‘ಸಂಪದ’ ನಗೆಬುಗ್ಗೆ - ಭಾಗ ೧೨೩
ಕೆ.ಪಿ.ಅಶ್ವಿನ್ ರಾವ್
ಮೇ ೩೧, ೨೦೨೫
೧೪ ವೀಕ್ಷಣೆಗಳು
ಎಳನೀರು
ಅತಿಯಾದ ಮಧ್ಯಪಾನ ವ್ಯಸನದಿಂದ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸೂರಿ. ಆತನನ್ನು ನೊಡಿಕೊಳ್ಳುತ್ತಿದ್ದ ನರ್ಸು ಬಾಯಿಗೆ ಬಂದಂತೆ ಬೈದಳು. ಮದ್ಯಪಾನದ ಕೆಡುಕಿನ ಬಗ್ಗೆ ಉಪದೇಶಿಸಿದಳು. ಆರೋಗ್ಯಕ್ಕಾಗುವ ಹಾನಿಯ ಕುರಿತಾಗಿ ಕೊರೆದಳು. ಕುಡಿಯುವುದರಿಂದ ನಿನಗೆ ಏನು ಸಿಗುತ್ತದೆ, ಅದರ ಲಾಭವಾದರೂ ಏನು? ಅಂತ ನೂರೆಂಟು ಬಾರಿ ಪ್ರಶ್ನಿಸಿದಳು.
ಕನಿಕರದ ನಗೆ ನಕ್ಕು ಸೂರಿ ಹೇಳಿದ, ನೀವ್ಯಾವತ್ತೂ ಅದನ್ನು ಕುಡಿದಿಲ್ಲಾ ಅಲ್ವಾ ಸಿಸ್ಟರ್? ಹಾಗಾಗಿ ಅದರ ಸೆಳೆತದ ಬಗ್ಗೆ ನಿಮಗೆ ಗೊತ್ತಿಲ್ಲ.
ನರ್ಸ್ ರೇಗಿಬಿಟ್ಟಳು. ಅಂತದ್ದೇನಿದೆ ಅದರಲ್ಲಿ. ತಗೊಂಡು ಬಾ ನಾನೂ ನೋಡೇ ಬಿಡುವೆ. ಆದರೆ ನಾನು ವ್ಯಸನಿಯಾಗಲಾರೆ ಅಂತ ಸವಾಲು ಹಾಕಿದಳು.
ಸೂರಿ ಕೂಡ ಈ ಸವಾಲಿಗೆ ಒಪ್ಪಿದ. ನರ್ಸ್, ತಾನು ಆಸ್ಪತ್ರೆಯ ಉದ್ಯೋಗಿಯಾಗಿರುವುದರಿಂದ ಹಾಗೆ ಬಹಿರಂಗವಾಗಿ ಕುಡಿಯಲು ಸಾಧ್ಯವಿಲ್ಲವೆಂದೂ, ಎಳನೀರಿನ ಬುರುಡೆಯೊಂದನ್ನು ಖಾಲಿ ಮಾಡಿ ಅದರಲ್ಲಿ ಮದ್ಯ ಬೆರಸಿ ತರುವಂತೆ ಸೂಚಿಸಿದಳು.
ಪಕ್ಕದಲ್ಲಿದ್ದ ಮದ್ಯದಂಗಡಿಗೆ ಹೋಗಿ ಮದ್ಯವನ್ನು ಕೊಂಡು, ಎಳನೀರಿನವನ ಬಳಿ ಬಂದು ಮದ್ಯವನ್ನು ಅದರಲ್ಲಿ ಹಾಕಿಕೊಡಲು ಕೇಳಿದ. ಸಂಶಯಾಸ್ಪದ ನೋಟ ಬೀರಿದ ಎಳನೀರಿನವನು, ಯಾರು ಆ ನರ್ಸಿಗಾ ಸರ್? ಎಂದು ಪ್ರಶ್ನಿಸಿದ. ಆಶ್ಚರ್ಯಚಕಿತಗೊಂಡ ಸೂರಿ ಕೇಳಿದ, ಹೌದು...ನಿಮಗೆ ಹೇಗೆ ಗೊತ್ತಾಯಿತು?
ಕುಹಕದ ನಗೆ ಬೀರುತ್ತಾ ಎಳನೀರಿನವನೆಂದ, “ಬೆಳಿಗ್ಗೆಯಿಂದ ಇದು ಏಳನೇ ಬೊಂಡ !”
***
ನನ್ನದಲ್ಲ
ಇಸ್ರೇಲಿಯೊಬ್ಬ ಏನೋ ಕೊಳ್ಳಲು ಅಂಗಡಿಗೆ ಹೋದ. ಅಲ್ಲಿ ನಿಂತಿದ್ದ ನಾಯಿಯನ್ನು ಕಂಡು ದೂರದಿಂದಲೇ ಅಂಗಡಿಯವನೊಂದಿಗೆ, 'ನಿನ್ನ ನಾಯಿ ಕಚ್ಚುತ್ತದೆಯೆ?' ಕೇಳಿದ. 'ಇಲ್ಲವಲ್ಲ, ಏನೂ ಮಾಡುವುದಿಲ್ಲ' ಎಂದ ಅಂಗಡಿಯವ. ಇಸ್ರೇಲಿ ಧೈರ್ಯದಿಂದ ಮುಂದೆ ಹೋದ. ನಾಯಿ ಅವನ ಕಾಲಿಗೆ ಕಡಿಯಿತು.
ಇಸ್ರೇಲಿ ಅಂಗಡಿಯವನೊಂದಿಗೆ, 'ಏನಯ್ಯ, ನನ್ನ ನಾಯಿ ಕಚ್ಚುವುದಿಲ್ಲ ಅಂದೆ. ಈಗ ಅದೇನು ಮಾಡಿತು ನೋಡಿದೆಯಾ?' ಕೋಪದಿಂದ ಕೇಳಿದ. ಅಂಗಡಿಯವ, 'ನಾನು ಸುಳ್ಳು ಹೇಳಿಲ್ಲ. ನನ್ನ ನಾಯಿ ಕಚ್ಚುವುದಿಲ್ಲ ಎಂದು ಹೇಳಿದ್ದು ಸತ್ಯ. ಅದು ಮನೆಯಲ್ಲಿದೆ. ನಿನಗೆ ಕಚ್ಚಿದ ನಾಯಿ ನನ್ನದಲ್ಲ' ಎಂದ.
***
ಸುಖ ಜೀವನಕ್ಕೆ
ಸುಖ ಜೀವನಕ್ಕೆ ಏನು ಮಾರ್ಗವಿದೆ ಕೇಳಲು ಇಸ್ರೇಲಿ ಫಕೀರನೊಬ್ಬನ ಬಳಿಗೆ ಹೋದ. ಫಕೀರ, 'ಧೂಮಪಾನ' ಎಂದು ಹೇಳಿ ಮರುದಿನ ಬರಲು ಹೇಳಿದ. ಎರಡನೆಯ ದಿನ ಇಸ್ರೇಲಿ ಹೋದಾಗ ಫಕೀರ, 'ಮದ್ಯಪಾನ' ಎಂದು ಹೇಳಿ ಮರುದಿನ ಬರುವಂತೆ ಸೂಚಿಸಿದ.
ಮರುದಿನ ಇಸ್ರೇಲಿ ಹೋದಾಗ ಫಕೀರ, 'ಇದೆರಡನ್ನೂ ಮಾಡಬೇಡ' ಎಂದು ಹೇಳಿದ. ಇಸ್ರೇಲಿ ಕೆಂಡಾಮಂಡಲ ಕೋಪದಿಂದ ಹೇಳಿದ. 'ನೀವು ಇದನ್ನೂ ಮೊದಲ ದಿನವೇ ಹೇಳಬಹುದಿತ್ತಲ್ಲ? ನನಗೆ ಅಭ್ಯಾಸ ಮಾಡು ಅಂತ ಹೇಳುತ್ತೀರಿ ಅಂದುಕೊಂಡು ಎರಡನ್ನೂ ಕಲಿತುಕೊಂಡೇ ಬಂದಿದ್ದೆ'
***
ಕಾರು ಕಳ್ಳ
ನೂರೆಂಟು ಐಷಾರಾಮಿ ಕಾರುಗಳನ್ನು ಕದ್ದವನೊಂದಿಗೆ ಖಾಜಿ, 'ನೀನು ಇಷ್ಟೊಂದು ಕಾರುಗಳನ್ನು ಯಾಕೆ ಕದ್ದೆ?' ವಿಚಾರಿಸಿದ.
ಕಳ್ಳ 'ನನಗೆ ಬೇಗ ಶ್ರೀಮಂತನಾಗಬೇಕೆಂಬ ಆಸೆ ಇತ್ತು, ಅದಕ್ಕೆ ಈ ಪಾಪಕಾರ್ಯ ಮಾಡಿದೆ' ಒಪ್ಪಿಕೊಂಡ. ಖಾಜಿ, 'ಕಾರು ಕದಿಯುವ ಬದಲು ವಿಮಾನಗಳನ್ನು ಕದಿಯಬಹುದಿತ್ತಲ್ಲವೆ? ಬಹು ಬೇಗ ಕೋಟ್ಯಾಧೀಶನಾಗಬಹುದಿತ್ತು' ವ್ಯಂಗ್ಯವಾಗಿ ಹೇಳಿದ.
ಕಳ್ಳ ಸಂತಾಪದಿಂದ, 'ಏನು ಮಾಡಲಿ ಖಾಜಿ ಸಾಹೇಬರೇ, ನಿಮ್ಮ ಹಾಗೆ ನನಗೂ ಈ ವಿಷಯ ಗೊತ್ತಿತ್ತು. ಆದರೆ ವಿಮಾನ ಹಾರಾಟ ಮಾಡುವ ಚಾಲನಾ ಪರವಾನಗಿ ನನ್ನ ಬಳಿ ಇರಲಿಲ್ಲ' ಎಂದ.
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರಕಟಿಸಿದ: ಮೇ ೩೧, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬