ಏಪ್ರಿಲ್ 2 - ವಿಶ್ವ ಆಟಿಸಂ ಜಾಗೃತಿ ದಿನ. ಪ್ರತಿವರ್ಷ ಏಪ್ರಿಲ್ 2 ರಂದು ವಿಶ್ವ ಆಟಿಸಂ ಜಾಗೃತಿ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. "ಆಟಿಸಂ ಮತ್ತು ಮಾನವತೆ – ಪ್ರತಿಯೊಬ್ಬರ ಜೀವನ ಅಮೂಲ್ಯ” ಎಂಬದು ಈ ವರ್ಷದ ಧ್ಯೇಯ ವಾಕ್ಯವಾಗಿದೆ. ಆಟಿಸಂ ಹೊಂದಿರುವವರು ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಅವರು ಅರ್ಥಪೂರ್ಣ ಮತ್ತು ಗೌರವಯುತ ಜೀವನವನ್ನು ನಡೆಸಲು ಸಾಧ್ಯವಾಗುವಂತೆ ಅವರ ಜೀವನದ ಗುಣಮಟ್ಟವನ್ನು ಸುಧಾರಿಸುವ ಅಗತ್ಯವನ್ನು ಜನರಿಗೆ ತಿಳಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ಮೂಲಕ ಆಟಿಸಂ ಬಗ್ಗೆ ಜಾಗೃತಿ ಹೆಚ್ಚಿಸುವುದು, ಅವರ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಸಮಾಜದಲ್ಲಿ ಸಮಾನ ಅವಕಾಶಗಳನ್ನು ಒದಗಿಸುವ ಮಹತ್ವವನ್ನು ಎತ್ತಿ ತೋರಿಸುವುದು ಈ ಆಚರಣೆಯ ಮುಖ್ಯ ಉದ್ದೇಶ. ಆಟಿಸಂ ಎಂದರೇನು...? : “ಆಟಿಸಂ" ಎನ್ನುವುದು ಬೆಳವಣಿಗೆಯೊಂದಿಗಿನ ಒಂದು ಸ್ಥಿತಿಯಾಗಿದ್ದು, ಇದರಲ್ಲಿ ವ್ಯಕ್ತಿಗೆ ಸಾಮಾಜಿಕವಾಗಿ ಬೆರೆಯುವುದು, ಸಂವಹನ ಮಾಡುವುದು ಕಷ್ಟವಾಗಬಹುದು. ಇದರೊಂದಿಗೆ ಒಂದೇ ರೀತಿಯ ವರ್ತನೆಗಳನ್ನು ಪುನರಾವರ್ತಿಸುತ್ತಿರಬಹುದು. ಆಟಿಸಂ ಎಂದು ಗುರುತಿಸಲು 3 ವರ್ಷ ವಯಸ್ಸಿನೊಳಗೆ ಮಗುವಿನಲ್ಲಿ ಕೆಳಗಿನ ವಿಭಾಗಗಳಲ್ಲಿ ಅಸಾಮಾನ್ಯ ಅಥವಾ ಅಸಮರ್ಪಕ ಬೆಳವಣಿಗೆ ಕಾಣಬೇಕು: I. ಸಾಮಾಜಿಕ ಸಂಪರ್ಕ (Social interaction) II. ಸಾಮಾಜಿಕ ಸಂವಹನಕ್ಕಾಗಿ ಭಾಷೆಯ ಬಳಕೆ (Communication)  III. ಕಲ್ಪನಾತ್ಮಕ ಆಟ (Imaginative play) 1. ಸಾಮಾಜಿಕ ಸಂಪರ್ಕ (Social interaction): ಕಣ್ಣುಗಳ ನಡುವಿನ ಸಂಪರ್ಕ ಕೊರತೆ, ಮುಖಭಾವ ವ್ಯಕ್ತಪಡಿಸುವಲ್ಲಿ ತೊಡಕು, ಅಂಗಸೂಚನೆಗಳು ಮತ್ತು ದೇಹಭಾಷೆಯನ್ನು ಸರಿಯಾಗಿ ಬಳಸದೆ ಇರುವುದು. ಸಮವಯಸ್ಕರೊಂದಿಗೆ ಸಂಬಂಧ ಬೆಳೆಸಲು ಕಷ್ಟವಾಗುವುದು. ಸಂತೋಷ, ಆಸಕ್ತಿ ಅಥವಾ ಸಾಧನೆಗಳನ್ನು ಇತರರೊಂದಿಗೆ ಹಂಚಿಕೊಳ್ಳದಿರುವುದು. ಸಾಮಾಜಿಕ ಅಥವಾ ಭಾವನಾತ್ಮಕ ಪ್ರತಿಕ್ರಿಯೆಯ ಕೊರತೆ. 2. ಸಾಮಾಜಿಕ ಸಂವಹನಕ್ಕಾಗಿ ಭಾಷೆಯ ಬಳಕೆ : ಮಾತಿನ ಬೆಳವಣಿಗೆಯಲ್ಲಿ ವಿಳಂಬ ಅಥವಾ ಮಾತಿನ ಕೊರತೆ. ಸಂಭಾಷಣೆಯನ್ನು ಆರಂಭಿಸಲು ಅಥವಾ ಮುಂದುವರಿಸಲು ಕಷ್ಟ. ಪುನರಾವರ್ತಿತ ಏಕ ರೀತಿಯ ಭಾಷೆ ಬಳಕೆ. 3. ಕಲ್ಪನಾತ್ಮಕ ಆಟ (Imaginative play): ಕಲ್ಪನೆ ಮತ್ತು ಚಿಂತನೆ ಸಮಸ್ಯೆ ಒಂದು ವಸ್ತುವನ್ನು ಮತ್ತೊಂದು ವಸ್ತುವಾಗಿ ಊಹಿಸುವುದು (ಉದಾ: ಕಡ್ಡಿಯನ್ನು ಕತ್ತಿಯಾಗಿ ಬಳಸುವುದು) ಅವರಿಗೆ ಕಷ್ಟವಾಗುತ್ತದೆ. ಕಲ್ಪನಾ ಆಟದಲ್ಲಿ “ಡಾಕ್ಟರ್–ರೋಗಿ”, “ಶಿಕ್ಷಕ–ವಿದ್ಯಾರ್ಥಿ” ಇತ್ಯಾದಿ ಪಾತ್ರಗಳನ್ನು ನಿರ್ವಹಿಸಲು ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್‌ಗೆ ಕಾರಣಗಳು? : ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್‌ಗೆ ಒಂದೇ ಕಾರಣವಿಲ್ಲ; ಇದು ಹಲವು ಅಂಶಗಳ ಸಂಯೋಜನೆಯ ಫಲಿತಾಂಶ. ಮುಖ್ಯವಾಗಿ ವಂಶವಾಹಿ (Genetic) ಕಾರಣಗಳು ಪ್ರಮುಖವಾಗಿದ್ದು, ಕುಟುಂಬ ಕೆಲವು ಜೀನ್ಸ್‌ಗಳು ಮೆದುಳಿನ ಬೆಳವಣಿಗೆಯನ್ನು ಪ್ರಭಾವಿಸುತ್ತವೆ, ಪರಿಸರ ಅಂಶಗಳು (ಗರ್ಭಾವಸ್ಥೆಯ ಸಮಸ್ಯೆಗಳು), ತಾಯಿ-ತಂದೆಯ ಹೆಚ್ಚಿನ ವಯಸ್ಸು, ಹಾಗೂ ಅವಧಿಗೂ ಮುಂಚೆ ಜನನ ಮತ್ತು ಕಡಿಮೆ ಜನನ ತೂಕ ಇವುಗಳೂ ಆಟಿಸಂ ಅಪಾಯವನ್ನು ಹೆಚ್ಚಿಸುತ್ತವೆ. ಆಟಿಸಂ ಇರುವ ಮಕ್ಕಳಿಗೆ ಸಹಪಾಠಿಗಳೊಂದಿಗೆ ಎದುರಾಗುವ ಸವಾಲುಗಳು. * ಸ್ನೇಹಿತರನ್ನು ಮಾಡಿಕೊಳ್ಳಲು ಕಷ್ಟ ಪಡುವುದು.  * ಸಹಪಾಠಿಗಳೊಂದಿಗೆ ಸಂಭಾಷಣೆ ಆರಂಭಿಸಲು ತೊಡಕುಂಟಾಗುವುದು. * ಸಾಮಾಜಿಕ ಸೂಚನೆಗಳು (facial expressions, gestures) ಅರ್ಥಮಾಡಿಕೊಳ್ಳಲು ಕಷ್ಟಪಡುವುದು * ಗುಂಪು ಆಟಗಳಲ್ಲಿ ಭಾಗವಹಿಸಲು ತೊಡಕುಂಟಾಗುವುದು * ತಮ್ಮ ಭಾವನೆಗಳನ್ನು ಸರಿಯಾಗಿ ವ್ಯಕ್ತಪಡಿಸಲು ಹಾಗೂ ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಕಷ್ಟಪಡುವುದು. * ಸಹಪಾಠಿಗಳಿಂದ ಟೀಕೆ ಅಥವಾ ಹೀಯಾಳಿಕೆ (bullying). ಒಂಟಿತನ ಅಥವಾ ಗುಂಪಿನಿಂದ ದೂರವಾಗುವ ಪರಿಸ್ಥಿತಿ * ಆಟದ ನಿಯಮಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾಗುವುದು. * ತಮ್ಮ ಆಸಕ್ತಿಗಳ ಬಗ್ಗೆ ಮಾತ್ರ ಮಾತನಾಡುವ ಪ್ರವೃತ್ತಿ. ತಪ್ಪು ಅರ್ಥಮಾಡಿಕೊಳ್ಳುವಿಕೆಗಳಿಂದ ಜಗಳಗಳು ಸ್ನೇಹವನ್ನು ದೀರ್ಘಕಾಲ ಉಳಿಸಿಕೊಳ್ಳಲು ಸವಾಲನ್ನು ಎದುರಿಸುವುದು. ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್( Autism Spectrum Disorder) ಇರುವ ಮಕ್ಕಳಿಗೆ ಸಹಪಾಠಿಗಳು ಹೇಗೆ ಸಹಾಯ ಮಾಡಬಹುದು....? * ಸ್ನೇಹಪೂರ್ಣವಾಗಿ ವರ್ತಿಸಬೇಕು ಅವರನ್ನು ಬೇರೆ ಮಾಡದೇ, ಎಲ್ಲರಂತೆ ಮಾತನಾಡಿ ಮತ್ತು ಆಟಕ್ಕೆ ಸೇರಿಸಿಕೊಳ್ಳಬೇಕು. * ಸರಳ ಮತ್ತು ಸ್ಪಷ್ಟವಾಗಿ ಮಾತನಾಡಬೇಕು. ಸಣ್ಣ ವಾಕ್ಯಗಳಲ್ಲಿ ನಿಧಾನವಾಗಿ ಹೇಳಿದರೆ ಅವರಿಗೆ ಅರ್ಥ ಮಾಡಿಕ್ಕೊಳ್ಳಲು ಸುಲಭವಾಗುತ್ತದೆ. * ಕಲ್ಪನಾ ಆಟ ಅಥವಾ ಗುಂಪು ಚಟುವಟಿಕೆಗಳಲ್ಲಿ ಅವರಿಗೆ ಪಾತ್ರ ಕೊಟ್ಟು ಸೇರಿಸಬೇಕು.ಸಹನೆ ತೋರಬೇಕು, ಅವರು ತಕ್ಷಣ ಪ್ರತಿಕ್ರಿಯಿಸದಿದ್ದರೂ ಕಾದು ನೋಡಬೇಕು. * ಸರಿಯಾದ ವರ್ತನೆ, ಮಾತು, ಆಟವನ್ನು ತೋರಿಸಿ ಕಲಿಯಲು ಸಹಾಯ ಮಾಡಬಹುದು. ನಿಯಮಗಳನ್ನು ಅರ್ಥವಾಗುವಂತೆ ತಿಳಿಸಬೇಕು. ಆಟದ ನಿಯಮಗಳನ್ನು ಹಂತ ಹಂತವಾಗಿ ತಿಳಿಸಿದರೆ ಅವರು ಸುಲಭವಾಗಿ ಪಾಲಿಸಬಹುದು. ಇದರ ಜೊತೆಗೆ ಪ್ರೋತ್ಸಾಹ ನೀಡವ ಮೂಲಕ ಚಿಕ್ಕ ಸಾಧನೆಯನ್ನೂ ಮೆಚ್ಚಿ, “ಚೆನ್ನಾಗಿ ಮಾಡಿದ್ದೀಯ” ಎಂದು ಉತ್ತೇಜಿಸಬೇಕು. * ಸಹಾನುಭೂತಿ (empathy) ಇರಲಿ. ಅವರ ಭಾವನೆಗಳನ್ನು ಅವರ ಸ್ಥಾನದಲ್ಲಿ ನಿಂತು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಒತ್ತಡ ಹೇರಬಾರದು ಅವರಿಗೆ ತೊಡಕುಂಟು ಮಾಡುವ ಚಟುವಟಿಕೆಗಳಿಗೆ ಬಲವಂತ ಮಾಡಬಾರದು. ಅರ್ಥಮಾಡಿಕೊಳ್ಳಲು ಶಿಕ್ಷಕರಿಂದ ಮಾರ್ಗದರ್ಶನ ಪಡೆಯಬಹುದು. (ಇನ್ನೂ ಇದೆ) -ಗಿರೀಶ್ ಎಂ ಎನ್, ಕೌನ್ಸೆಲಿಂಗ್ ಮನಶಾಸ್ತ್ರಜ್ಞರು, ಉಡುಪಿ ಚಿತ್ರ ಕೃಪೆ: ಇಂಟರ್ನೆಟ್ ತಾಣ