ಜನಜೀವನವನ್ನು ಹಿಂಸೆ ನಡುಗಿಸುತ್ತಿರುವ ಕಾಲವಿದು. ಜಗತ್ತಿನಲ್ಲಿ ಎಲ್ಲಾದರೂ ದಾರುಣ ಹಿಂಸೆಯ ಕೃತ್ಯ ಪ್ರತಿ ಗಂಟೆಗೊಂದಾದರೂ ನಡೆಯುತ್ತಿರುತ್ತದೆ. ಬೆಚ್ಚಿ ಬೀಳಿಸುವ ಹಿಂಸಾ ಘಟನೆಗಳ ವರದಿಗಳನ್ನು ದಿನನಿತ್ಯವೂ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ.
ಇಂತಹ ಪರಿಸ್ಥಿತಿಯಲ್ಲಿ, ಅನಿರೀಕ್ಷಿತವಾಗಿ ಎದುರಾಗುವ ವೈಯುಕ್ತಿಕ ದಾಳಿಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳ ಬಲ್ಲೆವೇ? ಅದಕ್ಕಾಗಿ ನಾವು ತರಬೇತಿ ಪಡೆದು ಸಮರ್ಥರಾಗಿದ್ದರೆ ರಕ್ಷಿಸಿಕೊಳ್ಳಬಲ್ಲೆವು. ಕರಾಟೆಯಂತಹ ಆತ್ಮರಕ್ಷಣಾ ಕಲೆಯನ್ನು ಕರಗತ ಮಾಡಿಕೊಂಡವರು ತಮ್ಮ ಮೇಲಿನ ದೈಹಿಕ ದಾಳಿಗಳಿಂದ ಪಾರಾಗುವ ಸಂಭವ ಜಾಸ್ತಿ. ಯಾಕೆಂದರೆ ಜಗತ್ತಿನ ಸಮರ್ಥ ಆತ್ಮರಕ್ಷಣಾ ಕಲೆಗಳಲ್ಲೊಂದು ಕರಾಟೆ.
ಕರಾಟೆಯು ಇತರೆಲ್ಲ ಆತ್ಮರಕ್ಷಣಾ ಕಲೆಗಳಿಗಿಂತ ಹೆಚ್ಚು ಪರಿಣಾಮಕಾರಿ. ನಮ್ಮ ಶರೀರವನ್ನು ಸಮಗ್ರವಾಗಿ ದಾಳಿಯ ಆಯುಧವಾಗಿ ಮತ್ತು ರಕ್ಷಣೆಯ ಗುರಾಣಿಯಾಗಿ ಮಾರ್ಪಡಿಸುವುದರಲ್ಲಿ ಕರಾಟೆಯ ಅದ್ಭುತ ಶಕ್ತಿಯ ಗುಟ್ಟು ಅಡಗಿದೆ.
ಕರಾಟೆಯ ಚಾರಿತ್ರಿಕ ಹಿನ್ನೆಲೆ
ಭಾರತಕ್ಕೆ ಈಗಿನ ರೂಪದಲ್ಲಿ ಕರಾಟೆ ಜಪಾನಿನಿಂದ ಬಂದಿದೆ. ಆದರೆ ಕರಾಟೆಯ ತವರೂರು ಭಾರತ! ಶತಮಾನಗಳ ಹಿಂದೆ ಕೇರಳದ ರಾಜರು ರೂಪಿಸಿ ಪರಿಪೂರ್ಣಗೊಳಿಸಿದ “ಕಲರಿಪಯಟ್” ಎಂಬ ಕದನ ಕಲೆ ಕರಾಟೆಯ ಮೂಲ. ಪ್ರಾಚೀನ ಕಾಲದಲ್ಲಿ ಕೇರಳದ ನಾಯರ್ ಯೋಧ ಜನಾಂಗವದವರು ಅಭ್ಯಸಿಸುತ್ತಿದ್ದ ಈ ಕಲರಿಪಯಟ್ ಮುಂದೆ “ಕುಂಗ್-ಫು” ಕದನಕಲೆಗೆ ಬುನಾದಿ. ಅದರಿಂದ ಬೆಳೆದುಬಂತು ಕರಾಟೆ.
ಕಲರಿಪಯಟ್ಟಿನ ಹುಟ್ಟು ಕುತೂಹಲಕಾರಿ. ಸುಮಾರು 3,000 ವರುಷಗಳ ಹಿಂದೆ, ಕೇರಳದ ರಾಜನೊಬ್ಬ ಕಾಡಿಗೆ ಬೇಟೆಗೆ ಹೋಗಿದ್ದ. ಅಲ್ಲಿ ಸಿಂಹ ಮತ್ತು ಆನೆಯ ಹೋರಾಟ ನೋಡಿದ. ಸಿಂಹವು ಆನೆಯ ನೆತ್ತಿಗೆ ನೆಗೆದು, ತನ್ನ ಪಂಜದ ಒಂದೇ ಏಟಿನಿಂದ ಆನೆಯನ್ನು ಕೊಂದುದನ್ನು ಕಂಡು ಚಕಿತನಾದ. ಅನಂತರ ಅವನು ವಿವಿಧ ಪ್ರಾಣಿಗಳ ರಕ್ಷಣಾ ಮತ್ತು ಆಕ್ರಮಣ ವಿಧಾನಗಳನ್ನು ಪರಿಶೀಲಿಸಿದ. ಅವುಗಳ ಆಧಾರದಿಂದ ಅವನು ರೂಪಿಸಿದ ಹೊಸ ಕಾದಾಟ ಶೈಲಿಯೇ ಕಲರಿಪಯಟ್.
ಕೇರಳದ ಇನ್ನೊಬ್ಬ ರಾಜ ವಲ್ಲಪರಯ್ಯ ಬೌದ್ಧ ಧರ್ಮ ಸ್ವೀಕರಿಸಿ ಭಿಕ್ಷುವಾದ. ಅವನು ಚೀನಾಕ್ಕೆ ಹೋಗಿ, ಅಲ್ಲಿ ಬೌದ್ಧ ಧರ್ಮ ಪ್ರಸಾರ ಕೈಗೊಂಡ. ಆತನು ಇಂದಿಗೂ ಚೀನಾದಲ್ಲಿ ಬೋಧಿಧರ್ಮನೆಂದು ಪ್ರಸಿದ್ಧ. ಚೀನಾದಲ್ಲಿ ಬೌದ್ಧ ಧರ್ಮ ನೆಲೆಯೂರುತ್ತಿದ್ದ ಕಾಲವದು. ಗುಡ್ಡಗಾಡು ಪ್ರದೇಶಗಳ ಬೌದ್ಧಮಂದಿರಗಳಲ್ಲಿ ಧ್ಯಾನ ಮಗ್ನರಾಗಿರುತ್ತಿದ್ದ ಬೌದ್ಧ ಭಿಕ್ಷುಗಳಿಗೆ ಕಳ್ಳಕಾಕರು ಹಾಗೂ ದರೋಡೆಕೋರರ ಉಪಟಳ. ಅವರಿಂದ ಬೌದ್ಧ ಭಿಕ್ಷುಗಳ ರಕ್ಷಣೆಗೆ ಇವರ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದು ಅಗತ್ಯವೆಂದು ಬೋಧಿಧರ್ಮ ಮನಗಂಡ. ಬೌದ್ಧ ಭಿಕ್ಷುಗಳ ತರಬೇತಿಗಾಗಿ 18 ಶಾರೀರಿಕ ಚಲನೆಗಳುಳ್ಳ ಶಿಕ್ಷಣ ಕ್ರಮವೊಂದನ್ನು ರೂಪಿಸಿದ. ಆತ ರಾಜಕುವರನಾಗಿದ್ದಾಗ ಕೇರಳದಲ್ಲಿ ಕಲಿತಿದ್ದ ಕಲಾರಿಪಯಟ್ ಇದಕ್ಕೆ ಆಧಾರ.
ಬೋಧಿಧರ್ಮನ ಮರಣಾ ನಂತರ, ಅವನ ಮೂವರು ಶಿಷ್ಯರು ತಮ್ಮ ಗುರು ರೂಪಿಸಿದ ಕದನಕಲೆಗೆ 152 ಹೊಸ ಚಲನೆಗಳನ್ನು ಸೇರಿಸಿದರು. ಈ 170 ಚಲನೆಗಳ ಕದನಕಲೆ “ಕುಂಗ್-ಫು” ಎಂದು ಹೆಸರಾಯಿತು. ಇದು ಚೀನಾದ ಗಡಿ ದಾಟಿ ಕೊರಿಯಾ, ಮಲೇಷ್ಯಾ, ಥೈಲ್ಯಾಂಡ್ ಮತ್ತು ಜಪಾನ್ ದೇಶಗಳನ್ನು ತಲಪಿತು. ಆಯಾ ದೇಶಗಳ ಪಾರಂಪರಿಕ ಅಂಶಗಳನ್ನು ಅಳವಡಿಸಿಕೊಂಡು ಬೇರೆಬೇರೆ ಕದನಕಲೆಗಳಾಗಿ ಬೆಳೆಯಿತು: ಹಾಪ್-ಕಿಡೊ, ಐಕಿಡೋ, ಕೆಂಡೋ, ಸವಾಟೆ, ಕರಾಟೆ.
ಜಪಾನಿನ ಓಕಿನಾವಾದಲ್ಲಿ 1936ರಲ್ಲಿ ಕರಾಟೆ ಇಂದಿನ ರೂಪ ತಾಳಿತೆಂದು ಹೇಳಬಹುದು. ಅಲ್ಲಿನ ಕಿಯೊಟೊದಲ್ಲಿರುವ ಕದನಕಲೆಗಳ ಅಕಾಡೆಮಿ ಅಂತರರಾಷ್ಟ್ರೀಯ ಕರಾಟೆ ಪೀಠವಾಗಿದೆ.
ಜಗತ್ತಿನಲ್ಲಿ ಹಲವಾರು ಅಂತರ ರಾಷ್ಟ್ರೀಯ ಕರಾಟೆ ಸಂಸ್ಥೆಗಳಿವೆ. ಪ್ರತಿಯೊಂದು ಸಂಸ್ಥೆಯು ತನ್ನದೇ ಶೈಲಿಯನ್ನು ಹೊಂದಿದ್ದು ಅದರ ಪ್ರಸಾರಕ್ಕಾಗಿ ಕೆಲಸ ಮಾಡುತ್ತಿದೆ.
ಭಾರತಕ್ಕೆ ಕಾಲಿಟ್ಟ ಕರಾಟೆ
ಕರಾಟೆ ಭಾರತವನ್ನು ಪ್ರವೇಶಿಸಿದ್ದು 1970ರ ದಶಕದ ಆರಂಭದಲ್ಲಿ. ಅನಂತರ ಅನೇಕ ರಾಜ್ಯಗಳಲ್ಲಿ ಕರಾಟೆ ಅಸೋಸಿಯೇಷನುಗಳು ಸ್ಥಾಪಿಸಲ್ಪಟ್ಟವು. ಇವು ಅಖಿಲ ಭಾರತ ಕರಾಟೆ ಫೆಡರೇಷನಿನ ಅಂಗಸಂಸ್ಥೆಗಳು. 1970ರ ದಶಕದ ಮುಕ್ತಾಯದಲ್ಲಿ ಭಾರತದ ಥಿಯೇಟರುಗಳಲ್ಲಿ ಬ್ರೂಸ್ ಲೀ ನಟಿಸಿದ “ಎಂಟರ್-ದ-ಡ್ರಾಗನ್” ಚಲನಚಿತ್ರದ ಪ್ರದರ್ಶನ ಶುರು. ಇದರಿಂದಾಗಿ ಕರಾಟೆ ಅಪಾರ ಜನಪ್ರಿಯತೆ ಗಳಿಸಿ, ಹಲವಾರು ಕರಾಟೆ ತರಬೇತಿ ಕೇಂದ್ರಗಳು ತಲೆಯೆತ್ತಿದವು.
ಕರಾಟೆಯ ತಂತ್ರಗಳು
ಜಪಾನಿ ಭಾಷೆಯಲ್ಲಿ ಕರಾಟೆ ಪದದ ಅರ್ಥ ಬರಿಕೈ (ಕರ = ಬರಿದು, ಟೆ = ಕೈ) . ಹೆಸರಿಗೆ ತಕ್ಕಂತೆ ಕರಾಟೆ ಅಸ್ತ್ರರಹಿತ ಕದನಕಲೆ. ಕೈಯ ಬೆರಳುಗಳು, ತೋರ್ಬೆರಳು ಮತ್ತು ನಡುಬೆರಳುಗಳ ಕೊನೆಗಂಟುಗಳು (“ನಕಲ್-ಗಳು), ಕಿರುಬೆರಳಿನ ಬುಡದ ಮಾಂಸಲ ಭಾಗ, ಮೊಣಗಂಟುಗಳು, ಅಂಗೈ-ಬುಡ, ಮುಂತೋಳು, ಪಾದದ ಮೇಲ್ಭಾಗ, ಅಂಗಾಲಿನ ಮುಂಭಾಗ, ಹಿಮ್ಮಡಿ ಇತ್ಯಾದಿ ಅಂಗಗಳನ್ನು ಸತತ ಅಭ್ಯಾಸದಿಂದ ಪಳಗಿಸಿ, ಕರಾಟೆಯಲ್ಲಿ ಆತ್ಮರಕ್ಷಣೆ ಮತ್ತು ಪ್ರತಿ-ಆಕ್ರಮಣಕ್ಕಾಗಿ ಬಳಸಲಾಗುತ್ತದೆ.
ಈ ಅಂಗಗಳಿಂದ ‘ಕರಾಟೆಕ” (ಕರಾಟೆ ಅಭ್ಯಾಸಿ) ಎದುರಾಳಿಯ ಶರೀರದ ದುರ್ಬಲ ಭಾಗಗಳಿಗೆ ತೀವ್ರ ಏಟು ನೀಡಬಲ್ಲ. ಅವು: ಗದ್ದ, ಕುತ್ತಿಗೆ, ಕುತ್ತಿಗೆಯ ಹಿಂಭಾಗ, ಕಣ್ಣುಗಳು, ಮೂಗು, ಕಾಲು, ಮರ್ಮಾಂಗ ಇತ್ಯಾದಿ.
ಕರಾಟೆ ತಂತ್ರದ ಒಂದು ಮೂಲ ತತ್ವ: ದೇಹದ ಅಂಗದ ಕಡಿಮೆ ಮೇಲ್ಮೈ ಬಳಸಿ ಎದುರಾಳಿಗೆ ಏಟು ನೀಡುವುದು. ಇದರಿಂದಾಗಿ ಕಡಿಮೆ ಜಾಗದಲ್ಲಿ ಏಟಿನ ಶಕ್ತಿ ಕೆಂದ್ರೀಕರಿಸಲ್ಪಟ್ಟು, ಏಟಿನ ಘಾತ ಹೆಚ್ಚುತ್ತದೆ. ಕ್ರಮವಾದ ಅಭ್ಯಾಸದಿಂದ ಕರಾಟೆಕನು ವಿವಿಧ ಚಲನೆಗಳನ್ನು (ಅಂಗೈಗಳು, ಮುಷ್ಟಿಗಳು, ಮೊಣಕೈಗಳು, ಮೊಣಕಾಲುಗಳು, ಪಾದಗಳು, ಹಿಮ್ಮಡಿಗಳು, ಮತ್ತು ತಲೆಯಿಂದ ಏಟು ನೀಡುವ) ಇಚ್ಛಾನುಸಾರ ಹೊಂದಿಸಿಕೊಂಡು ಎದುರಾಳಿಯ ದಾಳಿಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಮತ್ತು ಎದುರಾಳಿಯ ಮೇಲೆ ಪ್ರತಿ-ಆಕ್ರಮಣ ಮಾಡಲು ಕಲಿತುಕೊಳ್ಳುತ್ತಾನೆ.
ಫೋಟೋ 1: ಸೌತ್ ಇಂಡಿಯನ್ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆಯ ಪ್ರದರ್ಶನದಲ್ಲಿ ಇಬ್ಬರು ಕರಾಟೆಕರಿಂದ ದಾಳಿ ಮತ್ತು ಪ್ರತಿದಾಳಿಯ ಪಟ್ಟುಗಳ ಪ್ರದರ್ಶನ
ಫೋಟೋ 2: ಅದೇ ಪ್ರದರ್ಶನದಲ್ಲಿ ಕರಾಟೆಕನ ಪಂಚ್-ನಿಂದ ಪೇರಿಸಿಟ್ಟ 10 ಹಂಚುಗಳು ಚೂರುಚೂರು
ಅಪ್ರತಿಮ ಕದನ ಕಲೆ: ಕರಾಟೆ (ಭಾಗ 1)
ಅಡ್ಡೂರು ಕೃಷ್ಣ ರಾವ್
ಫೆಬ್ರವರಿ ೦೩, ೨೦೨೬
೧೧ ವೀಕ್ಷಣೆಗಳು
ಪ್ರಕಟಿಸಿದ: ಫೆಬ್ರವರಿ ೦೩, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬