ಆಗಸದೆತ್ತರದಲ್ಲಿ ಬಣ್ಣ ಬಣ್ಣದ ಬಲೂನುಗಳು ಹಾರುತ್ತಿವೆ. ನೋಡುವ ಕಣ್ಣುಗಳಿಗೆ ಅದೊಂದು ಅದ್ಭುತ ವಿನ್ಯಾಸ, ರಸದೌತಣ. ಎಲ್ಲವೂ ಮುಗಿಲೆತ್ತರಕ್ಕೆ ಚೆಲ್ಲಾಪಿಲ್ಲಿಯಾಗಿ ಹಾರಾಡುವಾಗ  ಆಕಾಶದ ಸೌಂದರ್ಯ ಹೆಚ್ಚಾಗಿದೆ. ಎಲ್ಲರೂ ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿದ್ದಾರೆ. ಅವುಗಳನ್ನು ತಮ್ಮ ಮೊಬೈಲ್ನೊಳಗೆ ಚಿತ್ರೀಕರಿಸಿಕೊಂಡು ಎಲ್ಲ ಕಡೆ ಹಂಚಿ ಸಂಭ್ರಮ ಪಡುತ್ತಿದ್ದಾರೆ. ಆದರೆ ಆ ಎಲ್ಲಾ ಹಾರಿದ ಬಲೂನ್ ಗಳು ಪುಟ್ಟ ಕೈಯಿಂದ ಹಾರಿದ್ದವು ಎಂದು ಅವರ್ಯಾರಿಗೂ ಗೊತ್ತಿಲ್ಲ. ಜೋರಾಗಿ ಬೀಸಿದ ಗಾಳಿಗೆ ಬದುಕು ಕಟ್ಟಿಕೊಳ್ಳುವುದಕ್ಕೆ ಎಂದೇ ಹಿಡಿದಿದ್ದ ಬಲೂನ್ ಗಳನ್ನ ಕೈಯಿಂದ ಕಿತ್ತುಕೊಂಡು ಮೇಲಕ್ಕೆ ಹಾರಿಸಿದೆ. ಆತ ಓಡಿದ್ದಾನೆ ಆದರೂ ಆಗಸದೆತ್ತರ ತಲುಪಲಾಗಲಿಲ್ಲ. ಆತ ಕಣ್ಣೀರಿಳಿಸಿಕೊಂಡು ಮುಗಿಲನ್ನೇ ನೋಡುತ್ತಿದ್ದಾನೆ. ಭಗವಂತನ ಕ್ರೂರತೆಗೆ ಮೌನವಾಗಿ ಕಣ್ಣೀರು ಇಳಿಸುತ್ತಿದ್ದಾನೆ. ಎಲ್ಲರಿಗೂ ಸೌಂದರ್ಯವಾದದ್ದು ಆತನಿಗೆ ನೋವನ್ನುಂಟುಮಾಡಿದೆ. ಆತ ತಲೆತಗ್ಗಿಸಿಕೊಂಡು ವಿಧಿಯನ್ನು ದೂರುತ್ತಿದ್ದಾನೆ ಹಸಿವು ತಡೆಯುವುದಕ್ಕೆ ದಾರಿ ಬದಿಯಲ್ಲಿ ಸಿಕ್ಕ ನೀರು ಕುಡಿದು ಹೆಜ್ಜೆ ಮಂದುವರಿಸಿದ್ದಾನೆ....ನಾಳೆಗೂ ಬದುಕಬೇಕಲ್ಲವೇ? -ಧೀರಜ್ ಬೆಳ್ಳಾರೆ ಚಿತ್ರ ಕೃಪೆ: ಇಂಟರ್ನೆಟ್ ತಾಣ