ಕಳೆದ ವಾರ ಪಂಜೆಯವರ ‘ಹಳೆಯ ಹಾಡು’ ಸಂಕಲನದಿಂದ ಜೋಗುಳ ಎನ್ನುವ ಕವನವನ್ನು ಪ್ರಕಟ ಮಾಡಿದ್ದೆವು. ಈ ವಾರ ‘ಆನಂದ' ಎನ್ನುವ ಕವನ ಸಂಕಲನದಿಂದ ‘ಜೋಗುಳ ಹಾಡು ಎನ್ನುವ ಕವನವನ್ನು ಆಯ್ದು ಪ್ರಕಟ ಮಾಡುತ್ತಿದ್ದೇವೆ. ‘ಜೋಗುಳ ಹಾಡು' ಜೋಗುಳ ಹಾಡನ್ನು ಲಾಲಿಸು, ಜೋ ! ಜೋ! ತೂಗುವೆ ತೊಟ್ಟಿಲ, ಮಲಗಿರು, ಜೋ ! ಜೋ !   ಸುಮಲತೆಗಳ ಪರಿಮಳವ ಬಿತ್ತರಿಸಿ ಕಮಲದ ಕೋಮಲ ಗಂಧವ ಬೆರಸಿ, ಮಂದ ಮಾರುತವು ಬೀಸುತ್ತಿರಲಿನಿಸು, ತಂದೆ, ತಂದಿಹೆನೊಂದು ಮುದ್ದಿನ ಕನಸು.   ಮೊದಲೆವೆಗಳನು ಮುಕುಳಿಸೆನ್ನ ಸಿರಿಯೇ ! ತೊದಲನ್ನು ನಿಲ್ಲಿಸೆನ್ನಯ ಹೊನ್ನ ಮರಿಯೇ ! ಸದ್ದು ಮಾಡಲು ಬೇಡ ನೀ ಶಾಂತನನಿಸು ! ಕದ್ದು ತಂದಿಹೆನೊಂದು ಮುದ್ದಿನ ಕನಸು !   ರವಿ ಮುಳುಗಿಹನು, ಕಂದಿತು ಸಂಜೆಗಿಂಪು ; ಸವಿಯಾಗಿ ಕಾಂಬುದು ಚಂದ್ರನ ಸೊಂಪು. ನೊಂದಿಸು ನಿನ್ನಯ ಮಾಯೆಯ ಮುನಿಸು ! ತಂದೆನಿಗೋ, ಚಿಕ್ಕ ಮುದ್ದಿನ ಕನಸು !   ತನುಮನ ಧನವನರ್ಪಿಸಿ ಮೋದದಿಂದಾ ವಿನಿಯೋಗಿಸುತ ಬಲು ಸಾಸಿಗನೆನಿಸು ! ಜನನ ಭೂಮಿಯ ಸೇವೆಯನು ಮಾಡೊ ಕಂದಾ ! ಜನುಮ ಎಂಬುದು ಪುಟ್ಟ ಮುದ್ದಿನ ಕನಸು.   ಮಲಗೊ! ವಿಶ್ರಮಿಸೆನ್ನ ಮೋಹದ ಗೊಂಬೆ ! ಮಲಗೊ ! ಗಲ್ಲವನೊತ್ತಿ ನಾ ಬೇಡಿಕೊಂಬೆ, ರಂಗನಾಥನೆ ! ಸರ್ವದಾ ನೀ ಸಮನಿಸು, ಮಂಗಳಕರವಾದ ಮುದ್ದಿನ ಕನಸು. (‘ಆನಂದ' ಕವನ ಸಂಕಲನದಿಂದ ಸಂಗ್ರಹಿತ)