ಒಂದು ಒಳ್ಳೆಯ ನುಡಿ - 307
ಬರಹಗಾರರ ಬಳಗ
ಡಿಸೆಂಬರ್ ೩೧, ೨೦೨೫
೯ ವೀಕ್ಷಣೆಗಳು
ಋಣಾನುಬಂಧವೋ, ಕರ್ಮಬಂಧವೋ ಇಟ್ಟುಕೊಂಡು ಭಗವಂತನಿಚ್ಛೆಯಂತೆ ಭೂಮಿಗೆ ಬಂದವರು ನಾವು. ಓರ್ವರು ಭಿಕ್ಷೆ ನೀಡಿದ್ದಾರೆಂದರೆ ಅದನ್ನು ಸರಿಯಾದ ರೀತಿಯಲ್ಲಿ ಬಳಸುವುದು ನಮ್ಮ ಕರ್ತವ್ಯವೋ ಜವಾಬ್ದಾರಿಯೋ ಆಗಿದೆ. ಆದರೆ ಚಂಚಲ ಚಿತ್ತರಾದ ಕೆಲವರು ಮನಸ್ಸಿಗೆ ಬಂದಂತೆ ವರ್ತಿಸುವುದನ್ನು ದಿನನಿತ್ಯ ನೋಡುತ್ತಿದ್ದೇವೆ. ಇದರಿಂದ ಮನೆಯವರಿಗೆ, ಸುತ್ತಮುತ್ತಲಿನವರಿಗೆ ನೋವುಂಟಾಗುತ್ತದೆ. ನೋವು ಕೊಡುವವರಿಗೆ ಆ ಬಗ್ಗೆ ಚಿಂತೆಯೇ ಇಲ್ಲ. ಯಾಕೆ ಹೀಗೆ? ಎಂದು ಯೋಚಿಸಿದಾಗ ಅವರವರ ಕರ್ಮವೇ ಸರಿ. ಬೆನ್ನು ಬಿಡದಲ್ಲ? ಅದಕ್ಕಾಗಿ ಸಮಾಜದಲ್ಲಿ ಒಳ್ಳೆಯ ಸಂಬಂಧ, ವ್ಯವಹಾರ ನಮ್ಮದಾಗಿದ್ದರೆ ಯಾರಿಗೂ ಕಿರಿಕಿರಿಯಾಗದು. ನಡೆನುಡಿ ಚೆನ್ನಾಗಿದ್ದರೆ ಆಡುವವರ ಬಾಯಿ ಸುಮ್ಮನಿರಬಹುದು. ಕೆಣಕುವುದನ್ನು ಮಾಡಬಾರದು. ಓರ್ವ ಸುಮ್ಮನಿದ್ದಾನೆ, ಮೌನವಾಗಿದ್ದಾನೆಂದರೆ ಆತ ಗೊತ್ತಿಲ್ಲದವನಲ್ಲ. 'ಬೇಡ ಕೊಚ್ಚೆಗೆ ಕಲ್ಲೆಸೆಯುವುದು'ಎಂದು ಯೋಚಿಸುತ್ತಾನೆ, ಜಾಣನಾತ. 'ಗೋಡೆಗೆಸೆದ ಚೆಂಡು ಪುನ: ಎಸೆದವನತ್ತ ಬರುತ್ತದೆ. 'ಈ ಪ್ರಜ್ಞೆಯಿರಲಿ. ಅನಗತ್ಯ, ಅಹಮಿನ ಮಾತುಗಳಿಂದ ಮನಸ್ತಾಪಗಳು ಆಗುವುದು. ಎಷ್ಟು ಬೇಕೋ ಅಷ್ಟೇ ಮಾತನಾಡೋಣ, ಆಗದೇ? 'ದೇವರ ಭಯವೇ ಜ್ಞಾನದ ಆರಂಭವಂತೆ. ಭಗವಂತನು ಎಲ್ಲವನ್ನೂ ವೀಕ್ಷಿಸುತ್ತಾನೆಂಬ ಅರಿವಿರಲಿ.'ಭಯ' ಎಂದರೆ ಹೆದರಿಕೆ, ಅಂಜಿಕೆಯಲ್ಲ, ಒಂದು ರೀತಿಯ ಗೌರವ, ಪ್ರೀತಿ, ನಂಬಿಕೆ, ವಿಶ್ವಾಸ. ಜನ್ಮವೆತ್ತಿ ಬಂದ ಮೇಲೆ ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲದಿದ್ದರೂ, ಯಾರಿಗೂ ತೊಂದರೆಯಾಗದಂತೆ ಬದುಕಿ, ಜೀವನ ಸಾರ್ಥಕ ಪಡಿಸಿಕೊಳ್ಳೋಣವೇ?
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಡಿಸೆಂಬರ್ ೩೧, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬