ಲ್ಯಾಂಡ್ ಲಾರ್ಡ್ ಸಿನಿಮಾ (ಭಾಗ 1)
ಶ್ರೀರಾಮ ದಿವಾಣ
ಜನವರಿ ೩೧, ೨೦೨೬
೧೪ ವೀಕ್ಷಣೆಗಳು
ಕಾಶ್ಮೀರಿ ಫೈಲ್ಸ್, ಕೇರಳ ಸ್ಟೋರಿ, ಅಸುರನ್, ಜೈ ಭೀಮ್, ಕಾಟೇರ, ಛಾವ, ಧುರಂದರ್, ಈಗ ಲ್ಯಾಂಡ್ ಲಾರ್ಡ್ ಹೀಗೆ ಭಾರತದ ಅನೇಕ ಭಾಷೆಗಳ ಚಲನಚಿತ್ರಗಳಲ್ಲಿ ನಿರಂತರವಾಗಿ ಈ ಸಮಾಜದ ಅನ್ಯಾಯ, ಅಕ್ರಮ, ಹಿಂಸೆ, ತಾರತಮ್ಯಗಳನ್ನು ಮನರಂಜನೆ, ವ್ಯಾಪಾರ ಮತ್ತು ಕಲಾತ್ಮಕವಾಗಿ ಚಿತ್ರಿಸಿ ಯಶಸ್ಸು ಪಡೆಯಲಾಗುತ್ತಿದೆ. ಜನರು ಸಹ ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆ. ಹಿಂಸೆ, ಕ್ರೌರ್ಯ, ಅಸಮಾನತೆ, ಅಮಾನವೀಯತೆಯು ಒಂದು ಮನರಂಜನೆ ಎಂಬಲ್ಲಿಗೆ ನಮ್ಮ ಮನಸ್ಥಿತಿಗಳು ಬಂದು ತಲುಪಿದೆ.
ಸಿನಿಮಾಗಳ ಮೂಲಕ ನಮ್ಮ ಆಂತರಿಕ ಅಸಹಾಯಕತೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಹೆಚ್ಚಾಗಿ ನಡೆಯುತ್ತಿದೆ. ಇದರಿಂದ ಸ್ವಲ್ಪಮಟ್ಟಿಗೆ ಅವರವರ ಸೈದ್ಧಾಂತಿಕ ಬೆಂಬಲಿಗರಿಗೆ ಜನಜಾಗೃತಿ ಉಂಟಾದರೆ, ಇನ್ನೊಂದೆಡೆ ಕೈಲಾಗದವನು ಮೈ ಪರಚಿಕೊಂಡ ಎಂಬಂತೆಯೂ ಆಗುತ್ತದೆ. ನಿಜಜೀವನದಲ್ಲಿ ಸಾಧಿಸಲು ಆಗದ್ದನ್ನು ಕೇವಲ ಸಿನಿಮಾದಲ್ಲಿ ಸಾಧಿಸಿ ಒಂದು ರೀತಿಯಲ್ಲಿ ವಿಕೃತ ಆನಂದ ಪಡೆಯುತ್ತಿದ್ದೇವೆ. ಏಕೆಂದರೆ ವಾಸ್ತವದಲ್ಲಿ ನಾವು ನಮ್ಮನ್ನೇ ಪ್ರಶ್ನಿಸಿಕೊಳ್ಳಬೇಕು. ಸಿನಿಮಾ ವಾಸ್ತವವಲ್ಲ. ಇತಿಹಾಸವಲ್ಲ, ಸುತ್ತಿನಲ್ಲಿ, ಈ ರೀತಿಯ ವಿಷಯಗಳಿಗೆ ಅದೊಂದು ಜವಾಬ್ದಾರಿಯುತ ಮಾಧ್ಯಮವೂ ಅಲ್ಲ. ಅದೊಂದು ಮನರಂಜನಾ ಉದ್ಯಮ.
ಒಮ್ಮೆ ಹಾಗೇ ಯೋಚಿಸಿ ನೋಡಿ. ಈ ದೇಶದ ಲಕ್ಷಾಂತರ ದೇವಸ್ಥಾನಗಳಲ್ಲಿ ಪ್ರತಿನಿತ್ಯ ದೇವರ ಪೂಜೆಗಳನ್ನು ಅತ್ಯಂತ ಶ್ರದ್ದಾ ಭಕ್ತಿಯಿಂದ ಮಾಡಲಾಗುತ್ತದೆ. ಈ ದೇಶದ ಲಕ್ಷಾಂತರ ಮಸೀದಿಗಳಲ್ಲಿ ಪ್ರತಿನಿತ್ಯ ದಿನಕ್ಕೆ ಐದು ಬಾರಿ ನಮಾಜು ಮಾಡಲಾಗುತ್ತದೆ. ಈ ದೇಶದ ಲಕ್ಷಾಂತರ ಚರ್ಚುಗಳಲ್ಲಿ ಪ್ರತಿನಿತ್ಯ ಪ್ರಾರ್ಥನೆ ಮಾಡಲಾಗುತ್ತದೆ. ಇನ್ನೂ ಕೆಲವು ಧರ್ಮಗಳಲ್ಲಿ ಅವರವರದೇ ರೀತಿಯಲ್ಲಿ ದೇವರನ್ನು ಸ್ಮರಿಸುತ್ತಾರೆ. ಈ ದೇಶದ ಸುಮಾರು ಶೇಕಡಾ 95% ಜನರಿಗೆ ದೇವರು ಮತ್ತು ಧರ್ಮದ ಬಗ್ಗೆ ಅಪಾರ ನಂಬಿಕೆಯಿದೆ.
ಆಶ್ಚರ್ಯಕರ ವಿಷಯವೆಂದರೆ ಈಗಲೂ ಹಿಂಸಾತ್ಮಕ ಚಿತ್ರಗಳು, ಶೋಷಣೆಯ ವಿರುದ್ದದ ಬಂಡಾಯ ಸಿನಿಮಾಗಳು ಅತ್ಯಂತ ಯಶಸ್ವಿಯಾಗುತ್ತವೆ. ಪ್ರತಿನಿತ್ಯ ರಾಮ, ಅಲ್ಲಾ, ಯೇಸು ಅವರಿಗೆ ಸಲ್ಲಿಸುವ ಭಕ್ತಿಯಲ್ಲಿ ಕನಿಷ್ಠ 10% ನಮ್ಮ ಕಾಯಕ ಧರ್ಮದ ಪ್ರಾಮಾಣಿಕತೆಯನ್ನು ನಡವಳಿಕೆಯಾಗಿ ರೂಪಿಸಿಕೊಂಡಿದ್ದರೆ ಈ ದೇಶ ಒಂದೇ ಕ್ಷಣದಲ್ಲಿ ಶೇಕಡಾ 90% ಹಿಂಸಾ ಮುಕ್ತವಾಗಿ ಸಮ ಸಮಾಜದ ನಿರ್ಮಾಣವಾಗುತ್ತಿತ್ತು. ಅದು ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಅದರ ಅರ್ಥ ನಾವು ಮನುಷ್ಯ ಮುಖವಾಡದೊಂದಿಗೆ ಬದುಕುತ್ತಿರುವ ಕಾಡು ಮೃಗಗಳು ಎಂದು ಹೇಳಬಹುದೇ? ಕೆ ಜಿ ಎಫ್, ಸಲಾರ್, ಜವಾನ್, ಅನಿಮಲ್ ನಂತಹ ಕ್ರೌರ್ಯದ ಸಿನಿಮಾಗಳ ಸಾವಿರಾರು ಕೋಟಿಯ ಯಶಸ್ಸು ಏನನ್ನು ಸೂಚಿಸುತ್ತದೆ. ಅದರಲ್ಲೂ ಅನಿಮಲ್ ಸಿನಿಮಾ ಅತ್ಯಂತ ರಣಭಯಂಕರ ಹಿಂಸೆಯನ್ನು ಪ್ರತಿಪಾದಿಸುತ್ತವೆ.
ಸಿನಿಮಾ ವಿಮರ್ಶೆ: ಭಾರತದ ಕೇಂದ್ರ ಸೆನ್ಸಾರ್ ಮಂಡಳಿ ಸಂಪೂರ್ಣ ಸತ್ತು ಹೋಗಿದೆಯೇ ? ಸಿನಿಮಾ ನಿರ್ಮಾಣಕ್ಕೆ ಕಥೆ ಚಿತ್ರಕಥೆಗಳ ಬರಗಾಲ ಬಂದಿದೆಯೇ ? ಚಿತ್ರ ನಿರ್ದೇಶಕರ ಕ್ರಿಯಾತ್ಮಕತೆಗೆ ಗ್ರಹಣ ಬಡಿದಿದೆಯೇ ? ಪ್ರೇಕ್ಷಕರಿಗೆ ಹುಚ್ಚು ಹಿಡಿದಿದೆಯೇ ? ಅಥವಾ ಈ ಚಲನಚಿತ್ರ ಆಧುನಿಕ ಭಾರತೀಯ ಸಮಾಜದ ಪ್ರತಿ ಬಿಂಬವೇ ? ಕ್ರಿಯಾತ್ಮಕತೆ, ವಾಣಿಜ್ಯ ಹಿತಾಸಕ್ತಿ, ಮನರಂಜನೆಯ ಒಟ್ಟು ಉದ್ದೇಶ ಫಲ ಇದಾಗಿರಬಹುದೇ ? ಹಿಂಸೆ, ಅಶ್ಲೀಲತೆಯ ವಿಕೃತತೆ ತನ್ನ ಉಚ್ಛ್ರಾಯ ಹಂತ ತಲುಪಿದೆಯೇ ? ಅಭಿವ್ಯಕ್ತಿ ಸ್ವಾತಂತ್ರ್ಯ ಸ್ವೇಚ್ಛೆಯಾಗಿ ಪರಿವರ್ತನೆ ಹೊಂದಿದೆಯೇ ? ಅಥವಾ ಮುಕ್ತತೆ ಸಹಜವಾಗಿ ಹೀಗೆ ರೂಪಾಂತರ ಹೊಂದುತ್ತದೆಯೇ ? ಆ ಬದಲಾವಣೆ ಒಪ್ಪಿಕೊಳ್ಳದ ನಾವು ಅಸಹಜ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದೇವೆಯೇ ? ಅದು ಕಲಾ ಮಾಧ್ಯಮದ ಹೊಸ ಪ್ರಯೋಗವೇ ? ವ್ಯವಸ್ಥೆ ಕಾರ್ಯನಿರ್ವಹಿಸುವುದೇ ಹೀಗೆಯೇ ? ಹತ್ತಾರು ಪ್ರಶ್ನೆಗಳ ಜೊತೆಗೆ ಸಮಗ್ರ ಚಿಂತನೆಯ ಹಾದಿಯಲ್ಲಿ ನಡೆದಾಗ...
ಸೆಕ್ಸ್, ಕ್ರೌರ್ಯ, ಹುಚ್ಚುತನ, ವಿಕೃತ ಮನಸ್ಥಿತಿಗಳು, ಪ್ರೀತಿ, ಪ್ರೇಮ, ಸಂಬಂಧ, ಸಂಗೀತ, ಸಾಹಿತ್ಯ ಎಲ್ಲದಕ್ಕೂ ಪರ್ಯಾಯವಾಗಿ ಅಭಿವೃದ್ಧಿ ಹೊಂದುತ್ತಿರುವಂತೆ ಭಾಸವಾಗುತ್ತದೆ. ವೇಗ ಮತ್ತು ಸ್ಪರ್ಧೆಯ ಆಧುನಿಕ ಜಗತ್ತು ನಿಯಂತ್ರಣ ಮೀರುತ್ತಿರುವಂತಿದೆ. ಅನಿಮಲ್ ಎಂಬ ಸಿನಿಮಾ ಸುಮಾರು 1000 ಕೋಟೆಯ ವರೆಗೆ ವ್ಯವಹಾರ ಮಾಡಿದೆ ಎಂಬ ಸುದ್ದಿ ಇದೆ. ಅದೊಂದು ಯಶಸ್ವಿ ಚಿತ್ರ ಎಂದೇ ಪರಿಗಣಿಸಲಾಗಿದೆ. ಅದರ ನಾಯಕ - ನಾಯಕಿ ಮತ್ತು ನಿರ್ದೇಶಕ ಸೇರಿ ಇಡೀ ತಂಡ, ಮಾಧ್ಯಮಗಳು, ಪ್ರೇಕ್ಷಕರು ಎಲ್ಲರೂ ಅದನ್ನು ಬಹುತೇಕ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಅದು ಒಂದು ರೀತಿಯ ಅದ್ಬುತ ಸಾಧನೆ ಎಂದೇ ಮಾತನಾಡಿಕೊಳ್ಳಲಾಗುತ್ತಿದೆ. ಇತ್ತ ಕಡೆ ಜಾತಿ ಮತ್ತು ವರ್ಗ ಅಸಮಾನತೆಯ ಕನ್ನಡ ಚಲನಚಿತ್ರ ಕಾಟೇರ ಮತ್ತು ಈಗ ಲ್ಯಾಂಡ್ ಲಾರ್ಡ್ ಸಿನಿಮಾ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಜನರ ದ್ವಂದ್ವ ಮನಸ್ಥಿತಿ ಬಯಲಾಗುತ್ತಿದೆ. ಇತಿಹಾಸ - ಮಂಗನ ಕೈಯಲ್ಲಿ ಮಾಣಿಕ್ಯ ಎಂದು ಗಾದೆ ಮಾತು ನಿಜವಾಗುವ ಮುನ್ನ......
ಸದ್ದು ಮಾಡುತ್ತಿರುವ ಚಲನಚಿತ್ರಗಳೆಂಬ ಭ್ರಮಾಲೋಕದ ಪೊರೆ ಕಳಚುವ ಸಮಯ. ದಯವಿಟ್ಟು ಒಂದು ನೆನಪಿಡಿ. ಯಾವುದೇ ಪೌರಾಣಿಕ, ಐತಿಹಾಸಿಕ ಅಥವಾ ವರ್ತಮಾನದ ಸಾಧಕರ ಅಥವಾ ಘಟನೆಗಳನ್ನು ದೃಶ್ಯ ಮಾಧ್ಯಮದಲ್ಲಿ ಪರಿಪೂರ್ಣವಾಗಿ ಹಿಡಿದಿಡುವುದು ಸಾಧ್ಯವಾಗುವುದಿಲ್ಲ ಅಥವಾ ತುಂಬಾ ಕಷ್ಟ. ಅದಕ್ಕೆ ಸಾಕಷ್ಟು ಮಿತಿಗಳಿವೆ. ಬರಹದ ಮಿತಿ ಒಂದು ವ್ಯಾಪ್ತಿಗೆ ಒಳಪಟ್ಟರೆ, ದೃಶ್ಯ ಮಾಧ್ಯಮದಲ್ಲಿ ಇನ್ನೂ ಹೆಚ್ಚು ಮಿತಿಗಳಿವೆ. ಬರಹದಲ್ಲಿ ಬರಹಗಾರನ ಗ್ರಹಿಕೆ, ಆತನ ಬೌದ್ಧಿಕ ಸಾಮರ್ಥ್ಯ, ಆತನ ದೃಷ್ಟಿಕೋನ ಪ್ರಭಾವ ಬೀರಿದರೆ, ದೃಶ್ಯ ಮಾಧ್ಯಮದಲ್ಲಿ ಚಿತ್ರಕಥೆ, ಸಂಭಾಷಣೆ, ಸಂಗೀತ, ಸಂಕಲನ, ಛಾಯಾಗ್ರಹಣ, ನಿರೂಪಣೆಯ ಶೈಲಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನಟರು ಮತ್ತು ಅವರ ಅಭಿನಯ ಸಾಕಷ್ಟು ಪ್ರಭಾವ ಬೀರುತ್ತದೆ.
ಇಲ್ಲಿ ಎಲ್ಲಾ ಪಾತ್ರಗಳನ್ನು ಚಿತ್ರಕಥೆಗಾರನೇ ನಿಯಂತ್ರಿಸುತ್ತಾನೆ. ಸಂಭಾಷಣೆಯಲ್ಲಿಯೂ ಸಹ ಆತನೇ ಎಲ್ಲಾ ಪಾತ್ರಗಳ ಧ್ವನಿಯಾಗಿರುತ್ತಾನೆ. ಐತಿಹಾಸಿಕ ಘಟನೆಗಳ ಆಧಾರ ಅವರಿಗೆ ಇದ್ದರೂ ನಿರೂಪಣೆ ವಾಸ್ತವತೆಯನ್ನು ಮೀರಿ ಕಲಾತ್ಮಕತೆ ಅಥವಾ ಮನರಂಜನೆ ಅಥವಾ ತಾನು ಹೇಳಬೇಕೆಂದಿರುವ ವಿಷಯವನ್ನು ತನ್ನದೇ ರೀತಿಯಲ್ಲಿ ಹೇಳುತ್ತಾನೆ. ಅದು ಕಲಾವಿದರ ನಟನೆಯಲ್ಲಿ ಮೂಡಿ ಛಾಯಾಗ್ರಹಣ ರೂಪದಲ್ಲಿ ನಮಗೆ ಕಾಣಸಿಗುತ್ತದೆ. ಚೋಟಾ ಭೀಮ್, ಚಾಣಕ್ಯ, ಶ್ರೀಕೃಷ್ಣ, ಸಾಮ್ರಾಟ್ ಅಶೋಕ, ಅಕ್ಬರ್, ಟಿಪ್ಪು ಸುಲ್ತಾನ್, ರಾಣಾ ಪ್ರತಾಪ್ ಸಿಂಗ್, ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್, ಗಾಂಧಿ, ಭಗತ್ ಸಿಂಗ್, ಮೋದಿ, ತೆಂಡೂಲ್ಕರ್, ದೋನಿ, ಮೇರಿಕೋಮ್, ವಾಜಪೇಯಿ, ಸಾರ್ವರ್ಕರ್, ಮುಂತಾದ ಯಾರದೇ ಆಗಿರಲಿ ಅಲ್ಲಿ ವಾಸ್ತವಕ್ಕಿಂತ ಪಾತ್ರದ ವಿಜೃಂಭಣೆ ಇರುತ್ತದೆ. ದೃಶ್ಯ ಮಾಧ್ಯಮದ ಶಕ್ತಿ ಮತ್ತು ಮಿತಿ ಇದೇ ಆಗಿದೆ. ಇಲ್ಲಿ ಅತ್ಯದ್ಭುತ ವ್ಯಕ್ತಿತ್ವಗಳು ಪೇಲವವಾಗುವ ಸಾಮಾನ್ಯ ವ್ಯಕ್ತಿಗಳು ಅಸಾಮಾನ್ಯವಾಗುವ ಎಲ್ಲಾ ಸಾಧ್ಯತೆಗಳು ಇರುತ್ತವೆ.
ಇಲ್ಲಿ ಕೆಲವು ಅನುಕೂಲಗಳು ಇವೆ. ಸಾಮಾನ್ಯ ಜನರಿಗೆ, ಓದಲು ಆಸಕ್ತಿ ಇಲ್ಲದ ಅಥವಾ ಓದು ಬರಹವಿಲ್ಲದ ಜನರಿಗೆ ಸಾಧಕರ ಬದುಕನ್ನು ತಿಳಿಸುವ ಒಂದು ಉತ್ತಮ ಮಾಧ್ಯಮ ಮತ್ತು ಪ್ರಯತ್ನ ಎಂದು ಇದನ್ನು ಪರಿಗಣಿಸಬಹುದು. ಇಂದಿನ ಆಧುನಿಕ ಮತ್ತು ವೇಗದ ಸಮಾಜದಲ್ಲಿ ತಂತ್ರಜ್ಞಾನದ ಮೂಲಕ ಜನರನ್ನು ಜಾಗೃತಿ ಮೂಡಿಸುವ ಸಲುವಾಗಿ ಧಾರಾವಾಹಿ, ಚಲನಚಿತ್ರದ ಮುಖಾಂತರ ಮಾಡುವ ಪ್ರಯತ್ನ ಅಭಿನಂದನಾರ್ಹ.
ಆದರೆ ಅದೇ ಬುದ್ಧ, ಗಾಂಧಿ, ಬಸವಣ್ಣ, ವಿವೇಕಾನಂದ, ಅಂಬೇಡ್ಕರ್ ಮುಂತಾದವರ ಚಿಂತನೆಗಳು ದೃಶ್ಯಗಳಾಗಿ ಮೂಡುವುದು, ಅವುಗಳನ್ನು ನೋಡುಗರಿಗೆ ಅರ್ಥ ಮಾಡಿಸುವುದು ಸವಾಲಿನ ಕೆಲಸವೂ ಆಗಿದೆ. ಇಲ್ಲಿ ಘಟನೆಗಳೇ ಪ್ರಾಮುಖ್ಯತೆ ಪಡೆಯುತ್ತದೆ. ಘಟನೆಗಳ ತೀವ್ರತೆ, ನಟರ ಸಾಮಾರ್ಥ್ಯ ಒಟ್ಟು ಸಾರಾಂಶವನ್ನೇ ಏರುಪೇರು ಮಾಡಬಹುದು. ಎಷ್ಟೋ ಸಿನಿಮಾ ಧಾರವಾಹಿಗಳಲ್ಲಿ ಮುಖ್ಯಪಾತ್ರಕ್ಕಿಂತ ಖಳನಟ ಅಥವಾ ಹಾಸ್ಯನಟ ಅಥವಾ ಫೋಷಕ ನಟ ತನ್ನ ಅಭಿನಯ ಚತುರತೆಯಿಂದ ಜನರ ಮನಸ್ಸು ಗೆದ್ದ ಉದಾಹರಣೆಗಳಿವೆ. ಕಾಲ್ಪನಿಕ ಕಥೆಗಳಲ್ಲಿ ಇದು ಸ್ವಾಗತಾರ್ಹ. ಆದರೆ ಐತಿಹಾಸಿಕ ಮಹತ್ವದ ಪಾತ್ರಗಳಲ್ಲಿ ಇದು ವಿರುದ್ಧ ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಕೆಲವೊಮ್ಮೆ ಘಟನೆಗಳು ಮತ್ಯಾರದೋ ಸಹಾನುಭೂತಿಗೆ ಒಳಗಾಗಬಹುದು.
ಚೋಟಾ ಭೀಮ್ ಧಾರವಾಹಿ ಮಹಾಭಾರತದಲ್ಲಿ ಕೆಲವೇ ಅಧ್ಯಾಯಗಳ ಪಾತ್ರ ಅತಿ ಮಹತ್ವ ಪಡೆಯುತ್ತದೆ. ಮಹಾಭಾರತ ಧಾರವಾಹಿ ಭೀಷ್ಮನ ದೃಷ್ಟಿಕೋನದಿಂದ ನೋಡಲ್ಪಡುತ್ತದೆ. ಸಂಗೊಳ್ಳಿ ರಾಯಣ್ಣ ದರ್ಶನ್ ಅಭಿನಯದಲ್ಲಿ ವೀಕ್ಷಕರ ಮನದಲ್ಲಿ ಚಿರಸ್ಥಾಯಿಯಾಗುತ್ತದೆ. ಮಹೇಂದ್ರ ಸಿಂಗ್ ಧೋನಿ ಎಂಬ ಅತ್ಯಂತ ಪ್ರಬುದ್ಧ ಆಟಗಾರ ಸುಶಾಂತ್ ಸಿಂಗ್ ರಜಪೂತ್ ಎಂಬ ಪಾತ್ರದಾರಿಯಾಗಿ ಬದಲಾಗುವುದನ್ನು ಆತನ ಆಟದ ನಿಜವಾದ ಕೌಶಲ್ಯವನ್ನು ಮರೆಸುತ್ತದೆ.
ಹಾಗೆಂದು ಮಹತ್ವದ ಪಾತ್ರಗಳ ದೃಶ್ಯ ರೂಪಕಗಳನ್ನು ತಿರಸ್ಕರಿಸಬೇಕು ಎಂದು ಹೇಳಲಾಗುವುದಿಲ್ಲ. ಅದೊಂದು ಕಲಾ ಪ್ರಕಾರ. ಸಂಗೀತ, ಸಾಹಿತ್ಯ, ಹಾಡು, ಸಿನಿಮಾ, ನಾಟಕ ಎಲ್ಲವೂ ಅದರಲ್ಲಿ ಸೇರಿದೆ. ಆದರೆ ಐತಿಹಾಸಿಕ ಪಾತ್ರಗಳ ಅಥವಾ ಘಟನೆಗಳ ಪುನರ್ ಸೃಷ್ಟಿಯಲ್ಲಿ ಸಾಕಷ್ಟು ಮಿತಿಗಳಿವೆ ಎಂಬ ಎಚ್ಚರಿಕೆಯು ಇರಬೇಕಾಗುತ್ತದೆ. ಇಲ್ಲದಿದ್ದರೆ ಇತಿಹಾಸದ ಖಳ ನಾಯಕರನ್ನು ಮುಂದೊಂದು ದಿನ ಹಣ ಬಲದಿಂದ ಹೀರೋಗಳಾಗಿ ಸಹ ಚಿತ್ರಿಸಬಹುದು. ಇತಿಹಾಸ ಎಂದೂ ಯಾವುದೇ ಭ್ರಮೆ ಅಥವಾ ತಮ್ಮ ತತ್ವ ಸಿದ್ದಾಂತಗಳ ಪ್ರಚಾರಕ್ಕಾಗಿ ಮನ ಬಂದಂತೆ ತಿರುಚುವ ಕೆಲಸ ಆಗಬಾರದು. ಅದು ತನ್ನ ನೈಜ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು.
(ಇನ್ನೂ ಇದೆ)
-ವಿವೇಕಾನಂದ. ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಜನವರಿ ೩೧, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬