1.ನಗು ಮಗು, ನಗು ಮಗು ಮೊಗವನು ಅರಳಿಸಿ 
ಕಣ್ಣೆವೆ ಮಿಟುಕಿಸಿ ನಗು ಮಗುವೇ 
ಬಗೆಬಗೆ ಬಣ್ಣದ ಚೆಲುವನು ಸೂಸುತ 
ನಗುನಗುತಿರು ನೀ.. ಸಿರಿಮೊಗವೇ.. //ನಗು ಮಗು//  2.ತುಟಿಗಳ ಎಡೆಯಲಿ ಕಿರುನಗೆ ಬೀರುತ 
ಪುಟಿಯುತ ನೆಗೆಯುತ ನಗು ಮಗುವೇ..
ಕಣ್ಣು ತಪ್ಪಿಸುತ ಕೈಸಿಗಡೊಡುವ 
ನಿನ್ನನು ಹಿಡಿಯಲು ನಾ ಬರುವೇ//ನಗು ಮಗು// 3.ತೊದಲಿನ ಮಾತುಗಳೆಡೆಯಲಿ ಆ ನಗು-
ಮುಖದಲಿ ಹೊಳೆಯುವ ಮಿರಮಿರಗೂ..
ನೋಡುತ ಸಂತಸ ತುಂಬುವುದೆಲ್ಲರ 
ಮುಖ ಮೈ ಮನದಾ.. ಒಳಹೊರಗೂ.. //ನಗು ಮಗು// 4.ಬಿದ್ದೇ..ನೆಂದು ನೀ.. ಹೆದರದಿರೂ ಮಗು..
ಓಡದಿರೂ ಮನೆಯೊಳಹೊರಗೂ..
ನಿದ್ದೆಯು ಬರುವುದೇ? ಗದ್ದಲ ಮಾಡದೆ 
ಹೊದ್ದು ಕಣ್ಣನು ಮುಚ್ಚಿ ನೀ ಮಲಗೂ.. //ನಗು ಮಗು// 5.ತಂದೆಯ ಪ್ರೀತಿಯ ಜ್ಯೋತಿಯು ನೀ.. ಮಗು 
ತಾಯಿಯ ಮಮತೆಯ ಕುಡಿ ಸೆರಗೂ..
ಅವರಾಶ್ರಯದಲಿ ಬೆಳೆಯುತಲಿರುತಿಹ 
ನೀನಾಗುವೆ ಬಾ…ಳಿಗೆ ಬೆಳಗೂ.. //ನಗು ಮಗು// 6.ನಗುವೆ ಚಂದವು ನಗುಮೊಗ ಅಂದವೂ..
ಮನೆ ಮನ ತುಂಬುವುದಾನಂದಾ.. 
ಮುಗುಳುನಗೆಯ ಆ ಮಗುವಿನ ನಗೆಮೊಗ 
ಸುಖಸಂತೋಷದ ಅನುಬಂಧಾ.. //ನಗು ಮಗು//      -ಅನಂತ ಭಟ್ ಪೊಳಲಿ