ಅಡ್ಡೂರಿನಲ್ಲಿ ಗುರುಪುರ ಹೊಳೆಯ ದಡದಲ್ಲಿ ನಮ್ಮ ಸ್ವಲ್ಪ ಜಮೀನಿತ್ತು. ಭತ್ತದ ತಳಿಗಳನ್ನು ಬೆಳೆಸಿ ನೋಡಲು, ಪ್ರಚಾರ ಮಾಡಲು ಅದೇ ಸೂಕ್ತ ಸ್ಥಳವಾಗಿತ್ತು. ಒಂದು ತಳಿಯನ್ನು ಬಿತ್ತಿ ಬೆಳೆಸಿ ಒಂದು ಕಳಸೆಗೆ ಒಂಭತ್ತು ಮುಡಿ ಅಕ್ಕಿ ಪಡೆದೆ. ನನ್ನ ದೊಡ್ಡ ಸಾಹಸವದು! ಹಲವಾರು ಜನರು ಮೆಚ್ಚಿದರು. ಸ್ಥಳೀಯ ತಳಿಯಲ್ಲಾದರೆ ಕೇವಲ ಮೂರು ಮುಡಿಯಲ್ಲಿ ತೃಪ್ತಿ ಪಡಬೇಕಾಗಿತ್ತು. ಕೃಷಿ ಇಲಾಖೆಯವರು ತ್ಯಾಚುಂಗ್, ಐ‌ಆರ್8 .. ಹೊಸ ಭತ್ತದ ತಳಿಗಳ ಬೀಜಗಳನ್ನು ಒದಗಿಸಿದರು. ಅಧಿಕಾರಿಗಳ ಸಲಹೆಯಂತೆ ಅಧಿಕ ಇಳುವರಿ ಪಡೆಯುವ ಜಪಾನ್ ಕೃಷಿ ಪದ್ದತಿ ಅಳವಡಿಸಿ, ಸಾಲು ಸಾಲಾಗಿ ಭತ್ತದ ಸಸಿ ನೆಟ್ಟು ಬೆಳೆಸಿದೆ. ಭತ್ತದ ಸಸಿಗಳು ಹುಲುಸಾಗಿ ಬೆಳೆಯಲು ಯೂರಿಯಾ-ಸುಫಲಾದಂತಹ ರಾಸಾಯನಿಕ ಗೊಬ್ಬರಗಳನ್ನು ಗದ್ದೆಗೆ ಹಾಕಿರಿ ಎಂದು ಕೃಷಿ ತಜ್ಞರು ಹೇಳಿದಂತೆ ಮಾಡಿದೆ. ಭತ್ತದ ಹಿಟ್ಟುತಿಗಣೆ, ಬಂಬುಚ್ಚಿ, ಬೆಂಕಿರೋಗ ಮೊದಲಾದ ಪೀಡೆಗಳ ನಿಯಂತ್ರಣಕ್ಕೆ ಪೀಡೆ ನಾಶಕಗಳನ್ನು ಸಿಂಪಡಿಸಿದ್ದೂ ಆಯಿತು. ಅವರು ಶಿಫಾರಸು ಮಾಡಿದ್ದಾರೆಂದು ನಾನು ಸಿಂಪಡಿಸಿದ್ದಲ್ಲ. ನನಗೆ ಪ್ರಯೋಗ ಮಾಡಬೇಕೆಂದು ತೋರಿತು. ನಮ್ಮೂರಿನಲ್ಲಿ ಪ್ರಥಮ ಬಾರಿಗೆ ಭತ್ತದ ಅಧಿಕ ಇಳುವರಿ ತಳಿಗಳನ್ನು ಬೆಳೆದ ಹೆಗ್ಗಳಿಕೆ ನನ್ನದಾದರೂ ತಜ್ಞರ ಸಲಹೆ ಸೂಚನೆಗಳಂತೆ ಪ್ರಯೋಗ ಮಾಡಿದ್ದರೂ ವರುಷದಿಂದ ವರುಷಕ್ಕೆ ಭತ್ತದಲ್ಲಿ ಲಾಭ ಕಡಿಮೆಯಾಗತೊಡಗಿತು! ಕೊನೆಗೆ ಕೈ ಸುಟ್ಟುಕೊಂಡರೂ ಭತ್ತ ಬೆಳೆಸಿದೆ. ನಾನು ಬೆಳೆದ ಭತ್ತದ ತಳಿಗಳೆಂದರೆ ಯಂ.ಜಿ.ಎಲ್-5, ಯಂ.ಜಿ.ಎಲ್-6, ಪಿ.ಟಿ.ಬಿ.9, ಪಿ.ಟಿ.ಬಿ.10, ಪಿ.ಟಿ.ಬಿ.20, ಪಿ.ಟಿ.ಬಿ.28, ಯಂ.ಟಿ.ಯು.3 ಮತ್ತು ಯಂ.ಟಿ.ಯು.20, ಸಿ.ಓ14, 15, 29, 30, ಟಿ.ಕೆ.ಯಂ.6  ಇವುಗಳೆಲ್ಲ ಅಧಿಕ ಇಳುವರಿ ನೀಡುವ ತಳಿಗಳು. ಇವುಗಳಲ್ಲಿ ಒಳ್ಳೆಯದೆಂದು ತೋರಿದ ಹಲವು ತಳಿಗಳ ಬೀಜಗಳನ್ನು ನಾನು ರೈತರಿಗೆ ವಿತರಿಸಿದ್ದೆ. ಅಧಿಕ ಇಳುವರಿ ಬರುವ ತಳಿಗಳಾದ ತೈಚುಂಗ್ 65, ಜಿ.ಯಂ.ಆರ್.2, ಜಿ.ಯಂ.ಆರ್ 25, ಜಿ.ಯಂ.ಆರ್ 26, ಐ.ಆರ್.8, ಐ.ಆರ್ 20, ಐ.ಆರ್ 36, ಐ‌ಆರ್-51 ಮತ್ತು ಜಯ, ಪದ್ಮರಾಸಿ, ಅನ್ನಪೂರ್ಣ ಯಂ.ಒ-4 ಮತ್ತು ಇನ್ನೂ ಕೆಲವು ತಳಿಗಳನ್ನು ನನ್ನ ಕ್ಷೇತ್ರದಲ್ಲಿ ಬೆಳೆದಿದ್ದೆ. ಭಾಸ್ಕರ ಕಾಮತರಿಂದ ಪರಿಮಳದ ಅಕ್ಕಿಯ ಹೊಸ ತಳಿಯೊಂದನ್ನು ಬೆಳೆದೆ. ಈ ಅಕ್ಕಿ ಘಮಘಮ. ಊಟಕ್ಕೆ ರುಚಿ. ಒಂದು ಕಳಸೆಗೆ ಐದಾರು ಮುಡಿ ಬಂತು. ಯಾವುದೇ ರೋಗವಿಲ್ಲ. ಮದ್ದು ಸಿಂಪಡಣೆ ಅಗತ್ಯವಿಲ್ಲ. “ಶಂಕರ ಮಾಡಿದ ಅಕ್ಕಿ ಊಟಕ್ಕೆ ತುಂಬ ರುಚಿ” ಎಂದು ಬೆಂಗಳೂರಿನ ದೊಡ್ಡಣ್ಣ ಹೊಗಳಿದ್ದೇ ಹೊಗಳಿದ್ದು! ನಾನು ಉಬ್ಬಿ ಉದ್ದಾಗಿದ್ದೆ! ಆ ಅಕ್ಕಿಗೆ ಅಣ್ಣನೇ ಗಿರಾಕಿ. ಅದಿಲ್ಲದಿದ್ದರೆ ಅವನಿಗೆ ಊಟವೇ ಸೇರದು.
ಪ್ರಾತಿನಿಧಿಕ ಫೋಟೋ: ಭತ್ತ ಕೃಷಿಗಾಗಿ ಕೋಣಗಳಿಂದ ಹೊಲದ ಉಳುಮೆ  ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು