ಒಂದು ಒಳ್ಳೆಯ ನುಡಿ (287)
ಬರಹಗಾರರ ಬಳಗ
ನವೆಂಬರ್ ೨೪, ೨೦೨೫
೪ ವೀಕ್ಷಣೆಗಳು
ನನಗೆ ನಾನಾರು ಎಂಬುದರ ಅರಿವಿಗೆ ನಾಲ್ಕಕ್ಷರ ಕಲಿತರೆ ಒಳ್ಳೆಯದು, ಅದು ತಾಯಿ ಭಾಷೆಯಲ್ಲಾದರೆ ಉತ್ತಮ, ಕನ್ನಡ ನಾಡಿನಲ್ಲಿ ಬದುಕಿ ಬಾಳಬೇಕಾದ ನಾವು ಕನ್ನಡವನ್ನು ಕಲಿತು ಓದಿ ಬರೆಯಲು ಮನಸ್ಸು ಮಾಡಬೇಕಲ್ಲವೇ?
ಕನ್ನಡ ನಮ್ಮ ಉಸಿರು
ಕನ್ನಡ ನಮ್ಮ ಹಸಿರು
ಕನ್ನಡ ನಮ್ಮ ಊಟ
ಕನ್ನಡ ನಮ್ಮ ಆಟ
'ಕನ್ನಡದ ಕಣ್ವ'ರೆಂದೇ ಖ್ಯಾತನಾಮರಾಗಿದ್ದ ಆಚಾರ್ಯ ಬಿ.ಎಂ.ಶ್ರೀಯವರು ಒಂದೆಡೆ ನುಡಿದ ಅಂತ:ಕರಣ ತುಂಬಿದ ನುಡಿಗಳು ಭಾಷಾಭಿಮಾನದ ಹಾದಿಗೆ ಪರಿಮಳ ಭರಿತ ಸುಗಂಧವನ್ನು ಹರಡಿದೆ.
ಕನ್ನಡ ನುಡಿ,ನಮ್ಮ ಹೆಣ್ಣು
ನಮ್ಮ ತೋಟದಿನಿಯ ಹಣ್ಣು
ಬಳಿಕ, ಬೇರೆ ಬೆಳೆದ ಹೆಣ್ಣು
ಬಳಿಗೆ ಸುಳಿದಳು
ಶ್ರೀಮಂತ ಭಾಷೆ ನಮ್ಮ ಕನ್ನಡದ ಬೆಳವಣಿಗೆ, ಹೊಸ ದನಿ, ಹೊಸ ಹಾಡು, ನವ್ಯತೆಯಲ್ಲೂ ಭವ್ಯತೆಯ ಸಾರುವ, ಶಕ್ತಿ ನೀಡುವ ತೂಕಭರಿತ ಕವನಗಳನ್ನು ರಚಿಸಿದರಂತೆ. ಮಾನ್ಯ ಡಿ.ವಿ.ಜಿಯವರು ಬಿ.ಎಂ.ಶ್ರೀಯವರ ಕನ್ನಡ ಭಾಷೆಯ ಕೈಂಕರ್ಯದ ಶ್ರಮದ ಕುರಿತಾಗಿ ಅಭಿಮಾನದಿಂದ ಬರೆದ ಸಾಲುಗಳು ಅದೆಷ್ಟು ಸತ್ಯವಾದುದು.
ಕಾವ್ಯ ತಪಸ್ಸಂಪಾದಿತ/
ದಿವ್ಯಯಶ: ಕಾಯ ಶಾಶ್ವತಂ ಶ್ರೀಕಂಠ//
ಸೇವ್ಯಂ ಕನ್ನಡಮೆಂಬೊಂ-
ದವ್ಯಾಹತ ಭವ್ಯ ದೀಕ್ಷೆಯೊಳ್ ಗುರುವಾದಂ//
'ಭಾಷೆಯೆಂಬುದು ವ್ಯಾಪಾರವಲ್ಲ, ಇಡೀ ಸಮುದಾಯದ, ಸಂಸಾರದ ಮುನ್ನಡೆಯ, ಮುನ್ನಡೆವ ಸಾಧನ' ವೆಂದರು. ಹೇಗೆ ಪುಟ್ಟ ಕಂದಮ್ಮರು ಎದ್ದು ಬಿದ್ದು ನಡೆಯುವುದ ಕಲಿಯುವಾಗ ಕಾಳಜಿ ವಹಿಸುತ್ತೇವೆಯೋ, ಅವರನ್ನು ಬಿದ್ದಾಗ ಎತ್ತಿ ಹಿಡಿದು ಸಾಂತ್ವನ ಹೇಳಿ, ವಾತ್ಸಲ್ಯ ನೀಡಿ, ಪುನ:ನಡೆಯಲು ಸಹಕರಿಸುತ್ತೇವೆಯೋ ಅದೇ ರೀತಿ ನಮ್ಮ ಕನ್ನಡ ಭಾಷೆಯನ್ನು ಕೆಳಗೆ ಬೀಳದಂತೆ ನಾವೇ ಎತ್ತಿ ಹಿಡಿಯಬೇಕು, ಜೊತೆಗೆ ಸ್ಥಾನಮಾನ ಕಲ್ಪಿಸಿಕೊಡಬೇಕು, ಅನ್ಯರೇಕೆ ? ಎನ್ನುತ್ತಿದ್ದರಂತೆ. ನಮ್ಮ ಭಾಷೆ, ನಮ್ಮ ಮಾತು ನಮಗೆ ಚಂದ, ಹಿತ. ಉಸುರೋಣ- ಬೆರೆಸೋಣ- ಬೆರೆಯೋಣ- ನಲಿಯೋಣ- ಕನ್ನಡ.....ಕನ್ನಡ....
(ಸಂಗ್ರಹ) ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ನವೆಂಬರ್ ೨೪, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬