ತನ್ನ ಕರ್ತವ್ಯ, ಕೆಲಸ, ವ್ಯವಹಾರ ತನ್ನದನ್ನು ನೋಡಿಕೊಂಡು ಇರಬೇಕಾದ್ದು ಸಹಜ. ತನ್ನ, ತನ್ನ ಮನೆಯವರ, ತನ್ನನ್ನೇ ನಂಬಿದವರ ಜೀವನಕ್ಕೆ ಸಂಪಾದನೆ ಬೇಕು. ಅದನ್ನು ನೋಡಿಕೊಂಡರೆ ಸಾಕು. ಅನ್ಯರ ಬದುಕಿನೊಳಗೆ ಇಣುಕುವುದು ಸರಿಯಲ್ಲ. ಏನಾದರೂ ಉತ್ತಮ ಅಂಶಗಳನ್ನು ತನ್ನ ಬದುಕಿಗೆ ಅಳವಡಿಸಲಿದ್ದರೆ ಮಾಹಿತಿ ಪಡೆಯಲಿ. ಅವರಿವರ ವಿಷಯ ಕಟ್ಟಿಕೊಂಡು ಆರೋಗ್ಯ, ತಲೆ, ಆಯುಷ್ಯ ಹಾಳುಮಾಡಿಕೊಳ್ಳಬಾರದು. ಓಲೆಕಾರನಿಗೇಕೆ ಬರೆದ ಸುದ್ದಿಯ ಚಿಂತೆ?/ ಓಲೆಗಳನವರವರಿಗೈದಿಸಿರೆ ಸಾಕು// ಸಾಲಗಳೊ, ಶೂಲಗಳೊ, ನೋವುಗಳೊ, ನಗುವುಗಳೊ!/ ಕಾಲೋಟವವನೂಟ-ಮಂಕುತಿಮ್ಮ// ಎಷ್ಟು ಮಾರ್ಮಿಕವಾಗಿ, ವಾಸ್ತವಾಂಶಗಳನ್ನು ಸಂದೇಶದ ರೂಪದಲ್ಲಿ ಮಾನ್ಯ ಡಿ.ವಿ.ಜಿಯವರು ತಮ್ಮ ಕಗ್ಗದ ಸಾಲುಗಳಲ್ಲಿ ಉಣಬಡಿಸಿದ್ದಾರೆ. ಅಂಚೆಯವನಿಗೆ ಕಾಗದಪತ್ರಗಳನ್ನು ಮನೆಮನೆಗೆ ಹಂಚುವ ಕೆಲಸ, ಅದರೊಳಗೆ ಏನಿದೆ ಎನ್ನುವುದು ಅಗತ್ಯವಿಲ್ಲ, ಇದೇ ನಮ್ಮ ಜೀವನದ ತಿರುಳು ಸಹ. ಅದು ಅವನ ಗಳಿಕೆಗೆ ದಾರಿ, ಕರ್ತವ್ಯ. ನಾವು ಸಹ ಬದುಕಿನ ನೆಲೆಯನ್ನು ಕಂಡುಕೊಳ್ಳೋಣ, ಅದೂ ಪ್ರಾಮಾಣಿಕವಾಗಿ. ಲೋಕದ ಜನರ ವಿಷಯ ಬೇಡ. ನಮ್ಮ ಕೆಲಸ ವ್ರತದಂತೆ,ತಪಸ್ಸಿನಂತೆ ಇರಬೇಕು. (ಸಂಗ್ರಹ) ರತ್ನಾ ಕೆ ಭಟ್ ತಲಂಜೇರಿ ಚಿತ್ರ ಕೃಪೆ: ಇಂಟರ್ನೆಟ್ ತಾಣ