ಈ ಬಾರಿಯ ವಿಶ್ವಸಂಸ್ಥೆಯ ಈ ವರ್ಷದ ಘೋಷವಾಕ್ಯ " ಸಾಮಾಜಿಕ ಪ್ರಗತಿಯನ್ನು ಮುನ್ನಡೆಸಲು ಅಂಗವಿಕಲರನ್ನು ಒಳಗೊಂಡ ಸಮಾಜಗಳನ್ನು ಪೋಷಿಸುವುದು ". (" Fostering disability inclusive societies for advancing social progress") ಅಂದರೆ ವಿಶೇಷ ಚೇತನರನ್ನು ಮುಖ್ಯವಾಹಿನಿಯ ಅಭಿವೃದ್ಧಿಯ ಪಥದಲ್ಲಿ ಒಳಗೊಂಡ ಸಮಾಜ ನಿರ್ಮಾಣ ನಮ್ಮೆಲ್ಲರ ಆಶಯವಾಗಬೇಕು. ಅವರನ್ನು ಹೊರತುಪಡಿಸಿ ಸಮಾಜದ ಸುಸ್ಥಿರ ಅಭಿವೃದ್ಧಿ ಸಾಧ್ಯವಿಲ್ಲ ಮತ್ತು ಅದು ಸಹಜವೂ ಅಲ್ಲ.  ಕಳೆದ ಅಕ್ಟೋಬರ್ ಒಂಬತ್ತರಿಂದ ಹದಿಮೂರರವರೆಗೆ ಗೋವಾದ ಅಂತರಾಷ್ಟ್ರೀಯ ಫಿಲಂ ಸೊಸೈಟಿ ಆವರಣದಲ್ಲಿ ವಿಶ್ವ ದಿವ್ಯಾಂಗ ಚೇತನರ ಸಮಾವೇಶ " ಪರ್ಪಲ್ ಫೆಸ್ಟ್ " ಏರ್ಪಡಿಸಲಾಗಿತ್ತು. ಆ ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ‌. ಇತರ ಎಲ್ಲಾ ಚಟುವಟಿಕೆಗಳ ಜೊತೆಗೆ ಇಡೀ ನಾಲ್ಕು ದಿನ ಅಲ್ಲಿನ ಮುಖ್ಯ ಸಭಾಂಗಣದಲ್ಲಿ ದಿವ್ಯಾಂಗ ಚೇತನರ ಕುರಿತು ಸಮಸ್ಯೆ, ಪರಿಹಾರ, ಇತಿಹಾಸ, ವರ್ತಮಾನ, ಭವಿಷ್ಯ ಎಲ್ಲವನ್ನು ಪರಿಣಿತರು, ಸರ್ಕಾರಿ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳು, ವಿಚಾರ ಸಂಕೀರ್ಣದಲ್ಲಿ ಚರ್ಚಿಸಿದರು ಪ್ರಶ್ನೋತ್ತರ ಕಾರ್ಯಕ್ರಮವೂ ಇತ್ತು. ಅಲ್ಲಿ ಚರ್ಚೆಸಲಾದ ಒಂದು ಮಾಹಿತಿ ಪ್ರಕಾರ ಇಡೀ ದೇಶದ ಒಟ್ಟು ಜನಸಂಖ್ಯೆಯಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿರುವ 21 ರೀತಿಯ ವಿಶೇಷ ಚೇತನ ಗುಂಪಿನಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ, ಕಣ್ಣಿಗೆ ಕಾಣುವ ಅಥವಾ ಅದೃಶ್ಯವಾದ ವಿಶೇಷ ಚೇತನರ ಒಟ್ಟು ಸಂಖ್ಯೆ ಶೇಕಡಾ 10 ರಿಂದ 15ರ ಆಸು ಪಾಸಿನಲ್ಲಿದೆ ಎಂದು ಅಂದಾಜಿಸಲಾಗಿದೆ. ಅಂದರೆ ಈ ಸಂಖ್ಯೆ ಬಹಳ ದೊಡ್ಡದಿದೆ. ದುರದೃಷ್ಟವಶಾತ್ ಸರ್ಕಾರದ ಒಟ್ಟು ಯೋಜನಾ ವೆಚ್ಚದಲ್ಲಿ ನಿಜಕ್ಕೂ ಈ ಅತ್ಯಂತ ಅವಶ್ಯಕ ಇರುವ ದಿವ್ಯಾಂಗ ಚೇತನರಿಗೆ ಸಲ್ಲಬೇಕಾದ ಪಾಲು ಸಲ್ಲುತ್ತಿಲ್ಲ. ಅವರನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಕೇವಲ ಮಾತು, ಭಾಷಣ, ಉಪನ್ಯಾಸಗಳಲ್ಲಿ ಅವರ ಬಗ್ಗೆ ತೀವ್ರ ಸಹಾನುಭೂತಿ ವ್ಯಕ್ತವಾಗುತ್ತಿದೆಯೇ ಹೊರತು ಅದು ಕಾರ್ಯರೂಪಕ್ಕೆ ಬರುತ್ತಿಲ್ಲ.  ಈ ಬಗ್ಗೆ ಸರ್ಕಾರ, ಸಮಾಜ, ಮಾಧ್ಯಮ, ಧಾರ್ಮಿಕ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಗಂಭೀರವಾಗಿ ಯೋಚಿಸುವ ಸಮಯ ಬಂದಿದೆ. ದಿವ್ಯಾಂಗ ಚೇತನರ ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ಪಟ್ಟಿ ಮಾಡಲು ನಮ್ಮೊಳಗೆ ಒಂದು ತಂಡ ಮಾಡಿ ಚರ್ಚಿಸಲಾಗುತ್ತಿದೆ. ಅದು ಸಿದ್ಧವಾದ ನಂತರ ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಈ ಬಗ್ಗೆ ಸಲಹೆ ಸೂಚನೆಗಳಿದ್ದರೆ ದಯವಿಟ್ಟು ನಮಗೆ ಮಾಹಿತಿ ನೀಡಿ. ಸಂಪರ್ಕಿಸಬೇಕಾದ ಸಂಖ್ಯೆ  : ಶ್ರೀ ವಿಕ್ಟರಿ ವೀರೇಶ್  99004 90718. -ವಿವೇಕಾನಂದ. ಎಚ್. ಕೆ., ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ