ಕಷ್ಟದಲ್ಲಿದ್ದವರಿಗೆ ಸಹಕರಿಸುವುದು ಧರ್ಮ. ನಮಗೂ ಕಷ್ಟವಿದೆ. ಹಾಗೆಂದು ಕಣ್ಣೆದುರೇ ನೋವು, ಬಡತನದ ಬೇಗೆ ಅನುಭವಿಸುವಾಗ ನಮ್ಮ ಕೈಲಾದ ಸಹಕಾರ ನೀಡುವುದು ಮನುಷ್ಯತ್ವ ಎನಿಸುವುದು. ಸ್ವಾಮಿ ವಿವೇಕಾನಂದರ ವಾಣಿಯೊಂದು ಗಮನ ಸೆಳೆಯಿತು."ಸಹಕರಿಸಿದೆ"ಎಂದು ಹೇಳಬಾರದು, ಅದು ಭಗವಂತನ ಸೇವೆ, ಆತನೇ ನಮ್ಮ ಕೈಯಿಂದ ಈ ಕೆಲಸ ಮಾಡಿಸುವುದೆಂದು.ಇರಬಹುದೆಂದು ಗ್ರಹಿಸಿದೆ. ಈ ಅವಕಾಶ ಸಿಕ್ಕಿತಲ್ಲ ಎಂದು ಸಂತೋಷಪಡಬೇಕು. ಭಗವಂತನ ಅರ್ಚನೆಯದು. ಕರ್ಮಯೋಗದ ಒಳಗುಟ್ಟೂ ಇರಬಹುದು. ಸ್ವಾರ್ಥ ಪ್ರೇರಿತ ಬಿಟ್ಟು ನಿಸ್ವಾರ್ಥ ಮನೋಭಾವ ಮೂಡಿದಾಗ ನೀಡಿದ ಸಹಾಯಕ್ಕೂ ತೂಕವಿದೆ,ಬೆಲೆಯಿದೆ, ಸಾರ್ಥಕ್ಯವಿದೆ. ಫಲವನ್ನು ಬಯಸದ ಸೇವೆಯೇ ಉತ್ಕೃಷ್ಟವಂತೆ. ನನ್ನ ತಂದೆಯವರು ಯಾವಾಗಲೂ ಹೇಳುತ್ತಿದ್ದ ಮಾತುಗಳು ಈಗಲೂ ನನ್ನ ಮನದಲ್ಲಿದೆ "ಕಷ್ಟಕ್ಕೆ ಸಿಲುಕಿದ ಹೆಣ್ಣು ಮಗಳಿಗೆ  ಸಹಾಯ ಮಾಡುವುದು, ಹಸಿವಿನಿಂದ ಬಳಲಿದವಗೆ ತುತ್ತನ್ನ ನೀಡುವುದು,ದೀನದಲಿತರಿಗೆ ಇದ್ದುದರಲ್ಲಿಯೇ ಸ್ವಲ್ಪಾಂಶ ನೀಡುವುದು, ವಸ್ತ್ರ ಕೊಟ್ಟು ಸಹಕರಿಸುವುದು, ಗೈದ ಕೆಲಸಕಾರ್ಯಗಳಿಗೆ, ದುಡಿಮೆಗೆ ನ್ಯಾಯವಾದ ಸಂಬಳ ನೀಡುವುದು ದೇವರ ಸೇವೆ ಮಾಡಿದಷ್ಟೇ ಫಲ ಸಿಗುವುದೆಂದು.ಪಾಪದವರ ಹೊಟ್ಟೆಯ ಅನ್ನಕ್ಕೆ ಕಲ್ಲು ಹಾಕಬಾರದು, ಅದು ಶಾಪವಾಗಿ ಪರಿಣಮಿಸಬಹುದೆಂದು. ಅರಿತರಿತು ಅನ್ಯಾಯ ಮಾಡಬಾರದು.ಇತರರ ಸೊತ್ತನ್ನು ಕಾಲಿನಿಂದ ಮುಟ್ಟಿದರೂ,ಕಣ್ಣಿಂದ ನೋಡಿದರೂ ತೆಗೆದುಕೊಳ್ಳಬಾರದೆಂದು."ಒಂದಷ್ಟು ಜನ ಬೆನ್ನ ಹಿಂದೆ ಮಾತನಾಡಬಹುದು. ಅದಕ್ಕೆಲ್ಲ ಕಿವಿಕೊಡಬಾರದು.ಮೈಮೇಲೆ ಕುಳಿತ ಧೂಳನ್ನು ಕೊಡವಿದಂತೆ, ಆ ಮಾತುಗಳು ಧೂಳಿಗೆ ಸಮವೆಂದು ಕಾಣಬೇಕು. ಒಳ್ಳೆಯ ಕೆಲಸ ಮಾಡುವಾಗ ಜಗ್ಗುವವರು ಬಹಳ ಮಂದಿ ಇದ್ದಾರೆ,ಅದರ ಬಗ್ಗೆ ಚಿಂತಿಸಬಾರದು.ನಾವು ನಮ್ಮ ಕರ್ತವ್ಯ ಅಷ್ಟೆ.ಈ ಬದುಕು,ಈ ಪ್ರಪಂಚ ಒಂದು ಗರಡಿಮನೆಯಿದ್ದಂತೆ.ಇಲ್ಲಿ ನ್ಯಾಯವಾದ ಕಸರತ್ತಿನ ಅವಶ್ಯಕತೆಯಿದೆ. ಆತ್ಮವಿಶ್ವಾಸದ ಗಟ್ಟಿ ಬೇರುಗಳು ನಮ್ಮಲ್ಲಿದ್ದಾಗ ಯಾರಿಗೂ ಏನೂ ಮಾಡಲಾಗದು.ಬೆಳಕಿನ ಪ್ರಭೆಯಾಗಲು ಪ್ರಯತ್ನಿಸೋಣ. ಕತ್ತಲೆಯಲ್ಲಿ ದಾರಿ ನಡೆಯುವವನಿಗೆ ಮಿಂಚುಹುಳದ ಬೆಳಕು ಸಹ ಆಸರೆಯಾಗಬಹುದಂತೆ. ಈ ಭರತಖಂಡದಲ್ಲಿ ಮಾನವನಾಗಿ ಜನಿಸಿದುದೇ ಮಹಾಭಾಗ್ಯ ನಮ್ಮದು. ಜೀವನ ಯಾತ್ರೆಯನ್ನು ಮುಗಿಸುವ ಮೊದಲು ಇರುವಾಗಲೇ ಮಾನವತ್ವದ ಬದುಕು ನಡೆಸೋಣ. (ಸಂಗ್ರಹ) -ರತ್ನಾ ಕೆ ಭಟ್ ತಲಂಜೇರಿ ಚಿತ್ರ ಕೃಪೆ: ಇಂಟರ್ನೆಟ್ ತಾಣ