ಸ್ಥಿರ ಪ್ರಯತ್ನ ಮರಳಿ ಯತ್ನವ ಮಾಡು ! ಮರಳಿ ಯತ್ನವ ಮಾಡು ! ತೊರೆಯದಿರಲು ಮೊದಲು ಕೈ ಗೂಡದಿರಲು   ಹಿರಿದು ಧೈರ್ಯವ ಹಾಳು ! ತೊರೆಯದಿರು, ತೊರೆಯದಿರು ! ಮರಳಿ ಯತ್ನವ ಮಾಡು, ಸಿದ್ಧಿಸುವುದು.   ಒಂದು ಸಲ ಕೆಟ್ಟುಹೋ ಯ್ತೆಂದು ನೀ ಅಂಜದಿರು ಕುಂದಿಲ್ಲ. ಕೈಗೊಂಡ -ದನಿತರಿಂದ   ನೊಂದು ಕೊಳ್ಳದೆ ಮರಳಿ ಮುಂದೆ ಯತ್ನವ ಮಾಡು, ಸಂದೇಹವಿಲ್ಲದದು ಸಿದ್ಧಿಸುವುದು.   ಕಸವಿದು ಕಷ್ಟವೆಂ ದಳುಕಿ ಬಿಡದಿರು, ಮಾಡು, ಫಲಗಳನು ಕೊಡುವುದದು ಕೊನೆಗೆ ನಿನಗೆ.   ಸುಲಭವಹದಾ ಕೆಲಸ ಫಲಿಸುವುದು, ಹುಲಿಸುವುದು ನೆಲೆಗೆಡದೆ ಯತ್ನವನು ಮಾಡು, ಮಗುವೇ ! *** ನದಿ “ಎಲ್ಲಿಂದ ಬರುತಿಯೆ? ನೀರನ್ನು ತರುತಿಯೆ? ಒಳ್ಳೇದಾಗಿರುತೀಯೆ, ನೀನು? ಎಲ್ಲಿಗೆ ಹೋಗುವೆ? ನೀರನ್ನು ಸಾಗುವೆ? ಕಡೆಗೆ ಏನಾಗುವೆ, ನೀನು?”   “ಬೆಟ್ಟದಾ ಹೊಡೆಯಲ್ಲಿ ಹುಟ್ಟಿದೆ ಹನಿಯಾಗಿ ; ತೊಟ್ಟಾದೆ ತಟುಕಾದೆ, ನಾನು. ಬೆಟ್ಟಾದೆ, ಬೆರಳಾದೆ, ತೋಳಾದೆ, ತೊಡೆಯಾದೆ, ಪುಟ್ಟ ತೋಡಾದೆನು ನಾನು.   “ಮಲೆಮರಗಳ ಮರೆಯಲ್ಲಿ ಮಲಗಿದೆನು ; ಮೆಳೆ ಬಿದಿರೆಲೆಯಿಂದ ಬಂದಾ ಬೆಳಕಿಗೆ ಎಚ್ಚೆತ್ತು ಹೊರಬಂದೆ ಹರಿದಾಡಿ, ನಲಿದಾಡಿ ಸಂತೋಷದಿಂದಾ,   “ಆಡುತ್ತ, ಸುತ್ತಲು ನೋಡುತ್ತ, ತೊರೆಯನ್ನು ಕೂಡುತ್ತ, ಓಡುತ್ತ ಬಂದೆ ; ದೂಡುತ್ತ ಕಲ್ಲನ್ನು, ಮಾಡುತ್ತ ಗುಲ್ಲನು, ಹಾಡುತ್ತ, ನೀಡುತ್ತ ಬಂದೆ.   “ಭಾರಿ ಎತ್ತರದಿಂದ ಹಾರಿದೆ ಹೆಸರಾಯ್ತು ; ‘ನೀರಿನ ಜೋರಿನ ಜೋಗು'; ಊರಿನ ಜನರನ್ನು ಕಿವುಡು ಮಾಡಿತು ನನ್ನ ಭೋರನೆ ಕೂಗುವ ಕೂಗು.” (‘ಕವಿಶಿಷ್ಯ' ಕವನ ಸಂಕಲನದಿಂದ ಆಯ್ದ ಕವನಗಳು)