ಜಪಾನಿ ಕದನ ಕಲೆಯ ಇಂಗ್ಲಿಷ್ ಸಿನಿಮಾದ ಕತೆ: “ನಿಂಜಾ”
ಅಮೆರಿಕಾದ ಅನಾಥ ಬಾಲಕ ಕಾಸೆ ಬೊಮನ್ ಎಂಬಾತನನ್ನು ಜಪಾನಿನ ಒಂದು ಕದನ ಕಲೆಯ ದೋಜೋ (ಗುರುಕುಲ) ದತ್ತು ಸ್ವೀಕರಿಸುತ್ತದೆ. ಆ ಗುರುಕುಲದ ಪ್ರಾಚೀನ ಕದನಕಲೆ “ನಿಂಜುತ್ಸು”ಯಲ್ಲಿ ಪರಿಣತನಾಗಬೇಕು ಅಂದರೆ “ನಿಂಜಾ” ಆಗಬೇಕೆಂಬ ಆದಮ್ಯ ಬಯಕೆಯಿಂದ ಕಾಸೆ ಅಲ್ಲಿ ಕಲಿಯುತ್ತಾನೆ. ತನ್ನ ಸಾಧನೆಯಿಂದ ಗುರುಕುಲದ ಗುರು ಟಕೇಡ ಮತ್ತು ಅವರ ಮಗಳು ನಮಿಕೋ - ಇವರಿಬ್ಬರ ಗೌರವ ಗಳಿಸುತ್ತಾನೆ.  ಆದರೆ, ಕಾಸೆ ಮತ್ತು ನಮಿಕೋ ಇವರಿಬ್ಬರ ಆತ್ಮೀಯತೆ ಕಂಡು ಗುರುಕುಲದ ಅತ್ಯುತ್ತಮ ಶಿಷ್ಯನಾದ ಮಸಾಜುಕು ಎಂಬವನಿಗೆ ಅಸೂಯೆ. ಒಂದು ದಿನ ಬೆಳಗ್ಗೆ ಕದನ ಕಲೆಯ ಅಭ್ಯಾಸ ಸ್ಪರ್ಧೆಯಲ್ಲಿ ಮಸಾಜುಕು ತಾಳ್ಮೆ ಕಳೆದುಕೊಂಡು, “ಕಟಾನ” ಎಂಬ ಜಪಾನಿ ಖಡ್ಗವನ್ನು ಕಾಸೆಯ ಮೇಲೆಸೆದು ಅವನನ್ನು ಕೊಲ್ಲಲು ಪ್ರಯತ್ನಿಸಿದ. ಆಗ, ಆತ್ಮರಕ್ಷಣೆಗಾಗಿ ಅವನ ಮೇಲೆ ಕಾಸೆ ದಾಳಿ ಮಾಡಿದಾಗ, ಮಸಾಜುಕುನ ಬಲಗಣ್ಣಿನ ಕೆಳಭಾಗದಲ್ಲಿ ಗಾಯವಾಯಿತು. ಅನಂತರ, ಮಸಾಜುಕುನ ಅಶಿಸ್ತು ಮತ್ತು ರಾದ್ಧಾಂತಗಳ ದೆಸೆಯಿಂದಾಗಿ ಅವನನ್ನು ಗುರು ಟಕೇಡ ಗುರುಕುಲದಿಂದ ಹೊರ ಹಾಕುತ್ತಾರೆ.  ತದನಂತರ, ಮಸಾಜುಕು ಅಮೇರಿಕಾಕ್ಕೆ ಹೋಗುತ್ತಾನೆ. ಅಲ್ಲಿ “ಟೆಂಪಲ್ ಇಂಡಸ್ಟ್ರೀಸ್” ಎಂಬ ಸಂಸ್ಥೆಯ “ಬಾಡಿಗೆ ಕೊಲೆಗಾರ”ನಾಗಿ ನೇಮಕವಾಗುತ್ತಾನೆ. ಆ ಸಂಸ್ಥೆ “ರಿಂಗ್” ಎಂಬ ಭೂಗತ ಗ್ಯಾಂಗನ್ನು ಗುಪ್ತ ಕಾರ್ಯಾಚರಣೆಗಳ ಸಲುವಾಗಿ ರೂಪಿಸಿರುತ್ತದೆ. ಕೆಲವು ವರುಷಗಳ ನಂತರ ಅವನು ಜಪಾನಿಗೆ ಹಿಂತಿರುಗಿ, ತನ್ನ ಹಳೆಯ ಗುರುಕುಲಕ್ಕೆ ಬರುತ್ತಾನೆ. ತನ್ನನ್ನು ಆ ಗುರುಕುಲದ “ಮುಖ್ಯ ಗುರು”ವಾಗಿ ನೇಮಿಸಬೇಕೆಂದು ಆಗ್ರಹಿಸುತ್ತಾನೆ. ಗುರು ಟಕೇಡ ಈ ಪ್ರಸ್ತಾಪವನ್ನು ತಿರಸ್ಕರಿಸುತ್ತಾರೆ.  ತಮ್ಮ ಗುರುಕುಲದ ಮೇಲೆ ಮಸಾಜುಕು ದಾಳಿ ಮಾಡುತ್ತಾನೆಂದು ಗುರು ಟಕೇಡ ನಿರೀಕ್ಷಿಸುತ್ತಾರೆ. ಆದ್ದರಿಂದ, “ಯೋರೋಯಿ ಬಿಟ್ಸು” ಎಂಬ ಪವಿತ್ರ ಪೆಟ್ಟಿಗೆಯನ್ನು ರಕ್ಷಿಸುವ ಜವಾಬ್ದಾರಿಯನ್ನು ಕಾಸೆ ಮತ್ತು ಮಗಳು ನಮಿಕೋ ಇವರಿಗೆ ವಹಿಸುತ್ತಾರೆ. ಅದರಲ್ಲಿ ಜಪಾನಿನ ಕೊಗಾ ಪ್ರದೇಶದ ಪ್ರಾಚೀನ ನಿಂಜಾ ಒಬ್ಬನ ಉಡುಪು ಮತ್ತು ಆಯುಧಗಳು ಇರುತ್ತವೆ. ಅವರಿಬ್ಬರು ಆ ಪೆಟ್ಟಿಗೆಯನ್ನು ಅಮೆರಿಕಾಕ್ಕೆ ಒಯ್ಯುತ್ತಾರೆ. ಅಲ್ಲಿ ಗುರು ಟಕೇಡರ ಸ್ನೇಹಿತ ಪ್ರೊಫೆಸರ್ ಗ್ಯಾರಿಸನ್ ಅವರ ಸಹಾಯದಿಂದ ಅದನ್ನು ಟ್ರೈಬೋರೋ ವಿಶ್ವವಿದ್ಯಾಲಯದ ಒಂದು ಸಂಪುಟದಲ್ಲಿ ಸುರಕ್ಷಿತವಾಗಿ ಇರಿಸುತ್ತಾರೆ.  ಆದರೆ, ಅಷ್ಟರಲ್ಲಿ ಮಸಾಜುಕು ಜಪಾನಿನ ಹಳೆಯ ಗುರುಕುಲದ ಮೇಲೆ ದಾಳಿ ಮಾಡಿ ಗುರು ಟಕೇಡ ಅವರನ್ನು ಕೊಲ್ಲುತ್ತಾನೆ. ಜೊತೆಗೆ, ಕಾಸೆ ಮತ್ತು ನಮಿಕೋ ಇವರಬ್ಬರ ನೆಲೆಯನ್ನು ಪತ್ತೆ ಮಾಡುತ್ತಾನೆ. ಇವರ ವಧೆಗಾಗಿ  ಟೆಂಪಲ್ ಗ್ಯಾಂಗಿನ ರೌಡಿಗಳನ್ನು ಅವನು ಕಳಿಸುತ್ತಾನೆ.  ತಮ್ಮ ಜೀವ ರಕ್ಷಣೆಗಾಗಿ ಕಾಸೆ ಮತ್ತು ನಮಿಕೋ ಪರಾರಿ ಆಗುತ್ತಾರೆ. ಆದರೆ ಅವರಿಬ್ಬರ ಮೇಲೆ ಪ್ರೊ. ಗ್ಯಾರಿಸನರ ಕೊಲೆಯ ಆಪಾದನೆ ಹೊರಿಸಿ, ವಿಚಾರಣೆಗೆ ಒಳಪಡಿಸಲಾಗುತ್ತದೆ. ಮಾರುವೇಷ ಹಾಕಿಕೊಂಡ ಮಸಾಜುಕು, ತಾನು ನಮಿಕೋ ಅವಳ ವಕೀಲ ಎಂದು ಪೋಲಿಸರಿಗೆ ಮಂಕುಬೂದಿ ಎರಚಿ, ವಿಚಾರಣೆ ನಡೆಯುತ್ತಿದ್ದ  ಪೊಲೀಸ್ ಕಚೇರಿಗೆ ಪ್ರವೇಶ ಪಡೆಯುತ್ತಾನೆ. ಆ ಕಚೇರಿಯ ವಿದ್ಯುತ್ ಸಂಪರ್ಕ ತಪ್ಪಿಸಿ. ಅಲ್ಲಿ ಹಲವು ಪೊಲೀಸರನ್ನು ಕೊಂದು ಹಾಕುತ್ತಾನೆ. ಅವನು ಟ್ರಾಕ್ಸ್-ಲರ್ ಎಂಬ ಪೊಲೀಸ್ ಪತ್ತೆದಾರನನ್ನು ಕೊಲ್ಲಲು ಹವಣಿಸಿದಾಗ, ಆ ಪತ್ತೆದಾರನ ಪ್ರಾಣ ಉಳಿಸುತ್ತಾನೆ ಕಾಸೆ. ಈ ಗದ್ದಲದಲ್ಲಿ, ಮಸಾಜುಕು ನಮಿಕೋ ಅವಳ ಪ್ರಜ್ಞೆ ತಪ್ಪಿಸಿ, ಅವಳನ್ನು ಅಲ್ಲಿಂದ ಹೊತ್ತೊಯ್ಯುತ್ತಾನೆ.  ಅನಂತರ, “ಟೆಂಪಲ್” ಸಂಸ್ಥೆಯ ಪ್ರಧಾನ ಕಚೇರಿಗೆ ನುಗ್ಗಿದ ಕಾಸೆ ಅದರ ಅಧ್ಯಕ್ಷನಿಂದ ಮಸಾಜುಕನ ಫೋನ್ ನಂಬರ್ ಪಡೆಯುತ್ತಾನೆ. ಮಜಸಜೂಕನನ್ನು ಸಂಪರ್ಕಿಸಿದ ಕಾಸೆಯಿಂದ ವಾಗ್ದಾನ: ನಮಿಕೋ ಅವಳನ್ನು ತನಗೆ ಒಪ್ಪಿಸಿದರೆ, “ಪವಿತ್ರ ಪೆಟ್ಟಿಗೆ”ಯನ್ನು ಹಸ್ತಾಂತರಿಸುತ್ತೇನೆ. ಅದಕ್ಕಾಗಿ ಸ್ಥಳ ನಿಗದಿ ಮಾಡುತ್ತಾರೆ. ಕಾಸೆ ವಿಶ್ವವಿದ್ಯಾಲಯಕ್ಕೆ ಧಾವಿಸಿ, ಆ ಪವಿತ್ರ ಪೆಟ್ಟಿಗೆಯನ್ನು ಪಡೆದುಕೊಳ್ಳುತ್ತಾನೆ.  ಕೊನೆಯ ಹಂತದ ಘಟನೆಗಳು ಜರಗುವುದು ನಿರ್ಮಾಣದ ಹಂತದ ಒಂದು ಕಟ್ಟಡದಲ್ಲಿ. ಕ್ರೇನ್ ಮೂಲಕ ಪವಿತ್ರ ಪೆಟ್ಟಿಗೆಯನ್ನು ಕೆಳಕ್ಕೆ ಇಳಿಸಿದಾಗ, ನಮಿಕೋ ಅವಳನ್ನು ಮಸಾಜುಕ ಬಿಡುಗಡೆ ಮಾಡುತ್ತಾನೆ. ಅವನು ಪವಿತ್ರ ಪೆಟ್ಟಿಗೆಯನ್ನು ತೆರೆದು ನೋಡಿದಾಗ ಅದು ಖಾಲಿ!  ಆಗ, ಕಾಸೆ ಮತ್ತು ಮಸಾಜುಕು ಮುಖಾಮುಖಿಯಾಗಿ ಅಂತಿಮ ಕದನಕ್ಕೆ ಸಜ್ಜಾಗುತ್ತಾರೆ. ಆದರೆ, “ಟೆಂಪಲ್” ಆದೇಶದಂತೆ, ಗ್ಯಾಂಗಿನ ರೌಡಿಗಳು ಅಲ್ಲಿಗೆ ದಾಳಿ ಮಾಡುತ್ತಾರೆ - ನಮಿಕೋ ಸಹಿತ ಆ ಮೂವರನ್ನೂ ಕೊಲ್ಲಲಿಕ್ಕಾಗಿ. ಆದರೆ, ಕಾಸೆ, ಮಸಾಜುಕು ಮತ್ತು ನಮಿಕೋ ಭಯಂಕರ ಹೋರಾಟ ನಡೆಸಿ, ಆ ರೌಡಿಗಳನ್ನೆಲ್ಲ ಸಾಯಿಸುತ್ತಾರೆ.  ಈ ಹಂತದಲ್ಲಿ, ಮಸಾಜುಕು ಬ್ಲೋ-ಗನ್ನಿನಿಂದ ಹಾರಿಸಿದ ವಿಷದ ಬಾಣ ನಮಿಕೋ ಅವಳ ಕುತ್ತಿಗೆಗೆ ತಗಲಿ ಅವಳು ನರಳುತ್ತಾಳೆ. ಆ ಬಾಣದ ಪ್ರತಿವಿಷವಿದ್ದ ಬಾಟಲಿಯನ್ನು ಕಾಸೆಗೆ ತೋರಿಸಿದ ಮಸಾಜುಕು ಬಾಟಲಿಯನ್ನು ಕೆಳಕ್ಕೆ ಎಸೆದು ತನ್ನ ಕ್ರೂರತನ ತೋರಿಸುತ್ತಾನೆ. ರೊಚ್ಚಿಗೆದ್ದ ಕಾಸೆ ದಾಳಿ ಮಾಡಿದಾಗ, ನಿಂಜುತ್ಸು ಕದನ ತಂತ್ರದ ಮೂಲಕ ಮಸಾಜುಕು ತಪ್ಪಿಸಿಕೊಳ್ಳುತ್ತಾನೆ. ಆದರೆ ಕಾಸೆ ಜಾಣತನದಿಂದ ಅವನಿಗೆ ಆಘಾತ ನೀಡುತ್ತಾನೆ. ಕೊನೆಗೆ ಮಸಾಜುಕುವಿನ ತಲೆ ಕತ್ತರಿಸುತ್ತಾನೆ ಕಾಸೆ. ಆಗ ಕಾಸೆಗೆ ತನ್ನ ಗುರುವಿನ ಮಾತುಗಳು ನೆನಪಾಗುತ್ತವೆ: “ಕಟಾನ (ಪ್ರಾಚೀನ ಜಪಾನಿ ಖಡ್ಗ)ಕ್ಕೆ ಕೊಲ್ಲುವ ಮತ್ತು ಗುಣಪಡಿಸುವ ಶಕ್ತಿಗಳಿವೆ.” ತಕ್ಷಣ ತನ್ನದೇ ಕಟಾನದ ಹಿಡಿಯನ್ನು ತೆಗೆದಾಗ ಅದರೊಳಗೆ ಪ್ರತಿವಿಷ ಇರುತ್ತದೆ! ಅದನ್ನು ನಮಿಕೋ ಅವಳ ಕುತ್ತಿಗೆಗೆ ಹಾಕಿದೊಡನೆ ಬಾಣದ ವಿಷದ ಪ್ರಭಾವ ಮಾಯವಾಗುತ್ತದೆ. ಅವಳು ಬದುಕುತ್ತಾಳೆ.  ಮರುದಿನ ಬೆಳಗ್ಗೆ ಪತ್ತೇದಾರಿ ಟ್ರಾಕ್ಸ್-ಲರ್ ಕಾಸೆ ಮತ್ತು ನಮಿಕೋ ಅವರಿಗೆ ನೀಡುವ ಮಾಹಿತಿ: “ಟೆಂಪಲ್” ಸಂಸ್ಥೆಯ ಮುಖ್ಯಸ್ಥರನ್ನೆಲ್ಲ ಬಂಧಿಸಲಾಗಿದೆ ಮತ್ತು “ರಿಂಗ್” ಗ್ಯಾಂಗನ್ನು ನಾಶಪಡಿಸಲಾಗಿದೆ. ಅವರಿಬ್ಬರಿಗೂ ಅವನು ಪಾಸ್-ಪೋರ್ಟ್ ಹಿಂತಿರುಗಿಸಿ, ಅಮೆರಿಕಾ ತೊರೆದು ಹೋಗಲು ಸಲಹೆ ನೀಡುತ್ತಾನೆ. ಅದರಂತೆ, ಅವರಿಬ್ಬರೂ ಅಮೆರಿಕಾ ತೊರೆದು, ಜಪಾನಿಗೆ ಹಿಂತಿರುಗುತ್ತಾರೆ. ತಮ್ಮ ಗುರುವಿಗೆ ಗೌರವ ಸಲ್ಲಿಸಿ, ಪ್ರಾಚೀನ ಗುರುಕುಲವನ್ನು ಮುಂದುವರಿಸುತ್ತಾರೆ.  (15 ವರುಷಗಳ ಹಿಂದೆ ಬ್ಯಾಂಕಿನ ಸಿಬ್ಬಂದಿಗೆ ತರಬೇತಿ ನೀಡಲಿಕ್ಕಾಗಿ ಅಹಮದಾಬಾದಿಗೆ ಹೋಗಿದ್ದಾಗ 15-02-2011ರ ಮಂಗಳವಾರ ನೋಡಿದ್ದ ಸಿನಿಮಾದ ನೋಟ್ಸಿನ ಆಧಾರದಿಂದ ಬರೆದ ಕಥಾ ಸಾರಾಂಶ.)