ಒಂದು ಒಳ್ಳೆಯ ನುಡಿ - 329
ಬರಹಗಾರರ ಬಳಗ
ಫೆಬ್ರವರಿ ೧೯, ೨೦೨೬
೫ ವೀಕ್ಷಣೆಗಳು
ನಾವು ಉಪದೇಶ ಮಾಡುವುದು ಅಥವಾ ಹಾಗಿರು, ಹೀಗಿರು ಹೇಳುವುದು ಈ ಮನುಷ್ಯರೆಂಬ ಅತಿಶ್ರೇಷ್ಠ, ಬುದ್ಧಿವಂತ, ಜಾಣ, ಜಾಣ್ಮೆಗಳ ಭಂಡಾರವನ್ನೇ ತನ್ನದಾಗಿಸಿಕೊಂಡವರಿಗೆ ಮಾತ್ರ. ಉಳಿದ ಜೀವ ಜಂತುಗಳಿಗೆ ಹೇಳುವುದಿಲ್ಲ ಅಥವಾ ಬಹಳ ಕಡಿಮೆಯಿರಬಹುದು. ಒಮ್ಮೊಮ್ಮೆ ಅನಿಸುವುದು ಕಳ್ಳತನ, ಸುಳ್ಳು, ಮೋಸ, ವಂಚನೆ, ನಂಬಿಕೆದ್ರೋಹ, ಲೋಭತನ, ಸೋಮಾರಿತನ, ಅನ್ಯಾಯ, ಸ್ವಾರ್ಥ ಇದೆಲ್ಲ ಮನುಜರಿಗೆ ಮಾತ್ರವೇ ಇರಬಹುದೇನೋ? ಈ ಅವಿವೇಕಿ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಂಡ ಮನುಷ್ಯರಿಗೆ ಮಹಾತ್ಮರ, ಶಾಸ್ತ್ರಜ್ಞರ, ಗುರುಗಳ, ಪಂಡಿತೋತ್ತಮರ, ಹಿರಿಯರ ಉಪದೇಶ ಬೇಕಾಗುತ್ತದೆ. ಮೊಂಡರು ಯಾರ ಮಾತೂ ಕೇಳರು. ಆದರೂ ಉಪದೇಶ ಹೇಳುವುದು, ಸರಿದಾರಿಗೆ ತರಲು ನೋಡುವುದು ಕರ್ತವ್ಯವೂ ಆಗಿದೆ. ಪ್ರತಿಯೊಬ್ಬನಿಗೂ ಈ ಭೂಮಿಯ ಮೇಲೆ ಜೀವಿಸುವ ಹಕ್ಕನ್ನು ಭಗವಂತ ಕರುಣಿಸಿದ್ದಾನೆ. ಆದರೆ ಹೇಗೆ ಜೀವಿಸಬೇಕು, ಬಂದ ನನ್ನ ಕರ್ತವ್ಯವೇನು, ನಾನಿರುವ ಈ ಸಮಾಜಕ್ಕೆ ನನ್ನ ಕೊಡುಗೆಯೇನು, ಇದನ್ನರಿತರೆ ಬಂದ ಉದ್ದೇಶ ಸಾರ್ಥಕ. ಈ ಬದುಕನ್ನು ನಾವು ಗೌರವಿಸಬೇಕು, ಪ್ರೀತಿಸಬೇಕು. 'ಹೊಡಿ,ಬಡಿ,ಕಡಿ' ತತ್ವವಾಗಲಿ, ಮನೋಭಾವವಾಗಲಿ ನೆಮ್ಮದಿಯನ್ನು ಕೆಡಿಸಬಹುದು. ನಮ್ಮನ್ನು ನಾವೇ ತಿದ್ದಿ ಕೊಂಡು ಮುಂದುವರಿಯೋಣ. ನಮ್ಮದೇ ಈ ಪ್ರಪಂಚ, ಇನ್ಯಾರದ್ದೆಂದು ಯೋಚಿಸುವುದು ಬೇಡ, ನಾವೆಲ್ಲರೂ ಸಮಾನರೇ, ವಿದ್ಯೆ, ಅಂತಸ್ತು, ಆಸ್ತಿ, ಹಣ, ಕಪ್ಪು, ಬೆಳ್ಳಗೆ ವ್ಯತ್ಯಾಸವಿರಬಹುದು. ಅದೆಲ್ಲವೂ ದೇವರಿಚ್ಛೆ, ನಾವು ಪಡಕೊಂಡು ಬಂದ ಅದೃಷ್ಟ. ತಾಯಿಯ ಗರ್ಭದಲ್ಲಿರುವಾಗಲೇ ಎಲ್ಲವೂ ಬರೆಯಲ್ಪಡುತ್ತದೆಯಂತೆ. ಉಪದೇಶಗಳಿಂದ ಬದುಕಿನ ಹಾದಿಯ ವಕ್ರತೆಗಳು ಮಾಯವಾಗಬಹುದು.
ಗೌರವಿಸು ಜೀವನವ, ಗೌರವಿಸು ಚೇತನವ
ಆರದೋ ಜಗವೆಂದು ಭೇದವೆಣಿಸದಿರು/
ಹೋರುವುದೆ ಜೀವನ ಸಮೃದ್ಧಿಗೋಸುಗ ನಿನಗೆ
ದಾರಿಯಾತ್ಮೋನ್ನತಿಗೆ-ಮಂಕುತಿಮ್ಮ//
ಕಲ್ಮಶವಿಲ್ಲದ ಬದುಕು ನಮ್ಮದಾಗಲಿ.ಹೇಳಿಸಿಕೊಳ್ಳದ ರೀತಿ ಬದುಕಿ ತೋರಿಸೋಣ.ಆತ್ಮಸಾಕ್ಷಿಗೆ ಅಪಚಾರವಾಗದಂತಿರಲಿ ನಮ್ಮ ಜೀವನ.
(ಕಗ್ಗ:ಮಾನ್ಯ ಡಿ.ವಿ.ಜಿಯವರ ಮಂಕುತಿಮ್ಮನ ಕಗ್ಗದಿಂದ.)
(ಸಂಗ್ರಹ) -ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಫೆಬ್ರವರಿ ೧೯, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬