1.ಚೆಲುವಿನ ವನಸಿರಿ ಬನದಲ್ಲಿ 
ಹಸಿರು ಹುಲ್ಲಿನ ಹಾಸಿನಲೀ 
ನಿಸರ್ಗ ದೇವಿಯ ಮಡಿಲಲ್ಲಿ 
ಹಾಯಾಗೀ.. ನಾ.. ಒರಗಿದ್ದೆ // 2.ಪುಟಿಪುಟಿವ ಬುಗ್ಗೆಯೆಡೆಯಲ್ಲಿ 
ಗಳಗಳ ನಿನಾದ ತೊರೆಯಲ್ಲಿ 
ಹಸುರಿನ ಮರಗಿಡದೆರಕದಲೀ
ಕುಹುಕುಹು ಇಂಚರ ಸ್ವರದಲ್ಲಿ // 3.ದೃಷ್ಟಿ ಸಾರಿದೆಡೆ ನಿನ್ನದೇ ನೃತ್ಯ 
ಎತ್ತ ನೋಡಿದರು ನಿನ್ನಾತಿಥ್ಯ 
ದೇವಿ, ನಿನ್ನದೇನಿದು ಲಾಲಿತ್ಯ 
ನೋಡುತ ಮೈಮನ ಮರೆತಿದ್ದೆ // 4.ಮರಗಿಡದೆಡೆಯಲಿ ಇಣುಕಿನ ನೋಟ 
ರವಿ ಕಿರಣದ ಕಣ್ ಮುಚ್ಚಾಲೆಯಾಟ 
ಪಡುಗಡಲೆಡೆ ಸಾಗುವ ಆ ಓಟ.. 
ಮೈಮನ ತುಂಬಿ.. ಮಲಗಿದ್ದೆ // 5.ಸಾಗರದಾಚೆಯ ಕೆಂಪಿನಲೀ..
ರವಿರಶ್ಮಿಯು ತಾನಡಗಿತ್ತು..
ನಿಶೆಯ ಕಾವಳವು ಹರಡಿತ್ತು 
ನಿನ್ನಯ ಕೇಶವು ಕೆದರಿತ್ತು // 6.ಚುಕ್ಕಿ ಚಂದ್ರಮನ ಬೆಳಗಿನಲೀ..
ನೀಲಾಕಾಶದ ತಂಪಿನಲೀ..
ತಾರಾಲೋಕದ ವಿಭವದಲೀ..
ನನ್ನನೆ ನಾನೇ ಮರೆತಿದ್ದೆ // 7.ದೇವೀ! ನಿಸರ್ಗ ಸುಂದರಿಯೇ..
ನಿನ್ನಯ ಮಹಿಮೆಯ ನಾನರಿಯೆ 
ನಿನ್ನೀ ಮಾಡಿಲೊಳು ಮಲಗಿದ್ದೆ..
ನಿದ್ರಾ ಲೋಕಕೆ ಜಾರಿದ್ದೇ.. //            -ಅನಂತ ಭಟ್ ಪೊಳಲಿ