ಭಾರತದ ಇತಿಹಾಸವನ್ನು ರೇಷ್ಮೆಯ ಶಾಲು ಸುತ್ತಿದ ಚಪ್ಪಲಿಯಲ್ಲಿ ಪಟ್ ಪಟ್  ಎಂದು  ಬಾರಿಸುತ್ತಾ ಜನರನ್ನು ಹಿತಾನುಭವದ ಭ್ರಮೆಯಲ್ಲಿ ತೇಲುಸುತ್ತಿರುವ ಸಿನಿಮಾ, ಧಾರವಾಹಿ ಎಂಬ ಬಣ್ಣದ ಮನರಂಜನಾ ಉದ್ಯಮ, ರಾಜಕಾರಣಿಗಳೆಂಬ ಅತ್ಯಂತ ಸ್ವಾರ್ಥಿಗಳು ಮತ್ತು ಸೋಷಿಯಲ್ ಮೀಡಿಯಾಗಳ ಅರೆಬೆಂದ ಬೇಜವಾಬ್ದಾರಿ ಹಾಗು ಉಡಾಫೆ ಮನೋಭಾವದ ಒಂದು ವರ್ಗ. ಹೌದು, ಅಶೋಕ, ಚಾಣಕ್ಯ, ಅಕ್ಬರ್, ಮಂಗಲ್ ಪಾಂಡೆ, ಸಂಗೊಳ್ಳಿ ರಾಯಣ್ಣ, ಟಿಪ್ಪುಸುಲ್ತಾನ್, ಪದ್ಮಾವತಿ ಇನ್ನೂ ಮುಂತಾದ ಐತಿಹಾಸಿಕ ವ್ಯಕ್ತಿಗಳನ್ನು ಮನರಂಜನೆಗಾಗಿ - ರಾಜಕೀಯಕ್ಕಾಗಿ - ತಮ್ಮ ವಾದದ ಸಮರ್ಥನೆಗಾಗಿ ಉಪಯೋಗಿಸಿಕೊಂಡರೆ ನೈಜ ಇತಿಹಾಸದ ಗತಿಯೇನು? ವಿಶ್ವದಲ್ಲೇ ಅತ್ಯಂತ ಪ್ರಾಚೀನ ವಿಭಿನ್ನ ವೈವಿಧ್ಯಮಯ ನಾಗರಿಕತೆಯ ಇತಿಹಾಸ ನಮ್ಮದು. ಇನ್ನೂ ಅನೇಕ ಆಳ ಅಧ್ಯಯನದ ಸಂಶೋಧಕರಿಗೆ ಸವಾಲಾಗಿ ಬಗೆದಷ್ಟೂ ಹೊಸ ಹೊಸ ಅರ್ಥಗಳನ್ನು ಹೊಮ್ಮಿಸುತ್ತಿರುವ ಸಾಮಾನ್ಯರ ತಿಳುವಳಿಕೆಗೆ ನಿಲುಕಲಾರದಷ್ಟು ಎತ್ತರದ ಇತಿಹಾಸ ಸಿಂಧೂ ನದಿ ತೀರದ ಭಾರತೀಯ ನಾಗರಿಕತೆ. ಇತಿಹಾಸ ಗತಿಸಿದ ಘಟನೆಗಳ ದಾಖಲಾತಿ ಎಂದು ಮೇಲ್ನೋಟಕ್ಕೆ ಅನಿಸಿದರೂ ಅದೊಂದು ಆ ಕಾಲದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮುಂತಾದ ಎಲ್ಲಾ ಕ್ಷೇತ್ರಗಳ ಒಟ್ಟು ಜೀವನ ಕ್ರಮದ ಮೊತ್ತ ಮತ್ತು ಇತಿಹಾಸಕಾರನ ದೃಷ್ಟಿಕೋನ ಸಹ ಮುಖ್ಯವಾಗಿರುತ್ತದೆ.  ಅಂಕಿ ಸಂಖ್ಯೆಗಳು ಮತ್ತು ಕಾಲ ನಿರ್ಣಯ ಹೊರತುಪಡಿಸಿದರೆ ಇತರ ವಿಷಯಗಳಲ್ಲಿ ವಿಭಿನ್ನ ವಾದ ಮಂಡನೆಗೆ ಸದಾ ಅವಕಾಶವಿರುತ್ತದೆ. ಇದನ್ನೆಲ್ಲಾ ಮೀರಿ ಸಮಷ್ಟಿ ಪ್ರಜ್ಞೆಯಿಂದ ಮತ್ತು ಮುಕ್ತ ಮನೋಭಾವದಿಂದ ಆಳ ಮತ್ತು ದೀರ್ಘ ಅಧ್ಯಯನದಿಂದ ಮಾತ್ರ ನೀವು ಇತಿಹಾಸದ ಸತ್ಯದ ಹತ್ತಿರಕ್ಕೆ ಹೋಗಬಹುದು. ಇಲ್ಲಿ ಮನರಂಜನೆ - ರಾಜಕೀಯ - ‌ಸಂಕುಚಿತ ಮನೋಭಾವಕ್ಕೆ ಜಾಗವೇ ಇಲ್ಲ. ಅಂತಹುದರಲ್ಲಿ ಓಟುಗಳೇ ಮುಖ್ಯವಾಗಿರುವ - ಮನರಂಜನೆಯ ಮುಖಾಂತರ ಹಣ ಮಾಡುವ ಉದ್ದೇಶದ ಈ ರಾಜಕೀಯ ಮತ್ತು ಸಿನಿಮಾ ಮಾಧ್ಯಮದ ಅತ್ಯಂತ Busy ಇರುವ ಮಂದಿಯ ಅರಿವಿಗೆ ಇತಿಹಾಸ ನಿಲುಕುವುದೇ ? ಇತಿಹಾಸದ ಘಟನೆಗಳಿಂದ ಸ್ಪೂರ್ತಿ ಹೊಂದಿ ಅದಕ್ಕೆ ಕಥೆಯ ರೂಪ ನೀಡಿ ಕ್ರಿಯಾತ್ಮಕವಾಗಿ ಮನರಂಜಿಸಿದರೆ ಯಾವುದೇ ಅಭ್ಯಂತರವಿಲ್ಲ. ಅದರ ಅರ್ಥ ಸಾಮಾನ್ಯ ಜನ ಅದನ್ನು ಇತಿಹಾಸ ಎಂದು ಭ್ರಮಿಸಬಾರದು ಮತ್ತು ಅದಕ್ಕೆ ವಿರೋಧವನ್ನೂ ವ್ಯಕ್ತಪಡಿಸಬಾರದು. ಏಕೆಂದರೆ ಅದು ಕಥೆಯೆ ಹೊರತು ಇತಿಹಾಸವೂ ಅಲ್ಲ - ವಾಸ್ತವವೂ ಅಲ್ಲ. ಸದ್ಯಕ್ಕೆ ಅಷ್ಟೊಂದು ಪ್ರಬುದ್ದತೆ ನಮ್ಮ ಜನರಲ್ಲಿ ಇನ್ನೂ ಬಂದಿಲ್ಲವಾದ್ದರಿಂದ ಎಂದಿನಂತೆ ಗಲಭೆ, ಗೊಂದಲ, ರಾಜಕೀಯ ಸೇರಿ ವ್ಯವಸ್ಥೆ ಹದಗೆಡುತ್ತಿದೆ. ದೇವರೆಂಬ ಕಲ್ಪನೆಗೆ ಹೇಗೆ ಮನುಷ್ಯ ರೂಪದ ಹಲವಾರು ಆಕಾರಗಳನ್ನು ಗುಣಗಳನ್ನು ನೀಡಿ ಅವನನ್ನು ಮಿತಿಗೊಳಿಸಿದೆವೋ ಹಾಗೆ ಇತಿಹಾಸಕ್ಕೂ ಅದೇ ರೀತಿಯ ಕಲ್ಪಿತ ಭಾವನೆಗಳನ್ನು ತುಂಬಿ ಅದನ್ನೂ ದಾರಿತಪ್ಪಿಸುತ್ತಿದ್ದೇವೆ. ಇದಕ್ಕೆಲ್ಲಾ ಪರಿಹಾರವೆಂದರೆ ನಮ್ಮ ಯೋಚನಾ ಕ್ರಮಗಳನ್ನು ವಿಶಾಲ ಗೊಳಿಸಿಕೊಂಡು ಬುದ್ದಿ ಮಟ್ಟವನ್ನು ಮೇಲ್ದರ್ಜೆಗೆ ಏರಿಸಿಕೊಳ್ಳಬೇಕು. ಆಗ ಇತಿಹಾಸ ಯಾವುದು, ಕಲ್ಪನೆ ಯಾವುದು, ಭ್ರಮೆ ಯಾವುದು, ಸುಳ್ಳು ಯಾವುದು, ಮೋಸ ಯಾವುದು ಎಂಬ ಅರಿವು ಮೂಡುತ್ತದೆ. ನಿಜ ಜೀವನದಲ್ಲಿ ಅನೈತಿಕ ನಡವಳಿಕೆಯನ್ನು, ಸಂಬಂಧಗಳನ್ನು ಟೀಕಿಸುವ ಇದೇ ಜನ ಸಿನಿಮಾ ಧಾರವಾಹಿಗಳ ಆ ರೀತಿಯ ದೃಶ್ಯಗಳನ್ನು ಶಿಳ್ಳೆಹೊಡೆದು ಪ್ರೋತ್ಸಾಹಿಸುತ್ತಾರೆ. ಟಿವಿ ಧಾರಾವಾಹಿಗಳಲ್ಲಿ ಅತ್ತೆ ಸೊಸೆಗೆ ತೊಂದರೆ ಕೊಡುವುದನ್ನು ನೋಡಿ ಕಣ್ಣೀರಾಗುವಿರಿ, ಆದರೆ ನಿಮ್ಮ ಮನೆಯ ಅದೇ ವಾತಾವರಣವನ್ನು ಮರೆಯುವಿರಿ. ಸಿನಿಮಾದಲ್ಲಿ ನಾಯಕ ಭ್ರಷ್ಟ ರಾಜಕಾರಣಿಗಳನ್ನು ಚಚ್ಚುವುದು ನೋಡಿ ಸಿಳ್ಳೆ ಹೊಡೆಯುವಿರಿ, ಆದರೆ ನಿಜ ಜೀವನದಲ್ಲಿ ಅದೇ ರಾಜಕಾರಣಿಗಳ ಹಿಂಬಾಲಕರಾಗಿರುವಿರಿ. ಕಥೆಗಳಲ್ಲಿ ಇಡೀ ಬದುಕನ್ನೇ ಇತರರಿಗಾಗಿ ತ್ಯಾಗ ಮಾಡುವ ಪಾತ್ರಗಳಲ್ಲಿ ನಿಮ್ಮನ್ನೇ ಕಲ್ಪಿಸಿಕೊಳ್ಳುತ್ತೀರಿ, ಆದರೆ ವಾಸ್ತವದಲ್ಲಿ ಅದೇ ಎಲ್ಲವೂ ನನಗೆ ಇರಲಿ ಎಂದು ದುರಾಸೆ ಪಡುವಿರಿ. ಪತ್ರಿಕೆ ಟಿವಿಗಳಲ್ಲಿ ವೃದ್ದ ತಂದೆ ತಾಯಿಗಳನ್ನು ಅನಾಥಾಶ್ರಮಕ್ಕೆ ಸೇರಿಸಿದ ಮಕ್ಕಳ ವಿಷಯ ಕೇಳಿ ಶಾಪ ಹಾಕುವಿರಿ, ಆದರೆ ನಿಮ್ಮ ಅಮ್ಮ ಅಪ್ಪನಿಗಾಗಿ ವೃದ್ದಾಶ್ರಮ ಹುಡುಕುವಿರಿ. ವರದಕ್ಷಿಣೆ ಸಾವುಗಳನ್ನು ನೋಡಿ ಆಕ್ರೋಶ ವ್ಯಕ್ತಪಡಿಸುವಿರಿ, ನಿಮ್ಮ ಮಕ್ಕಳ ಮದುವೆಗೆ ಚಿನ್ನ, ಕಾರು ಮನೆ ಬೇಕೆಂದು ಆಸೆ ಪಡುವಿರಿ. ಬೇರೆ ಶ್ರೀಮಂತ ಸಮಾರಂಭಗಳಲ್ಲಿ ವ್ಯರ್ಥವಾಗುವ ಆಹಾರ ನೋಡಿ ಬೇಸರದಿಂದ ಲೊಚಗುಟ್ಟುವಿರಿ, ನಿಮ್ಮ ಮನೆಯ ಕಾರ್ಯಕ್ರಮಗಳಲ್ಲಿ ಅದನ್ನು ಮರೆಯುವಿರಿ. ಗುರುಹಿರಿಯರ ಅಮೂಲ್ಯ ಹಿತನುಡಿಗಳನ್ನು ಕೇಳಿ ಚಪ್ಪಾಳೆ ಹೊಡೆಯುವಿರಿ, ನಿಜ ಜೀವನದಲ್ಲಿ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವಿರಿ. ಪೋಟೋಗಳಲ್ಲಿ ಸುಂದರ ಪರಿಸರ, ವಾತಾವರಣ ನೋಡಿ ಆನಂದಿಸುವಿರಿ,  ನಿಮ್ಮ ಸುತ್ತ ಮುತ್ತ ಕೆಟ್ಟ ವಾತಾವರಣ ಇಟ್ಟುಕೊಂಡಿರುತ್ತೀರಿ. ಆಂತರ್ಯದಲ್ಲಿ ಸ್ವಾರ್ಥಿಗಳಾಗಿರುವ ನಾವು, ಬಹಿರಂಗವಾಗಿ ತ್ಯಾಗ ಜೀವಿಗಳನ್ನು ಕೊಂಡಾಡುತ್ತೇವೆ. ಪರಿಸರ ನಾಶಮಾಡುವುದು, ಮಳೆ ಬರುವುದಿಲ್ಲ ಎಂದು ಬೊಬ್ಬೆ ಹೊಡೆಯುವುದು. ಕಾಡಿನಲ್ಲಿ ಊರು ನಿರ್ಮಿಸುವುದು, ಕಾಡು ಪ್ರಾಣಿಗಳ ಹಾವಳಿ ಎಂದು ಕೂಗುವುದು. ಕೆರೆ ಜಾಗದಲ್ಲಿ ಮನೆ ಕಟ್ಟುವುದು, ಮಳೆಗಾಲದಲ್ಲಿ ಮನೆಗೆ ನೀರು ನುಗ್ಗುತ್ತದೆ ಎಂದು ದೂರುವುದು. ಕೆರೆಗಳನ್ನು ನುಂಗಿ ಬಿಡುವುದು, ಕುಡಿಯಲು ನೀರಿಲ್ಲ, ಅಂತರ್ಜಲ ಬತ್ತಿದೆ ಎಂದು ಬಾಯಿ ಬಡಿದುಕೊಳ್ಳುವುದು. ವಾಯು ಮಾಲಿನ್ಯ ಮಾಡುವುದು, ಶುದ್ದ ಗಾಳಿ ಇಲ್ಲ ಎಂದು ಕೊರಗುವುದು. ಮಿತಿ ಇಲ್ಲದೆ ಸಿಗರೇಟು, ಎಣ್ಣೆ ಹೊಡೆಯುವುದು, ಆರೋಗ್ಯ ಸರಿಯಿಲ್ಲ ಎನ್ನುವುದು. ಆಹಾರ ಕಲಬೆರಕೆ ಮಾಡುವುದು, ರೋಗಗಳಿಗೆ ಆಹ್ವಾನ ನೀಡುವುದು. ದಿಢೀರ್ ಶ್ರೀಮಂತಿಕೆಗೆ ದುರಾಸೆ ಪಡುವುದು, ಬಿಪಿ, ಶುಗರ್ ಹಾವಳಿಗೆ ತುತ್ತಾಗುವುದು. ಗೊತ್ತು ಗುರಿಯಿಲ್ಲದೆ vehicle ಗಳನ್ನು ರಸ್ತೆಗಿಳಿಸುವುದು, Traffic jam ಎಂದು ಹಲುಬುವುದು. ಸಂಭ್ರಮದಲ್ಲಿ ಮದುವೆ ಮಾಡಿಕೊಳ್ಳುವುದು, ಕೋಪದಲ್ಲಿ ಡೈವೋರ್ಸ್ ಮಾಡಿಕೊಳ್ಳುವುದು. ಹಣ ಪಡೆದು, ಜಾತಿ ನೋಡಿ ಓಟು ಹಾಕುವುದು, ಸರ್ಕಾರ ಸರಿಯಿಲ್ಲ ಎಂದು ಕೊರಗುವುದು. ಈಗಲಾದರೂ  ಎಚ್ಚೆತ್ತುಕೊಳ್ಳೋಣ, ಪರಿಸ್ಥಿತಿ ಕೈ ಮೀರುವ ಮುನ್ನ ಕ್ರಮ ಕ್ಯೆಗೊಳ್ಳೋಣ. ಇದೆಲ್ಲಾ ಖಂಡಿತವಾಗಿ ಅನಿವಾರ್ಯ ಅಥವಾ ಅನಿರೀಕ್ಷಿತವಲ್ಲ. ಮಾನವ ನಿರ್ಮಿತ. ಇದನ್ನೆಲ್ಲಾ ನಿಯಂತ್ರಿಸುವ ಶಕ್ತಿ, ಅಧಿಕಾರ ಇರುವುದು ನಮ್ಮನ್ನಾಳುವ ಸರ್ಕಾರಗಳಿಗೆ ಮಾತ್ರ. ಸರ್ಕಾರದ ಮೇಲೆ ನಮ್ಮ ನಿಯಂತ್ರಣ ಬಲಪಡಿಸೋಣ. ಮನಗಳಲ್ಲಿ ಮನೆಗಳಲ್ಲಿ - ಮತಗಳಲ್ಲಿ ಪರಿವರ್ತನೆ ಮಾಡಿಕೊಳ್ಳೋಣ. ಮಾತಿಗೂ, ಕೃತಿಗೂ ಅಂತರ ಹೆಚ್ಚಾದಾಗ ಈ ಆತ್ಮವಂಚಕತನ ಬೆಳೆಯುತ್ತದೆ. ಇದಕ್ಕೆ ನಾವ್ಯಾರು ಹೊರತಲ್ಲ, ಆದರೆ ಇದು ಅಪಾಯಕಾರಿ. ಇದನ್ನು ನಾವು ಗೆಲ್ಲುವ ನಿಟ್ಟಿನಲ್ಲಿ ಪ್ರಯತ್ನಿಸೋಣ. ನಮ್ಮ ನಡೆಗೂ, ನುಡಿಗೂ ಅಂತರ ಕಡಿಮೆ ಇರಲಿ. ಸಾಧ್ಯವಾದಷ್ಟೂ ಹೇಳುವುದನ್ನು ಮಾಡೋಣ - ಮಾಡುವುದನ್ನು ಹೇಳೋಣ. ನಮ್ಮ ಮಕ್ಕಳೂ ಅದನ್ನೇ ಮುಂದುವರಿಸುತ್ತಾರೆ. ಈ ವಿಷಯದಲ್ಲಿ ಈಗಿನಿಂದಲೇ ಬದಲಾಗೋಣ. -ವಿವೇಕಾನಂದ. ಎಚ್.ಕೆ., ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ