ಒಂದು ಒಳ್ಳೆಯ ನುಡಿ - 321
ಬರಹಗಾರರ ಬಳಗ
ಜನವರಿ ೨೭, ೨೦೨೬
೪ ವೀಕ್ಷಣೆಗಳು
ಜನವರಿ 25 ನ್ನು 'ರಾಷ್ಟ್ರೀಯ ಮತದಾರರ ದಿನ’ವಾಗಿ ಪ್ರತೀ ವರ್ಷ ಆಚರಣೆ ಮಾಡುತ್ತೇವೆ. ನಮ್ಮ ಸಂವಿಧಾನದಡಿ ರಾಜಕೀಯ ವ್ಯವಸ್ಥೆಯ ಭದ್ರಬುನಾದಿಗಾಗಿ, ನೀಡಿರುವ ಪ್ರಬಲ ಅಸ್ತ್ರವೇ 'ಮತದಾನ'. ಮತ ಚಲಾವಣೆ ನಮ್ಮ ಹಕ್ಕು ಮತ್ತು ಕರ್ತವ್ಯ ಸಹ. ಓರ್ವ ಮತದಾರ ಬಯಸಿದರೆ ಸರಕಾರದ ಆಗುಹೋಗುಗಳು ಸರಿಯಿಲ್ಲವೆಂದೆನಿಸಿದರೆ ಸ್ಥಾನದಿಂದ ಕೆಳಗಿಳಿಸಲೂ ಬಹುದು. ನಮ್ಮ ದೇಶದಲ್ಲಿ ಮತ ಚಲಾಯಿಸಲು ೧೮ ವರ್ಷ ತುಂಬಿರಬೇಕು. ಭಾರತದ ಪ್ರಜೆಯಾಗಿರಬೇಕು. ನೀತಿ ನಿಯಮ ನಿಬಂಧನೆಗಳನ್ನು ಪಾಲಿಸಲೇ ಬೇಕು. ಸಾರ್ವತ್ರಿಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಂಡಿರಬೇಕು. ಈ ಬಗ್ಗೆ ಆಯಾಯ ಮತಗಟ್ಟೆ, ಅಲ್ಲಿಯೇ ನಿರ್ದಿಷ್ಟಾಧಿಕಾರಿಗಳ (ಬಿ.ಎಲ್.ಒ) ನೇಮಕ, ತಿದ್ದುಪಡಿ, ಹೆಸರು ತೆಗೆದು ಹಾಕುವುದು, ಸೇರ್ಪಡೆ ಮಾಡುವುದು ಮುಂತಾದ ಪ್ರಕ್ರಿಯೆ ನಡೆಸಲಾಗುವುದು. ಇತ್ತೀಚೆಗೆ ಆಧಾರ್ ಸಂಖ್ಯೆಯನ್ನೂ ಮತದಾರನ ಹೆಸರಿಗೆ ಜೋಡಣೆ ಮಾಡಲಾಗುತ್ತಿದೆ. ಇದರಿಂದ ಸುಳ್ಳು ದಾಖಲೆಗಳನ್ನು, ಕಳ್ಳ ಮತದಾನಗಳನ್ನು ತಡೆಯಲಾಗುತ್ತದೆ. ಓರ್ವ ಮತದಾರ ಹಲವಾರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು ಅಕ್ಷಮ್ಯ ಅಪರಾಧ. ಇದು ಸಾಬೀತಾದರೆ ದಂಡದ ಜೊತೆ ಜೈಲುವಾಸದ ಶಿಕ್ಷೆಯೂ ಇದೆ. ಭಾರತದ ನಾಗರಿಕರೆನಿಸಿದ ನಾವು ಇಂತಹ ಮೋಸಗಳನ್ನು ಖಂಡಿಸಬೇಕಾದುದು ನಮ್ಮ ಜವಾಬ್ದಾರಿ ಸಹ. ದೇಶದ ಸಮಗ್ರ ಆಗುಹೋಗುಗಳ ಪರಿವೆ, ಪ್ರಜ್ಞೆ ಎರಡನ್ನೂ ಮೂಡಿಸಲು ಮತದಾನದ ಮೂಲಕ ಸಹಕಾರಿಯಾಗಬಹುದು. ವಾಸ್ತವಾಂಶಗಳ ಅರಿವು ಓರ್ವ ಮತದಾರನಿಗಿರಬೇಕು. ಇಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಅಗತ್ಯ. ಅತ್ಯುತ್ತಮ ನಾಯಕರನ್ನು ಆಯ್ಕೆ ಮಾಡುವುದು ಪ್ರತಿಯೊಬ್ಬ ಮತದಾರನ ಕೈಯಲ್ಲಿದೆ.
ಜಗತ್ತಿನಲ್ಲಿಯೇ ಅತಿದೊಡ್ಡ ಸಾರ್ವತ್ರಿಕ ಚುನಾವಣೆ ನಡೆಸುವ ಸ್ವಾಯತ್ತ ಸಂಸ್ಥೆ.ಪ್ರಜಾಪ್ರಭುತ್ವ ಗಟ್ಟಿಯಾಗಿ ತನ್ನ ಬೇರುಗಳನ್ನೂರಲು ಒಂದು ಸಮಗ್ರ,ಸುಶಿಕ್ಷಿತ ವ್ಯವಸ್ಥೆ ಬೇಕು. ೧೯೫೦ರ ಜನವರಿ ೨೫ ರಂದು ಭಾರತೀಯ ಚುನಾವಣ ಆಯೋಗವನ್ನು ಆರಂಭಿಸಲಾಯಿತು. ನಿರ್ಭೀತ, ನ್ಯಾಯಸಮ್ಮತ, ಚುನಾವಣೆ ನಡೆಸುವುದೇ ಆಯೋಗದ ಮುಖ್ಯ ಧ್ಯೇಯ."ಮಾದರಿ ನೀತಿ ಸಂಹಿತೆ" ಉಲ್ಲಂಘಿಸಬಾರದು. ಮೊದಲ ಚುನಾವಣಾ ಆಯೋಗದ ಜವಾಬ್ದಾರಿ ನಿರ್ವಹಿಸಿದವರು, ಮಾನ್ಯ ಸುಕುಮಾರ್ ಸೇನ್ ರವರು. ಚುನಾವಣೆಯ ಕಾಲದಲ್ಲಿ ಕೆಲವೊಂದು ನಿರ್ದಿಷ್ಟ ಬದಲಾವಣೆಗಳನ್ನು ತಂದು ಯಶಸ್ವಿಯಾದವರು ೧೯೯೦ ರಲ್ಲಿ ನೇಮಕವಾದ ಮುಖ್ಯ ಚುನವಣಾ ಆಯುಕ್ತರಾದ ಟಿ.ಎನ್.ಶೇಷನ್ ರವರು.
ಪ್ರಸಕ್ತ ಮಾನ್ಯ ಗ್ಯಾನೇಶ್ ಕುಮಾರ್ ರವರು ಚುನಾವಣಾ ಆಯೋಗದ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲೋಕಸಭೆ, ರಾಜ್ಯಸಭೆ ಚುನಾವಣೆಗಳು ಕೇಂದ್ರ ಚುನಾವಣಾ ಆಯೋಗದಡಿ ಬರುತ್ತದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಆಯ ರಾಜ್ಯಗಳ ರಾಜ್ಯ ಚುನಾವಣಾ ಆಯೋಗದಡಿ, ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತ್, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರುತ್ತದೆ.
ಈ ದಿನ ಪಂಚಾಯತ್ ಮಟ್ಟದಲ್ಲಿ, ಬೂತ್ ಮಟ್ಟದಲ್ಲಿ ಮತದಾನದ ಮಹತ್ವದ ಬಗ್ಗೆ ಪ್ರಾತ್ಯಕ್ಷಿಕೆ, ಮಾಹಿತಿ, ಬೀದಿನಾಟಕ ಪ್ರದರ್ಶನ ಇಟ್ಟುಕೊಂಡು ಮತದಾರರಿಗೆ ಜಾಗೃತಿ ಮೂಡಿಸುತ್ತಾರೆ. ಅತ್ಯುತ್ತಮ ಮತದಾರರ ಪಟ್ಟಿ ಕರ್ತವ್ಯ ನಿರ್ವಹಿಸಿದವರನ್ನು ತಾಲೂಕು, ಜಿಲ್ಲಾಮಟ್ಟದಲ್ಲೂ ಅಭಿನಂದಿಸುವುದೂ ಇದೆ. ಚುನಾವಣಾ ಆಯೋಗದ ಸ್ಥಾಪನಾ ದಿನದಂಗವಾಗಿ ಜನವರಿ ೨೫ರ ದಿನವನ್ನು ‘ರಾಷ್ಟ್ರೀಯ ಮತದಾರರ ದಿನ’ ವೆಂದು ಘೋಷಿಸುವುದರ ಮೂಲಕ ಹಲವಾರು ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುವರು. ಮುಖ್ಯವಾಗಿ ಸಮರ್ಥ ಯುವ ಮತದಾರರನ್ನು ಆಕರ್ಷಿಸಲು ಬೃಹತ್ ಯೋಜನೆಗಳನ್ನು ಹಾಕಿಕೊಳ್ಳಲಾಯಿತು. ವಯಸ್ಸುವಾರು ಸೇರ್ಪಡೆಯ ಅಂಕಿ ಅಂಶಗಳನ್ನು ಸಹ ಕ್ರೋಢೀಕರಿಸಿದರು. ಬಿ.ಎಲ್.ಒ ಮತ್ತು ಗ್ರಾಮ ಸಹಾಯಕರು, ಸಿಬ್ಬಂಧಿಗಳು ತಾಲೂಕು, ಹೋಬಳಿ ಕಂದಾಯ ಮಟ್ಟದ ಅಧಿಕಾರಿಗಳು, ಕೆಲವೆಡೆ ಶಾಲಾ ಮುಖ್ಯಸ್ಥರು, ಅಂಗನವಾಡಿಯ ಕಾರ್ಯಕರ್ತೆಯರು ಸಹ ಈ ಪ್ರಕ್ರಿಯೆಯಲ್ಲಿ (ಅಂಕಿ ಅಂಶಗಳ ದಾಖಲೆ ಸಂಗ್ರಹಿಸಲು) ನಿರಂತರ ಕರ್ತವ್ಯ ನಿರ್ವಹಿಸುತ್ತಾರೆ.
ಮತದಾರರನ್ನು ಎಚ್ಚರಿಸುವುದು ಇದರ ಒಂದು ಅಂಗ. ಹಳ್ಳಿ ಹಳ್ಳಿಯಲ್ಲಿ ಗುಡ್ಡಬೆಟ್ಟದಲ್ಲಿ ತಿರುಗಾಡಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುವ ಕೆಲಸವನ್ನು ನಿಭಾಯಿಸುವ ಲಕ್ಷಗಟ್ಟಲೆ ಮತದಾನದ ಕರ್ತವ್ಯ ಅಧಿಕಾರಿಗಳಿಗೆಲ್ಲ ಈ ಸಂದರ್ಭದಲ್ಲಿ ಹೃದಯಪೂರ್ವಕ ನಮನಗಳು. ‘ಪ್ರತಿಜ್ಞಾವಿಧಿ’ಯ ಸಾಮೂಹಿಕ ಘೋಷಣೆ ಬೂತು ಮಟ್ಟದಲ್ಲಿ ಮಾಡಲಾಗುವುದು. ಹೊಸ ಮತದಾರರ ಗುರುತುಚೀಟಿ ವಿತರಿಸಲಾಗುವುದು. ನ್ಯಾಯ ಸಮ್ಮತ ಮತ, ನಿರ್ಭೀತಿ, ಉಚಿತ ಕೊಡುಗೆಗಳಿಗೆ ಬಲಿಯಾಗದೆ, ಧರ್ಮ, ಜನಾಂಗ, ಜಾತಿ, ಮತ, ವ್ಯಕ್ತಿ, ಭಾಷೆ ಯಾವುದಕ್ಕೂ ಒಳಗಾಗದೆ, ಸಮರ್ಥ ಅಭ್ಯರ್ಥಿಯ ಆಯ್ಕೆಯ ದೃಷ್ಟಿಯಿಂದ ಮತ ಚಲಾಯಿಸುವುದೇ ಪ್ರತಿಜ್ಞೆಯ ಸಾರ. ಸಂವಿದಾನದಲ್ಲಿ ಬರೆಯಲ್ಪಟ್ಟ ಆಶಯಗಳನ್ನು ಈಡೇರಿಸಿ, ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವ ಸಮರ್ಥ ನಾಯಕರ ಅಗತ್ಯವಿದೆ. ಭಾರತೀಯ ಮತದಾರರಾದ ನಾವೆಲ್ಲರೂ ಜಾಗರೂಕರಾಗಲು ಹೇಳೋಣ, ಜಾಗೃತಿ ಮೂಡಿಸೋಣ, ಜಾಗ್ರತರಾಗೋಣ.
(ವಿವಿಧ ಮೂಲಗಳಿಂದ ಸಂಗ್ರಹ)
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಜನವರಿ ೨೭, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬