ಶಿವರಾತ್ರಿಯ ಜಾಗರಣೆ ಮುಗಿಯಿತು. ಆದರೆ ಕೆಲವರು ಕೆಲವೆಡೆ ಮಾಡುವ ಕಿತಾಪತಿ ಜೋರು. ಸೊತ್ತುಗಳಿಗೆ, ನೆಟ್ಟ ಸಸಿಗಳಿಗೆ ತೊಂದರೆ ಮಾಡೆಂದು ಆ ಶಿವದೇವರು ಖಂಡಿತಾ ಹೇಳಿರಲಾರ. 'ಓಂ ನಮ:ಶಿವಾಯ' ಪಂಚಾಕ್ಷರಿ ಬೀಜಮಂತ್ರವನು ಹೇಳಬೇಕಾದಲ್ಲಿ, ಹೇಳದೆ ಸುತ್ತಮುತ್ತಲಿನವರಿಗೆ ಬೇಸರಮಾಡಬಾರದು. ಇದು ಮೌಢ್ಯವೂ ಇರಬಹುದು. ಒಂದು ಸಲ ನಾನು ಮನೆಯಲ್ಲೇನೋ ಒಳಗಿನ ಕೆಲಸದಲ್ಲಿದ್ದಾಗ ನನ್ನವರು ಬಾ ನೋಡಿಲ್ಲಿ ಎಂದು ಕರೆದರು.ನೋಡಿದರೆ ಮನೆಯ, ಹತ್ತಿರವೇ ಇದ್ದ ಮಹಿಳಾ ಮಂಡಲಿಯ ಗೇಟೇ ಇಲ್ಲ. ಎಲ್ಲಿ ಹುಡುಕಿದರೂ ಇಲ್ಲ. ಶಾಲೆಗೆ ನಡೆದುಕೊಂಡು ಬರುತ್ತಿದ್ದ ಮಕ್ಕಳು, ಎರಡು ಗೇಟು ಅಲ್ಲಿ ಕೆಳಗಿನ ಪಶು ಚಿಕಿತ್ಸಾಲಯದ ಹಿಂಬದಿ ಇದೆ ಎಂದರು. ಹಾಗೆಯೇ ನೆಟ್ಟ ಬದನೆ ಗಿಡ, ಹೂವಿನ ಸಸಿಯನ್ನು ತಲೆಕೆಳಗೆ ಮಾಡಿ ನೆಟ್ಟಿದ್ದರು. ಏನು ಮಾಡಿದರೂ ಮಾತನಾಡಬಾರದಂತೆ. ಮೌನವಾಗಿ ಸಹಿಸಬೇಕಂತೆ. ಈ ರೀತಿಯ ತೊಂದರೆ ಕೊಡಬಾರದು. ಜಾಗರಣೆಯ ಸಮಯದಲ್ಲಿ ಭಜನೆ, ಸ್ತೋತ್ರಗಳು, ಯಕ್ಷಗಾನ. ನಾಟಕ, ನೃತ್ಯ, ಹರಿಕಥೆ ಎಲ್ಲ ಇರುವುದು ಇದನ್ನೆಲ್ಲ ಆನಂದಿಸಬಹುದು. ಶಿವರಾತ್ರಿ ವ್ರತ, ಉಪವಾಸ, ಜಾಗರಣೆಯೆಂದರೆ ಮೋಜು ಮಸ್ತಿಲ್ಲ. ಅದಕ್ಕೊಂದು ಭಗವಂತನ ಆರಾಧನೆಯ ಚೌಕಟ್ಟಿದೆ. ಆಧ್ಯಾತ್ಮಿಕದ, ಧ್ಯಾನದ ನೆಲೆಗಟ್ಟಿದೆ. ಹಗಲು ಬಹಳ ವಿಜೃಂಭಣೆಯ ಆಚರಣೆಯಿದ್ದರೆ, ರಾತ್ರಿಯ ಜಾಗರಣೆಯ ಕ್ರಮವೇ ಭಿನ್ನ. ಮಹಾಶಿವನ ಸೃಷ್ಟಿ ಸಂರಕ್ಷಣೆಯ ಸಂದೇಶವಿದೆ. ಶಿವತಾಂಡವ ಆಡಿದನೆಂದು ಶಿವಪುರಾಣದಲ್ಲಿ ಉಲ್ಲೇಖವಿದೆ. ರಾತ್ರಿಯ ವಿಶ್ರಾಂತಿ ಸಮಯದ ಜಾಗೃತಿ ಮೂಡಿಸುವಿಕೆ, ನಿದ್ರಾವಶನಾದರೂ ಆರನೆಯ ಇಂದ್ರಿಯ ಎಚ್ಚರದಲ್ಲಿರಬೇಕಂತೆ. ಆರಂಭ ಅಂತ್ಯವಿಲ್ಲದ ಶಿವನ ಕುರಿತಾದ ಧ್ಯಾನಕ್ಕೆ ಮನಮಾಡಬೇಕಂತೆ. ಕತ್ತಲೆಯಲ್ಲೂ ಬೆಳಕಿನ ಕಿರಣಗಳ ಅರಸೆಂಬ ಸಂದೇಶ. ಶಾಂತಿ, ಸಮೃದ್ಧಿ, ಆತ್ಮಶುದ್ಧಿಯ ಸಾಂಕೇತಿಕ ಒಳಪ್ರಜ್ಞೆಯದು. 'ನಾನೇನು ಒಳ್ಳೆಯ ಕಾರ್ಯ ಈ ದಿನ ಮಾಡಬಲ್ಲೆ'? ಎಂದು ಆಲೋಚನೆಯ ದಿಕ್ಕು ಹರಿದರೆ, ಶಿವರಾತ್ರಿ ಜಾಗರಣೆ ಮಾಡಿದ್ದಕ್ಕೂ ಸಾರ್ಥಕವಾಗಬಹುದು. ಅಜ್ಞಾನವೆಂಬ ಹಾದಿಯ ಮೇಲೆ ಜ್ಞಾನೋದಯದ ಮಾರ್ಗವನ್ನು ಅರಸುವ ಕಾಯಕವೇ ಜಾಗರಣೆ. ಜಾಗರಣೆಯ ಮರುದಿನ ಶಿವನ ಪೂಜೆಯ ಕೈಕೊಂಡು, ಇಷ್ಟಾರ್ಥಗಳ ನಿವೇದಿಸಿ ಆಹಾರ ಸೇವನೆಗೆ ಪ್ರಾಶಸ್ತ್ಯ. ಸಕಲ ಜೀವರಾಶಿಗಳೂ ಸಂತಸದಿಂದ ನಲಿಯಲಿ. ನಮ್ಮಲ್ಲಿರುವ ಪಶುತ್ವನಾಶವಾಗಿ, ಪಶುಪತಿಯತ್ತ ಸಾಗಲು, ವ್ರತ ಪೂರಕವಾಗಲಿ. ಇಂದ್ರಿಯ ಖಂಡನೆ, ದೇಹ ದಂಡನೆ ಶಿವಮುಖದತ್ತ ಮನಮಾಡಲು ಸಹಾಯಕ. ಬಾಳು ಧೂಳಾಗದೆ ಅಮೃತವಾಗಲಿ.ಇಲ್ಲಿ ಆಡಂಬರ,ಅಲಂಕಾರ,ಐಶ್ವರ್ಯ ಬೇಡ. ಕೇವಲ ನೀರು, ಕಾಡಿನ ಹೂವು, ಬಿಲ್ವಪತ್ರೆ, ಎಳನೀರಿನ ಅಭಿಷೇಕ ಮಾತ್ರ. ಸಂಸಾರ ಕ್ಲೇಶದಗ್ಧಸ್ಯ ವ್ರತೇನಾನೇನ ಶಂಕರ:/ ಪ್ರಸೀದ ಸುಮುಖೋನಾಥ ಜ್ಞಾನದೃಷ್ಟಿ ಪ್ರದೋಭವ// ಕಷ್ಟಮಯವಾದ ಈ ಸಂಸಾರವೆಂಬ ಶರಧಿಯಲಿ ಮುಳುಗಿದ ನಾನು, ನಿನ್ನ ವ್ರತ ಆರಾಧನೆ ನೆರವೇರಿಸಿದ್ದೇನೆ. ಸಂತುಷ್ಟನಾಗಿ, ತಪ್ಪುಗಳ ಮನ್ನಿಸಿ, ಸುಜ್ಞಾನದ ದೀವಿಗೆಯನ್ನು ನೀಡಿ ಹರಸೆನ್ನುವ ಪ್ರಾರ್ಥನೆ. (ಶ್ಲೋಕ : ಶಿವ ಪುರಾಣ) (ಸಂಗ್ರಹ) -ರತ್ನಾ ಕೆ ಭಟ್ ತಲಂಜೇರಿ ಚಿತ್ರ ಕೃಪೆ: ಇಂಟರ್ನೆಟ್ ತಾಣ