ಭಕ್ತಿ ಮತ್ತು ಧ್ಯಾನ (ಭಾಗ 2)
ಬರಹಗಾರರ ಬಳಗ
ಡಿಸೆಂಬರ್ ೩೦, ೨೦೨೫
೮ ವೀಕ್ಷಣೆಗಳು
3. ಧ್ಯಾನಯೋಗ ; ಮನಸ್ಸು ಚಂಚಲ ಇದ್ದರೆ ಸಾಧನೆ ಮಾಡಲು ಆಗುವುದಿಲ್ಲ. ಯಾವ ಸಿದ್ದಿ ಮಾಡಲು ಆಗುವುದಿಲ್ಲ. ಜೀವನದಲ್ಲಿ ಅಪಜಯ ಯಾವುದು ಅಂದರೆ ಮನಸ್ಸಿನ ಚಂಚಲತೆ. ಮನಸ್ಸು ಏಕಾಗ್ರವಾಗಬೇಕು. ಮನಸ್ಸು ತನ್ಮಯಗೊಳ್ಳಬೇಕು. ಇದಕ್ಕೆ ದ್ಯಾನಯೋಗ ಅನ್ನುವರು. ಮನಸ್ಸು ಶಾಂತವಾಗಿರಬೇಕಲ್ಲ. ಮನಸ್ಸು ನಾವಿರುವಲ್ಲೇ ಇರಬೇಕು. ಬಹಳಷ್ಟು ಹೊಯ್ದಾಡಿತ್ತು ಅಂದರೆ, ಅದು ಏನನ್ನು ಗ್ರಹಿಸುವುದಿಲ್ಲ. A Rolling Stone gather no moss. ಒಂದು ಕಲ್ಲು ಸದಾ ಉರುಳುತ್ತಿದ್ದರೆ ಅದರ ಮೇಲೆ ಮಣ್ಣು ಕೂರುವುದಿಲ್ಲ. ಮಣ್ಣು ಸೇರಿಸಬೇಕಿತ್ತು ಅಂದರೆ ಅದು ತಣ್ಣಗೆ ಕುಳಿತಿರಬೇಕು. ನಮ್ಮ ಮನಸ್ಸು ಸದಾ ಹೊಯ್ದಾಡುತ್ತಿದ್ದರೆ ಪ್ರತಿಫಲಿಸಲು ಆಗುವುದಿಲ್ಲ. ಆದ್ದರಿಂದ ತನ್ಮಯತೆ ಇರಬೇಕು. ಮನಸ್ಸು ಚಂಚಲ ಆಗಬಾರದು.
ಒಂದು ಕಥೆ... ಒಂದು ಹೊಳೆ. ಅದರ ದಂಡೆಯಲ್ಲಿ ಮಂಗ ಕುಳಿತಿತ್ತು. ನೀರಿನಲ್ಲಿ ಅನೇಕ ವಸ್ತುಗಳು ತೇಲಿ ತೇಲಿ ಹೋಗುತ್ತಿತ್ತು. ಅಕಸ್ಮಾತ್ ಒಂದು ಬುಟ್ಟಿ ಬಂದಿತ್ತು. ಮಂಗ ಸುಮ್ಮನೆ ಕೂರಬೇಕಲ್ಲ, ಸುಮ್ಮನೆ ಕೂರಲಿಲ್ಲ. ಒಳ ಹೋಗಿ ಹಿಡಿದುಕೊಂಡು ಬಂದಿತು. ಬಂದು ಈ ಕಡೆ ಕುಳಿತು ವಿಚಾರ ಮಾಡಿತು. ಇದರ ಮೇಲೆ ಕುಳಿತು ಆಚೆ ಬದಿ ಏಕೆ ಹೋಗಬಾರದು?, ಮಂಗ ಅಂದರೆ ಮಂಗ. ಚೇಷ್ಟ ಬುದ್ಧಿ. ಬುಟ್ಟಿಯಲ್ಲಿ ಕುಳಿತು ನೀರಿನಲ್ಲಿ ತೇಲುತ್ತಾ ಹೊರಟಿತು. ಸಾವಕಾಶವಾಗಿ ಕೈಚಲಿಸುತ್ತಿತ್ತು. ಮುಂದೆ ಹೋಗುತ್ತಿತ್ತು. ಬಹಳ ಆನಂದ ಅನಿಸುತ್ತಿತ್ತು. ಹಾಗೆ ಮಧ್ಯಕ್ಕೆ ಬಂದಿತು . ಆಗ ಇನ್ನೊಂದು ಬುಟ್ಟಿ ಬಂದಿತು. ಅದನ್ನು ಹಿಡಿದುಕೊಂಡಿತು. ಹಿಡಿದುಕೊಂಡು ವಿಚಾರ ಮಾಡಿತು. ಇದರಲ್ಲಿ ಕೂರಲೊ, ಅದರಲ್ಲಿ ಕೂರಲೊ, ಅಂತ. ಇದರಲ್ಲಿ ಕುಳಿತರೆ ಚೆಂದ ಇರುತ್ತದೆಯೋ?. ಅದರಲ್ಲಿ ಕುಳಿತರೆ ಚೆಂದ ಇರುತ್ತದೆಯೊ ಯೋಚನೆ ಮಾಡುತ್ತಿತ್ತು. ಆಗ ಜಿಗಿದು ಇನ್ನೊಂದು ಬುಟ್ಟಿಯಲ್ಲಿ ಕುಳಿತುಕೊಂಡಿತು. ಇನ್ನೊಂದನ್ನು ಹಿಡಿದುಕೊಂಡಿತ್ತು .ಸ್ವಲ್ಪ ದೂರ ಹೋದಮೇಲೆ ಬೇರೆ ತರಹ ವಿಚಾರ ಮಾಡಿತು. ಎರಡು ಬುಟ್ಟಿಯಲ್ಲೂ ಒಂದೊಂದು ಕಾಲು ಇಟ್ಟರೆ ಎಷ್ಟು ಚೆನ್ನಾಗಿ ಇರುತ್ತೆ ಅಂತ ಯೋಚಿಸಿ ಹಾಗೆ ಎರಡು ಬುಟ್ಟಿಯಲ್ಲಿ ಒಂದೊಂದು ಕಾಲು ಹಾಕಿ ನಿಂತಿತು. ಬಹಳ ಆನಂದವಾಗಿತ್ತು. ಅಷ್ಟರಲ್ಲಿ ಪ್ರವಾಹ ಬಂದು ಎರಡು ಬುಟ್ಟಿಗಳು ವಿರುದ್ಧ ದಿಕ್ಕಿನಲ್ಲಿ ಹೋದವು. ಮಂಗ ನೀರಿನಲ್ಲಿ ಬಿದ್ದಿತ್ತು, ಸತ್ತಿತ್ತು. ಮಂಗಕ್ಕೆ ನಿಶ್ಚಲತೆ ಇರಲಿಲ್ಲ. ಬೇಕು ಮನುಷ್ಯನಿಗೆ ನಿಶ್ಚಲತೆ ಬೇಕು. ಒಂದು ದಾರಿಯಾಗಿ ಹೊರಟರೆ ನಿಶ್ಚಿತವಾಗಿ ಗುರು ತಲುಪುತ್ತೇವೆ. ನಿಶ್ಚಲ ಅಂದರೆ ಮನಸ್ಸು ಸ್ಥಿರತೆ ಇರಬೇಕು.
ಕೇಳುವುದರಲ್ಲಿ ಒಂದಾಗಿ ಇರುವುದಕ್ಕೆ ತನ್ಮಯತೆ ಎನ್ನುತ್ತೇವೆ. ಊಟ ರುಚಿ ಆಗಬೇಕು. ಅದರ ರುಚಿ ನೋಡಬೇಕಾದರೆ ತನ್ಮಯತೆ ಇಲ್ಲದೆ ಹೋದರೆ ಅನುಭವಿಸಲು ಆಗುವುದಿಲ್ಲ. ಊಟ ಮಾಡುವಾಗ ಊಟದಲ್ಲಿ ತನ್ಮಯತೆ ಇರಬೇಕು. ಇಲ್ಲದಿದ್ದರೆ ಊಟದ ರುಚಿ ಗೊತ್ತಾಗುವುದಿಲ್ಲ. ಊಟ ಅಂದರೆ ಸುಮ್ಮನೆ ಹಾಕುವುದಲ್ಲ. ತುತ್ತು ತುತ್ತು ಅನುಭವಿಸುವುದಿರುತ್ತದೆ. ಒಂದೊಂದು ತುತ್ತಿನಲ್ಲಿ ಅಷ್ಟೊಂದು ಸಂತೋಷ ಇರುತ್ತದೆ. ಅನುಭವಿಸಬೇಕು. ಅನುಭವಿಸಬೇಕು ಅದು ಆಗಬೇಕಾದರೆ ತನ್ಮಯತೆ ಬೇಕು. ಅದರ ಮಗ್ನತೆ ಬಹಳ ಮಹತ್ವದ್ದು. ಹಾಡು ಕೇಳುತ್ತಾ ಇದ್ದರೆ ಹಾಡಿನಲ್ಲಿ ಮಗ್ನತೆ. ಚಿತ್ರ ಬರೆಯುತ್ತಿದ್ದರೆ ಚಿತ್ರದಲ್ಲಿ ಮಗ್ನತೆ. ಅಡುಗೆ ಮಾಡುತ್ತಾ ಇದ್ದರೆ ಅಡುಗೆಯಲ್ಲಿ ಮಗ್ನತೆ. ಕೆಲಸ ಮಾಡುತ್ತಾ ಇದ್ದರೆ, ಕೆಲಸದಲ್ಲಿ ಮಗ್ನತೆ ಇತ್ತು ಅಂದರೆ ಸಂತೋಷ ಕೊಡುತ್ತದೆ. ಜ್ಞಾನ ಸಿದ್ದಿಯಾಗುತ್ತದೆ. ಅಲ್ಲವೇ?
-ಎಂ.ಪಿ. ಜ್ಞಾನೇಶ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಡಿಸೆಂಬರ್ ೩೦, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬