ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಶ್ರದ್ಧೆಯಿಂದ ಕಲಿತರೆ ಯಾವುದೂ ಕಷ್ಟವಲ್ಲ. ಪುಟ್ಟ ಕಂದಮ್ಮಗಳಲ್ಲಿ ಅಡಗಿರುವ ಸೃಜನಶೀಲತೆಗೆ ಪ್ರೋತ್ಸಾಹ ನೀಡುವ ಕೆಲಸ ನಮ್ಮಿಂದಾಗಬೇಕು.'ಅರಿವೇ ಗುರು'ಅನ್ವೇಷಣೆಯೇ ಕಲಿಕೆ’ ಹೊಸಹೊಸತನ್ನು ಕಂಡು ಹಿಡಿಯುವ ಆಸಕ್ತಿ ಇರಬೇಕು. ಮಾನ್ಯ ಡಿ.ವಿ.ಜಿ ಯವರು ತಮ್ಮ ಕಗ್ಗದಲ್ಲಿ ಹೇಳಿರುವಂತೆ ಕಲಿತರೆ ಯಾವುದೂ ಕಷ್ಟವಲ್ಲ. ಆಗಸದಲ್ಲಿ ಹಾರುವ ಪಕ್ಷಿಗಳಿಗೆ ಯಾರು ಕರೆದು ಉಣಬಡಿಸುವರು ಹೇಳಿ? ಹಾರುತ್ತಾ ಹಾರುತ್ತಾ ತನ್ನ ಆಹಾರವನ್ನು ತಾನೇ ಒಂದು ವ್ರತದಂತೆ ಸಂಪಾದಿಸುವುದು.ಹಾಗೆಯೇ ಶ್ರದ್ಧೆ ಬೇಕು. ನೇಮನಿಷ್ಠೆ ಬೇಕು. ಅದುವೇ ಇಲ್ಲದವ ಸೋಲುವನು. ಹಕ್ಕಿ ಮುನ್ನರಿಯುವುದತನ್ನ ಪಯಣದ ತೆರನ?/ ಇಕ್ಕುವರದಾರದ ಕರೆದು ತಿರುಪೆಯನು?// ರೆಕ್ಕೆ ಪೋದಂತಲೆದು,ಸಿಕ್ಕಿದುದನುಣ್ಣುವುದು/ ತಕ್ಕುದಾ ವ್ರತ ನಿನಗೆ-ಮಂಕುತಿಮ್ಮ// 'ಹುಟ್ಟಿಸಿದ ದೇವ ಹುಲ್ಲು ಮೇಯಿಸುವನು' ,ಹಾಗೆಂದು ಕೈಕಟ್ಟಿ ಕುಳಿತರೆ ಹುಲ್ಲು ಸಿಗುವುದೇ?ಪ್ರಯತ್ನ ಬೇಕು. ಕಷ್ಟಪಡಬೇಕು, ಸತತ ಸಾಧನೆ ಮಾಡುವ, ಕಲಿತೇ ತಿರುವೆನೆಂಬ ಮನೋಭಾವ ಬೇಕು. ಆ ಕೆಲಸಕ್ಕೆ ಪ್ರೇರೇಪಣೆ ಮನೆಯ ಹಿರಿಯರಿಂದಾಗಬೇಕು. ಆ ಕೆಲಸವನ್ನು ಮಾಡೋಣ. ಕನ್ನಡ ಭಾಷೆಯ ಬಗ್ಗೆ ಅಸಡ್ಡೆ, ತಾತ್ಸಾರ ಬೇಡ. ನಮ್ಮ ತಾಯಿಭಾಷೆಯದು. ಒಂದಷ್ಟು ಜನ ತಾಯಂದಿರು ಹೀಗೆ ಮಾತನಾಡುವಾಗ ಹೇಳಿದ್ದು ನೆನಪಾಯಿತು. 'ನಮ್ಮ ಮಕ್ಕಳು ಹತ್ತನೇ ತರಗತಿ, ಈ ವರ್ಷ ಚೆನ್ನಾಗಿ ಓದಬೇಕು,(ಆದರೆ ಇಷ್ಟರವರೆಗೆ ಓದಿಲ್ಲವೇ? ,ಓದಿರ್ತಾರೆ, ತಾಯಂದಿರು ತಮ್ಮ ಜೊತೆ ಮಕ್ಕಳಿಗೂ ಒತ್ಡ ಮಾಡುವುದಷ್ಟೆ,ಮಕ್ಕಳು ಅವರ ಪಾಡಿಗೆ ಕಲಿಯುತ್ತಾರೆ,ಸ್ವಲ್ಪ ಗಮನ ಹೆಚ್ಚು ಬೇಕು ಅಷ್ಟೆ.) ಎಲ್ಲಿಗೂ ಕಳುಹಿಸುವುದಿಲ್ಲ,ತಿರುಗಾಟ ಪೂರ್ತಿ ನಿಲ್ಲಿಸುವುದೇ'.'ಭಾಷಾ ಪಾಠದಲ್ಲಿ ಹುಶಾರಿದ್ದಾರೆ ಮಕ್ಕಳು ಎಂದೆ.' ನಿಮಗೆ ಕುಶಾಲು, ಕನ್ನಡದಲ್ಲಿ ಅಲ್ಲಿಂದಲ್ಲಿಗೆ ಪಾಸಾದರೆ ಸಾಕು, ಉಳಿದದ್ದೆಲ್ಲ ನೂರಕ್ಕೆ ನೂರು ಪ್ರಯತ್ನ ಮಾಡಬೇಕು' ಎನ್ನಬೇಕೇ? ಸಲಿಲವಾಗಿ 'ನಾಲಿಗೆಯೊಳು ಹರಿದಾಡುವ ಕನ್ನಡದ ಬಗ್ಗೆ ತಾತ್ಸಾರ'ದ ಧೋರಣೆ ನೋಡಿ ಬೇಸರವಾಯಿತು.ಕನ್ನಡ ಮಾಧ್ಯಮ ಅಷ್ಟೂ ಅಸಡ್ಡೆಯೇ? ಭಾಷೆಯ ಬಗ್ಗೆ ಪ್ರೀತಿ, ಗೌರವ ಬೇಡವೇ? ತಾಯಂದಿರೇ ಹೀಗಾದರೆ ಮಕ್ಕಳಿಗೆಲ್ಲಿಯ ಮಮಕಾರ? ಇಂಥವರ ನಡುವೆ ಇರುವವರು ನಾವು.'ಮನೆಯೆ ಮೊದಲ ಪಾಠ ಶಾಲೆ,ಜನನಿ ತಾನೆ ಮೊದಲ ಗುರುವು ' ಹಿರಿಯ ಸಾಹಿತಿಗಳ ಕವನದ ಸಾಲುಗಳು ನೆನಪಾಯಯಿತು.ಎಂಥ ಅದ್ಭುತ, ಸತ್ಯ, ವಾಸ್ತವ ಪದಗಳಿಂದಾದ ಸಾಲುಗಳಿವು. ನಮಗೆ ನಾವೇ ಮೋಸಮಾಡಿಕೊಳ್ಳದೆ. ಕನ್ನಡಮ್ಮನ ಸೇವೆಯನ್ನು ಕಿಂಚಿತ್ ಮಾಡೋಣ,ಮಾಡಿಸಲು ಪ್ರಯತ್ನಿಸೋಣ. (ಕಗ್ಗ:ಮಂಕುತಿಮ್ಮನ ಕಗ್ಗ) -ರತ್ನಾ ಕೆ. ಭಟ್ ತಲಂಜೇರಿ ಚಿತ್ರ ಕೃಪೆ: ಇಂಟರ್ನೆಟ್ ತಾಣ