ಒಂದು ಒಳ್ಳೆಯ ನುಡಿ - 340
ಬರಹಗಾರರ ಬಳಗ
ಮಾರ್ಚ್ ೧೫, ೨೦೨೬
೭ ವೀಕ್ಷಣೆಗಳು
'ಧನಲೋಭ' ವೆನ್ನುವುದು ಮನುಷ್ಯನ ಎಲ್ಲಾ ಉತ್ತಮ ಗುಣಗಳನ್ನು ಕ್ಷಣಮಾತ್ರದಲ್ಲಿ ನುಂಗಿ ನೀರು ಕುಡಿಯಬಹುದು. ಸ್ಥಿತಪ್ರಜ್ಞರು ಮಾತ್ರ ಬಲಿಬೀಳರು. ಅತಿಯಾಸೆ ಮೋಹಕ್ಕೆ ಒಳಗಾಗದವರೂ ಸಹ ಒಮ್ಮೊಮ್ಮೆ ಆ ಕಡೆಗೆ ವಾಲಲೂ ಬಹುದು. 'ಹಣ ಕಂಡರೆ ಹೆಣ ಬಾಯಿ ಬಿಡಬಹುದಂತೆ, ಗಾದೆ ಮಾತು.'ಧನಲೋಭಿಗೆ ಇನ್ನಷ್ಟು, ಮತ್ತಷ್ಟು,ಮೊಗೆದಷ್ಟು ಬೇಕೆಂಬಾಸೆ. ಪಶು ಜನ್ಮಕ್ಕೆ ಪಾಪದ ಲೇಪವಿಲ್ಲವಂತೆ, ಆ ಲೋಭಿಗಳು ಪಶುವಾಗಿ ಹುಟ್ಟಿದರೆ ಒಳ್ಳೆಯದಿತ್ತು ಅನಿಸುವುದುಂಟು. ಲೋಭಿ ನಿತ್ಯವೂ ಅತೃಪ್ತ.ಒಡಹುಟ್ಟಿದವರನ್ನು, ಹೆತ್ತವರನ್ನೂ ಸಹ ಬಿಡದ ದುರುಳನಾತ. ನಾಳೆ ಯಾರಿಗೆ, ಹೇಗೆ ಮೋಸಮಾಡಿ ಟೋಪಿ ಹಾಕುವುದೆಂಬ ಚಿಂತೆಯಲಿ ನಿದ್ದೆ ಸಹ ಬಾರದು. ಚಿಂತೆಯಿಂದ ಚಿತೆಯತ್ತ ಸಾಗಿದರೂ ಆತನಿಗೆ ಬುದ್ಧಿ ಬಾರದು.
ನ ವಿತ್ತಂ ದರ್ಶಯೇತ್ಪ್ರಾಜ್ಞ: ಕಸ್ಯ ಚಿತ್ಸ್ವಲ್ಪ ಮಪ್ಯಹೋ/
ಮುನೇರಪಿ ಯತಸ್ತಸ್ಯ ದರ್ಶನಾಚ್ಚಲತೇ ಮನ://
ಧನವನ್ನು, ಹಣವನ್ನು ಕಂಡಾಗ ಕಠಿಣ ತಪದಲ್ಲಿ ನಿರತನಾದ ಮುನಿಯ ಮನಸ್ಸು ಒಮ್ಮೆಗೆ ವಿಚಲಿತವಾಗಲೂ ಬಹುದಂತೆ. ತಪಸ್ಸನ್ನಾಚರಿಸುತ್ತಿದ್ದ ಪರ ಶಿವನೇ ಪಾರ್ವತಿಗೆ ಒಲಿದ ವಿಷಯ ನಮಗೆ ತಿಳಿದಿದೆ. (ವಿಧಿ ನಿಯಮವೂ ಇರಬಹುದು. ಆಯಾಯ ಕಾಲಕ್ಕೆ ಏನಾಗಬೇಕೋ ಅದು ಆಗಲೇ ಬೇಕಲ್ಲವೇ? ದೇವಲೋಕದ ಅಪ್ಸರೆ ಮೇನಕೆ ವಿಶ್ವಾಮಿತ್ರನನ್ನು ಒಲಿಸಿದ ಉಲ್ಲೇಖ ಪುರಾಣದಲ್ಲಿದೆ. ಹಣ ರಾಶಿ ರಾಶಿ ಪೇರಿಸಿದವನಿಗೆ ನಿದ್ರೆ ಕನಸಿನ ಮಾತು. ಕಳ್ಳರೋ, ಇನ್ಯಾರೋ ಬಂದು ದೋಚಬಹುದೆಂಬ ಭಯ ಸದಾಕಾಲವಿರುತ್ತದೆ. ಹಾಗಾಗಿ ತಿಳಿದವರು ಯಾವತ್ತೂ ಯಾವುದೇ ಲೋಭಕ್ಕೆ, ಆಸೆಗೆ ಬಲಿಯಾಗಬಾರದು. ಅದೆಲ್ಲ ಕ್ಷಣಿಕ. ನಿಜ ಸುಖ, ಶಾಶ್ವತವಾದುದನ್ನು ಮಾತ್ರ ಬಯಸಬೇಕು.
ಹೊರಪ್ರಪಂಚದ ಈ ಆಕರ್ಷಣೆ, ಆಸೆಯನ್ನು ಬಿಟ್ಟು ತನ್ನೊಳಗಿನ ಆತ್ಮವನ್ನೇ ಆತ ಶೋಧಿಸಿದರೆ ಬೆಲೆಬಾಳುವ ಹೊನ್ನಿನಂತಾಗಬಹುದು. ಹಾಗೆಯೇ ಆಗಲೆಂದು ಆಶಿಸೋಣವೇ?
(ಶ್ಲೋಕ:ಸರಳ ಸುಭಾಷಿತ)
(ಸಂಗ್ರಹ) ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಮಾರ್ಚ್ ೧೫, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬