ಬೆಂಕಿ ಸುಡುತ್ತದೆ ಎಂದು ಗೊತ್ತಿದ್ದರೂ ಸಹ ಅದಕ್ಕೆ ಕೈಯಿಕ್ಕುವುದು ಸರಿಯಲ್ಲ. ಕೈಹಾಕಲು ಹೋದವರ ಗತಿ ತಿಳಿದೇ ಇದೆ. ಜೀವನದ ಗತಿ ದುಃಖಮಯ. ನೋಡಲು ಚೆನ್ನಾಗಿರಬಹುದು. ಅಂತರಂಗದ ಯಾತನೆ ಅನುಭವಿಸುವವರಿಗೆ ಮಾತ್ರ ಗೊತ್ತು. 'ಹೊರಗೆ ಶೃಂಗಾರ ಒಳಗೆ ಗೋಳಿಸೊಪ್ಪು' ಮಾತೇ ಇದೆ. ಅಂತೆಯೇ ಅವರ ಬದುಕು. ಕಿಚ್ಚಿನ ಕೆನ್ನಾಲಿಗೆಗೆ ಸಿಲುಕಿದರೆ ಉರಿದು ಭಸ್ಮವಾಗಬಹುದು. ಇತ್ತೀಚೆಗೆ ಕೆಲವು ಸಾರಿಗೆ ವಿಮಾನ, ಬಸ್ಸುಗಳು, ಕಾರುಗಳ ಬಗ್ಗೆ ಪತ್ರಿಕೆ, ಅಂತರ್ಜಾಲದಲ್ಲಿ ಓದಿದ್ದೇವೆ. ಜೀವ ಉಳಿದರೆ ಅವರ ಭಾಗ್ಯ ಎನ್ನಬೇಕಷ್ಟೆ. ಮನಸ್ಸು ಕೋಪದಿಂದ, ಸಿಟ್ಟಿನಿಂದ ಕುದಿದಾಗ ಬೆಂಕಿಯೇ ಸರಿ. ರಕ್ತದೊತ್ತಡವಿದ್ದರೆ ಅಪಾಯ. ಆದಷ್ಟೂ ತಾಳ್ಮೆಯ ಗುಣ ಬೆಳೆಸಿಕೊಳ್ಳೋಣ. ಪತಂಗಕ್ಕೆ ಉರಿಯುವ ದೀಪ ಆಹ್ವಾನ ನೀಡಿದಂತಾಗಬಾರದು. ನಾವಾಗಿಯೇ ರೋಗದ ಬಾಯಿಗೆ ತುತ್ತಾಗಬಾರದು. 'ಕರ್ಪೂರ, ಅಗರಬತ್ತಿಯ ಹಾಗೆ ಜೀವನ ಇರಬೇಕಂತೆ'. ತಾನು ಸುಟ್ಟು ಹೋಗುವೆನೆಂದು ಗೊತ್ತಿದ್ದರೂ ಸುತ್ತೆಲ್ಲ ಸುಗಂಧವನು ಪಸರಿಸುವುದು. ಚಂದ್ರನಿಗೆ ಗ್ರಹಣ ಹಿಡಿದರೂ ಆತ ಬೇಸರ ಮಾಡಿಕೊಳ್ಳದೆ ಅನಂತರ ಬೆಳದಿಂಗಳನ್ನೇ ನೀಡುವನು. ಹಾಗೆಯೇ ನಾವು ಸಹ, ಏನೋ ಕಷ್ಟವೋ, ಬೇಸರವೋ, ಇತರರಿಂದ ಪೀಡನೆಗೆ ಒಳಪಟ್ಟಾಗ, ಯಾಕೆ ಹೀಗಾಯಿತೆಂದು ಯೋಚಿಸೋಣ. ಒಮ್ಮೆಲೆ ಸಿಟ್ಟುಗೊಂಡರೆ ಆರೋಗ್ಯವೇ ಹಾಳು. ನೆಮ್ಮದಿಯೂ ಇಲ್ಲ. ನೋವು‌ ನೀಡುವವರು ಹಾವು, ಚೇಳುಗಳ ವಿಷದಂತೆ. ಕಚ್ಚಿಸಿಕೊಳ್ಳಬಾರದು. ಅವರಿಂದ ಆದಷ್ಟೂ ದೂರದಲ್ಲಿರಲು ಪ್ರಯತ್ನಿಸಬೇಕು. ಗೊತ್ತಿದ್ದೂ ಸರ್ಪದ ಹುತ್ತದೊಳಗೆ ಕೈ ಹಾಕಬಾರದಲ್ಲವೇ? ಜಗತ್ತಿಗೆ ಬೆಳಕು, ಶಾಖ ನೀಡುವ ಸೂರ್ಯ ಉದಯದಲ್ಲೂ ಕೆಂಪೇ, ಸಾಯಂಕಾಲ ಅಸ್ತಂಗತನಾಗುವಾಗಲೂ ಕೆಂಪೇ. ನಾವು ಹೀಗೆ ಸ್ಥಿತಪ್ರಜ್ಞರಾಗಿರಲು ಕಲಿಯಬೇಕು. ಯಾರು ಏನು ಬೇಕಾದರೂ ಹೇಳಲಿ 'ನಾವು ನಾವಾಗಿರಬೇಕು' ಅನ್ಯರಿಗೆ ತೊಂದರೆ ಕೊಡದೆ ಬಾಳಬೇಕು. ಬೆಂಕಿಯಂಥವರೊಡನೆ ಯೋಚಿಸಿ ಸ್ನೇಹ ಮಾಡೋಣ. (ಸಂಗ್ರಹ) -ರತ್ನಾ ಕೆ ಭಟ್ ತಲಂಜೇರಿ ಚಿತ್ರ ಕೃಪೆ: ಇಂಟರ್ನೆಟ್ ತಾಣ