ಯುಕೆಪಿ 3 ಸಾಕಾರವಾಗಲಿ
ಕೆ.ಪಿ.ಅಶ್ವಿನ್ ರಾವ್
ಸೆಪ್ಟೆಂಬರ್ ೧೮, ೨೦೨೫
೮ ವೀಕ್ಷಣೆಗಳು
ರಾಜ್ಯದ ಸಮೃದ್ಧಿ ಮತ್ತು ಕೃಷಿಗೆ ಕೃಷ್ಣ ಕಾವೇರಿ ನದಿಗಳ ಕೊಡುಗೆ ಅಪಾರವಾದುದು. ಇವು ರಾಜ್ಯದ ಜೀವನಾಡಿಗಳು, ಆದರೆ, ಹಳೆ ಮೈಸೂರು ಪ್ರಾಂತ್ಯದ ಕಾವೇರಿ ಕೊಳ್ಳದ ನೀರಾವರಿ ಯೋಜನೆಗಳಿಗೆ ನೀಡುವಷ್ಟು ಮಹತ್ವವನ್ನು ಕೃಷ್ಣಾ ಕೊಳ್ಳಕ್ಕೆ ನೀಡುತ್ತಿಲ್ಲ ಎಂಬ ಕೊರಗು ಬಹಳ ವರ್ಷದಿಂದ ಇತ್ತು. ಕೃಷ್ಣಾ ನ್ಯಾಯಾಧಿಕರಣ-2ರ ಐತೀರ್ಪು ಪ್ರಕಟವಾಗಿ ಒಂದೂವರೆ ದಶಕ ಕಳೆದರೂ ಕೃಷ್ಣಾ ಮೇಲ್ದಂಡೆ ಯೋಜನೆ-3ರ (ಯುಕೆಪಿ-3) ಭೂಸ್ವಾಧೀನ, ಪುನರ್ವಸತಿ, ಪುನರ್ ನಿರ್ಮಾಣ (ಆರ್ ಆ್ಯಂಡ್ ಆರ್) ಪ್ರಕ್ರಿಯೆ ನನೆಗುದಿಗೆ ಬಿದ್ದಿರುವುದು ಇದಕ್ಕೆ ಸಾಕ್ಷಿಯೆಂಬಂತಿತ್ತು.
ಈ ಹಿನ್ನೆಲೆಯಲ್ಲಿ ವಿಶೇಷ ಸಂಪುಟ ಸಭೆ ನಡೆಸಿದ ರಾಜ್ಯ ಸರಕಾರ ಯುಕೆಪಿ-3 ಸಂಬಂಧ ಅತ್ಯಂತ ಮಹತ್ವದ ನಿರ್ಣಯವನ್ನು ಕೈಗೊಂಡಿದೆ. ಇದರಿಂದ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಬಹುವರ್ಷಗಳ ಹಕ್ಕೊತ್ತಾಯಕ್ಕೆ ಬೇಡಿಕೆ, ಸ್ಪಂದನೆ ದೊರಕಿದಂತಾಗಿದೆ. ಯಥಾರ್ಥದಲ್ಲಿ ಕೃಷ್ಣ ರಾಜ್ಯದ ದೃಷ್ಟಿಯಿಂದ ಜಲಪಾತ್ರೆಯಿದ್ದಂತೆ. ಅಕ್ಷಯ ನ್ಯಾಯಾಧಿಕರಣದ ತೀರ್ಪಿನಂತೆ ಯುಕೆಪಿ-3 ಯೋಜನೆಯಡಿ ೧೩೦ ಟಿಎಂಸಿ ಅಡಿ ಸದ್ಬಳಕೆಯಾದರೆ ಇಡೀ ಉತ್ತರ ಕರ್ನಾಟಕ ಹಸಿರಿನಿಂದ ಕಂಗೊಳಿಸಲಿದೆ. ಈ ಯೋಜನೆಯಡಿ ೫.೯೪ ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಲು ಸಾಧ್ಯವಾಗಲಿದೆ.
ಈ ಯೋಜನೆಗೆ ಒಟ್ಟಾರೆಯಾಗಿ ೧.೩೩ ಲಕ್ಷಎಕರೆ ಭೂಸ್ವಾಧೀನ ಪಡಿಸಿಕೊಳ್ಳಬೇಕಿದೆ. "ದರ ನಿಗದಿ, ರೈತರನ್ನು ಮನವೊಲಿಕೆ, ಕೋರ್ಟ್ ಪ್ರಕರಣಗಳ ಕಾರಣದಿಂದ ಈ ಪ್ರಕ್ರಿಯೆ ನಿಧಾನಗತಿಯಲ್ಲಿತ್ತು. ಈಗ ದರ ನಿಗದಿ ಬಗ್ಗೆ ಸಂಪುಟ ಸಭೆ ನಿರ್ಧರಿಸಿದೆ. ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನೂ ಇತ್ಯರ್ಥ ಪಡಿಸುವ ಭರವಸೆ ನೀಡಲಾಗಿದೆ. ಕೃಷ್ಣಾ ಯೋಜನೆ ಅನುಷ್ಠಾನದ ದೃಷ್ಟಿಯಿಂದ ಇದು ಸ್ವಾಗತಾರ್ಹ ಬೆಳವಣಿಗೆ.
ಪ್ರಸಕ್ತ ಆರ್ಥಿಕ ವರ್ಷವೂ ಸೇರಿದಂತೆ ೩ ವರ್ಷದ ಅವಧಿಯಲ್ಲಿ ಭೂಸ್ವಾಧೀನ ಮತ್ತು ಪರಿಹಾರಕ್ಕೆ ಬೇಕಾದ ೭೦ ಸಾವಿರ ಕೋಟಿ ರೂ. ಭರಿಸುವುದಾಗಿ ಸರಕಾರ ಸ್ಪಷ್ಟ ಪಡಿಸಿದೆ. ಇಷ್ಟೊಂದು ಅಗಾಧವಾದ ಮೊತ್ತವನ್ನು ಹೊಂದಿಸುವುದು ಸುಲಭವಲ್ಲ. ಅದಕ್ಕೆ ಸರಕಾರ ಇಚ್ಚಾಶಕ್ತಿಯನ್ನು ಪ್ರದರ್ಶಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಇಲಾಖಾವಾರು ಅನಗತ್ಯ ವೆಚ್ಚ ತಗ್ಗಿಸುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದ್ದು, ಇದು ನಿಜವೇ ಆಗಿದ್ದರೆ ಸ್ವೀಕಾರಾರ್ಹ.
ಯುಕೆಪಿ-3ರ ಸಂಬಂಧದಲ್ಲಿ ಭೂಸ್ವಾಧೀನ ಕೈಗೊಂಡು ಪರಿಹಾರ ಒದಗಿಸುವುದು ಒಂದು ಭಾಗ. ತಾನೇ ವಿಧಿಸಿಕೊಂಡ ಗಡುವಿನ ಒಳಗೆ ಇದನ್ನು ಪೂರೈಸುವುದು ಸರಕಾರದ ಉತ್ತರದಾಯಿತ್ವವಾಗುತ್ತದೆ. ಈ ಯೋಜನೆ ಸಾಕಾರಗೊಳ್ಳಲು ಮತ್ತೊಂದು ಪ್ರಮುಖ ಹೆಜ್ಜೆಯೆಂದರೆ, ನ್ಯಾಯಾಧಿಕರಣದ ಐತೀರ್ಪಿನ ಗೆಜೆಟ್ ಅಧಿಸೂಚನೆ ಪ್ರಕಟವಾಗುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವುದು
ಗೆಜೆಟ್ ಅಧಿಸೂಚನೆ ಹೊರಬೀಳದ ಹೊರತು ಆಲಮಟ್ಟಿ ಆಣೆಕಟ್ಟೆಯ ಎತ್ತರವನ್ನು ೫೧೯.೬೦ ಮೀಟರ್‌ನಿಂದ ೫೨೪.೨೫೬ ಮೀಟರ್ ಗೆ ಹೆಚ್ಚಿಸಲು ಸಾಧ್ಯವಾಗುವುದಿಲ್ಲ. ಆಣೆಕಟ್ಟೆ ಎತ್ತರ ಮಾಡದಿದ್ದರೆ ರಾಜ್ಯದ ಪಾಲಿನ ನೀರನ್ನು ಬಳಸಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ಈ ದಿಶೆಯಲ್ಲೂ ರಾಜ್ಯ ಸರಕಾರ ಕಾನೂನು ಹೋರಾಟವೂ ಸೇರಿದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕಾಗುತ್ತದೆ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೮-೦೯-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರಕಟಿಸಿದ: ಸೆಪ್ಟೆಂಬರ್ ೧೮, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬