ನನ್ನ ಅಜ್ಜ ತಿಮ್ಮಪ್ಪಯ್ಯ ಶಿರಸ್ತೇದಾರ್ ಆಗಿದ್ದರು. ಅವರಿಗೆ ಇಬ್ಬರು ಮಕ್ಕಳು. ಒಬ್ಬರು ತಂದೆ (ಅಡ್ಡೂರು ಕೃಷ್ಣಯ್ಯ) ಇನ್ನೊಬ್ಬರು ಚಿಕ್ಕಪ್ಪ (ಅನಂತರಾಮ ರಾವ್). ಬಡತನದ ಕಾಲವದು. ಇಂದಿಗಿದ್ದರೆ ನಾಳೆಗಿಲ್ಲ ಎಂಬಂತಹ ಸ್ಥಿತಿ. ಬಹಳ ಕಷ್ಟದಲ್ಲಿ ವಿದ್ಯಾಭ್ಯಾಸ ಮಾಡಿದ್ದ ನನ್ನ ತಂದೆಯವರು ಎಂಬಿಸಿ‌ಎ (MBCA)ಮುಗಿಸಿ ವೈದ್ಯಕೀಯ ಇಲಾಖೆಯಲ್ಲಿ  ಉದ್ಯೋಗಕ್ಕೆ ಸೇರಿದರು. ಹೊಸಪೇಟೆಯಲ್ಲಿ ತಂದೆಯವರ ವೃತ್ತಿ ಜೀವನ ಆರಂಭ. ಮುಂದೆ ಬೊಬ್ಬಿಲಿ, ಪಾಲಕ್ಕೊಂಡಾ, ವಿಶಾಖಪಟ್ಟಣ, ವೈನಾಡು, ತಂಜಾವೂರುಗಳಿಗೆ ವರ್ಗಾವಣೆ. ಒಂದು ಕಡೆಯಲ್ಲಿ ಬದುಕು ನೆಲೆಗೊಳಿಸುವಷ್ಟರಲ್ಲಿ ಹೊಸ ವರ್ಗಾವಣೆಯ ಆದೇಶ ಬರುತ್ತಿತ್ತು. ಇದರಿಂದಾಗಿ ತಂದೆಯವರಿಗೆ ರೋಸಿ ಹೋಗಿತ್ತು. ವೈದ್ಯಕೀಯ ಇಲಾಖೆಯಲ್ಲಿ ಅಧ್ಯಾಪಕ ವೃತ್ತಿಯಲ್ಲಿದ್ದರೆ ಬೇಗನೆ ವರ್ಗಾವಣೆಯಾಗದು ಎಂಬ ಉದ್ದೇಶದಿಂದ ತಂಜಾವೂರಿನ ಮೆಡಿಕಲ್ ಸ್ಕೂಲಿನಲ್ಲಿ ಉಪನ್ಯಾಸಕರಾದರು. ಮುಂದಿನ ಆರೇಳು ವರುಷಗಳು ವರ್ಗಾವಣೆಯಿಂದ ಮುಕ್ತಿ. ನಂತರ ಸುಮಾರು ಎಂಟು ವರುಷ ಮದ್ರಾಸಿನಲ್ಲಿ ವಾಸ. 1914ರಲ್ಲಿ ನನ್ನ ಅಕ್ಕ ಕಾಶಮ್ಮಳ ಜನನವಾಯಿತು. 1917ಲ್ಲಿ  ತಿಮ್ಮಪ್ಪಯ್ಯ, 1919ರಲ್ಲಿ ಸುಬ್ಬರಾವ್, 1922ರಲ್ಲಿ ನಾನು, 1924ರಲ್ಲಿ ಸುಶೀಲ, 1926ರಲ್ಲಿ ವೆಂಕಟ್ರಾವ್, 1929ರಲ್ಲಿ ಮನೋರಮಾ ಮತ್ತು 1932ರಲ್ಲಿ ರಾಮಮೋಹನ್ ಜನನ. ತಂದೆಯವರು ವಿಶಾಖಪಟ್ಟಣದಲ್ಲಿ ಸೇವೆಯಲ್ಲಿದ್ದಾಗ ನಾನು ಮತ್ತು ಅಣ್ಣ ಸುಬ್ಬರಾವ್ ಜನಿಸಿದೆವು.  ತಂಜಾವೂರಿನಲ್ಲಿ ಬಾಲ್ಯ ತಮಿಳುನಾಡಿನ ತಂಜಾವೂರಿನಲ್ಲಿ ಕಳೆದ ನನ್ನ ಬಾಲ್ಯದ ದಿನಗಳ ನೆನಪು ಗಾಢವಾಗಿದೆ. ನಾಲ್ಕನೇ ವಯಸ್ಸಿನಿಂದ ಹನ್ನೊಂದನೇ ವಯಸ್ಸಿನವರೆಗೆ ನಾನು ಬೆಳೆದದ್ದು ತಂಜಾವೂರಿನಲ್ಲಿ. (೧೯೨೬ರಿ೦ದ ೧೯೩೩) ನನ್ನ ಪ್ರಾಥಮಿಕ ವಿದ್ಯಾಭ್ಯಾಸವು ಅಲ್ಲೇ ಆಯಿತು. ಆ ಸಮಯದಲ್ಲಿ ತಂದೆಯವರು ತಂಜಾವೂರಿನಲ್ಲಿ ಮೆಡಿಕಲ್ ಸ್ಕೂಲ್‌ನಲ್ಲಿ ಶರೀರಶಾಸ್ತ್ರ (ಅನಾಟಾಮಿ)ದ ಪ್ರಾಧ್ಯಾಪಕರಾಗಿದ್ದರು. ಅಲ್ಲಿದ್ದಾಗ ನಮ್ಮ ತಂದೆಯವರು ಬೈಸಿಕಲಿನಲ್ಲಿ ಕಾಲೇಜಿಗೆ ಹೋಗುತ್ತಿದರು. ತಂಜಾವೂರಿನಲ್ಲಿ ಆಗ ಒಂದೇ ಒಂದು ಮೋಟಾರ್ ಬೈಕು ಇದ್ದ ನೆನಪು. ಅದು ಡಾ: ಪಾಂಡುರಂಗ ರಾವ್ ಎಂಬವರಲ್ಲಿತ್ತು. ಆ ಸ್ಯಾಕಲ್ ಮೋಟಾರ್ ಬೈಕ್ ನಮಗೊಂದು ಅದ್ಭುತ. ಆಗ ತಂಜಾವೂರು ಒಂದು ಸಣ್ಣ ಪೇಟೆ. ಚೌಕಾಕಾರವಾಗಿರುವ ಊರಿನಲ್ಲಿ ನಾಲ್ಕು ದೀರ್ಘ ರಸ್ತೆಗಳು. ಈ ರಸ್ತೆಗಳನ್ನು ಜೋಡಿಸುವ ಅನೇಕ ಆಡ್ಡ ರಸ್ತೆಗಳು. ಉತ್ತರದ ಮುಖ್ಯರಸ್ತೆಯ ಒಂದು ಮೂಲೆಯಲ್ಲಿ ನಮ್ಮ ಮನೆ ಇತ್ತು. ನನ್ನ ಶಾಲೆ ಮತ್ತು ಮನೆಗೆ ಸುಮಾರು ಒಂದು ಫರ್ಲಾಂಗ್ ದೂರ. ಶಾಲೆಯ ಹೆಸರು ಎಸ್.ಪಿ.ಜಿ. ಸ್ಪೋರ್ಟ್ ಸ್ಕೂಲ್.  ಅದರ ಸುತ್ತ ಒಂದು ಕಂಪೌಂಡ್. ಅಲ್ಲಿ ಒಂದರಿಂದ ಆರನೇ ತರಗತಿಯವರೆಗೆ ಪ್ರತೀ ತರಗತಿಯಲ್ಲಿ ಒಂದು ಸೆಕ್ಷನ್. ಪ್ರತೀ ಕ್ಲಾಸ್‌ನಲ್ಲಿ ಸುಮಾರು 25 – 30 ವಿದ್ಯಾರ್ಥಿಗಳು ಮಾತ್ರ. ತರಗತಿಗೆ ಒಬ್ಬರು ಅಧ್ಯಾಪಕರು. ನನ್ನ ದೊಡ್ಡಣ್ಣ ಕಲ್ಯಾಣಸುಂದರಂ ಹೈಸ್ಕೂಲ್‌ನಲ್ಲಿ ಓದುತ್ತಿದ್ದ. ಸಣ್ಣಣ್ಣ ಆರನೇ ತರಗತಿ (ಮೊದಲನೇ ಫಾರ್ಮ್) ತನಕ ಅಲ್ಲಿ ಕಲಿತು ನಂತರ ಸೈಂಟ್ ಪೀಟರ್ಸ್ ಹೈಸ್ಕೂಲಿನಲ್ಲಿ ನಾಲ್ಕನೇ ಫಾರ್ಮ್‌ವರೆಗೆ ಕಲಿತ. ನಮ್ಮ ಶಾಲೆಯಿಂದ ಒಂದು ಫರ್ಲಾಂಗ್ ಮುಂದೆ ನಡೆದು ಪಶ್ಚಿಮದ ಮುಖ್ಯ ಬೀದಿಗೆ ತಿರುಗುವಾಗ, ಸಿಗುವ ಮಾರ್ಗದಲ್ಲಿ ಮೂರು ದೇವಸ್ಥಾನಗಳಿದ್ದುವು. ಅಲ್ಲಿನ ರಾಮ ದೇವಸ್ಥಾನ ಯಾವಾಗಲೂ ಮಂಕು ಬಡಿದಂತೆ ತೋರುತ್ತಿತ್ತು. ಜನರು ಅಲ್ಲಿಗೆ ಹೋಗುವುದು ಅಪರೂಪ. ನರಸಿಂಹ ದೇವಸ್ಥಾನಕ್ಕೆ ಹೋಗುವ ಜನರು ಇನ್ನೂ ಕಡಿಮೆ. ಆದರೆ ಇವುಗಳ ನಡುವೆ ಇದ್ದ ಕಾಮಾಕ್ಷಿ ದೇವಸ್ಥಾನದಲ್ಲಿ ಯಾವಾಗಲೂ ಜನರು ಜಮಾಯಿಸುತ್ತಿದ್ದರು. ಅಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತಿತ್ತು. ಮೂಲೆಯಲ್ಲಿದ್ದ ಹನುಮಂತನ ಗುಡಿ ಬಹಳ ಚಿಕ್ಕದು.  ವಿಗ್ರಹದ ಸುತ್ತಲೂ ಒಬ್ಬರಿಗೆ ಹೋಗಲು ಮಾತ್ರ ಜಾಗವಿತ್ತು. ಭಕ್ತರು ಗುಡಿಯೊಳಗೆ ಪ್ರವೇಶಿಸಿ, ಒಂದು ಸುತ್ತು ಬಂದು ವಿಗ್ರಹವನ್ನು ಮುಟ್ಟಿ ನಮಸ್ಕಾರ ಮಾಡಿ ಹೊರಗೆ ಬರುತ್ತಿದ್ದರು. ಇವುಗಳಲ್ಲದೆ ಪೇಟೆಯಲ್ಲಿ ಇನ್ನೂ ಕೆಲವು ದೇವಸ್ಥಾನಗಳಿದ್ದುವು. ಒಂದರಲ್ಲಿ ಮಾತ್ರ ಜಾತ್ರೆ ಗೌಜಿಯಿಂದ ನಡೆಯುತ್ತಿತ್ತು. ಇತರ ದೇವಸ್ಥಾನಗಳಿಗಿಂತ ಬೃಹತ್ತಾದ ಬೃಹದೀಶ್ವರ ದೇವಸ್ಥಾನ ಸುಮಾರು ಒಂದು ಮೈಲು ದೂರದಲ್ಲಿತ್ತು. ಅದರ ಗೋಪುರ ಪರ್ವತದಂತೆ ಕಾಣುತ್ತಿತ್ತು. ಅಷ್ಟು ಎತ್ತರದ ಗೋಪುರ ದಕ್ಷಿಣ ಹಿಂದೂಸ್ಥಾನದಲ್ಲಿ ಎಲ್ಲಿಯೂ ಇಲ್ಲ. ದೇವಸ್ಥಾನದ ಒಳಗೆ ಬೃಹತ್ ಶಿವಲಿಂಗ. ಅದರ ಎದುರು ಇರುವ ಭಾರೀ ಗಾತ್ರದ ನಂದಿ ವಿಗ್ರಹ ಬಹಳ ಪ್ರಖ್ಯಾತ. ಆದರೆ ಆ ದೇವಸ್ಥಾನಕ್ಕೆ ಬರುತ್ತಿದ್ದ ಜನರ ಸಂಖ್ಯೆ ವಿರಳ. ಕಾಮಾಕ್ಷಿಯಮ್ಮನ ದೇವಸ್ಥಾನ ಮತ್ತು ಊರಿನ ಹೊರಗೆ ಇದ್ದ ಮಾರಿಯಮ್ಮನ ದೇವಸ್ಥಾನಗಳಲ್ಲಿ ಯಾವಾಗಲೂ ಜನಸಂದಣಿ. ಅಲ್ಲಿ ಹರಕೆ ಪೂಜೆಗಳು ಜಾಸ್ತಿ. ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು