ನಾಲಿಗೆಯಿಂದಲೇ ಸ್ವರ್ಗ : ನಾಲಿಗೆಯಿಂದಲೇ ನರಕ ಎಷ್ಟೊಂದು ಸತ್ಯವಾದ ನಾಣ್ನುಡಿ. 'ಕುಲಕುಲವೆಂದು ಹೊಡೆದಾಡದಿರಿ, ತಮ್ಮ ಕುಲದ ನೆಲೆಯನೇನಾದರು ಬಲ್ಲಿರಾ? 'ಹಾಡಿದವರು ದಾಸಶ್ರೇಷ್ಠರು. 'ನಾಲಿಗೆ ಕುಲವನರುಹಿತು' ಮಹಾಭಾರತ ಮಹಾಕಾವ್ಯದಲ್ಲಿ ಉಲ್ಲೇಖವಾದ ಸಾಲುಗಳಿವು. ನಾಲಿಗೆಯಿಂದಲೇ ಮಾತು, ನಾಲಿಗೆಯಿಂದಲೇ ಮೃತ್ಯು 'ಅಬ್ಬಬ್ಬಾ ಈ ಮನುಷ್ಯನ ನಾಲಿಗೆಯ ಚರಿತ್ರೆಯೇ. ನಾಲಿಗೆ ಶುದ್ಧ, ಸ್ವಚ್ಛವಾಗಿರಲಿ.ಆಡುವ ಮಾತುಗಳು ಹಿತವಾಗಿರಲಿ. ಕೇಳುಗರಿಗೆ ಪ್ರಿಯವಾಗಿರಲಿ. ಪ್ರಾಥಮಿಕ ಶಾಲೆಯಲ್ಲಿ ಉಪಪಠ್ಯವೆಂದು ಒಂದು ಪುಸ್ತಕ ಭಾಷಾಪಾಠದಲ್ಲಿತ್ತು. ಅದರಲ್ಲಿರುವ ಕಥೆಗಳನ್ನು ರಂಗುರಂಗಾಗಿ, ಅಭಿನಯದೊಂದಿಗೆ ನಮಗೆ ಶಿಕ್ಷಕರು ಹೇಳುತ್ತಿದ್ದರು. ಓರ್ವ ಅರಸನು "ಈ ವಿಶ್ವದಲ್ಲಿ ಅತ್ಯಂತ ಅಮೂಲ್ಯವಾದ, ಶ್ರೇಷ್ಠವೆನಿಸಿದ ವಸ್ತು ಯಾವುದೆಂದು "ಮಂತ್ರಿ ಹತ್ತಿರ ಕೇಳಿದನಂತೆ. ತಕ್ಷಣ ಮಂತ್ರಿ ಹೇಳಿದ ಉತ್ತರ "ನಾಲಿಗೆ". ಯಾಕೆ? ಹೇಗೆ? ಅರಸನ ಮರುಪ್ರಶ್ನೆ. ಬುದ್ಧಿವಂತ ಮಂತ್ರಿ ಬಿಡಲಿಲ್ಲ.ಸ್ವಾಮಿ "ಈ ನಾಲಗೆಯಿದೆಯಲ್ಲ, ಇದು ಒಂದು ಕುಟುಂಬವನ್ನೇ ಉನ್ನತಮಟ್ಟಕ್ಕೆ ಒಯ್ಯಬಹುದು, ನಾಡನ್ನು ದೇಶವನ್ನು ಕಟ್ಟಬಹುದು,ಬಾಂಧವ್ಯಗಳನ್ನು ಬೆಸೆಯಬಹುದು. ಉತ್ತಮೋತ್ತಮ ನುಡಿಗಳಿಂದ ರಂಜಿಸಬಹುದು. ಅಜ್ಞಾನಿಗಳ ಮನಸ್ಸನ್ನು ತಿದ್ದಿ ಸುಜ್ಞಾನಿಗಳನ್ನಾಗಿಸಬಹುದು. ಸಂಗೀತ, ನಾಟಕ ಎಲ್ಲವೂ ನಾಲಿಗೆಯ ಪ್ರಭಾವ.ಸಂತಸದ ಶರಧಿಯ ಸೂತ್ರಧಾರ ನಾಲಿಗೆ. ಬಾಯಿಯೊಳಗಿರುವ ೩೨ ಹಲ್ಲುಗಳಿಗೆ ನಾಲಿಗೆಯೇ ಮುಖ್ಯಸ್ಥ. ಬೇಕಾದಂತೆ ಆಟ ಆಡಿಸುವುದು. ಹಲ್ಲುಗಳ ನಡುವೆ ಸಿಕ್ಕಿ ಬೀಳದ ಜಾಣತನ ನಾಲಿಗೆಗಿದೆ. "ನಾಲಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದೆ "ಗಾದೆ ಮಾತಿದೆ. ಇನ್ನೂ ಒಂದು ವಿಚಾರವಿದೆ. "ನಾಲಿಗೆ ಹಾಳಾದರೆ ಊರೆಲ್ಲ ಹಾಳು, ಮಸಣವಾಗಬಹುದು. "ಆಡುವ ಮಾತು ಮುತ್ತಿನ ಹಾಗೆ ಮೌಲ್ಯದಿಂದಿರಬೇಕು. ಸುಳ್ಳು ಹೇಳಬಾರದು. ದೂಷಣೆ, ಅಪಹಾಸ್ಯ, ವ್ಯಂಗ್ಯ, ಕೋಪ, ಕೊಂಕು ಮಾತು ಮಸಣಕ್ಕೆ ದಾರಿ ಸ್ವಾಮಿ. "ಮಾತು ಉಸಿರನ್ನೇ ನಿಲ್ಲಿಸಬಹುದು. ಎಲ್ಲಿಯಾದರೂ ಸಿಟ್ಟು ನೆತ್ತಿಗೇರಿ ಬೈಗುಳ ಸುರಿಸಿದರೆ, ಎದುರಾಳಿ ಕೆನ್ನೆಗೆ ಹೊಡೆದರೆ ಇವನ ೩೨ ಹಲ್ಲುಗಳು ಅಲುಗಾಡಬಹುದು, ಬೀಳಲೂ ಬಹುದು. ವಿಚಾರ ಮಾಡದ, ವಿಮರ್ಶೆ ಮಾಡದವರು ಕೆಟ್ಟದ್ದನ್ನೇ ನಂಬಿ ಮತ್ತಷ್ಟೂ ದ್ವೇಷ ಕಾರುವರು. "ಒಳಿತು, ಕೆಡುಕಿನ ಸರದಾರ ನಾಲಿಗೆ. ಮಾತು ಹಿತ-ಮಿತವಾಗಿರಬೇಕು ಪ್ರಭು, ಹಾಗಾಗಿ ನಾಲಗೆಯಿಂದಲೇ ಎಲ್ಲವೂ". ಅರಸನೂ ಮೆಚ್ಚಿ ತಲೆದೂಗಿ ಬಹುಮಾನ ನೀಡಿದನಂತೆ. 'ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು* ನಾಲಿಗೆ' ಅಲ್ಲವೇ? ವಿಚಾರ ಮಾಡಿ ಪರರ ದೂಷಿಸುವುದಕೆ ಚಾಚಿಕೊಂಡಿರುವ ನಾಲಿಗೆ ದಾಸವರೇಣ್ಯರು ಹಾಡಿದರು. ನಾವು ಕಂಡು ಕೇಳಿದ ಹಾಗೆ ನಾಲಿಗೆಯಾಡಿದ ನುಡಿಗಳಿಂದಾಗಿ ಇಂದು ಬಹುತೇಕ ಕುಟುಂಬಗಳ ಸದಸ್ಯರು ಬಳಲುತ್ತಿದ್ದಾರೆ. ಒಂದೆಡೆ 'ನಾನು ನನ್ನದೆಂಬ ವ್ಯಾಮೋಹ, ನನ್ನ ಗಂಡ/ಹೆಂಡತಿ, ಮಕ್ಕಳು ಮಾತ್ರ, ಬೇರೆಯವರೆಲ್ಲ ಕಾಲಿಗೆ ತೊಡರುವ ಬಳ್ಳಿಗಳೆಂಬ ಮನೋಭಾವ,ಸ್ವಾರ್ಥ ಇದಕ್ಕೆ ಪೂರಕ ನಾಲಿಗೆಯಿಂದ ಬರುವ ಮಾತುಗಳು ಸೇರಿ ಕುಟುಂಬ ಛಿದ್ರವಾದ್ದೂ ಇದೆ.ಅವರಿಗೆ ಬುದ್ಧಿಬರುವಾಗ ತಲೆಕೂದಲು ಬೆಳ್ಳಗಾಯಿತು, ನಿಲ್ಲಲೂ ಶಕ್ತಿಯಿಲ್ಲ, ಹಲವಾರು ಕುಟುಂಬ ಸದಸ್ಯರನ್ನು ಕಳೆದುಕೊಂಡಾಗಿರುತ್ತದೆ. ನಾವು ಸಹ ನಾಲಿಗೆ ಇದೆಯೆಂದು ಮಾತನಾಡದೆ ವಿಮರ್ಶಿಸಿ ಮಾತನಾಡೋಣ. ಸತ್ಕಾರ್ಯಕ್ಕೆ ನಾಲಿಗೆಯ ನುಡಿಗಳಿರಲಿ. ಆಡದೆ ಕರ್ತವ್ಯ ಮಾಡುವ ಸಾಲಿನಲ್ಲಿ ನಿಲ್ಲೋಣ. ಲಕ್ಷ್ಮೀರ್ವಸತಿ ಜಿಹ್ವಾಗ್ರೇ ಜಿಹ್ವಾಗ್ರೇ ಮಿತ್ರಬಾಂಧವಾ:/* ಜಿಹ್ವಾಗ್ರೇ ಬಂಧನಂ ಪ್ರಾಪ್ತಂ ಜಿಹ್ವಾಗ್ರೇ ಮರಣಂ ಧ್ರುವಮ್// (ಶ್ಲೋಕ:ಸರಳ ಸುಭಾಷಿತ)-ರತ್ನಾ ಕೆ ಭಟ್ಟ ತಲಂಜೇರಿ ಚಿತ್ರ ಕೃಪೆ: ಇಂಟರ್ನೆಟ್ ತಾಣ