'ನಿನ್ನ ಕರುಣೆಯ ಉಸಿರು ತಾನೆ ನನ್ನ ನುಡಿಸುತಿರಲು ಕಾಡು ಬಿದಿರ ತುಂಡು ನಾನಾದರೆ ಕೊಳಲು ನೀನು ನಡೆಸಲು ನಡೆದೆ,ನುಡಿಸಲು ನುಡಿದೆ ನಾನೆಂಬುದಿದು ತಾ ನನ್ನದಲ್ಲ ಎನ್ನ ಬಾಳಿದು ನೋಡು ನೀನೆ ಹಾಡಿದ ಹಾಡು ಎಂತಿದ್ದರೇನಂತೆ ಚಿಂತೆ ಎನಗಿಲ್ಲ’ ಹಿರಿಯ ಕಾದಂಬರಿ, ಕತೆಗಾರರಾದ ತ.ರಾ.ಸು (ತ. ರಾ. ಸುಬ್ಬರಾವ್) ರವರ 'ಚಂದವಳ್ಳಿಯ ತೋಟ'ದ ಈ ಸಾಲುಗಳ ಅರ್ಥ ದೊಡ್ಡದು, ಆದರೆ ಎಷ್ಟೊಂದು ಸರಳ ಪದಗಳಿಂದ ರಚನೆ. ಭಗವಂತನ ಇರವನ್ನು ಸಹಜವಾಗಿ, ಬಹಳ ಅರ್ಥಗರ್ಭಿತವಾಗಿ ಚಿತ್ರಿಸಿದ ಕವಿಮನಸ್ಸಿನ ಕವನವಿದು. ಇದೇ ನಮ್ಮ ಕನ್ನಡ ಭಾಷೆಯ ಮಹತ್ವ, ತಿರುಳು, ಸಾರ. ಹಿರಿದು ಅರ್ಥದಲ್ಲಿ ಸ್ವಚ್ಛ, ಸರಳ, ಸುಂದರ ಅಕ್ಷರಗಳ ಸರಮಾಲೆಯೇ ಕನ್ನಡ. ನಾವು ಸಹ ಯಾಕೆ ಪ್ರಯತ್ನಿಸಬಾರದು? ಅಳಿಲ ಸೇವೆ ನಮ್ಮದಾಗಬಹುದಲ್ಲವೇ? ಪುಟ್ಟ ರಚನೆಗಳೇ ಮುಂದೆ ದೊಡ್ಡ ಕವನ, ಕಥೆಯಾಗಬಹುದು. ಯಾವುದು ಎಷ್ಟು ಬೇಕು, ಎಲ್ಲಿ ಬಳಸಬೇಕು, ಈ ರಹಸ್ಯ ಕಲಿತಂತೆ ನಮ್ಮದಾಗಿರಬೇಕು. ಇಲ್ಲದಿದ್ದರೆ 'ಅಯೋಮಯ', ಕಲಸು ಮೇಲೋಗರವಾಗಬಹುದು. ಓದುಗರಿಗೆ ಅರ್ಥವೂ ಆಗದು. ಹಣ್ಣೆಲೆ ಉದುರಿದಾಗ ಚಿಗುರೆಲೆ ಬರಲೇ ಬೇಕು. ಈ ಹಣ್ಣೆಲೆಗಳ ಸಾಹಸ, ಕೈಚಳಕ, ನಡೆನುಡಿ ಇತರರಿಗೆ ಆದರ್ಶವಾಗಿದ್ದಾಗ ಚಿಗುರುಗಳು ಮುಂದೆ ಬರುವ ಪ್ರಯತ್ನ ಮಾಡಬಹುದು. ಹಣ್ಣೆಲೆ ತನ್ನೊಡನೆ ಚಿಗುರಿಗೂ ಅವಕಾಶ ನೀಡಿದಾಗ ಇದು ಸಾಧ್ಯ. ತಪ್ಪುಗಳ ಒಪ್ಪವಾಗಿಸಿ, ಹಿರಿಯರ ಶುಭ ಹಾರೈಕೆಯೊಂದಿಗೆ ಓದಿ, ಬರೆದು,ತಿದ್ದಿ ಮುಂದುವರಿಯೋಣ. ಕಲ್ಪನಾಲೋಕ ಕವಿಗಿದ್ದರೆ ಬರವಣಿಗೆ ಸುಲಭ. ಕಲ್ಪನೆಯೊಂದಿಗೆ ವಾಸ್ತವದ ಮಿಶ್ರಣವಿರಲಿ. ಹಳೆಯದಕ್ಕೆ ಜೋತುಬಿದ್ದರೆ ಬದಲಾವಣೆಗೆ ಅವಕಾಶವಿಲ್ಲ. ‘ಬದಲಾವಣೆ ಜಗದ ನಿಯಮ' ಎರಡೂ ಇರಲಿ. ಸಪ್ತಸ್ವರಗಳಿಂದ ಸಂಗೀತ ಹೊಮ್ಮುವಂತೆ ತಾಯಿನುಡಿಯ ಸರಳಾಕ್ಷರಗಳಿಂದ ಕವಿಗಳ, ಲೇಖಕರ ಮನದ ಭಾವನೆಗಳು, ಅಂತರಂಗದ ಚಕ್ಷುಗಳನ್ನು ತೆರೆಯುವುದರ ಮೂಲಕ ಹೊರ ಹೊಮ್ಮಲಿ. ಇದೇ ತಾಯಿಯ ಸೇವೆ. ಪ್ರಯತ್ನ,ಮನಸ್ಸು ಎರಡೂ ಬೇಕು. (ಸಂಗ್ರಹ) -ರತ್ನಾ ಕೆ ಭಟ್, ತಲಂಜೇರಿ ಚಿತ್ರ ಕೃಪೆ: ಇಂಟರ್ನೆಟ್ ತಾಣ