ಒಂದು ಒಳ್ಳೆಯ ನುಡಿ - 324
ಬರಹಗಾರರ ಬಳಗ
ಫೆಬ್ರವರಿ ೧೦, ೨೦೨೬
೨ ವೀಕ್ಷಣೆಗಳು
ನಾವು ಎತ್ತ ಸಾಗುತ್ತಿದ್ದೇವೆ, ನಮ್ಮ ಮನದಲ್ಲಿ ಈ ರೀತಿಯ ವಿಕಾರ ಉಂಟಾಗಲು ಕಾರಣವೇನು? ಎಂಬುದರ ಬಗ್ಗೆ, ನಾವೇ ಸಮಾಧಾನದಲ್ಲಿ ಕುಳಿತು ವಿಮರ್ಶೆ ಮಾಡದೇ ಇದ್ದಲ್ಲಿ ಇದು ಎಲ್ಲಿಗೆ ತಲುಪಬಹುದೆಂದು ಯೋಚಿಸ ಬೇಕಾದ ಸಮಯ ಈಗ ನಮ್ಮ ಮುಂದಿದೆ.ಯುವ ಜನಾಂಗವೆಂದರೆ ಭರವಸೆಯ ಬೆಳಕಿನ ಕಿರಣಗಳಂತೆ.ಕುಟುಂಬದ ಮುಂದಿನ ತಲೆಮಾರಿನವರು.ಹೆತ್ತವರ ಕುರಿತು ನಿರ್ಲಕ್ಷ್ಯವೇತಕೆ? ಏನೋ ಹಣ ಸಂಪಾದನೆ, ಬದುಕಿಗಾಗಿ ವಿದೇಶವಾಸವೇನೋ ಸರಿ. ಊರಿನಲ್ಲಿ ಜೊತೆಗಿದ್ದವರದೂ ಶೇಕಡಾ ೯೦%ವೂ ಸೇರಿ ಪ್ರತ್ಯೇಕ ವಾಸ. ವಯಸ್ಸು ಸಂದಕಾಲದಲ್ಲಿ ಊರುಗೋಲಾಗಿರಬೇಕಾದ ಮಕ್ಕಳ ಪ್ರತ್ಯೇಕತನ. ಹೆತ್ತವರು ಏನಾದರೂ ಮಾತನಾಡಲು ನೋಡಿದರೆ ಆ ಬಗ್ಗೆ ಅಸಡ್ಡೆಯ ಮನೋಭಾವ ಕೆಲವು ಮಕ್ಕಳಿಗೆ. ಓದಿದ ಕೇಳಿದ ಕೆಲವೊಂದು ಘಟನೆಗಳು ಮನಸ್ಸನ್ನೇ ಕಲಕಿದೆ. ಜೀವದಲ್ಲಿರುವಾಗ ನೋಡದವರು, ಮಾತನಾಡದವರು, ಉಸಿರು ಚೆಲ್ಲಿದಾಗ ಬಂದು ಮಕ್ಕಳಾಗಿ ಜನಿಸಿದ ತಪ್ಪಿಗೆ ಮಣ್ಣು ಮಾಡಬಹುದಲ್ಲ? ಅದೂ ಇಲ್ಲ. ಇದ್ದವರೇ ಕಾರ್ಯ ಮುಂದುವರಿಸಿ ಹೇಳುವವರೂ ಇದ್ದಾರೆ. ತಮಗೂ ನಾಳೆ ಈ ರೀತಿ ಆಗಬಹುದೆನ್ನುವ ಕಲ್ಪನೆ ಬೇಡವೇ? ಜೀವನಕ್ಕಾಗಿ ದುಡಿತ ಬೇಕು ನಿಜ. ಆದರೆ ಹಿರಿಯರ ಬಗ್ಗೆ ಕಾಳಜಿಯಿರಲಿ, ಮಮಕಾರ, ಪ್ರೀತಿ, ಗೌರವವಿರಲಿ. ಆಗಾಗ ಯೋಗಕ್ಷೇಮ ವಿಚಾರಿಸಿ, ಅದೇ ಅವರಿಗೆ ಟಾನಿಕ್. ಹೆತ್ತವರು ತಮ್ಮ ಮಕ್ಕಳ ಪರಿಸ್ಥಿತಿಯನ್ನು ಅರ್ಥವಿಸಿಕೊಂಡು ಹೊಂದಾಣಿಕೆ ಮಾಡಿಕೊಳ್ಳಬೇಕು. ಯಾವುದೂ ಏಕಮುಖ ತೀರ್ಮಾನವಾಗಿರಬಾರದು. ಹೊಂದಾಣಿಕೆಯೆನ್ನುವ ಬಲವಾದ ಅಸ್ತ್ರವಿರಲಿ. ಇರುವುದೊಂದೇ ಜನ್ಮ, ಖುಷಿ ಖುಷಿಯಾಗಿರೋಣ, ಇದು ಅವರವರ ಕೈಯೊಳಗೆ ಇದೆ. ಅವರಿವರಲ್ಲಿ ಹೇಳಿಕೊಂಡು ತಿರುಗಾಡುವುದು ಬೇಡ. 'ಮನೆಯ ಮಜ್ಜಿಗೆಯನ್ನು ತಾಳೆ ಮರದಡಿಯಲ್ಲಿ ಕುಳಿತು ಕುಡಿಯುವಂತಾಗಬಾರದು. 'ಏನಾದರೂ ಮನಸ್ತಾಪವಿದ್ದರೂ ಕುಳಿತು ಇತ್ಯರ್ಥ ಮಾಡಿ ಸರಿಪಡಿಸಬಹುದು. ಕುಟುಂಬದಲ್ಲಿ ಕೆಲವು ಜನ ಕೊಡುವಷ್ಟು ಕಾಟ ಕೊಟ್ಟು, ವಯಸ್ಸಾದಾಗ ಬುದ್ಧಿ ಬರುವುದಿದೆ. ಮಾಡಿದ ತಪ್ಪು ಅರಿವಿಗೆ ಬರುವಾಗ ಒಂದಷ್ಟು ಒಡಹುಟ್ಟಿದವರನ್ನು, ಬಂಧುಗಳನ್ನು ಕಳೆದುಕೊಂಡಾಗಿರುತ್ತದೆ. ವಿಶಾಲವಾದ ಈ ಪ್ರಪಂಚವನ್ನು ವೀಕ್ಷಿಸುವ ಮನೋಭಾವ ಬೆಳೆಸಿಕೊಂಡರೆ ಆರೋಗ್ಯ ಮತ್ತು ನೆಮ್ಮದಿ. ಹಿರಿಯರ ಸೇವೆ ಭಗವಂತನ ಸೇವೆ, ಧ್ಯಾನಕ್ಕೆ ಸಮವಂತೆ. ಊರಿನಲ್ಲಿರುವ ಹೆತ್ತವರ ಆಸ್ತಿ ಐಶ್ವರ್ಯ ಬೇಕು, ಅದಕ್ಕಾಗಿ ಹಗಲಿರುಳು ಬೆವರು ಹರಿಸಿದ ಹಿರಿಯರು ಬೇಡವೆನ್ನುವುದು ಸರಿಯಲ್ಲ. 'ಆಸ್ತಿ ಹೋದರೆ ಸಂಪಾದಿಸಬಹುದು, ಅಸ್ಥಿಯಾದ ಮೇಲೆ ಹೆತ್ತವರು ಮತ್ತೊಮ್ಮೆ ಸಿಗಲಾರರು. ಯೋಚಿಸಿ ನಿರ್ಧರಿಸಿ.
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಫೆಬ್ರವರಿ ೧೦, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬