“ಇನ್ ಪ್ಲೆಯಿನ್ ಸೈಟ್” ಎಂಬ ಇಂಗ್ಲಿಷ್ ಸಿನಿಮಾದ ಕತೆ:
ಮೇರಿ ಶನ್ನೋನ್ ಎಂಬಾಕೆ ಡೆಪ್ಯುಟಿ ಯು.ಎಸ್. (ಯುನೈಟೆಡ್ ಸ್ಟೇಟ್ಸ್) ಮಾರ್ಷಲ್ (ಪೊಲೀಸ್ ಅಧಿಕಾರಿಣಿ). ಅವಳು “ಫೆಡರಲ್ ವಿಟ್-ನೆಸ್ ಪ್ರೊಟೆಕ್ಷನ್ ಪ್ರೋಗ್ರಾಮ್-ನಲ್ಲಿ ಕೆಲಸ ಮಾಡುವವಳು. ಅಂದರೆ, ತನಿಖೆ ನಡೆಯುತ್ತಿರುವ ಕೆಲವು ಪೊಲೀಸ್ ಪ್ರಕರಣಗಳ ಸಾಕ್ಷಿಗಳ ರಕ್ಷಣೆಯ ಜವಾಬ್ದಾರಿ ಆಕೆಯದು. ತನ್ನ ವೃತ್ತಿ ಜೀವನ ಮತ್ತು ಖಾಸಗಿ ಜೀವನದಲ್ಲಿ ಹೊಂದಾಣಿಕೆ ಸಾಧಿಸುವ ಸವಾಲು ಅವಳಿಗೆ ವಿಪರೀತ ಒತ್ತಡ ಉಂಟು ಮಾಡುತ್ತದೆ.
ಮೇರಿಯ ಕಣ್ಗಾವಲಿನಲ್ಲಿರುವ ಒಬ್ಬ ತನಗೆ ತಾನೇ ಘಾಸಿ ಮಾಡಿಕೊಂಡು, ಆಸ್ಪತ್ರೆಯಲ್ಲಿ ಮಲಗಿರುತ್ತಾನೆ. ಅವನ ಹೆಂಡತಿ ಮತ್ತು ಕಿರಿಯ ಮಕ್ಕಳು ಬಂದು ಮಾತನಾಡಿಸಿದಾಗ, “ನನಗೇನೂ ನೆನಪಿಲ್ಲ, ನೀವು ಯಾರೆಂದು ನನಗೆ ಗೊತ್ತಿಲ್ಲ” ಎನ್ನುತ್ತಾನೆ.
ಇದನ್ನು ಗಮನಿಸಿದ ಪೊಲೀಸ್ ಅಧಿಕಾರಿಣಿ ಮೇರಿ ಅವನಿಗೆ ಬಿಸ್ಕಿಟ್ ಕೊಡುತ್ತಾಳೆ. ಅದು ಅವನ ಅಚ್ಚುಮೆಚ್ಚಿನ ಬಿಸ್ಕಿಟ್. ಅವನು ಅದನ್ನು ಕೈಯಲ್ಲಿ ತಗೊಂಡಾಗ ಮೇರಿ ತಟಕ್ಕನೆ ಕಿತ್ತುಕೊಂಡು ಹೇಳುತ್ತಾಳೆ, “I know your are pretending.” (ನೀನು ನಟನೆ ಮಾಡುತ್ತಿದ್ದಿ ಎಂದು ನನಗೆ ಗೊತ್ತಿದೆ.)
ಮೇರಿಯ ತಾಯಿ ಮದ್ಯಪಾನ ವ್ಯಸನಿ. ಮೇರಿಯ ತಂಗಿ ಕೂಡ ಮದ್ಯಪಾನ ವ್ಯಸನಿ. ಅವರಿಂದಾಗಿ ಮೇರಿಗೆ ನಿರಂತರ ಸಮಸ್ಯೆಗಳು. ಇವೆಲ್ಲದರ ನಡುವೆ, ತನ್ನ ಪ್ರಿಯತಮರ ಜೊತೆಗಿನ ಸಂಬಂಧಗಳ ಸಮಸ್ಯೆಗಳು. ಇವೆಲ್ಲ ಒತ್ತಡಗಳಿಂದಾಗಿ ಮೇರಿ ಆಗಾಗ ಉದ್ವಿಗ್ನಗೊಳ್ಳುತ್ತಾಳೆ. ಹಾಗಾಗಿ, ಇವಳನ್ನು ಗಮನಿಸುತ್ತಿರಲು ಸೈಕಾಲಜಿಸ್ಟ್ ಒಬ್ಬಳು ನೇಮಕವಾಗಿರುತ್ತಾಳೆ. ಅವಳು ಮೇರಿಯ ವರ್ತನೆಗಳನ್ನು ಗಮನಿಸಿ ಹೀಗೆಂದು ವರದಿ ನೀಡುತ್ತಾಳೆ: “ನೀನು ನಿನ್ನ ಕೆಲಸವನ್ನು ನಿಜಕ್ಕೂ ಚೆನ್ನಾಗಿ ಮಾಡುತ್ತಿರುವೆ. ಆದರೆ ನೀನು ಮಿತಿ ಮೀರಿ ಕೆಲಸ ಮಾಡುತ್ತಿರುವೆ. ನಿನ್ನ ಜವಾಬ್ದಾರಿಗಳನ್ನು ಸರಿಯಾಗಿ ಅಂದಾಜು ಮಾಡಿಕೋ. ಆಪ್ತ ಸಲಹೆ ಪಡೆದುಕೋ. ಇನ್ನು ಒಂದು ತಿಂಗಳ ನಂತರ ನಾವು ಪುನಃ ಭೇಟಿ ಆಗೋಣ.”
ಮೇರಿಗೆ ಇನ್ನೊಂದು ಜವಾಬ್ದಾರಿಯೂ ಇದೆ. ಅದೇನೆಂದರೆ ಅವಳ ಪಕ್ಕದ ಮನೆಯ ಒಬ್ಬ ವಿಧವೆ ಮತ್ತು ಮೂರು ಮಕ್ಕಳ ಮೇಲ್ವಿಚಾರಣೆ. ಆ ವಿಧವೆಯ ಹಿರೇ ಮಗನಿಗೆ 16 ವರುಷ ವಯಸ್ಸು. ಅವನು ಆಗಾಗ ಕಾಲೇಜಿಗೆ ಗೈರುಹಾಜರಾಗುತ್ತಿದ್ದ. ಯಾಕೆಂದರೆ ಅವನ ಅಮ್ಮ (ವಿಧವೆ) ತನ್ನ ಇಬ್ಬರು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಇವನಿಗೆ ವಹಿಸಿ, ತನ್ನ ಪ್ರಿಯಕರನೊಂದಿಗೆ ತಿರುಗಾಟಕ್ಕೆ ಹೋಗುತ್ತಿದ್ದಳು.
ಈ “ಕಳ್ಳಾಟ”ವನ್ನು ಮೇರಿ ಪತ್ತೆ ಮಾಡುತ್ತಾಳೆ. ಆ ವಿಧವೆಗೆ ಅವಳ ಮಗನ ಮೊಬೈಲ್ ಫೋನಿನಿಂದ ಮೇರಿ ಫೋನ್ ಮಾಡಿದಾಗ ವಿಧವೆ ಉತ್ತರಿಸುತ್ತಾಳೆ. ಇದರಿಂದಾಗಿ ವಿಧವೆ ಆಗ ತನ್ನ ಆಫೀಸಿನಲ್ಲಿ ಇರಲಿಲ್ಲ ಎಂಬುದು ಖಚಿತವಾಗುತ್ತದೆ. ಇದನ್ನು ಮೇರಿ ವಿಧವೆಗೆ ಹೇಳಿ ಅವಳ ಪ್ರತಿಕ್ರಿಯೆ ಕೇಳುತ್ತಾಳೆ. ಆಗ ವಿಧವೆಯ ಉತ್ತರ: “ನಿನ್ನ ಸಲಹೆ ನನಗೆ ಬೇಕಾಗಿಲ್ಲ. ಕಳೆದ 16 ವರುಷಗಳಿಂದ ಅವರನ್ನು ನೋಡಿಕೊಳ್ಳುತ್ತಿರುವವಳು ನಾನು. ನೀನು ಬಂದು ಕೇವಲ ಒಂದು ತಿಂಗಳಾಗಿದೆ.”
ಅನಂತರ ಮೇರಿ ವಿಧವೆಯ ಹಿರೇಮಗನಿಗೆ ಸೂಚಿಸುತ್ತಾಳೆ, “ನಿನ್ನ ವಾಸಕ್ಕಾಗಿ ನಾನು ಬೇರೆ ಮನೆಯಲ್ಲಿ ವ್ಯವಸ್ಥೆ ಮಾಡುತ್ತೇನೆ. ನೀನು ಒಪ್ಪಿಕೋ.” ಆದರೆ ಅವನು ನಿರಾಕರಿಸುತ್ತಾನೆ. ಆಗ ತನಗೂ ಯೌವನದಲ್ಲಿ ಹೀಗಾಗಿತ್ತೆಂದು ಮೇರಿ ತಿಳಿಸುತ್ತಾಳೆ. ಆಗ ಅವನ ಉತ್ತರ, “ಆದರೆ ನಾನು ನಿನ್ನ ಹಾಗಲ್ಲ. ನನ್ನ ಮೇಲ್ವಿಚಾರಣೆಗೆ ನೀನು ಇದ್ದೀಯಲ್ಲ.”
ಮೇರಿಯ ತಾಯಿಗೆ ಪೊಲೀಸ್ ಇಲಾಖೆಯಲ್ಲಿ ಜವಾಬ್ದಾರಿಯ ಹುದ್ದೆಯಲ್ಲಿರುವ ತನ್ನ ಹಿರಿಯ ಮಗಳ ಬಗ್ಗೆ ಮೊದಮೊದಲು ಕಹಿ ಭಾವನೆ ಇತ್ತು. ಕ್ರಮೇಣ ಆ ಭಾವನೆ ಕಡಿಮೆಯಾಗುತ್ತದೆ. ಅವಳೊಂದು ಉದ್ಯೋಗಕ್ಕೆ ಸೇರಿಕೊಳ್ಳುತ್ತಾಳೆ. ಆದರೆ, ಮದ್ಯಪಾನ ವ್ಯಸನಿಯಾದ ಮೇರಿಯ ತಾಯಿ ಒಂದು ಅನಾಹುತ ಮಾಡಿಕೊಳ್ಳುತ್ತಾಳೆ. ಮದ್ಯಪಾನ ಮಾಡಿ, ಕಾರು ಚಲಾಯಿಸಿ ಪೊಲೀಸರಿಗೆ ಸಿಕ್ಕಿ ಬೀಳುತ್ತಾಳೆ. ಮದ್ಯಪಾನದ ಚಟ ಬಿಡಲಿಕ್ಕಾಗಿ ಅವಳು “ಆಲ್ಕೋಹಾಲಿಕ್ಸ್ ಅನಾನಿಮಸ್” ಸಂಸ್ಥೆಯ ಸಭೆಗೆ ಹಾಜರಾಗಬೇಕೆಂದು ಆದೇಶಿಸಲಾಗುತ್ತದೆ. ಆದರೆ ಅವಳು ಆ ಸಭೆಗೆ ತನ್ನ ಬದಲಾಗಿ ತನ್ನ ಎರಡನೇ ಮಗಳನ್ನು ಕಳಿಸುತ್ತಾಳೆ! ಮೇರಿಯ ಅಮ್ಮನ ಹಲವು ರಂಪಾಟಗಳನ್ನು ವಿಡಿಯೋ ಮಾಡಲಾಗಿರುತ್ತದೆ. ಅವನ್ನೆಲ್ಲ ಅವಳಿಗೆ ತೋರಿಸಲಾಗುತ್ತದೆ. ಆಗ, “ಹೌದು, ನಾನು ತಪ್ಪು ಮಾಡಿದ್ದೇನೆ” ಎಂದು ಕೋರ್ಟಿನಲ್ಲಿ ಒಪ್ಪಿಕೊಳ್ಳುತ್ತಾಳೆ.
ಸಿನಿಮಾದ ಕೊನೆಯಲ್ಲಿ ಮೇರಿ ಹೇಳುವ ಮಾತು: “It is time we see our parents as people.” (ನಾವು ನಮ್ಮ ಹೆತ್ತವರನ್ನು ಈಗಲಾದರೂ ಮನುಷ್ಯರೆಂದು ನೋಡಬೇಕಾಗಿದೆ.)
(2008 - 2012 ಅವಧಿಯಲ್ಲಿ ನೈಜ ಘಟನೆಗಳನ್ನು ಆಧರಿಸಿದ ಈ “ಕತೆ” ಐದು “ಸೀಸನು”ಗಳಲ್ಲಿ ಟಿವಿ ಸರಣಿಯಾಗಿ ಪ್ರಸಾರವಾಗಿತ್ತು.)
(15 ವರುಷಗಳ ಹಿಂದೆ ಬ್ಯಾಂಕಿನ ಸಿಬ್ಬಂದಿಗೆ ತರಬೇತಿ ನೀಡಲಿಕ್ಕಾಗಿ ಅಹಮದಾಬಾದಿಗೆ ಹೋಗಿದ್ದಾಗ 13-02-2011ರ ಭಾನುವಾರ ನೋಡಿದ್ದ ಸಿನಿಮಾದ ನೋಟ್ಸಿನ ಆಧಾರದಿಂದ ಬರೆದ ಕಥಾ ಸಾರಾಂಶ.)
ಸಿನಿಮಾ ಕತೆ8 -ಪೊಲೀಸ್ ಅಧಿಕಾರಿಣಿಯ ಬದುಕಿನ ಸವಾಲುಗಳು
ಅಡ್ಡೂರು ಕೃಷ್ಣ ರಾವ್
ಫೆಬ್ರವರಿ ೨೮, ೨೦೨೬
೧೪ ವೀಕ್ಷಣೆಗಳು
ಪ್ರಕಟಿಸಿದ: ಫೆಬ್ರವರಿ ೨೮, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬