“ಆಂಗರ್ ಮ್ಯಾನೇಜ್-ಮೆಂಟ್” ಇಂಗ್ಲಿಷ್ ಸಿನಿಮಾ ಕತೆ:
ಅಮೇರಿಕಾದ ಬ್ರೂಕ್ಲಿನಿನ ಡೇವ್ ಬುಜ್-ನಿಕ್ ಎಂಬವನ ಪ್ರೇಯಸಿ ಲಿಂಡಾ. ಡೇವ್-ಗೆ ಕೀಳರಿಮೆ; ಅವಳ ಬಗ್ಗೆ ತನ್ನ ಪ್ರೀತಿಯನ್ನು ಎಲ್ಲರೆದುರು ವ್ಯಕ್ತ ಪಡಿಸಲಿಕ್ಕೂ ಅವನ ಹಿಂಜರಿಕೆ. ಇದಕ್ಕೆ ಕಾರಣ ವಿದ್ಯಾರ್ಥಿಯಾಗಿದ್ದಾಗ ಒಮ್ಮೆ ಅವನು ಎಲ್ಲರೆದುರು ತನ್ನ ಗೆಳತಿಗೆ ಮುತ್ತಿಡಲು ಮುಂದಾದಾಗ ಅವನ ಸಹಪಾಠಿ ಆರ್ನಿ ಶಾಂಕ್-ಮಾನ್ ಎಂಬಾತ ಮಾಡಿದ್ದ ಅವಮಾನ. ಅದಾಗಿ 25 ವರುಷಗಳು ದಾಟಿದ್ದರೂ ಆ ಘಟನೆಯ ಪರಿಣಾಮದಿಂದ ಹೊರಬರಲು ಡೇವ್-ನಿಗೆ ಸಾಧ್ಯವಾಗಿಲ್ಲ. ಅವನೀಗ ಫ್ರಾಂಕ್ ಎಂಬ ಮೇಲಾಧಿಕಾರಿಯ ಸೆಕ್ರೆಟರಿ ಆಗಿ ಕೆಲಸ ಮಾಡುತ್ತಿದ್ದಾನೆ. ಅವನ ಕಚೇರಿಯ ಅಹಂಕಾರಿ ಸಹೋದ್ಯೋಗಿಯಿಂದಾಗಿ ಡೇವ್-ನ ಸಮಸ್ಯೆ ಬಿಗಡಾಯಿಸಿದೆ. ಇದರಿಂದ ಬೇಸತ್ತ ಲಿಂಡಾ ಅವನ ವರ್ತನೆಯ ಬದಲಾವಣೆಗಾಗಿ ಒಂದು ಉಪಾಯ ಮಾಡುತ್ತಾಳೆ.
ಕೆಲವೇ ದಿನಗಳಲ್ಲಿ ಡೇವ್ ವಿಮಾನದಲ್ಲಿ ಪ್ರಯಾಣಿಸಬೇಕಾಗುತ್ತದೆ. ಆಗ, ತನ್ನ ಎದುರಿನ ಸ್ಕ್ರೀನಿನಲ್ಲಿ ನೋಡುವ ಸಿನಿಮಾದ ಸಂಭಾಷಣೆ ಮತ್ತು ವಿವರಣೆಗಳ ಧ್ವನಿ ಕೇಳಲಿಕ್ಕಾಗಿ ಹೆಡ್-ಬ್ಯಾಂಡ್ ನೀಡಬೇಕೆಂದು ಗಗನಸಖಿಯ ಬಳಿ ವಿನಂತಿಸುತ್ತಾನೆ. ಇವನು ಎರಡು ಸಲ ವಿನಂತಿಸಿದರೂ ಆಕೆ ಅದನ್ನು ಕೊಡಲಿಲ್ಲ.
ಸಿಟ್ಟಿಗೆದ್ದ ಡೇವ್ ಆಕೆಯ ಬಳಿ ಮೂರನೇ ಸಲ ಏರಿದ ಧ್ವನಿಯಲ್ಲಿ ವಿನಂತಿಸಿದಾಗ ಒಬ್ಬ ದಡಿಯ ಸಿಬ್ಬಂದಿ ಬಂದು ಇವನನ್ನು ಗದರಿಸಿ ಸುಮ್ಮನಾಗಿಸುತ್ತಾನೆ. ವಿಮಾನದಿಂದ ಡೇವ್ ಇಳಿದಾಗ ಅವನನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತದೆ. ಮಹಿಳೆಗೆ ಡೇವ್ ಹಲ್ಲೆ ಮಾಡಿದನೆಂದು ಅವನ ಮೇಲೆ ಆಪಾದನೆ. ಅವನಿಗೆ ಒಂದು ತಿಂಗಳ ಅವಧಿಯ “ಕೋಪ ನಿರ್ವಹಣೆ” ಕೋರ್ಸಿಗೆ ಹಾಜರಾಗಬೇಕೆಂಬ ಶಿಕ್ಷೆ. ಆ ಕೋರ್ಸ್ ನಡೆಸುವಾತ ಡಾ. ಬಡ್ಡಿ ರೈಡೆಲ್ ಎಂಬ ಹೆಸರುವಾಸಿ ಥೆರಪಿಸ್ಟ್.
ಡೇವ್ ಆ ಕೋರ್ಸಿಗೆ ಸೇರಿಕೊಳ್ಳುತ್ತಾನೆ. ಡಾ. ಬಡ್ಡಿ ಆ ವಿಮಾನದಲ್ಲಿ ಇವನ ಬಲ ಪಕ್ಕದಲ್ಲಿದ್ದ ಪ್ರಯಾಣಿಕ! ಆ ಕೋರ್ಸಿನ ಸಹಪಾಠಿಗಳು ಡೇವ್-ಅನ್ನು ಲೇವಡಿ ಮಾಡುತ್ತ ಇರುತ್ತಾರೆ. ಒಮ್ಮೆ ಅವರೊಂದಿಗೆ ಡೇವ್ ಒಂದು ಹೋಟೆಲಿಗೆ ಹೋಗುತ್ತಾನೆ. ಅಲ್ಲಿ ಇಬ್ಬರ ಜಗಳ ಶುರು. ಅವರ ಜಗಳ ಬಿಡಿಸಲು ಡೇವ್ ಹೋದಾಗ, ಒಬ್ಬ ಇವನ ಪೃಷ್ಠಕ್ಕೆ ಕೋಲಿನಿಂದ ನಾಲ್ಕು ಸಲ ಹೊಡೆಯುತ್ತಾನೆ. ಡೇವ್ ಆ ಕೋಲನ್ನು ಕಿತ್ತುಕೊಂಡು ನೋಡಿದಾಗ ಹೊಡೆದ ಆಸಾಮಿ ಒಬ್ಬ ಕುರುಡ! ಈ ಗಲಾಟೆಯಲ್ಲಿ ಆ ಹೋಟೆಲಿನ ಒಬ್ಬ ಪರಿಚಾರಿಕೆಯ ಮೂಗಿಗೆ ಡೇವ್-ನಿಂದ ಅಚಾನಕ್ ಘಾಸಿ.
ಪುನಃ ಡೇವ್-ನ ಬಂಧನ ಮತ್ತು ವಿಚಾರಣೆ. ಈ ಎಲ್ಲ ಅಪರಾಧಗಳಿಗಾಗಿ ಡೇವ್ ಜೈಲು ಸೇರಬೇಕಾಗಿತ್ತು. ಆದರೆ, ಡಾ. ಬಡ್ಡಿ ನ್ಯಾಯಾಧೀಶರ ಜೊತೆ ಮಾತನಾಡಿ, ವಿನಂತಿಸಿದ್ದರಿಂದಾಗಿ ಅದರ ಬದಲಾಗಿ ಡೇವ್-ಗೆ “ಅಡ್ವಾನ್ಸ್-ಡ್ ಆಂಗರ್ ಮ್ಯಾನೇಜ್-ಮೆಂಟ್” ಕೋರ್ಸ್ ಹಾಜರಾಗಬೇಕೆಂಬ ಶಿಕ್ಷೆ ಆಗುತ್ತದೆ. ಅದರ ಅನುಸಾರ, ದಿನದ 24 ಗಂಟೆಗಳೂ (ಡೇವ್ ಕಚೇರಿಗೆ ಹೋಗಿ-ಬರುವಾಗ ಮತ್ತು ಅಲ್ಲಿ ಕೆಲಸ ಮಾಡುವಾಗ ಸಹಿತ) ಡಾ. ಬಡ್ಡಿ ಅವನೊಂದಿಗೆ ಇರಬೇಕಾಗುತ್ತದೆ.
ಈ ನಡುವೆ, ಕಚೇರಿಯ ಅಹಂಕಾರಿ ಸಹೋದ್ಯೋಗಿಯು ಲಿಂಡಾ ಜೊತೆಗೆ ತಿರುಗಾಡುತ್ತಿದ್ದಾನೆ ಎಂದು ತಿಳಿದ ಡೇವ್-ಗೆ ತಲೆ ಚಿಟ್ಟು ಹಿಡಿಯುತ್ತದೆ. ಅನಂತರ, ಆ ಕೋರ್ಸಿನ ನಿರ್ದೇಶಕ ಡಾ. ಬಡ್ಡಿ ತಾನು ಹೇಳಿದಂತೆ ಕೇಳಲೇ ಬೇಕೆಂದು ಡೇವ್-ನನ್ನು ಆಗ್ರಹಿಸುತ್ತಾನೆ. ಒಮ್ಮೆ ಡೇವ್ ಕಾರು ಚಲಾಯಿಸುವಾಗ, ರಸ್ತೆ ಮಧ್ಯ ಕಾರು ನಿಲ್ಲಿಸಿ, ಹಾಡು ಹಾಡಿಸುತ್ತಾನೆ. ಅದಾದ ನಂತರ ಒಬ್ಬಳು ಅನೈತಿಕ ನಡತೆಯವಳ ಬಳಿಗೆ ಡೇವ್-ನನ್ನು ಡಾ. ಬಡ್ಡಿ ಕಳಿಸುತ್ತಾನೆ. ಅವಳೊಂದಿಗೆ ಯಾವುದೇ ಅನಾಹುತ ಮಾಡಿಕೊಳ್ಳದೆ ಡೇವ್ ಹಿಂತಿರುಗುತ್ತಾನೆ.
ಅನಂತರ ಡಾ. ಬಡ್ಡಿ ಜೊತೆ ಇನ್ನೊಂದು ಹೋಟೆಲಿಗೆ ಡೇವ್ ಹೋಗುತ್ತಾನೆ. ಅಲ್ಲಿಗೆ ಕೆಂಪು ಫ್ರಾಕ್ ಧರಿಸಿದ ಚೆಲುವೆಯೊಬ್ಬಳು ಬರುತ್ತಾಳೆ. ಅವಳ ಬಳಿ ಹೋಗಿ ಪ್ರೀತಿಯ ನಿವೇದನೆ ಮಾಡಬೇಕೆಂದು ಕೋರ್ಸಿನ ನಿರ್ದೇಶಕ ಡೇವ್ ಅನ್ನು ಕಳಿಸುತ್ತಾನೆ. ಡೇವ್ ಹೋಗಿ ಹಾಗೆಯೇ ಮಾಡಿದಾಗ ಅವಳು ನಿರಾಕರಿಸುತ್ತಾಳೆ. ಪುನಃ ಹೋಗಿ ಅವಳಲ್ಲಿ ಹೀಗೆ ನಿವೇದಿಸು ಎಂದು ಆದೇಶಿಸುತ್ತಾನೆ ನಿರ್ದೇಶಕ: “ನನ್ನನ್ನು ಕ್ಷಮಿಸು. ನನ್ನ ಪ್ರೀತಿಯನ್ನು ನಿನ್ನಲ್ಲಿ ಸರಿಯಾಗಿ ಹೇಳಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ.” ಡೇವ್ ಆಕೆಯ ಬಳಿ ಹೋಗಿ ಅದನ್ನೇ ಹೇಳುತ್ತಾನೆ. ಈಗ ಅವಳು ಅವನನ್ನು ತನ್ನ ಮನೆಗೆ ಕರೆದೊಯ್ಯುತ್ತಾಳೆ. ಮನೆಯಲ್ಲಿ ಡೇವ್ ಜೊತೆ ಲಲ್ಲೆಯಾಡಲು ಅವಳು ಮುಂದಾದಾಗ, ತನಗೊಬ್ಬ ಪ್ರೇಯಸಿ ಇದ್ದಾಳೆಂದು ತಿಳಿಸುತ್ತಾನೆ ಡೇವ್. ಅವಳು ಕಿರಿಚಾಡಿ ಡೇವ್-ನನ್ನು ಮನೆಯಿಂದ ಹೊರಕ್ಕೆ ದಬ್ಬುತ್ತಾಳೆ. ನಂತರ, ಇದೆಲ್ಲ ಒಂದು ಪ್ರಹಸನ ಎಂದು ಡಾ. ಬಡ್ಡಿ ಡೇವ್-ಗೆ ತಿಳಿಸುತ್ತಾನೆ.
ಈ ನಡುವೆ ಈಗ ಬೌದ್ಧ ಭಿಕ್ಷು ಆಗಿರುವ ಪ್ರಾಥಮಿಕ ಶಾಲಾ ಸಹಪಾಠಿ ಆರ್ನಿಯ ಜೊತೆ ಡೇವ್-ನ ಭೇಟಿ ಏರ್ಪಡಿಸುತ್ತಾನೆ ಡಾ. ಬಡ್ಡಿ. ಅವನು ಡೇವ್-ನ ಕ್ಷಮಾಪಣೆ ಕೇಳುತ್ತಾನೆ (25 ವರುಷಗಳ ಹಿಂದಿನ ತನ್ನ ದುರ್ನಡತೆಗಾಗಿ). ಆದರೆ ಡೇವ್ ಅವನನ್ನು ಕೆರಳಿಸಿ, ಅವನೊಂದಿಗೆ ವಿನಾ ಕಾರಣ ಜಗಳವಾಡಿ ಅವನನ್ನ ಅವಮಾನಿಸುತ್ತಾನೆ. ಇದರಿಂದಾಗಿ, ತನಗಾದ ಅವಮಾನದ ಸೇಡು ತೀರಿಸಿಕೊಂಡ ತೃಪ್ತಿ ಅನುಭವಿಸುತ್ತಾನೆ. ಇದು, ಡೇವ್-ನ ಆತ್ಮವಿಶ್ವಾಸ ಹೆಚ್ಚಿಸಲಿಕ್ಕಾಗಿ ಡಾ. ಬಡ್ಡಿ ಮಾಡಿದ ಇನ್ನೊಂದು ಕರಾಮತ್ತು.
ಆಗೊಮ್ಮೆ ಅಕಸ್ಮಾತ್ತಾಗಿ ಡೇವ್-ಗೆ ಲಿಂಡಾ ಸಿಗುತ್ತಾಳೆ. ಆದರೆ ಡೇವ್-ಗೆ “ಐ ಲವ್ ಯೂ ಲಿಂಡಾ” ಎಂದು ಹೇಳಲು ಸಾಧ್ಯವಾಗಲೇ ಇಲ್ಲ.
ಅನಂತರ ಹೋಟೆಲಿನಲ್ಲೊಮ್ಮೆ ಕೋರ್ಸಿನ ನಿರ್ದೇಶಕ ಡಾ. ಬಡ್ಡಿ ಜೊತೆ ಲಿಂಡಾ ಇದ್ದಾಗ ಡೇವ್-ನಿಗೆ ಮುಖಾಮುಖಿ. ಈಗ ಡೇವ್ ರೊಚ್ಚಿಗೆದ್ದು ನಿರ್ದೇಶಕನಿಗೆ ಚೆನ್ನಾಗಿ ಹೊಡೆಯುತ್ತಾನೆ. ಪುನಃ ಡೇವ್-ನ ಬಂಧನ ಮತ್ತು ವಿಚಾರಣೆ. ಅವನ ವಿರುದ್ಧ ನಿರ್ದೇಶಕನ ಕತ್ತು ಮುರಿದ ಆಪಾದನೆ. ಡೇವ್-ಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ! ಇದೇ ಸಮಯದಲ್ಲಿ ಅಹಂಕಾರಿ ಸಹೋದ್ಯೋಗಿಗೆ ಮೇಲಧಿಕಾರಿ ಫ್ರಾಂಕ್ ಭಡ್ತಿ ನೀಡಿದ್ದಾನೆಂದು ತಿಳಿದ ಡೇವ್-ನ ತಲೆಕೆಟ್ಟು ಹೋಗುತ್ತದೆ. ಕಚೇರಿಯಲ್ಲಿ ದಾಂಧಲೆ ಎಬ್ಬಿಸುತ್ತಾನೆ.
ಬಳಿಕ ಡಾ. ಬಡ್ಡಿ ಕಾರಿನಲ್ಲಿ ಲಿಂಡಾ ಜೊತೆ ಬೇಸ್-ಬಾಲ್ ಸ್ಪರ್ಧೆ ನೋಡಲು ಹೋಗಿದ್ದಾನೆಂದು ಡೇವ್-ಗೆ ತಿಳಿಯುತ್ತದೆ. ಡೇವ್ ರೋಷದಿಂದ ಇನ್ನೊಂದು ಕಾರಿನಲ್ಲಿ ಅವರನ್ನು ಹಿಂಬಾಲಿಸುತ್ತಾನೆ. ಅದೇ ಆಟದ ಮೈದಾನಕ್ಕೆ ನುಗ್ಗಿದ ಡೇವ್-ನನ್ನು ಸೆಕ್ಯುರಿಟಿ ಗಾರ್ಡ್ ಬಂಧಿಸುತ್ತಾರೆ. ಆದರೆ, ನ್ಯೂಯಾರ್ಕಿನ ಮೇಯರ್ ರೂಡಿ ಗಿಯುಲಿಯಾನಿ ಅವನಿಗೆ ಮಾತನಾಡಲು ಅನುಮತಿ ನೀಡುತ್ತಾರೆ.
ಡೇವ್ ಮೈಕ್ ಹಿಡಿದು “ಲಿಂಡಾ, ಲಿಂಡಾ” ಎಂದು ಕಿರಿಚುತ್ತಾನೆ. ಕೊನೆಗೂ ಮೈಕಿನಲ್ಲಿ ಡೇವ್ ಘೋಷಿಸುತ್ತಾನೆ, “ಲಿಂಡಾ, ಐ ಲವ್ ಯೂ. ನಿನ್ನನ್ನು ನಾನು ಮದುವೆ ಆಗ ಬೇಕಾಗಿದೆ. ನಿನ್ನಿಂದ ನಾನು ಮಕ್ಕಳನ್ನು ಪಡೆಯಬೇಕಾಗಿದೆ. ಆ ಮಕ್ಕಳಿಗೆ ನಿನ್ನ ಕಣ್ಣುಗಳಂತಹ ಕಣ್ಣುಗಳು, ನಿನ್ನ ತುಟಿಗಳಂತಹ ತುಟಿಗಳು ಮತ್ತು ನನ್ನ ಹೆಸರು ಇರಬೇಕೆಂಬುದು ನನ್ನ ದೊಡ್ಡ ಆಶೆ.”
ಆಗ ಲಿಂಡಾ ಎದ್ದು ನಿಂತು ಹೇಳುತ್ತಾಳೆ, “ಡೇವ್, ನನ್ನದೊಂದು ಷರತ್ತು. ನೀನು ನನ್ನ ಹತ್ತಿರ ಬಂದು ಎಲ್ಲರೆದುರು ನನಗೆ ಮುತ್ತು ಕೊಡಬೇಕು.” ತಕ್ಷಣವೇ ಡೇವ್ ಧಾವಿಸಿ ಬಂದು, ಆ ಆಟದ ಸ್ಟೇಡಿಯಮಿನಲ್ಲಿ ನೆರೆದಿದ್ದ ಸಾವಿರಾರು ಜನರೆದುರು ಲಿಂಡಾಳನ್ನು ಅಪ್ಪಿಕೊಂಡು, ಅವಳಿಗೆ ಭಾವಾವೇಶದಿಂದ ಮುತ್ತು ಕೊಡುತ್ತಾನೆ.
ಆಗ ಡೇವ್-ನ ಕಿವಿಯಲ್ಲಿ ಲಿಂಡಾ ಪಿಸುಗುಡುತ್ತಾಳೆ, “ಇದೆಲ್ಲವೂ ನನ್ನದೇ ಪ್ಲಾನ್. ನಿನಗಾಗಿ ಮತ್ತು ನಮಗಾಗಿ.” ಕೋಪ ನಿರ್ವಹಣೆ ಬಗ್ಗೆ ಡಾ. ಬಡ್ಡಿ ಬರೆದ ಪುಸ್ತಕ ಓದಿದ ನಂತರ ತನಗೆ ಈ ಉಪಾಯ ಹೊಳೆಯಿತು ಎಂದು ತಿಳಿಸುತ್ತಾಳೆ. “ಕೋಪ ನಿರ್ವಹಣೆ ಕೋರ್ಸಿ”ನ ಅವಧಿಯಲ್ಲಿ ಡೇವ್ ಅನುಭವಿಸಿದ ಘಟನಾವಳಿಗಳಲ್ಲಿ ಭಾಗವಹಿಸಿದ ಎಲ್ಲರೂ ಡಾ. ಬಡ್ಡಿ ಅವರ ಯೋಜನೆಯಂತೆ ಡೇವ್-ನ ಆತ್ಮವಿಶ್ವಾಸ ಹೆಚ್ಚಿಸಲಿಕ್ಕಾಗಿ “ನಟನೆ” ಮಾಡಿದ್ದರು ಎಂಬ ಗುಟ್ಟು ರಟ್ಟು ಮಾಡುತ್ತಾಳೆ.
(15 ವರುಷಗಳ ಹಿಂದೆ, ಬ್ಯಾಂಕಿನ ಸಿಬ್ಬಂದಿಗೆ ತರಬೇತಿ ನೀಡಲಿಕ್ಕಾಗಿ ಬೆಂಗಳೂರಿಗೆ ಹೋಗಿದ್ದಾಗ 05-04-2011ರ ಮಂಗಳವಾರ ನೋಡಿದ್ದ ಸಿನಿಮಾದ ನೋಟ್ಸಿನ ಆಧಾರದಿಂದ ಬರೆದ ಕಥಾ ಸಾರಾಂಶ.)
ಸಿನಿಮಾ ಕತೆ15 -ಕೋಪ ನಿರ್ವಹಣೆ ಕೋರ್ಸಿನ ಗುಟ್ಟು
ಅಡ್ಡೂರು ಕೃಷ್ಣ ರಾವ್
ಏಪ್ರಿಲ್ ೧೭, ೨೦೨೬
೬ ವೀಕ್ಷಣೆಗಳು
ಪ್ರಕಟಿಸಿದ: ಏಪ್ರಿಲ್ ೧೭, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬