ಹಟ್ಟಿಗೊಬ್ಬರ ಅಥವಾ ಹಸುರೆಲೆ ಗೊಬ್ಬರವನ್ನು ಬೆಳೆಗಳಿಗೆ ಹಾಕದೇ ಇದ್ದರೆ ಉತ್ಪತ್ತಿ ಕಡಿಮೆ ಎಂಬುದು ಎಲ್ಲ ಕೃಷಿಕರ ಅನುಭವ.  ಈಗೀಗ ಕೇಳಿ ಬರುವ “ಸಾವಯವ ಕೃಷಿ ಮಾಡಿ, ಸಾವಯವ ಗೊಬ್ಬರವನ್ನು ನಂಬಿ ಬೆಳೆ ಬೆಳೆಸಿ. ಉತ್ಪತ್ತಿ ಬೇಕಾದಷ್ಟು ಬರುತ್ತದೆ” ಎಂಬ ಉಪದೇಶದಲ್ಲಿ ಹೊಸತೇನೂ ಇಲ್ಲ. ನಮ್ಮ ಜಿಲ್ಲೆಯ ಕೃಷಿ ಹಿಡುವಳಿದಾರರಲ್ಲಿ ಶೇ.50 ಜನರು ಒಂದು ಎಕ್ರೆಗಿಂತ ಕಡಿಮೆ ಜಮೀನು ಹೊಂದಿರುವವರು. ಶೇ.25  ಕೃಷಿಕರ ಕೃಷಿ ಭೂಮಿ ಐದು ಎಕ್ರೆಗಿಂತಲೂ ಕಡಿಮೆ. ಒಂದು ಎಕ್ರೆಗಿಂತ ಕಡಿಮೆ ಜಮೀನಿನ ಹಿಡುವಳಿದಾರರಿಗೆ ಸೊಪ್ಪಿನ ಗುಡ್ಡಗಳೇ ಇಲ್ಲ. ಇತರರಿಗೆ ಸ್ವಲ್ಪ ಸೊಪ್ಪಿನ ಗುಡ್ಡ ಇರಬಹುದು. ಅದೇನಿದ್ದರೂ ಗುಡ್ಡದಿಂದ ಸೊಪ್ಪು ಕಡಿದು ಹಟ್ಟಿಗೆ ತಂದು ಹಾಕಿ ಗೊಬ್ಬರ ಮಾಡಿ ಆಳುಗಳ ಮೂಲಕ ಗದ್ದೆಗೆ ಸಾಗಿಸಿದಾಗ ಕೃಷಿಕ ಹೈರಾಣಾಗಿ ಬಿಡುತ್ತಾನೆ. ಆಳುಗಳೂ ಕೂಡಾ ಹೊರಗಿನಿಂದಲೇ ಬರಬೇಕು. ಅವರು ಬೆಳಿಗ್ಗೆ ಕೆಲಸ ಶುರು ಮಾಡುವಾಗ ಗಂಟೆ ಒಂಭತ್ತಾಗುತ್ತದೆ. ಕೆಲಸ ಮುಗಿಸುವುದು ಸಂಜೆ ಗಂಟೆ ಐದರೊಳಗೆ. ಇವರಿಗೆ ಮಜೂರಿ ತೆತ್ತು ಸಾವಯವ ಗೊಬ್ಬರ ಒದಗಿಸುವುದು ದುಬಾರಿ! ಹಾಗಾಗಿ ಕೃಷಿಕರು ಕೃತಕ ಗೊಬ್ಬರದ ಬಳಕೆ ಶುರು ಮಾಡಿದರು. ದೊಡ್ಡ ಹಿಡುವಳಿದಾರರಾದ ನನ್ನ ಗೆಳೆಯರೊಬ್ಬರಿಗೆ ಬೇಕಾದಷ್ಟು ಅಡಿಕೆ ತೋಟವಿತ್ತು. ಗದ್ದೆಯೂ ಇತ್ತು. ಅವರು ಗದ್ದೆಗಳಿಗೆ ಹದಿನೈದು ವರುಷಗಳಿಂದ ಹಟ್ಟಿ ಗೊಬ್ಬರ ಹಾಕಲಿಲ್ಲವಂತೆ. ಹಾಗಾಗಿ ಅವರ ಪೈರು ಬಿಳಿಚಿಕೊಂಡಿರುತ್ತಿತ್ತು. ವರುಷ ವರುಷವೂ ಬೆಳೆ ಕಡಿಮೆಯಾಗುತ್ತಾ ಬಂತಂತೆ. ನಂತರ ಅವರು ಸಾವಯವ ಗೊಬ್ಬರಕ್ಕೆ ವಾಲಿದರು. ಇದರಿಂದಾಗಿ ಅವರ ಸಮಸ್ಯೆ ಸ್ವಲ್ಪ ಮಟ್ಟಿಗೆ ಪರಿಹಾರವಾಯಿತು. ಬಳಿಕ ಅವರು ಹಸಿರು ಕ್ರಾಂತಿಯನ್ನು ಟೀಕಿಸಲು ತೊಡಗಿದರು. ತನ್ನ ತಪ್ಪನ್ನು  ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ. ಅವರು ನಿಯಮಿತವಾಗಿ ಹಟ್ಟಿಗೊಬ್ಬರ ಹಾಕುತ್ತಿದ್ದರೆ ಅವರಿಗೆ ಸಮಸ್ಯೆಯೇ ಬರುತ್ತಿರಲಿಲ್ಲ. ತೆನೆಯೂ ಹುಲುಸಾಗಿ ಬೆಳೆಯುತ್ತಿತ್ತು. ಹಸಿರುಕ್ರಾಂತಿಯ ಕಾಲದಲ್ಲಿ ಸಾವಯವ ಗೊಬ್ಬರ ಹಾಕಬೇಡಿ ಎಂದು ಯಾವ ಅಧಿಕಾರಿಗಳಾಗಲೀ, ವಿಜ್ಞಾನಿಗಳಾಗಲೀ ಹೇಳಲಿಲ್ಲ. ಪ್ರತಿ ಎಕರೆಗೆ ಐದು ಸಾವಿರ ರಾತ್ಲು ಸಾವಯವ ಗೊಬ್ಬರ ಹಾಕಿ ಎನ್ನುತ್ತಿದ್ದರು. ಅಲ್ಲದೆ ಗ್ಲಿರಿಸಿಡಿಯಾ ಗಿಡಗಳನ್ನು ನೆಡಿ ಎಂದು ಹೇಳುತ್ತಿದ್ದರು. ಈ ಸಲಹೆ ನಿಜಕ್ಕೂ ಉಪಯುಕ್ತ. ಗ್ರಾಮಸೇವಕರು ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಐವತ್ತರ ದಶಕದಲ್ಲಿ ಗ್ಲಿರಿಸಿಡಿಯಾ  ನೆಡಲು ಒತ್ತಾಯ ಮಾಡುತ್ತಿದ್ದರು. ಜನರು ಅದಕ್ಕೆ ಸ್ಪಂದಿಸಿರಲಿಲ್ಲ. “ಭಾರತದ ರೈತನಿಗೆ ನನ್ನ ದೊಡ್ಡ ಕೊಡುಗೆ ಎಂದರೆ ಗ್ಲಿರಿಸಿಡಿಯಾ”  ಎಂದು ಆಗಿನ ಮದರಾಸು ಪ್ರಾಂತದ ಕೃಷಿ ನಿರ್ದೇಶಕರು ಒಂದೆಡೆ ಹೇಳಿದ್ದರು. ಪ್ರಾರಂಭದಲ್ಲಿ ಅಸಡ್ಡೆ ಮಾಡಿದರೂ ಕ್ರಮೇಣ ರೈತರು ಗ್ಲಿರಿಸಿಡಿಯಾ  ಬೆಳೆಗೆ ಹೊಂದಿಕೊಂಡರು. ನಾನು ಸುಮಾರು ಎರಡು ಮೈಲು ದೂರದಿಂದ ಗ್ಲಿರಿಸಿಡಿಯಾ ಗೆಲ್ಲುಗಳನ್ನು ತಂದು ನನ್ನ ಜಾಗದಲ್ಲಿ ನೆಟ್ಟೆ. ಹಲವು ಜನ ನನ್ನನ್ನು “ಹುಚ್ಚ” ಎಂದರು. ಅದರಿಂದ ಬೀಜ ಮಾಡಿ ಇನ್ನಷ್ಟು ವಿಸ್ತರಿಸಿದೆ. ಗದ್ದೆ ಬದುಗಳಲ್ಲಿ ಗ್ಲಿರಿಸಿಡಿಯಾ ಹುಲುಸಾಗಿ ಬೆಳೆಯಿತು. ಇತರ ರೈತರಿಗೂ ನೆಡುವಂತೆ ಹೇಳಿದೆ. ಗೆಲ್ಲು ಕೊಟ್ಟು ಪ್ರೋತ್ಸಾಹಿಸಿದೆ. ಆಗ ಕೆಲವರು ನಮಗೆ ಗ್ಲಿರಿಸಿಡಿಯಾ ಬೇಡ, ಗುಡ್ಡದಲ್ಲಿ ಬೇಕಾದಷ್ಟು ಸೊಪ್ಪು ಇದೆ ಎಂದು ಮುಖ ತಿರುಗಿಸಿದರು. ಗ್ಲಿರಿಸಿಡಿಯಾ ಬಗ್ಗೆ ಕೇರಳ ಸರಕಾರವು ಒಂದು ಘೋಷಣೆ ಮಾಡಿತ್ತು: ‘ಪ್ರತಿ ಒಂದು ಎಕರೆ ಗದ್ದೆಗೆ ನೂರು ಗ್ಲಿರಿಸಿಡಿಯಾ, ಪ್ರತಿ ತೆಂಗಿನ ಮರಕ್ಕೆ ಒಂದು ಗ್ಲಿರಿಸಿಡಿಯಾ ನೆಡಿ’.  ಅದರಂತೆ ಗ್ಲಿರಿಸಿಡಿಯಾ ನೆಡುತ್ತಿದ್ದರೆ ಹಸುರೆಲೆ ಗೊಬ್ಬರಕ್ಕೆ ವೆಚ್ಚ ಮಾಡುವ ಅಗತ್ಯ ಬರುತ್ತಿರಲಿಲ್ಲ. ಭತ್ತದ ಗದ್ದೆ ಬದುಗಳಲ್ಲಿ ಬೆಳೆದ  ಸೊಪ್ಪು ಸವರಿ ಅಲ್ಲೇ ಗದ್ದೆಗೆ ಹಾಕಿದ್ದರೆ ಕೂಲಿಗೆ ಕೊಡುವ ಸಂಬಳ ಉಳಿತಾಯವಾಗುತ್ತಿತ್ತು.  ಉತ್ತಮವಾದ ಸಾವಯವ ಗೊಬ್ಬರವನ್ನು ಹಾಕಿದಷ್ಟೇ ಪರಿಣಾಮವಾಗುತ್ತಿತ್ತು. ಕಟ್ಟಿಗೆಗೂ ಸಹಾಯವಾಗುತ್ತಿತ್ತು. ಈಗ ಗ್ಲಿರಿಸಿಡಿಯಾ ಗಿಡಗಳು (ಸಸ್ಯಶಾಸ್ತ್ರೀಯ ಹೆಸರು: ಗ್ಲಿರಿಸಿಡಿಯಾ ಸೇಪಿಯಂ) ಎಲ್ಲಾ ಕಡೆ ಇವೆ. ಕನ್ನಡದಲ್ಲಿ ಇದಕ್ಕೆ ಗೊಬ್ಬರದ ಗಿಡ ಎಂಬ ಅನ್ವರ್ಥಕ ಹೆಸರು ಬಳಕೆಗೆ ಬಂದಿದೆ. ಕೃಷಿಕರಿಗೆ ಲಾಭದಾಯಕ ಬೆಳೆ ಎಂದು ಹೇಳಲಾಗುತ್ತಿರುವ ವೆನಿಲ್ಲಾ ಕೃಷಿಗೂ ಇದು ಬಹಳ ಉಪಯುಕ್ತ. ವೆನಿಲ್ಲಾ  ತೋಟದಲ್ಲಿ ಕಲ್ಲಿನ ಕಂಬ ಮತ್ತು ಪೊಲಿಥಿನ್ ಪೈಪ್ ಬದಲಾಗಿ ಗ್ಲಿರಿಸಿಡಿಯಾ ಗೆಲ್ಲು ಬಳಸಿದರೆ ಖರ್ಚು ಕಡಿಮೆ. ತರಕಾರಿ ಕೃಷಿ ನಾನು ಸ್ವತ: ದುಡಿಯಲು ಸೋಮಾರಿ! ಅಶಕ್ತ! ಆಳುಗಳಿಂದಲೇ ನಿಭಾವಣೆಯಾಗಬೇಕಿತ್ತು. ಇದ್ದ ಸಣ್ಣ ತೋಟಕ್ಕೆ ಆಳುಗಳು ಬೇಕೇ? ಹಲವರು ಪ್ರಶ್ನಿಸಿದ್ದರು. ಆಳುಗಳಿಗೆ ಖಾಯಂ ಕೆಲಸ ಕೊಡುವಷ್ಟು ಶಕ್ತಿ ನನ್ನಲ್ಲಿಲ್ಲ. ಆದರೂ ಕೃಷಿ ಕೆಲಸಕ್ಕೆ ಆಳುಗಳು ನನಗೆ ಬೇಕು. ಆಳುಗಳಿಗೆ ಕೆಲಸ ಕೊಡಲೆಂದೇ ತರಕಾರಿ ಕೃಷಿ ಮಾಡಲು ಮುಂದಾದೆ. ಲಾಭದ ನಿರೀಕ್ಷೆಯಿರಲಿಲ್ಲ. ಅವರಿಗೂ ಕೆಲಸವಾಯಿತು, ನನಗೆ ತರಕಾರಿ ಸಿಕ್ಕಿದಂತೂ ಆಯಿತು. ಸ್ನೇಹಿತ ಕಾಂತಣ್ಣ ಶೆಟ್ಟಿ ಹೇಳಿದರು: ‘ನಾನು ಹೇಳುವುದನ್ನು ಕೇಳ್ತೀರಾ… ನೀವು ತರಕಾರಿ ಮಾಡುವುದೂ ಬೇಡ. ಅವರಿಗೆ ಕೆಲಸ ಕೊಡುವುದೂ ಬೇಡ. ಸುಮ್ಮಗಿರಿ. ಆಗ ನಿಮಗೆ ಹಣ ಆಗುತ್ತದೆ.’ ಇವರ ಮಾತಿನ ಧ್ವನಿ ಅರ್ಥವಾಯಿತು. ಕಾಯಿಪಲ್ಲೆ ಬೆಳೆಸುವವರು ಆಳುಗಳ ಮೂಲಕ ನಿರ್ವಹಣೆ ಮಾಡಿದರೆ ಏನೂ ಉಳಿಯದು. ಮುಂಜಾವಿನಲ್ಲಿ ತರಕಾರಿ ಕೊಯಿದು ಮನೆಮನೆಗೋ, ಮಾರುಕಟ್ಟೆಗೋ ಒಯ್ಯಬೇಕು. ಅಂದಂದಿನ ತರಕಾರಿ ಅಂದಂದೇ ಮಾರಾಟವಾಗಬೇಕು. ಮರುದಿನಕ್ಕಾದರೆ ಗಿರಾಕಿ ಇಲ್ಲ. ಇದು ನನ್ನಂತಹವನಿಗೆ ಅಸಾಧ್ಯ. ತರಕಾರಿ ಕೃಷಿಯು ಆಳುಗಳನ್ನು ಇಟ್ಟುಕೊಂಡು ಮಾಡುವ ಕೃಷಿ ಅಲ್ಲ. ಸ್ವತ: ಸ್ವಲ್ಪ ಜಾಗದಲ್ಲಿ, ಊಟಕ್ಕೆ ತಕ್ಕಷ್ಟು ಮಾಡಿದರೆ ಸಾಕು. ಹೆಚ್ಚು ಮಾಡುವುದಾದರೆ ಮಾರಾಟ ಮಾಡುವ ತಾಕತ್ತು ಬೇಕು. ಮಧ್ಯಮ ವರ್ಗದ ಕೃಷಿಕರಿಗೆ, ಆಳುಗಳನ್ನು ನಂಬಿ ಕೃಷಿ ಮಾಡುವವರಿಗೆ ತರಕಾರಿ ಕೃಷಿ ಹೇಳಿಸಿದ್ದಲ್ಲ. ಫೋಟೋ 1: ಗ್ಲಿರಿಸಿಡಿಯಾ ಗಿಡದ ಎಲೆಗಳು 
ಫೋಟೋ 2: ಅಡ್ಡೂರಿನ ಕೃಷ್ಣ ಫಾರ್ಮಿನಲ್ಲಿ ಬೆಳೆಸಿದ ಸೌತೆಕಾಯಿಗಳು 
   
ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು
ಲೇಖಕರು: ಅಡ್ಡೂರು ಕೃಷ್ಣ ರಾವ್ ಮತ್ತು ನಾ. ಕಾರಂತ ಪೆರಾಜೆ