ಬೇಕು ಇಂಥ ವಿಶ್ವಾಸ ಬೇಕು.  ಥಾಮಸ್ ಅಲ್ವಾ ಎಡಿಸನ್ ಹೆಸರು ಕೇಳಿದ್ದೀರಿ. ಖ್ಯಾತ ಸಂಶೋಧಕ. ಆತ ಸಾವಿರ ಸಂಶೋಧನೆ ಮಾಡಿದ್ದಾನೆ. ಆದರೆ ಗೊತ್ತಿರಲಿ ಈತನನ್ನು ಪ್ರಾಥಮಿಕ ಶಾಲೆಯಿಂದ ದಡ್ಡ ಅಂತ ಹೊರಹಾಕಿದ್ದರು. ಯಾರು ಜಗತ್ತಿಗೆ ವಿದ್ಯುತ್ ಬಲ್ಬನ್ನು ಕಂಡುಹಿಡಿದಿದ್ದ, ಸಾವಿರ ಸಂಶೋಧನೆ ಮಾಡಿದ್ದನು, ಆತ ಪ್ರಾಥಮಿಕ ಶಾಲೆಯಿಂದ ಹೊರಹಾಕಲ್ಪಟ್ಟವನು. ಬಹುಶ ಎರಡು ಅಥವಾ ಮೂರನೇ ತರಗತಿಯಿಂದ ಹೊರಹಾಕಿದ್ದು. ಅಧ್ಯಾಪಕ, ತಾಯಿಗೆ ಹೇಳಿದ್ದು, "ನಿನ್ನ ಮಗ ನಮ್ಮ ಶಾಲೆಯಲ್ಲಿ ಇದ್ದರೆ ಬೇರೆ ಮಕ್ಕಳು ದಡರಾಗುತ್ತಾರೆ ಅದಕ್ಕೆ ಕರೆದುಕೊಂಡು ಹೋಗಿ" ಅಂತ. ಆಗ ತಾಯಿ ಹೇಳಿದಳು ಅಧ್ಯಾಪಕರಿಗೆ, "ನಿಮಗೆ ಗೊತ್ತಿಲ್ಲ ಆತನ ಸಾಮರ್ಥ್ಯ, ನೀವು ಅಧ್ಯಾಪಕರಲ್ಲ, ಮಕ್ಕಳಲ್ಲಿ ಯಾವ ಸಾಮರ್ಥ್ಯ ಇದೆ ಅಂತ ತಿಳಿದುಕೊಂಡಿರಬೇಕು, ಅದಕ್ಕೆ ತಾಯಿ ಹೃದಯ ಇರಬೇಕು, ಈಗ ನಾನು ನನ್ನ ಮಗನನ್ನು ಕರೆದುಕೊಂಡು ಹೋಗುತ್ತೇನೆ. ಇಡೀ ಜಗತ್ತು ಒಂದು ದಿನ ನನ್ನ ಮಗನನ್ನು ಸ್ಮರಿಸಬೇಕು ಹಾಗೆ ಮಾಡುತ್ತೇನೆ." ಅಂದಳು. ದಡ್ಡ ಹುಡುಗ. ಆತ ಶಾಲೆಯಲ್ಲಿ ಕೊನೆ ಹುಡುಗ. ಆತನನ್ನು ಕರೆದುಕೊಂಡು ಬಂದು ಆತನನ್ನು ಮಹಾನ್ ವಿಜ್ಞಾನಿಯನ್ನಾಗಿ ತಯಾರು ಮಾಡುತ್ತಾಳೆ. ಅಷ್ಟು ಮಗನ ಮೇಲೆ ವಿಶ್ವಾಸ. ಆತನಿಗೆ ಅವರ ಇವರ ನೋಟ್ ಬುಕ್ ತಂದುಕೊಟ್ಟು, ಹೇಳಿಕೊಟ್ಟಳು. ಸಂಶೋಧನೆಗೆ ಸಾಮಾನು ಒದಗಿಸಿದಳು. ನನಗೇನು ಗೊತ್ತಿದೆ ಕಲಿಸುತ್ತೇನೆ. ನೀನು ಶೋಧನೆ ಮಾಡು. ಹುಡುಗ ಸಂಶೋಧನೆಗೆ ತೊಡಗಿದನು. ಮಾಡಿದ ಮಾಡಿದ, ಜಗತ್ತು ಕಣ್ ತೆರೆಯಿತು. ಮೊಟ್ಟ ಮೊದಲು ಆತ ನ್ಯೂಯಾರ್ಕ್ ಪಟ್ಟಣದಲ್ಲಿ ಜಗತ್ತಿನ ಮೊಟ್ಟ ಮೊದಲು ವಿದ್ಯುತ್ ದೀಪ ಹಚ್ಚಿದ. ಆಗ ನ್ಯೂಯಾರ್ಕ್ ಪಟ್ಟಣ ಜಗದಗಿಸುತ್ತಿತ್ತು. ಆಗ ಆತ ಕಣ್ಣೀರು ತುಂಬಿಕೊಂಡು ಹೇಳಿದ, "ಇದೆಲ್ಲಾ ನನ್ನದಲ್ಲ , ನನ್ನ ತಾಯಿಯ ಆತ್ಮವಿಶ್ವಾಸ ತುಂಬಿದ್ದು". ನಾವು 99 ಅಂಕಕ್ಕೆ ಬದಲಿಗೆ 98 ಅಂಕ ತೆಗೆದುಕೊಂಡರೆ ದಡ್ಡ ಅನ್ನುತ್ತೇವೆ. ಶಾಲೆಯಲ್ಲಿ ಕಲಿಯಲಿಕ್ಕೆ ಆಗದ ಹುಡುಗನನ್ನು, ಶಾಲೆಯಿಂದ ಹೊರ ಹಾಕಿದರೆ. ಅಂತ ಹುಡುಗನಿಂದ ಜಗತ್ತು ಮೆಚ್ಚುವ ವಿಜ್ಞಾನಿ ತಯಾರು ಮಾಡಿದ್ದು ತಾಯಿಯ ಆತ್ಮ ವಿಶ್ವಾಸ. ಆ ಆತ್ಮವಿಶ್ವಾಸ ಎಷ್ಟು ಬಲಾಡ್ಯ?. ನಾವು ಬಿದ್ದವರಲ್ಲ. ನಾವು ಅಜ್ಞಾನಿಗಳಲ್ಲ. ನಾವು ಸೋತವರಲ್ಲ. ನಾವು ಸೋಲುವವರಲ್ಲ. ನಾವು ಗೆಲ್ಲುವವರು ಅನ್ನುವ ಮನೋಭಾವವನ್ನು ಬೆಳೆಸಿದವಳು ಆ ತಾಯಿ. ಆಕೆಯು ಬಹಳ ಕಲಿತವಳಲ್ಲ. ಆತ ಸಾವಿರ ಸಂಶೋಧನೆಗಳ ಒಡೆಯ. ಯಾವುದೇ ಪದವಿ, ಸ್ನಾತಕ ಪದವಿ ಇರಲಿಲ್ಲ. ಪ್ರಾಥಮಿಕ ತರಗತಿಯ ಕೊನೆಯ ವರ್ಷದ ಪ್ರಮಾಣ ಪತ್ರವೂ ಇರಲಿಲ್ಲ. ಥಾಮಸ್ ಅಲ್ವ ಎಡಿಸನ್ ಜ್ಞಾನ ಕ್ಷೇತ್ರದಲ್ಲಿ ಶ್ರೀಮಂತ ಮಾಡಿದ್ದನು. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಶ್ರದ್ಧೆ, ಆತ್ಮವಿಶ್ವಾಸ, ನಂಬಿಕೆ ಬೇಕು. ನನಗೆ ಆಗುವುದಿಲ್ಲ ಅನ್ನಬಾರದು. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಶ್ರದ್ಧೆ ಬೇಕು.    ಇಟಲಿ ದೇಶದಲ್ಲಿ ಒಬ್ಬ ಶ್ರೇಷ್ಠ ಸಂಗೀತಗಾರ ಇದ್ದನು. ಆತನ ಹೆಸರು ಬಿತೋವೆನ್. ಒಂದು ದಿನ ರಾತ್ರಿ ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಸಂಗೀತ ಕಚೇರಿ ನಡೆದಿತ್ತು. ಬಿತೋವನ್ ಹಾಡುವುದರಲ್ಲಿ ಮಗ್ನ. ಅಲ್ಲಿ ಸೇರಿದ್ದ ಸಭಿಕರೆಲ್ಲ ಕೇಳುವಿಕೆಯಲ್ಲಿ ಮುಳುಗಿ ಹೋಗಿದ್ದರು. ಒಬ್ಬ ಮಹಿಳೆ ಸ್ಟೇಜ್ ಮೇಲೆ ಬಂದು ಹೇಳಿದಳು, "ಮಹಾನುಭಾವರೇ ಭಗವಂತ ನಿಮ್ಮಂತಹ ಧ್ವನಿ ನನಗೆ ಕೊಟ್ಟಿದ್ದರೆ, ನಾನು ಎಷ್ಟು ಆನಂದ ಪಡುತ್ತಿದ್ದೆ" ಅಂದಳು. ಆಗ ಆತ ಹೇಳಿದ, "ತಾಯಿಯೇ ಆ ದೇವರು ನನಗೂ ಅದೇ ಧ್ವನಿ ಕೊಟ್ಟಿದ್ದಾನೆ. ಆ ಭಗವಂತ ನಿನಗೂ ಅದೇ ಧ್ವನಿ ಕೊಟ್ಟಿದ್ದಾರೆ. ನಾನು ದಿನಾಲು ಎಂಟು ತಾಸಿನಂತೆ 30 ವರ್ಷ ಸಾಧನೆ ಮಾಡಿದ್ದೇನೆ. ನೀನು ಮಾತನಾಡೋದಕ್ಕೆ ಬಳಸಿದೆ. ನಾನು ಹಾಡೋದಿಕ್ಕೆ ಬಳಸಿದೆ. ನೀನು ಹಾಡುವುದಕ್ಕೆ ಬಳಸಿದ್ದರೆ ಹಾಡುಗಾರ್ತಿಯಾಗುತ್ತಿದ್ದೆ. ವಿಶ್ವಾಸ ಇರಬೇಕು. ದೇವರು ಕೊಟ್ಟಿಲ್ಲ ಅನ್ನಬಾರದು. ಕೊಟ್ಟಿದ್ದಾನೆ. ಕೊಟ್ಟಿದನ್ನೇ ಬಳಸಿಕೊಂಡು ಅಪ್ರತಿಮ ಸಾಧನೆ ಮಾಡಬೇಕು. ನಮ್ಮ ತಟ್ಟೆಗೆ ಏನು ಬಂದಿದೆ, ನಮ್ಮ ಪಾಲಿಗೆ ಏನು ಬಂದಿದೆ, ಅದನ್ನೇ ಹಿಡಿಯಬೇಕು. ಆ ಬಳಿಕ ಆಕಾಶಕ್ಕೆ ಏರಬೇಕು. ಏರುವ ಮನಸ್ಸಿರಬೇಕು. ಏರಬಲ್ಲೆ. ಏರುವ ಸಾಧ್ಯತೆ ಇದೆ ಅನ್ನುವ ಭಾವ ಇರಬೇಕು. ಶ್ರದ್ಧೆ ಇಲ್ಲ ಅಂದರೆ ಸಾಧನೆ ಹೋಯಿತು. ಇದೇ ಪ್ರಥಮ ಆದ್ಯತೆ. ಗುರು ಹೇಳುತ್ತಾ ಇದ್ದಾನೆ, "ನಿನ್ನ ಮನಸ್ಸಿನಲ್ಲಿ ಇರುವ ಅಶ್ರಧ್ಧೆ ತೆಗೆದುಹಾಕು. ನಾನು ಅಜ್ಞಾನಿ ಅನ್ನುವ ಭಾವ ತೆಗೆದುಹಾಕು, ನಾನು ಅಸಂತೋಷಿ ಅನ್ನುವ ಭಾವ ತೆಗೆದುಹಾಕು, ನಾನು ಶ್ರೇಷ್ಠ ವ್ಯಕ್ತಿ ಆಗುತ್ತೇನೆ ಎಂದು ಭಾವಿಸು. ಸಾಧ್ಯ ಇದೆ ಅಂತ ನಂಬು. 2. ಭಕ್ತಿ : ಪ್ರೀತಿಸು, ಯಾವುದನ್ನು ಪಡೆಯಬೇಕು ಅಂತ ಮಾಡಿದ್ಯಲ್ಲ ಅದನ್ನು ಪ್ರೀತಿಸು. ಪ್ರೇಮ ಇಲ್ಲದೆ ಇದ್ದರೆ ಕೆಲಸ ಮಾಡಲು ಆಗುವುದಿಲ್ಲ. ಅದು ಸಂತೋಷ ಕೊಡುವುದಿಲ್ಲ. ಮೊದಲು ಶ್ರದ್ಧೆ, ಆ ಬಳಿಕ ಪ್ರೇಮ. ಪರಮ ಪವಿತ್ರ ಪ್ರೇಮ ಇರಬೇಕು. ಸಾಮಾನ್ಯ ಪ್ರೇಮ ಅಲ್ಲ. ಶುದ್ಧ ಶುದ್ಧವಾದ ನಿರ್ಮಲ ಪ್ರೇಮ. ಪ್ರೇಮ ಜಗತ್ತನ್ನು ಮಧುರ ಗೊಳಿಸುತ್ತದೆ. ಒಬ್ಬ ಕವಿ ಹೇಳಿದ ಪ್ರೀತಿಸು, ಪ್ರೇಮ ಮಾಡಿದ ಕ್ಷಣವೇ ಸ್ವರ್ಗವಾಗುತ್ತದೆ. ದ್ವೇಷಿಸು ಅದೇ ಕ್ಷಣವೇ ನರಕ ರಣರಂಗವಾಗುತ್ತದೆ. ದ್ವೇಷ ಇದ್ದರೆ ಮನೆ, ಕುಟುಂಬ ಹಾಳಾಗುತ್ತದೆ. ಪ್ರೇಮ ಇದ್ದರೆ ಜಗತ್ತು ನಲಿಯುತ್ತದೆ. ವಸ್ತುವನ್ನು ಪ್ರೀತಿಸದೆ ಇದ್ದರೆ ವಸ್ತುವಿನಿಂದ ಸಂತೋಷ ಉಂಟಾಗುವುದಿಲ್ಲ. ಮೊದಲು ಅದನ್ನು ಪ್ರೀತಿಸಬೇಕು. ಅದು ನಮಗೆ ಆನಂದ ಕೊಡುತ್ತದೆ. ದೇವರು ಎಂತಹ ಒಳ್ಳೆಯ ವಸ್ತು ನೀಡಿರಲಿ. ಆ ಬಗ್ಗೆ ಪ್ರೇಮ ಇಲ್ಲದೆ ಹೋದರೆ ಸಂತೋಷವಾಗುವುದಿಲ್ಲ. ಹಾಗೆ ಈ ಜಗತ್ತನ್ನು ಪ್ರೀತಿಸಬೇಕು. ನಮ್ಮನ್ನು ನಾವು ಪ್ರೀತಿಸಬೇಕು. ಏಕೆಂದರೆ ನಾವು ಜಗತ್ತಿನ ಒಂದು ರೂಪ. ಜಗತ್ತೇ ಭಗವಂತನ ಕಲಾಕೃತಿಯಾಗಿದ್ದರೆ, ನಾನು ಒಂದು ಕಲಾಕೃತಿ. ನಾವೆಲ್ಲರೂ ಒಂದೊಂದು ಕಲಾಕೃತಿ. ಆದ್ದರಿಂದ ಜಗತ್ತನ್ನು, ಜಗತ್ತಿನ ವಸ್ತುವನ್ನು, ಜೀವಿಗಳನ್ನು, ನನ್ನನ್ನು ಪ್ರೀತಿಸಬೇಕು. ಪ್ರೇಮ ಮಾಡುವುದು ಎಂದರೆ ತನ್ನದನ್ನಾಗಿ ಮಾಡಿಕೊಳ್ಳುವುದಲ್ಲ. ಅದು ಇದ್ದಲ್ಲಿಯೇ ಪ್ರೀತಿಸಬೇಕು. ಉದಾಹರಣೆಗೆ, ಹೂ ಗಿಡದಲ್ಲಿ ಇದೆ ಎಂದಾದರೆ. ಅದನ್ನು ಸ್ಪರ್ಶಿಸದೆ ಇರುವಲ್ಲಿಯೇ ನೋಡಿ ಸಂತೋಷ ಪಟ್ಟರೆ ಅದು ಪ್ರೇಮ. ಮುಟ್ಟಿದರೆ ಸಮಸ್ಯೆ ಶುರುವಾಗುತ್ತದೆ. ನಿಮ್ಮದೊಂದು ಸುಂದರ ತೋಟ ನೋಡಿದರೇನು ತಪ್ಪು, ಅದನ್ನು ಬಿಟ್ಟು ಅದನ್ನು ಕೀಳಲು ಶುರು ಮಾಡಿದರೆ ಸಮಸ್ಯೆ. ಯಾವುದನ್ನು ಪ್ರೀತಿಸುತ್ತೇನೆ ಅದು ನಮ್ಮದೇ ಆಗಿರಬೇಕೆಂದು ಇಲ್ಲ. ಅದು ಜಗತ್ತಿನದು. ಅದು ಪರಮ ವಸ್ತುವಿನದು. ನೋಡಿ ಸಂತೋಷ ಪಡಬೇಕು. ಸ್ಮರಿಸಿ ಸಂತೋಷಪಡಬೇಕು. ಪ್ರೇಮ ಇದ್ದರೆ ಜಗತ್ತಿನ ಎಲ್ಲಾ ವಸ್ತು ಅನುಭವಿಸಬಹುದು. ಇತಿಹಾಸದ ತುಂಬೆಲ್ಲ ದ್ವೇಷದ ಕಥೆಗಳು. ಧಾರ್ಮಿಕ ದ್ವೇಷ, ಸಾಮಾಜಿಕ ದ್ವೇಷ, ವೈಚಾರಿಕ ದ್ವೇಷ, ಮಾಡುವುದು ಮನಸ್ಸಿನಲ್ಲಿ ಇರುವ ದ್ವೇಷ. ಮನೆ ಮನೆ ನಾಶಮಾಡುವುದು ದ್ವೇಷ. ದ್ವೇಷ ಇದ್ದಾಗ ಜಯವಾಗುವುದಿಲ್ಲ. ಜ್ಞಾನ ಫಲಕಾರಿಯಾಗುವುದಿಲ್ಲ. ಹೊಲಸಾದ ಪ್ರೇಮ ಅಲ್ಲ. ಮೋಹದ ಪ್ರೇಮ ಅಲ್ಲ. ಆಶೆಯ ಪ್ರೇಮವಲ್ಲ. ಸ್ವಚ್ಛ ನಿರ್ಮಲ ಪ್ರೇಮ. ಯಾವುದು ಮನಸ್ಸನ್ನು ವಿಕಾರ ಮಾಡುವುದಿಲ್ಲ, ಯಾವುದು ಮನಸ್ಸನ್ನು ಸದಾ ಸಂತೋಷವಾಗಿರುತ್ತದೆ, ಅದೇ ಪವಿತ್ರ ಪ್ರೇಮ. ಅದೇ ಭಕ್ತಿ . (ಇನ್ನೂ ಇದೆ) -ಎಂ.ಪಿ. ಜ್ಞಾನೇಶ್, ಮಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ