ಮಿಯಾಮಿ ನಗರದ ಒಂದು ಕಾಲೇಜಿನಲ್ಲಿ ಲೊಂಬಾರ್ಡೊ ಎಂಬಾತ ವಿದ್ಯಾರ್ಥಿ ಕೌನ್ಸಿಲರ್ (ಆಪ್ತ ಸಮಾಲೋಚಕ). ಆತ ಮತ್ತು ಆತನ ಇಬ್ಬರು ವಿದ್ಯಾರ್ಥಿನಿಯರ ಸಂಬಂಧಗಳ ಸುತ್ತ ಹೆಣೆದ ಇಂಗ್ಲಿಷ್ ಸಿನೆಮಾ ಇದು. ಅವನ ಒಂದು ಸೆಮಿನಾರಿನಿಂದ ಸುಜಿ ಎಂಬ ಯುವತಿ ಹೊರ ನಡೆಯುತ್ತಾಳೆ. ತದನಂತರ ಹಲವಾರು ಘಟನೆಗಳು ಜರಗುತ್ತವೆ.
ಒಂದು ದಿನ ವಿದ್ಯಾರ್ಥಿಗಳಾದ ಸುಜಿ ಮತ್ತು ಕೆಲ್ಲಿ ಅವನ ಜೀಪ್ ತೊಳೆಯುತ್ತಾರೆ. ಅನಂತರ ಅವರಿಬ್ಬರೂ ಅವನ ವಿರುದ್ಧ ಪೊಲೀಸರಿಗೆ ದೂರು ನೀಡುತ್ತಾರೆ: ಅವನು ತಮ್ಮ ಮಾನಭಂಗ ಮಾಡಿದ ಎಂದು. ಅಲ್ಲಿನ ಪೊಲೀಸ್ ಅಧಿಕಾರಿಗೆ ಇವರಿಬ್ಬರ ಆಪಾದನೆ ಬಗ್ಗೆ ಅನುಮಾನ ಮೂಡುತ್ತದೆ. ಇವರಿಬ್ಬರ ವಿಚಾರಣೆ ನಡೆಯುತ್ತದೆ.
ವಿಚಾರಣೆಯಲ್ಲಿ “ನನ್ನ ದೂರು ಸುಳ್ಳು” ಎನ್ನುತ್ತಾಳೆ ಸುಜಿ. ಪಾಟೀಸವಾಲಿನಲ್ಲಿ ಲೊಂಬಾರ್ಡೊನ ಚತುರ ವಕೀಲ ಕೆನ್ನೆತ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅವಳು ಸತ್ಯ ಹೇಳಬೇಕಾಗುತ್ತದೆ. ಆಗ ಕೆಲ್ಲಿ ಕೂಡ “ಅದೆಲ್ಲ ಸುಳ್ಳು” ಎಂದು ಒಪ್ಪಿಕೊಳ್ಳುತ್ತಾಳೆ. ಅವರಿಬ್ಬರೂ ಲೊಂಬಾರ್ಡೊನ ವಿರುದ್ಧ (ಬೇರೆಬೇರೆ ಕಾರಣಗಳಿಗಾಗಿ) ಸೇಡು ತೀರಿಸಿಕೊಳ್ಳಲು ಮಾನಭಂಗದ “ಸುಳ್ಳು ಕತೆ” ಕಟ್ಟಿದ್ದರು.
ಅನಂತರ ಲೊಂಬಾರ್ಡೊನ ಮಾನನಷ್ಟ ಮೊಕದ್ದಮೆಗೆ ಹೆದರಿದ ಕೆಲ್ಲಿಯ ತಾಯಿ, ಆ ವಕೀಲನ ಜೊತೆ ಸಂಧಾನದ ಪ್ರಸ್ತಾಪ ಮಾಡುತ್ತಾಳೆ. ಆಕೆ ಆಗರ್ಭ ಶ್ರೀಮಂತೆ. ಅಂತೂ ಲೊಂಬಾರ್ಡೋನಿಗೆ 8 ಮಿಲಿಯನ್ ಡಾಲರ್ ಪರಿಹಾರ ಪಾವತಿಗೆ ಒಪ್ಪಿಕೊಂಡು, “ಸಂಧಾನ ಒಪ್ಪಂದ ಪತ್ರ”ಕ್ಕೆ ಸಹಿ ಮಾಡುತ್ತಾಳೆ.
ಆದರೆ ಪೊಲೀಸ್ ಅಧಿಕಾರಿ ರೇ ಈ ಪ್ರಕರಣದ ಬೆನ್ನು ಬೀಳುತ್ತಾನೆ. ಮೇಲಧಿಕಾರಿಗಳು “ನೀನು ಈ ಕೇಸಿಗೆ ತಲೆ ಹಾಕಬೇಡ” ಎಂದರೂ ಅವನು ಕಿವಿ ಕೊಡುವುದಿಲ್ಲ.
ಇಷ್ಟೆಲ್ಲಾ ಆದ ನಂತರ, ಲೊಂಬಾರ್ಡೊನಿಗೆ ಸುಜಿಯನ್ನು ಕೊಲೆ ಮಾಡಬೇಕೆನ್ನುತ್ತಾಳೆ ಕೆಲ್ಲಿ. ಬಳಿಕ ಸುಜಿಯನ್ನು ಲೊಂಬಾರ್ಡೊ ಸಮುದ್ರ ತೀರಕ್ಕೆ ಕರೆದೊಯ್ಯುತ್ತಾನೆ. ಆಗ ಸುಜಿಗೆ ಹೊಡೆದು ಅವಳನ್ನು ಕೊಲ್ಲುತ್ತಾನೆ. (ಆದರೆ ಅದೊಂದು ನಾಟಕ; ತನ್ನ ಎರಡು ಹಲ್ಲುಗಳನ್ನು ಸುಜಿ ತಾನೇ ಅಲ್ಲಿ ಕಿತ್ತು ಹಾಕಿರುತ್ತಾಳೆ.) ಅನಂತರ, ದೂರದಲ್ಲಿ ಕಾದಿದ್ದ ಕೆಲ್ಲಿ ಜೊತೆ ಲೊಂಬಾರ್ಡೊ ಕಾರಿನಲ್ಲಿ ಹೋಗಿ, ಪ್ಲಾಸ್ಟಿಕ್ ಹಾಳೆಯಲ್ಲಿ ಸುತ್ತಿದ್ದ ಸುಜಿಯ ಹೆಣವನ್ನು ನೀರಿಗೆಸೆಯುತ್ತಾನೆ. (ಇದೂ ನಾಟಕ.)
ಪೊಲೀಸ್ ಅಧಿಕಾರಿ ರೇ ಸುಜಿಯ ಎರಡು ಹಲ್ಲುಗಳನ್ನು ಸಮುದ್ರ ತೀರದಲ್ಲಿ ಪತ್ತೆ ಮಾಡಿ, ಅವನ್ನು ಪ್ರಯೋಗಾಲಯಕ್ಕೆ ಕಳಿಸುತ್ತಾನೆ. ಅವು ಸುಜಿಯ ಹಲ್ಲುಗಳೆಂದು ಅಲ್ಲಿಂದ ವರದಿ ಬರುತ್ತದೆ. ಅನಂತರ ಕೆಲ್ಲಿಯ ಮನೆಗೆ ಬಂದ ರೇ, ಅವಳೊಡನೆ ಜಗಳಾಡಿ ಬುಲೆಟ್ ಹೊಡೆದು, ಅವಳನ್ನು ಕೊಲ್ಲುತ್ತಾನೆ. ತನ್ನ ಹೆಗಲಿಗೂ ತಾನೇ ಬುಲೆಟ್ ಹೊಡೆದುಕೊಳ್ಳುತ್ತಾನೆ. ಆದರೆ ವಿಚಾರಣೆಯಲ್ಲಿ, “ಕೆಲ್ಲಿ ನನಗೆ ಗುಂಡು ಹಾರಿಸಿದಳು. ಹಾಗಾಗಿ ನಾನು ಆತ್ಮರಕ್ಷಣೆಗಾಗಿ ಬುಲೆಟ್ ಹಾರಿಸಬೇಕಾಯಿತು” ಎಂದು ರೇ ಸುಳ್ಳು ಹೇಳುತ್ತಾನೆ. ಸುಜಿಯನ್ನು ಕೆಲ್ಲಿ ಕೊಂದದ್ದು ಅಂತಲೂ ಹೇಳುತ್ತಾನೆ. ಅವನ ವಿರುದ್ಧ ಇಲಾಖಾ ವಿಚಾರಣೆ ನಡೆದು, ಅವನನ್ನು ಹುದ್ದೆಯಿಂದ ವಜಾ ಮಾಡಲಾಗುತ್ತದೆ.
ಅದಾದ ನಂತರ, ಆ ಮಾಜಿ ಪೊಲೀಸ್ ಅಧಿಕಾರಿ ರೇ ಮತ್ತು ಲೊಂಬಾರ್ಡೊನ ಭೇಟಿ ಆಗುತ್ತದೆ (ಸುಜಿಯ ಹುನ್ನಾರ). ರೇಯನ್ನು ಲೊಂಬಾರ್ಡೊ ತನ್ನ ಬೋಟಿನಲ್ಲಿ ಪ್ರವಾಸಕ್ಕೆ ಕರೆದೊಯ್ಯುತ್ತಾನೆ. ಆಗ ರೇಯನ್ನು ಕೊಲ್ಲಬೇಕೆಂದು ಅವನನ್ನು ಲೊಂಬಾರ್ಡೊ ಬೋಟಿನಿಂದ ನೀರಿಗೆ ತಳ್ಳುತ್ತಾನೆ. ಆತ ಹೆಣಗಾಡಿ ಪುನಃ ಬೋಟ್ ಏರಿದಾಗ, ಅಡಗಿದ್ದ ಸುಜಿ ಬಾಣಕೋವಿಯಿಂದ (ಸ್ಪಿಯರ್ ಗನ್) ಬಾಣ ಹಾರಿಸಿ ಅವನನ್ನು ಕೊಲ್ಲುತ್ತಾಳೆ. ತನ್ನ ಪರಮಾಪ್ತ ಗೆಳತಿ ಡೇವಿ ಅನ್ನು ಅವನು ಗುಂಡು ಹಾರಿಸಿ ಕೊಂದಿದ್ದ; ಆತ್ಮರಕ್ಷಣೆಗಾಗಿ ಗುಂಡು ಹಾರಿಸ ಬೇಕಾಯಿತು ಎಂದಿದ್ದ. ಅದರ ಸೇಡಿಗೆ ಅವನನ್ನು ಈಗ ಕೊಂದೆ ಎನ್ನುತ್ತಾಳೆ. ಅನಂತರ ಲೊಂಬಾರ್ಡೋನಿಗೆ ವಿಷದ ಪಾನೀಯ ಕೊಟ್ಟು ಸುಜಿ ಅವನನ್ನೂ ಸಾಯಿಸುತ್ತಾಳೆ.
ಈ ಎಲ್ಲ ಘಟನೆಗಳನ್ನು ಪೋಣಿಸಿದಾಗ, ಇವೆಲ್ಲವೂ ಸುಜಿಯ ಹುನ್ನಾರದ ಭಾಗಗಳು ಎಂಬುದು ಸ್ಪಷ್ಟವಾಗುತ್ತದೆ. ಹುನ್ನಾರದ ಮೂಲ ಏನೆಂದರೆ, ಕೆಲ್ಲಿ ಮತ್ತು ಲೊಂಬಾರ್ಡೊ ದೈಹಿಕ ಸಂಬಂಧದಲ್ಲಿ ಇದ್ದರು. ಅವರು ಜೊತೆಯಾಗಿದ್ದಾಗ ಮಾದಕ ದ್ರವ್ಯಗಳನ್ನು ಸೇವಿಸುತ್ತಿದ್ದ ಫೋಟೋಗಳನ್ನು ಸುಜಿ ತೆಗೆದಿದ್ದಳು. ಆ ಫೋಟೋಗಳನ್ನು ಬಳಸಿ, ಅವರಿಬ್ಬರನ್ನೂ ಸುಜಿ ಬ್ಲಾಕ್-ಮೇಲ್ ಮಾಡುತ್ತಿದ್ದಳು. ಕೆಲ್ಲಿಯ ಸಿರಿವಂತ ತಂದೆ ನಿಧನರಾಗಿದ್ದು, ತನ್ನ ಪತ್ನಿಯ ಹೆಸರಿನಲ್ಲಿ ಮಿಲಿಯಗಟ್ಟಲೆ ಡಾಲರುಗಳ ಟ್ರಸ್ಟ್ ಮಾಡಿದ್ದರು. ಆದರೆ, ಕೆಲ್ಲಿ ಅದಕ್ಕೆ ಹಕ್ಕುದಾರಳಾಗುವುದು ಅವಳ ತಾಯಿಯ ಮರಣಾನಂತರ. ಆ ಟ್ರಸ್ಟಿನಿಂದ ಹಣ ಪೀಕಿಸಲು ಇದೆಲ್ಲ ಹುನ್ನಾರ ಮಾಡಿದ್ದರು - ಸುಜಿ, ಕೆಲ್ಲಿ ಮತ್ತು ಲೊಂಬಾರ್ಡೊ ಮೂವರೂ ಸೇರಿಕೊಂಡು. ಆದರೆ ಸುಜಿ ತನ್ನದೇ ಹುನ್ನಾರ ರೂಪಿಸಿದ್ದಳು.
ಅಂತಿಮವಾಗಿ, ಲೊಂಬಾರ್ಡೊ, ರೇ ಮತ್ತು ಕೆಲ್ಲಿ - ಈ ಮೂವರ ಕೊಲೆಯ ನಂತರ ಆ ವಕೀಲ ಕೆನ್ನೆತ್-ನಿಂದ ತನ್ನ ಪಾಲಾದ ಮಿಲಿಯನ್ ಡಾಲರ್ ಹಣ ತುಂಬಿದ್ದ ಸೂಟ್-ಕೇಸ್ ಮತ್ತು ಚೆಕ್ ಪಡೆದು ಹೊರಟು ಹೋಗುತ್ತಾಳೆ ಸುಜಿ. ಅವಳಿಗೆ ವಕೀಲ ಹೇಳುವ ಕೊನೆಯ ಮಾತು, “ಸುಜಿ, ಒಳ್ಳೆಯವಳಾಗಿ ಬದುಕು.”
ಸಿನಿಮಾ ಪೋಸ್ಟರ್ ಕೃಪೆ: ವಿಕಿಪೀಡಿಯಾ
(15 ವರುಷಗಳ ಮುಂಚೆ, ಬ್ಯಾಂಕಿನ ಸಿಬ್ಬಂದಿಗೆ ತರಬೇತಿ ನೀಡಲಿಕ್ಕಾಗಿ ಅಹಮದಾಬಾದಿಗೆ ಹೋದಾಗ 07-02-2011ರ ಸೋಮವಾರ ನೋಡಿದ ಸಿನಿಮಾದ ನೋಟ್ಸಿನ ಆಧಾರದಿಂದ ಬರೆದ ಕಥಾಸಾರಾಂಶ.)
ಸಿನಿಮಾ ಕತೆ4 -ವೈಲ್ಡ್ ಥಿಂಗ್ಸ್
ಅಡ್ಡೂರು ಕೃಷ್ಣ ರಾವ್
ಜನವರಿ ೩೧, ೨೦೨೬
೯ ವೀಕ್ಷಣೆಗಳು
ಪ್ರಕಟಿಸಿದ: ಜನವರಿ ೩೧, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬