ಒಂದು ಒಳ್ಳೆಯ ನುಡಿ - 322
ಬರಹಗಾರರ ಬಳಗ
ಜನವರಿ ೨೯, ೨೦೨೬
೫ ವೀಕ್ಷಣೆಗಳು
ಸಾಲ ನೀಡಿ ಸ್ನೇಹ ಕಳಕೊಂಡ'ವರು ಬಹಳಷ್ಟು ಮಂದಿ ನಮ್ಮ ನಿಮ್ಮ ನಡುವೆ ಇರಬಹುದು. ಸಾಲ ತೆಗೆದುಕೊಳ್ಳುವಾಗ ಹಲವಾರು ಸಲ ಭೇಟಿಯಾಗಬಹುದು. ಇತ್ತೀಚೆಗೆ ಈ ಮೊಬೈಲ್ ಬಂದ ಮೇಲಂತೂ ಪದೇ ಪದೇ ಮಾತನಾಡಿ ಕಿರಿಕಿರಿ ಉಂಟುಮಾಡಬಹುದು."ಅಯ್ಯೋ,ಇವನ ರಗಳೆಯೇ"ಎಂದು ಕೊಡುವವರೂ ಇದ್ದಾರೆ. ಸಿಗುವಲ್ಲಿವರೆಗೆ ಬಾಲ ಸುಟ್ಟ ಬೆಕ್ಕಿನಂತೆ ಹಿಂದೆ-ಮುಂದೆ ಸುಳಿದಾಡುವುದಿದೆ.ಹಣ ಕೈಗೆ ಬಂದ ಮೇಲೆ ಪರಿಚಯವೇ ಇಲ್ಲದ ಹಾಗೆ ಅವನ ವರ್ತನೆಯಿರಬಹುದು. "ನೀನೇ ದೇವರು, ದೈವ"ಎಂದವನು, ಅನಂತರ ತಿರುಗಿ ಸಹ ನೋಡದಿರಬಹುದು .'ಸಾಲವನು ಕೊಂಬಾಗ ಹಾಲೋಗರ ಉಂಡಂತೆ' ಸರ್ವಜ್ಞರ ನುಡಿ. ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಮನಸ್ಸಿದ್ದವರಿಗೆ ಯಾವಾಗಲೂ ಕಷ್ಟ ತಪ್ಪಿದ್ದಲ್ಲ ,ಇದು ಲೋಕಾರೂಢಿ ಮಾತು. ಹೌದಾಗಿರಬಹುದೆಂದು ಒಮ್ಮೊಮ್ಮೆ ನನಗೂ ಅನಿಸುವುದಿದೆ. ಜೀವನಾನುಭವದ ಹಾದಿಯಲ್ಲಿ ಇದನ್ನೆಲ್ಲ ನೋಡಿಯಾಗಿದೆ. ಸಾಲ ಯಾಕಾಗಿ ಮಾಡ್ತಾನೆ? ಎಂದು ಸ್ವಲ್ಪ ಅವನ ಹಿನ್ನೆಲೆಯ ಬಗ್ಗೆ ಅರಿಯುವುದೊಳ್ಳೆಯದು. ಕೆಟ್ಟ ಕೆಲಸಗಳ ಚಟವೇ? ಅಲ್ಲ ಅನಾರೋಗ್ಯವೇ? ಹಿರಿಯರ ಅಗಲುವಿಕೆಯಿಂದ ಬೆನ್ನಿಗೆ ಬಂದ ಸಾಲವೇ? ಮಕ್ಕಳ ಓದಿಗೆಯೇ? ವಿಮರ್ಶೆಯಿರಲಿ. ಪುನಃ ಆತ ಹೇಗೆ ಹಿಂದಿರುಗಿಸಬಹುದು? ಎನ್ನುವ ದೂರದೃಷ್ಟಿಯೂ ಇರಲಿ. ಎಷ್ಟೇ ಆಲೋಚನೆ ಮಾಡಿದರೂ ಸಿಕ್ಕಿಬೀಳುವುದಿದೆ. ಸಾಲ ಕೊಟ್ಟು ಬೆಪ್ಪುತಕ್ಕಡಿಗಳಾಗುವುದು ಬೇಡ. ಸಾಲ ಆಲೋಚಿಸಿ ಕೊಡೋಣ.ಇಲ್ಲದಿದ್ದರೆ 'ಕೊಟ್ಟವ ಕೋಡಂಗಿ, ಇಸ್ಕೊಂಡವ ಈ(ವೀ)ರಭದ್ರ' ಆಗಬಹುದು. ಕೊಟ್ಟವರಿಗೆ ಮೂರು ನಾಮ ಸುಲಭದಲ್ಲಿ ಹಾಕಬಹುದು.
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಜನವರಿ ೨೯, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬