ಒಂದು ಒಳ್ಳೆಯ ನುಡಿ - 310
ಬರಹಗಾರರ ಬಳಗ
ಜನವರಿ ೦೬, ೨೦೨೬
೮ ವೀಕ್ಷಣೆಗಳು
ಕ್ಯಾಲೆಂಡರ್ ದಶಂಬರ ೩೧ ತೋರಿಸುತ್ತಿರಬಹುದು. ಆದರೆ ನಮಗೆಲ್ಲ ಹೊಸವರುಷ ಇದಲ್ಲ. ಸಾಮಾನ್ಯವಾಗಿ ಮಾತಿಗೆ ಹೊಸವರುಷ ಹರುಷ ತರಲಿ ಹೇಳುವುದು ರೂಢಿ. ದಶಂಬರ ೩೧ ಎನ್ನುವುದು ಆ ತಿಂಗಳ ೨೦೨೫ ವರ್ಷದ ಕೊನೇ ದಿನ. ಈ ವರ್ಷದುದ್ದಕ್ಕೂ ನಾವೇನು ಮಾಡಿದ್ದೇವೆ? ಏನು ಮಾಡಬೇಕಾಗಿತ್ತು, ಮುಂದೇನು ನಮ್ಮ ನಡೆ? ಎನ್ನುವುದರ ಅವಲೋಕನ ಮಾಡಿ ಮುಂದುವರಿಯೋಣ.
ಶೀಲಂ ಶೌರ್ಯಮನಾಲಸ್ಯಂ ಪಾಂಡಿತ್ಯಂ ಮಿತ್ರಸಂಗ್ರಹ:/ ಅಚೋರ ಹರಣೀಯಾನಿ ಪಂಚೈತಾನ್ಯಕ್ಷಯೋ ನಿಧಿ:// ಶುದ್ಧ ಚಾರಿತ್ರ್ಯ, ಪರಾಕ್ರಮ, ಚುರುಕುತನ, ವಿದ್ವತ್ತು, ಸ್ನೇಹಿತರ ಬಳಗದ ಕೂಟ ಈ ಐದನ್ನು ಕದಿಯಲು ಆಗದು. ಮನುಜನ ಸಂಪತ್ತಿದು. ಇವುಗಳನ್ನು ಗಳಿಸಿ ಉಳಿಸುವ ಜವಾಬ್ದಾರಿ ನಮ್ಮದು. ಕಳೆದ ದಿನಗಳು ಹೋಗಲಿ. ಮುಂದೆ ಏನು ಮಾಡಬೇಕೆಂದು ಯೋಚಿಸಿ, ಹೆಜ್ಜೆಯೂರೋಣ. ಜನಿಸಿ ಬಂದ ಬಳಿಕ ಏನಾದರೂ ಗುರುತನ್ನು ಉಳಿಸುವಂತಿರಬೇಕು ನಮ್ಮ ನಡೆನುಡಿ. ಅದು ಯೋಗ್ಯ ರೀತಿಯಲ್ಲಿರುವಂತೆ ಪ್ರಯತ್ನಿಸೋಣ. 'ಬಂದ, ಉಂಡ, ಹೋದ' ಆಗ ಬಾರದು. ಧರ್ಮಕ್ಷೇತ್ರ ನಮ್ಮೀ ನೆಲ. ಆದಷ್ಟೂ ಧರ್ಮಕರ್ಮಗಳಲ್ಲೇ ಸಾಗಬೇಕು, ಮಕ್ಕಳಿಗೂ ಇದನ್ನು ತಿಳಿಸಿಹೇಳುವುದು ಹಿರಿಯರ ಕರ್ತವ್ಯ. ಈ ನೆಲದ ಮಣ್ಣಿನ ಸೊಗಡೇ ಹಾಗೆ. ನಮ್ಮ ಶ್ರೇಯಸ್ಸಿಗಾಗಿ, ಅನ್ಯರಿಗೆ ತೊಂದರೆಯಾಗದಂತೆ, ಅವರನ್ನೂ ಸೇರಿಸಿಕೊಂಡು ಖುಷಿಯಾಗಿ ಬದುಕಲು ಕಲಿಯೋಣ. ಹಾಡು-ಕುಣಿತ-ಉತ್ಸವ ಆಚರಣೆಯಿಂದ ಬೇರೆಯವರಿಗೆ, ಮನೆಯ ಸದಸ್ಯರಿಗೆ ತೊಂದರೆಯಾಗಬಾರದು. ಕೆಲವೊಂದು ಸಲ ಮಿತಿಮೀರಿದಾಗ ಉಸಿರೇ ನಿಂತದ್ದು ಇದೆ. ಪ್ರಾಣ ಮುಖ್ಯ, ಅದೇ ಹೋದರೆ ಮತ್ತೇನಿದೆ? ಕವಿರತ್ನ ಕಾಳಿದಾಸ ಹೇಳಿದ ಒಂದು ಉಕ್ತಿ 'ಉತ್ಸವಪ್ರಿಯಾ: ಖಲು ಮನುಷ್ಯಾ:' ಎಲ್ಲಿ ಸಿಗುತ್ತದೆ ಎಂದು ಕಾಯುವುದೇ ಅಭ್ಯಾಸವಾಗಿಬಿಟ್ಟಿದೆ. ನಾವು ಮನುಷ್ಯರು ಉತ್ಸವಪ್ರಿಯರು, ಸಿಕ್ಕಿದ್ದೇ ನೆಪವಾಗಿ ಗೌಜಿ, ಗದ್ದಲ, ಆಡಂಬರ ಮಾಡ್ತೇವೆ. ಎಲ್ಲವೂ ಆರೋಗ್ಯಕರವಾಗಿರಲಿ. ಕೈಗೊಂಬ ಕಾಯಕದಲ್ಲಿ ಶ್ರದ್ಧೆಯಿರಲಿ.
-ರತ್ನಾ ಕೆ ಭಟ್ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಜನವರಿ ೦೬, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬